ಕೊರೋನಾ ವೈರಸ್ ಹಾವಳಿಯಿಂದ ಯಾರೂ ಮನೆಯಿಂದ ಹೊರಬರವಾರದು ಎಂಬ ಕಾರಣಕ್ಕೇ ಲಾಕ್‌ಡೌನ್ ಮಾಡಲಾಗಿದೆ. ಆದರೂ, ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಎಂಬಂತೆ ಸುಮ್ಮನೆ ಕೂರಲಾಗದವರು ಹೊರಗೆ ಕಾಲಿಟ್ಟು ಬೈಕನ್ನೋ, ಕಾರನ್ನೋ ಏರಿ ಬೇಕಾದ ಕಡೆಗೆ ಹೋಗಿದ್ದಾರೆ. ನೆನಪಿಡಿ ನಿಮ್ಮನ್ನು ಗೂಗಲ್ ನೋಡ್ತಾ ಇರುತ್ತೆ. ನಿಮ್ಮ ಮೊಬೈಲ್‌ನಿಂದ ನಿಮಗೇ ಗೊತ್ತಿಲ್ಲದೆ ಮಾಹಿತಿ ಕಲೆಹಾಕುತ್ತಿದೆ. ಈಗ ಅದೇ ಕೊಟ್ಟ ಮಾಹಿತಿಯನ್ವಯ ಹೋಂ ಕ್ವಾರಂಟೇನ್ ಇದ್ದಿದ್ರಿಂದ ನೀವೆಲ್ಲ ಮನೆಯಿಂದ ಜಾಸ್ತಿಯೇನೂ ಹೊರಹೋಗಿಲ್ಲ ಎಂದು ಷರಾ ಬರೆದಿದೆ.
ಗೂಗಲ್ ಟ್ರ್ಯಾಕಿಂಗ್ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ನೀವು ಎಲ್ಲೇ ಹೋಗಿ ಗೂಗಲ್ ನಿಮ್ಮನ್ನ ಫಾಲೋ ಮಾಡುತ್ತೆ. ಇದಕ್ಕೆ ಗೂಗಲ್ ಮ್ಯಾಪಿಂಗ್ ಸಹಾಯ ಮಾಡುತ್ತೆ. ಈಗ ವಿಷಯ ಏನಪ್ಪ ಅಂದ್ರೆ ಮೊದಲೇ ತನ್ನ ಇತರ ಕೆಲಸಗಳ ನಡುವೆ ಒಂದೆರೆಡು ಕಣ್ಣಿಟ್ಟಿದ್ದ ಗೂಗಲ್ ಈಗ ಪ್ರತ್ಯೇಕವಾಗಿ ಹದ್ದಿನ ಕಣ್ಣಿಟ್ಟು ನಿಮ್ಮನ್ನು ನೋಡುತ್ತಿದೆ!!!
ಈಗ ಕೊರೋನಾ ಹಿನ್ನೆಲೆಯಲ್ಲಿ ದೇಶವೇ ಸ್ತಬ್ಧವಾಗಿದೆ. ಲಾಕ್‌ಡೌನ್ ಇರುವುದರಿಂದ ಯಾರೂ ಮನೆಯಿಂದ ಹೊರಬರುತ್ತಿಲ್ಲ. ಆದರೂ ಲೆಕ್ಕಿಸದೇ ಹೊರಗೆ ಬರುತ್ತಿರುವವರ ಮಾಹಿತಿ ಪಡೆಯುತ್ತಿದೆ. ಇದಕ್ಕಾಗಿ ಪ್ರತ್ಯೇಕ ಪೋರ್ಟಲ್ ಒಂದನ್ನು ತೆರೆದು ಕೋವಿಡ್-19 ಕಮ್ಯುನಿಟಿ ಮೊಬೈಲ್ ರಿಪೋರ್ಟ್ ಸಿದ್ಧಪಡಿಸಿದೆ.
ಇದನ್ನೂ ಓದಿ: ಇಂಡಿಯಾದಲ್ಲಿ ವರ್ಕ್ ಆಗತ್ತಾ ವರ್ಕ್ ಫ್ರಂ ಹೋಂ?
ಭಾರತದಲ್ಲಿ ನೀವೆಲ್ಲಿ ಹೋಗಿದ್ದೀರ ನೋಡಿ
ಭಾರತದಲ್ಲಿ ಮಾರ್ಚ್ 24ಕ್ಕೆ ಲಾಕ್‌ಡೌನ್ ಘೋಷಿಸಲಾಯಿತು. ಈಗ ಸಿಕ್ಕಿರುವ ಗೂಗಲ್ ಡೇಟಾ ಪ್ರಕಾರ, ಫೆ. 16ರಿಂದ ಮಾ. 29ರವರೆಗಿನ ಫುಲ್ ರಿಪೋರ್ಟ್ ಪಡೆದುಕೊಳ್ಳಲಾಗಿದೆ. ಆದರೆ, ಇಲ್ಲಿ ಯಾರು ಯಾರು ತಮ್ಮ ಗೂಗಲ್ ಅಕೌಂಟ್‌ನಲ್ಲಿ ಲೊಕೇಶನ್ ಹಿಸ್ಟರಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೋ ಅಂಥವರ ಮಾಹಿತಿ ಮಾತ್ರ ಸಿಕ್ಕಿದೆ. ಅವುಗಳ ವಿವರವನ್ನು ಈ ಕೆಳಗೆ ಕೊಡಲಾಗಿದೆ.
