ಜಿಯೋ ವರ್ಕ್ ಫ್ರಂ ಹೋಂ ಧಮಾಕಾ; ವರ್ಷವಿಡಿ ಎಂಜಾಯ್ ಮಾಡಿ

By Suvarna NewsFirst Published May 10, 2020, 10:06 PM IST
Highlights

ರಿಲಾಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ವರ್ಕ್ ಫ್ರಂ ಹೋಂ ಗ್ರಾಹಕರಿಗೆ ಭಾರಿ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದೆ. ಇದು ವಾರ್ಷಿಕ ಪ್ಲಾನ್ ಆಗಿದ್ದು, ಪ್ರತಿ ದಿನ 2ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. ಈ ಮೂಲಕ ಅಡೆತಡೆಗಳಿಲ್ಲದೆ ಆಫೀಸ್ ಕೆಲಸಗಳನ್ನು ಪೂರೈಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ. 

ಬೆಂಗಳೂರು (ಮೇ 10): ಮತ್ತೆ ರಿಲಾಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಸುದ್ದಿಯಲ್ಲಿದೆ. ತನ್ನ ಮಾಸ್ಟರ್ ಪ್ಲಾನ್‌ಗಳಿಂದಲೇ ಪ್ರತಿಸ್ಪರ್ಧಿಗಳನ್ನು ಕಂಗಾಲಾಗಿಸುತ್ತಾ ಬಂದಿರುವ ಜಿಯೋ ಈಗ ಹೊಸತೊಂದು ಪ್ಲಾನ್ ತರುವ ಮೂಲಕ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ. 

ವರ್ಕ್ ಫ್ರಂ ಹೋಂನಲ್ಲಿರುವವರಿಗೆ ಡೇಟಾ ಸಾಲುತ್ತಿಲ್ಲ, ಸಿಕ್ಕರೂ ಸ್ಪೀಡ್ ಸಾಲುತ್ತಿಲ್ಲ ಎಂಬ ಗೋಳು, ಕೂಗು ಕೇಳಿಬರುತ್ತಲೇ ಇತ್ತು. ಇದಕ್ಕಾಗಿ ಜಿಯೋ ಸೇರಿ ಎಲ್ಲ ಟೆಲಿಕಾಂ ಕಂಪನಿಗಳೂ ಆಫರ್‌ಗಳನ್ನು ಬಿಟ್ಟಿದ್ದವು. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಜಿಯೋ, ವಾರ್ಷಿಕ ಪ್ಲಾನ್‌ಗೆ ಹೆಚ್ಚುವರಿ ಡೇಟಾವನ್ನು ಕೊಡುವ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

ಇದನ್ನು ಓದಿ: ಲಾಕ್‌ಡೌನ್ ಅವಧಿಯಲ್ಲಿ ಗೂಗಲ್ ಸರ್ಚ್ ಟ್ರೆಂಡ್‌ಗಳಿವು!

2399ರ ಹೊಸ ಪ್ಲಾನ್ ಏನು?
ಈ ಹಿಂದೆಯೇ ಇರುವ ವಾರ್ಷಿಕ 2,399 ರೂಪಾಯಿ ಪ್ಲಾನ್‌ಗೆ ಹೆಚ್ಚುವರಿ ಶೇ. 33 ರಷ್ಟು ಡೇಟಾವನ್ನು ನೀಡುತ್ತಿದ್ದು, ಇದು ಹೆಚ್ಚುವರಿ ಡೇಟಾ ಬಯಸುವವರಿಗೆ ಅನುಕೂಲಕರವಾಗಿದೆ. ಇಲ್ಲಿ ಪ್ರತಿ ದಿನ 2ಜಿಬಿ ಹೈ ಸ್ಪೀಡ್ ಡೇಟಾ ಲಭ್ಯವಾಗಲಿದೆ. ಅಲ್ಲದೆ, ತಿಂಗಳ ಲೆಕ್ಕವನ್ನು ಹಾಕುವುದಾದರೆ ಇದು ಅತಿ ಅಗ್ಗ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ ಗ್ರಾಹಕರು ಸರಾಸರಿ ಇದಕ್ಕೋಸ್ಕರ ಪ್ರತಿ ತಿಂಗಳು 200 ರೂಪಾಯಿಯನ್ನು ಮಾತ್ರ ನೀಡಿದಂತಾಗುತ್ತದೆ. ಇದು ಗ್ರಾಹಕಸ್ನೇಹಿ ಪ್ಲಾನ್ ಎಂಬುದು ಕಂಪನಿಯವರ ಅಂಬೋಣ.

ಅಲ್ಲದೆ, ಈ ಪ್ಲಾನ್ ಅನ್ನು 365 ದಿನಕ್ಕೂ ಅನ್ವಯ ಮಾಡಲಾಗಿದೆ. ಜೊತೆಗೆ ಅನ್ ಲಿಮಿಟೆಡ್ ವಾಯ್ಸ್ ಹಾಗೂ ಎಸ್‌ಎಂಎಸ್ ಸೇವೆಯನ್ನೂ ಒದಗಿಸಲಾಗುತ್ತಿದೆ. ಈ ಹಿಂದೆ ಫೆಬ್ರವರಿಯಲ್ಲಿ 2,121 ರೂಪಾಯಿಯ ಪ್ಲಾನ್ ಅನ್ನು ಜಿಯೋ ಬಿಡುಗಡೆಗೊಳಿಸಿತ್ತು. ಇದರಲ್ಲಿ ಪ್ರತಿ ದಿನಕ್ಕೆ 1.5 ಜಿಬಿ ಹೈಸ್ಪೀಡ್ ಡೇಟಾ ಜೊತೆಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಎಸ್‌ಎಂಎಸ್ ಸೇವೆ ಇತ್ತು. ಆದರೆ, ಇದು 336 ದಿನಕ್ಕೆ ಸೀಮಿತವಾಗಿತ್ತು. 

