
ಕ್ಯಾಲಿಫೋರ್ನಿಯಾ: 2027ರಲ್ಲಿ ಆ್ಯಪಲ್ ತನ್ನ ಐಫೋನ್ 20ನೇ ವಾರ್ಷಿಕೋತ್ಸವದ ಅಂಗವಾಗಿ ಐಫೋನ್ 20 ಅನ್ನು ಬಿಡುಗಡೆ ಮಾಡಲಿದೆ. ಇದು ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಲಿದೆ ಎಂದು ವರದಿಗಳು ಹೇಳುತ್ತಿವೆ. 2007ರಲ್ಲಿ ಬಂದ ಮೊದಲ ಐಫೋನ್ ಹೇಗೆ ಮೊಬೈಲ್ ಲೋಕವನ್ನೇ ಬದಲಾಯಿಸಿತ್ತೋ, ಅದೇ ರೀತಿ 2027ರ ಈ ಮಾಡೆಲ್ ಕೂಡ ಒಂದು ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದು ಟೆಕ್ ವಲಯದಲ್ಲಿ ನಿರೀಕ್ಷಿಸಲಾಗಿದೆ.
ಇದಕ್ಕೂ ಮೊದಲು 2017ರಲ್ಲಿ ಬಂದ ಐಫೋನ್ X, ಆ್ಯಪಲ್‌ನ ಅತಿದೊಡ್ಡ ಡಿಸೈನ್ ಬದಲಾವಣೆ ಅಂತ ಪರಿಗಣಿಸಲಾಗಿತ್ತು. ಅದು ಐಫೋನ್‌ನ 10ನೇ ವಾರ್ಷಿಕೋತ್ಸವದ ಮಾಡೆಲ್ ಆಗಿತ್ತು. ಫುಲ್ ಸ್ಕ್ರೀನ್ OLED ಡಿಸ್‌ಪ್ಲೇ, ಫೇಸ್ ಐಡಿ, ವೈರ್‌ಲೆಸ್ ಚಾರ್ಜಿಂಗ್‌ನಂತಹ ಫೀಚರ್‌ಗಳ ಮೂಲಕ ಆ ಮಾಡೆಲ್, ನಂತರ ಬಂದ ಎಲ್ಲಾ ಐಫೋನ್‌ಗಳಿಗೆ ಒಂದು ಮಾದರಿಯಾಯಿತು. ಈಗ ಅದಕ್ಕಿಂತಲೂ ದೊಡ್ಡ ಬದಲಾವಣೆಗಳೊಂದಿಗೆ 'ಐಫೋನ್ 20' ಬರಲಿದೆ ಎಂದು ವರದಿಗಳು ಹೇಳುತ್ತಿವೆ.
ಐಫೋನ್ 20ರ ಅತಿ ದೊಡ್ಡ ವಿಶೇಷತೆ ಅಂದ್ರೆ ಅದರ ಆಲ್-ಗ್ಲಾಸ್ ರ‍್ಯಾಪ್‌ಅರೌಂಡ್ ಡಿಸೈನ್. ಫೋನ್(All-glass wraparound design. Phone) ಪೂರ್ತಿ ಗ್ಲಾಸ್‌ನಿಂದ ಮಾಡಿದ ಹಾಗೆ ಕಾಣುವ ಡಿಸೈನ್ ಅನ್ನು ಆ್ಯಪಲ್ ಪರೀಕ್ಷಿಸುತ್ತಿದೆ ಎನ್ನಲಾಗಿದೆ. ಕೇವಲ ಮುಂಭಾಗ ಮಾತ್ರವಲ್ಲ, ಅಂಚುಗಳಿಗೂ ಬಾಗಿರುವ ಸ್ಕ್ರೀನ್ ಇರಲಿದೆ. ಇದರಿಂದ ಫೋನ್‌ನಲ್ಲಿ ಬೆಝೆಲ್ ಅಥವಾ ನಾಚ್ ಇಲ್ಲದ 'ಟ್ರೂ ಎಡ್ಜ್-ಟು-ಎಡ್ಜ್' ಅನುಭವ ಸಿಗಲಿದೆ. ಆದರೆ, ಹೀಗೆ ಬಾಗಿದ ಗ್ಲಾಸ್ ಡಿಸ್‌ಪ್ಲೇಗಳು ಬೇಗನೆ ಹಾನಿಗೊಳಗಾಗಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಈ ಫೋನ್‌ನಲ್ಲಿ ಸಾಂಪ್ರದಾಯಿಕ ಬಟನ್‌ಗಳನ್ನು ತೆಗೆದುಹಾಕಿ, ಅದರ ಬದಲು ಸಾಲಿಡ್-ಸ್ಟೇಟ್ ಬಟನ್‌ಗಳನ್ನು ಅಳವಡಿಸುವ ಸಾಧ್ಯತೆಯಿದೆ. ಈಗಿನ ಮೆಕ್ಯಾನಿಕಲ್ ಬಟನ್‌ಗಳ ಬದಲು, ಮುಟ್ಟಿದಾಗ ಹ್ಯಾಪ್ಟಿಕ್ ಫೀಡ್‌ಬ್ಯಾಕ್ (ವೈಬ್ರೇಷನ್) ನೀಡುವ ತಂತ್ರಜ್ಞಾನ ಇದಾಗಿರಲಿದೆ. ಹೊರಗೆ ಯಾವುದೇ ಬಟನ್‌ಗಳು ಇಲ್ಲದಿರುವುದರಿಂದ ಫೋನ್ ನೋಡಲು ಇನ್ನಷ್ಟು ನಯವಾಗಿ ಕಾಣುತ್ತದೆ. ಮೆಕ್ಯಾನಿಕಲ್ ಭಾಗಗಳು ಕಡಿಮೆಯಾಗುವುದರಿಂದ, ಫೋನ್ ಹಾಳಾಗುವ ಸಾಧ್ಯತೆಯೂ ಕಡಿಮೆ.