- ರೆಸ್ಟೋರೆಂಟ್, ಕೆಫೆಗಳು, ಶಾಪಿಂಗ್ ಸೆಂಟರ್‌ಗಳು, ಥೀಮ್ ಪಾರ್ಕ್‌ಗಳು, ಮ್ಯೂಸಿಯಂ, ಗ್ರಂಥಾಲಯ ಮತ್ತು ಮೂವಿ ಥಿಯೇಟರ್‌ಗಳಿಗೆ ಭೇಟಿ ನೀಡಿದವರ ಪ್ರಮಾಣ ಶೇ. 77ರಷ್ಟು ಕುಸಿದಿದೆ.
- ಕಿರಾಣಿ ಅಂಗಡಿಗಳು, ಆಹಾರ ಗೋದಾಮುಗಳು, ಮೆಡಿಕಲ್ ಶಾಪ್‌ಗಳಿಗೆ ಭೇಟಿ ನೀಡುವವರ ಪ್ರಮಾಣದಲ್ಲೂ ಶೇ. 65ರಷ್ಟು ಕುಸಿದಿದೆ.
- ನ್ಯಾಷನಲ್ ಪಾರ್ಕ್, ಸಾರ್ವಜನಿಕ ಬೀಚ್‌ಗಳು, ಉದ್ಯಾನವನಗಳಲ್ಲಿ ಶೇ. 57ರಷ್ಟು ಕುಸಿತ ಕಂಡಿದೆ.
- ಕಚೇರಿಗಳ ಕೆಲಸವೂ ಶೇ. 47ರಷ್ಟು ಇಳಿಕೆ ಕಂಡಿದೆ.
- ಮುಖ್ಯವಾಗಿ ಮನೆ-ಮನೆ ತಿರುಗುವವರ ಸಂಖ್ಯೆ ಮಾತ್ರ ಅಷ್ಟಾಗಿ ಕಡಿಮೆಯಾಗಲಿಲ್ಲ. ಇಲ್ಲಿ ಇಳಿಕೆ ಕಂಡ ಪ್ರಮಾಣ ಕೇವಲ ಶೇ. 22.
ಇದನ್ನೂ ಓದಿ: ಹೊರಗೆ ಕೊರೋನಾ ಅಟ್ಟಹಾಸ, ಮನೆಯಿಂದ ಕೆಲ್ಸ ಮಾಡೋರಿಗೆ ಹ್ಯಾಕರ್ಸ್ ಕಾಟ!
ವಿಶ್ವದೆಲ್ಲೆಡೆ ನಿಗಾ
ಕೊರೋನಾ ವೈರಸ್ ಸಾಂಕ್ರಾಮಿಕ ರೋಗವಾಗಿರುವುದರಿಂದ ಬಹಳ ಎಚ್ಚರಿಕೆ ಅಗತ್ಯ. ಈ ಹಿನ್ನೆಲೆಯಲ್ಲಿ ವಿವಿಧ ರೀತಿಯ ಸ್ಥಳಗಳಿಗೆ ಸಾರ್ವಜನಿಕರು ಭೇಟಿ ಕೊಡುವ, ಆ ಮೂಲಕ ಸೋಂಕು ಹರಡುತ್ತಿರುವ ಮಾಹಿತಿಗಳನ್ನು ಗೂಗಲ್ ತನ್ನ ಮ್ಯಾಪಿಂಗ್ ಸೇವೆಗಳ ಮೂಲಕ ಕಲೆಹಾಕುತ್ತಿದೆ. ದೇಶ-ವಿದೇಶಗಳಲ್ಲೂ ಇದೇ ಮಾದರಿಯಲ್ಲಿ ಗಮನಿಸಲಾಗುತ್ತಿದೆ.
ಯಾವ ಸ್ಥಳಗಳ ವರದಿ?
ಜನ ಎಷ್ಟರ ಮಟ್ಟಿಗೆ ಸರ್ಕಾರದ ಆದೇಶವನ್ನು ಪಾಲಿಸಿದ್ದಾರೆ ಮತ್ತು ಪಾಲಿಸುತ್ತಿದ್ದಾರೆ. ಜೊತೆಗೆ ಅವರ ಓಡಾಟದ ಚಟುವಟಿಕೆ ಎಷ್ಟರ ಮಟ್ಟಿಗೆ ಕಡಿಮೆಯಾಗಿದೆ ಎಂಬುದನ್ನು ಈ ವರದಿಯಿಂದ ಪಡೆಯಲಾಗಿದೆ. ಅಲ್ಲದೆ, ಈ ವರದಿಯನ್ನು ಬೇರೆ ಬೇರೆ ಭೌಗೋಳಿಕ ಪ್ರದೇಶದ ವಿವಿಧ ವಿಭಾಗಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಚಿಲ್ಲರೆ ವ್ಯಾಪಾರ ಕ್ಷೇತ್ರ, ಮನೋರಂಜನಾ ಕ್ಷೇತ್ರ, ದಿನಸಿ ಅಂಗಡಿ, ಔಷಧ ಅಂಗಡಿಗಳು, ಪ್ರಯಾಣ ನಿಲ್ದಾಣಗಳು, ಕಚೇರಿಗಳು ಮತ್ತು ರೆಸಿಡೆನ್ಶಿಯಲ್ ಪ್ರದೇಶಗಳಿಗೆ ಭೇಟಿ ನೀಡಿದ ಮಾಹಿತಿಗಳನ್ನು ನಿಮ್ಮ ಜೇಬಿನಲ್ಲಿಯೇ ಇರುವ ಮೊಬೈಲ್‌ಗಳಿಂದ ಮಾಹಿತಿಯನ್ನು ಪಡೆಯಲಾಗುತ್ತಿದೆ.
ಇದನ್ನೂ ಓದಿ: ಕೋರೋನಾ ಮಾಹಿತಿಗೆ ಟ್ವಿಟ್ಟರ್ ಶುರುಮಾಡಿದೆ ಸರ್ಚ್ ಪ್ರಾಂಪ್ಟ್!