ಇದನ್ನು ಓದಿ: ಜೂಮ್ ಬಿಟ್ಟು ಮೀಟ್ ಆಗೋಣ ಬನ್ನಿ ಎಂದ ರಿಲಾಯನ್ಸ್!

ಆ್ಯಡ್‌-ಆನ್ ಪ್ಯಾಕ್ ಸೌಲಭ್ಯವೂ ಚೆನ್ನಾಗಿದೆ
ಇನ್ನು ಈ ಪ್ಲಾನ್ ಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಆ್ಯಡ್‌-ಆನ್ ಪ್ಯಾಕ್ ಅನ್ನೂ ಪ್ರಸ್ತುತಿಪಡಿಸಿದ್ದು, ಇದರಲ್ಲಿ ಯಾವುದೇ ಡೈಲಿ ಡೇಟಾ ಕ್ಯಾಪಿಂಗ್ ಇಲ್ಲದೆಯೇ ಬ್ರೌಸ್ ಮಾಡುವ ಅವಕಾಶವನ್ನು ನೀಡಲಾಗಿದ್ದು, ಸಹಜವಾಗಿಯೇ ಇದು ಗ್ರಾಹಕರಿಗೆ ಅನುಕೂಲವಾಗಲಿದೆ. ಈಗಾಗಲೇ ಇರುವ ಆ್ಯಡ್‌-ಆನ್ ಪ್ಲಾನ್ ವಿವರಗಳು ಹೀಗಿದೆ, 11 ರೂಪಾಯಿಗೆ 0.8 GB, 21 ರೂಪಾಯಿಗೆ 1 GB, 31 ರೂಪಾಯಿಗೆ 2 GB, 51 ರೂಪಾಯಿಗೆ 6GB ಹಾಗೂ 101 ರೂಪಾಯಿಗೆ 12GB ಡೇಟಾ ಪ್ಲಾನ್ ಅನ್ನು ನೀಡಲಾಗಿದೆ. 

ಜೊತೆಗೆ ಈ ಪರಿಚಯ ಪಡಿಸಿರುವ ಹೊಸ ವರ್ಕ್‌ ಫ್ರಮ್ ಹೋಮ್ ಪ್ಯಾಕ್ ನಲ್ಲಿ 151 ರೂಪಾಯಿಗೆ 30GB, 201 ರೂಪಾಯಿಗೆ 40GB ಮತ್ತು 251 ರೂಪಾಯಿಗೆ 50GB ಡೇಟಾವನ್ನು ಬಳಸಬಹುದಾಗಿದೆ.

ಇದನ್ನು ಓದಿ: ವೋಡಾಫೋನ್-ಐಡಿಯಾ ಡೇಟಾ ಡಬಲ್ ಧಮಾಕಾ

ಲಾಕ್‌ಡೌನ್ ಅವಧಿಯಲ್ಲಿ ವರ್ಕೌಟ್ ಆಗುತ್ತಾ?
ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಮಹಾಮಾರಿಯ ಆತಂಕ ಸದ್ಯಕ್ಕೆ ದೂರವಾಗುವಂತೆ ಕಾಣುತ್ತಿಲ್ಲ. ದಿನೇದಿನೇ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ನಡುವೆ ಲಾಕ್ ಡೌನ್ ಅವಧಿ ಮುಂದುವರಿಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜುಲೈ 31ರ ವರೆಗೆ ಐಟಿ ಕಂಪನಿಗಳಿಗೆ ಈ ಹಿಂದೆಯೇ ವರ್ಕ್ ಫ್ರಂ ಹೋಂ ಸೌಲಭ್ಯವನ್ನು ಮುಂದುವರಿಸುವಂತೆ ಕೇಂದ್ರ ಸರ್ಕಾರ ಕೇಳಿಕೊಂಡಿತ್ತು.

ಅದರ ನಡುವೆ ಮೂರನೇ ಬಾರಿ ಲಾಕ್‌ಡೌನ್ ವಿಸ್ತರಣೆಯಾಗಿದ್ದು, ಮೇ 17ರವರೆಗೆ ಎಂದು ನಿಗದಿಯಾಗಿದೆ. ಆದರೆ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಏನು ಕಥೆ ಎಂಬ ನಿಟ್ಟಿನಲ್ಲೂ ಎಲ್ಲರೂ ಆತಂಕಿತರಾಗಿದ್ದಾರೆ. ಹೀಗಾಗಿ ವರ್ಕ್ ಫ್ರಂ ಹೋಂ ಮಾಡುವವರಿಗೆ ಹೆಚ್ಚಿನ ಡೇಟಾ ಬೇಕೇಬೇಕು. ಇನ್ನು ಕೆಲವೊಮ್ಮೆ ಪ್ಲಾನ್‌ಗಳು ಬದಲಾವಣೆಗಳಾಗುವ ಸಂಭವಗಳೂ ಇರುತ್ತವೆ. ಹೀಗಾಗಿ ಈ ಅವಧಿಯಲ್ಲಿ ಇಂತಹ ಪ್ಲಾನ್‌ಗಳು ವರ್ಕೌಟ್ ಆಗುತ್ತವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

click me!