ಐಫೋನ್‌ನ ಮುಂಭಾಗದ ಕ್ಯಾಮೆರಾ ಮತ್ತು ಫೇಸ್ ಐಡಿ ಸೆನ್ಸರ್‌ಗಳನ್ನು ಸ್ಕ್ರೀನ್‌ನ ಕೆಳಗೆ ಅಳವಡಿಸಲು ಆ್ಯಪಲ್ ಪ್ರಯತ್ನಿಸುತ್ತಿದೆ. ಈಗಿರುವ ಡೈನಾಮಿಕ್ ಐಲ್ಯಾಂಡ್ ಡಿಸೈನ್ ಕೂಡ ತೆಗೆದು, ಪೂರ್ತಿಯಾಗಿ ಅಡೆತಡೆ ಇಲ್ಲದ ಡಿಸ್‌ಪ್ಲೇ ನೀಡುವುದು ಇದರ ಉದ್ದೇಶ. ಆದರೆ, ಸ್ಕ್ರೀನ್ ಕೆಳಗಿರುವ ಕ್ಯಾಮೆರಾಗಳು ಇನ್ನೂ ಉತ್ತಮ ಗುಣಮಟ್ಟದ ಫೋಟೋಗಳನ್ನು ನೀಡುವುದಿಲ್ಲ ಎನ್ನುವುದು ಸದ್ಯದ ಸವಾಲಾಗಿದೆ.
ಸ್ಪೀಕರ್‌ಗಳನ್ನು ಕೂಡ ಸ್ಕ್ರೀನ್‌ನ ಕೆಳಗೆ ಅಳವಡಿಸುವ ಸಾಧ್ಯತೆಗಳ ಬಗ್ಗೆ ವರದಿಗಳು ಬಂದಿವೆ. ಕೆಲವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಈಗಾಗಲೇ ಈ ತಂತ್ರಜ್ಞಾನ ಬಳಸಲಾಗುತ್ತಿದೆ. ಆದರೆ ಆ್ಯಪಲ್ ಇದನ್ನು ಇನ್ನಷ್ಟು ಸುಧಾರಿತ ರೀತಿಯಲ್ಲಿ ಪರಿಚಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಈ ಫೋನ್‌ನ ಮತ್ತೊಂದು ಪ್ರಮುಖ ಫೀಚರ್ ಆಗಿರಬಹುದು. ಇದರ ಮೂಲಕ ಐಫೋನ್‌ನ ಹಿಂಭಾಗ ಬಳಸಿ ಏರ್‌ಪಾಡ್ಸ್‌ನಂತಹ ಸಾಧನಗಳನ್ನು ಚಾರ್ಜ್ ಮಾಡಬಹುದು. ಆಂಡ್ರಾಯ್ಡ್ ಫೋನ್‌ಗಳಲ್ಲಿ ಬಹಳ ಹಿಂದಿನಿಂದಲೇ ಲಭ್ಯವಿರುವ ಈ ಸೌಲಭ್ಯವನ್ನು ಆ್ಯಪಲ್ ಇನ್ನೂ ನೀಡಿಲ್ಲ. ಡಿಸ್‌ಪ್ಲೇ ರಕ್ಷಣೆಗಾಗಿ 'ಸೆರಾಮಿಕ್ ಶೀಲ್ಡ್ ಅಲ್ಟ್ರಾ' ಎಂಬ ಹೆಚ್ಚು ಗಟ್ಟಿಯಾದ ಗ್ಲಾಸ್ ತಂತ್ರಜ್ಞಾನವನ್ನು ಪರಿಚಯಿಸಲಾಗುವುದು ಎಂದೂ ಹೇಳಲಾಗುತ್ತಿದೆ. ಕೀಲಿಯಂತಹ ವಸ್ತುಗಳ ಜೊತೆ ಜೇಬಿನಲ್ಲಿಟ್ಟರೂ ಸ್ಕ್ರಾಚ್ ಆಗದಷ್ಟು ಇದು ಗಟ್ಟಿಯಾಗಿರಲಿದೆ ಎನ್ನಲಾಗಿದೆ.
ಆದರೆ, ಇದೆಲ್ಲವೂ ಇನ್ನೂ ಅಧಿಕೃತವಾಗಿ ಖಚಿತಪಡದ ಮಾಹಿತಿ. ಆ್ಯಪಲ್ ಅನೇಕ ಆಲೋಚನೆಗಳನ್ನು ಪರೀಕ್ಷಿಸುತ್ತದೆ, ಆದರೆ ಅವೆಲ್ಲವೂ ಮಾರುಕಟ್ಟೆಗೆ ಬರುವುದಿಲ್ಲ. ಆದರೂ, 2027ರ ಐಫೋನ್ 20 ಟೆಕ್ ಲೋಕವನ್ನು ಬೆರಗುಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.