ವಿಶ್ವವನ್ನೇ ದಿಕ್ಕೆಡಿಸಿರುವ ಕೊರೋನಾ ಮಾಹಾಮಾರಿಯ ಭಯ ಜನರ ತಲೆಯನ್ನೂ ಬಹಳವಾಗಿ ಕೆಡಿಸಿದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಪರಿಣಾಮ ಈ ಅವಧಿಯಲ್ಲಿ ಗೂಗಲ್‌ನಲ್ಲಿ ಕರೋನಾಗೆ ಸಂಬಂಧಿಸಿದ ಮಾಹಿತಿಗಳ ಸಹಿತ, ಒತ್ತಡ ನಿವಾರಣೆ, ಕೋವಿಡ್-19ಕ್ಕೆ ಔಷಧಗಳೇನು ಎಂಬಿತ್ಯಾದಿ ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಾಡಲಾಗಿದೆ. ಹಾಗಾದರೆ ಈ ಲಾಕ್ ಡೌನ್ ಅವಧಿಯಲ್ಲಿ ಯಾವ ಯಾವ ವಿಷಯಗಳು ಟ್ರೆಂಡ್ ಆಗಿವೆ ಎಂಬುದನ್ನು ನೋಡೋಣ ಬನ್ನಿ…
ಅಂಗೈಯಲ್ಲೇ ಪ್ರಪಂಚವನ್ನೇ ತೋರಿಸುವ ಗೂಗಲ್ ಎಂಬ ಸರ್ಚ್ ಎಂಜಿನ್ ಯುಗದಲ್ಲಿ ಬೇಕಿರುವ ಬೇಡದಿರುವ ಎಲ್ಲವನ್ನೂ ನೋಡಬಹುದಾಗಿದೆ. ಆದರೆ, ಈ ಹಿಂದಿನ ಬ್ಯುಸಿ ಪ್ರಪಂಚಕ್ಕೂ ಈಗಿನ ಲಾಕ್‌ಡೌನ್ ಪ್ರಪಂಚಕ್ಕೂ ಬಹಳ ವ್ಯತ್ಯಾಸವನ್ನು ನಾವು ಕಾಣಬಹುದಾಗಿದೆ. ಆಗ ಬಿಡುವಿಲ್ಲದ ಜೀವನಚಕ್ರದಲ್ಲಿ ತೀರಾ ಅಗತ್ಯಬಿದ್ದರಷ್ಟೇ ಗೂಗಲ್ ಮೊರೆಹೋಗಿ ಬೇಕಾದ ಮಾಹಿತಿಗೆ ಸರ್ಚ್ ಮಾಡುತ್ತಿದ್ದ ಮಂದಿ, ಈಗಿನ ಸ್ಟೇ ಹೋಂ ಅವಧಿಯಲ್ಲಿ ಏನೇನು ಹುಡುಕಾಡಿದ್ದಾರೆ ಗೊತ್ತಾ? ಬಹುತೇಕರು ಕೊರೋನಾ ಕುರಿತ ಮಾಹಿತಿಯನ್ನೇ ತಡಕಾಡಿರುವುದು ಟ್ರೆಂಡಿಂಗ್‌ನಲ್ಲಿದೆ.
ಇಲ್ಲಿ ಬಹುಮುಖ್ಯವಾಗಿ ಜನ ಕೋವಿಡ್-19 ಸೋಂಕಿಗೆ ಹೆದರಿದ್ದಾರೆಂಬುದು ಸ್ಪಷ್ಟವಾಗಿದೆ. ಈ ಕಾರಣಕ್ಕಾಗಿ ತಮ್ಮ ಸುತ್ತಮುತ್ತಲಿನ ಜೊತೆಗೆ ಜಗತ್ತಿನಲ್ಲಿ ಏನು ನಡೆಯುತ್ತಿದೆ, ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳುವುದು ಹೇಗೆ? ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ಈ ವೈರಸ್‌ಗೆ ಔಷಧಗಳಿವೆಯೇ? ಹೊರಗೆ ತಿರುಗಾಡಲು ಇ-ಪಾಸ್ ಸಿಗುತ್ತದೆಯೇ? ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಹುಡುಕಾಡಿದ್ದಾರೆ.
ಜಗತ್ತಿನಲ್ಲಿ ಹೆಚ್ಚಿನ ಮಂದಿ ಲಾಕ್ ಡೌನ್ ಅವಧಿಯಲ್ಲಿ ಯಾವುದನ್ನು ಹುಡುಕಾಡಿದ್ದಾರೆ ಎಂಬುದನ್ನೇ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಕಟ್ಟಿಕೊಡಲು ಗೂಗಲ್ ಸಹ ಪ್ರಯತ್ನಿಸಿದೆ.
ಟ್ರೆಂಡಿಂಗ್‌ನಲ್ಲಿ ಸ್ಟ್ರೆಸ್
ಇಲ್ಲಿ ಬಹುಮುಖ್ಯವಾಗಿ ಮನೆಯಲ್ಲಿ ಕುಳಿತು ಕೆಲಸ ನಿರ್ವಹಿಸುತ್ತಿದ್ದರೂ ಇಲ್ಲವೇ ವರ್ಕ್ ಫ್ರಂ ಹೋಂ ಅವಕಾಶವಿಲ್ಲದೆ ಮನೆಯಲ್ಲೇ ಕುಳಿತಿರುವರು ಸೇರಿ ಇನ್ನಿತರರು ಬಹಳ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಕಾರಣ, ಬಹುತೇಕರು ಸ್ಟ್ರೆಸ್ (ಒತ್ತಡ) ಬಗ್ಗೆ ಸರ್ಚ್ ಮಾಡಿದ್ದಾರೆ. ಅಲ್ಲಿ ಅವುಗಳಿಂದ ಹೇಗೆ ಹೊರಬರುವುದು ಎಂಬೆಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಇದನ್ನು ಓದಿ: ವೋಡಾಫೋನ್-ಐಡಿಯಾ ಡೇಟಾ ಡಬಲ್ ಧಮಾಕಾ
ಸ್ವ-ಚಿಕಿತ್ಸೆಯತ್ತ ಹುಟುಕಾಟ
ಕೆಲವು ಬಾರಿ ಸಣ್ಣ ಪ್ರಮಾಣದಲ್ಲಿ ಹುಷಾರಿಲ್ಲದಿದ್ದರೂ ಹೆದರಿಕೆ ಪ್ರಾರಂಭವಾಗುತ್ತದೆ. ಎಲ್ಲಿ ವೈದ್ಯರ ಬಳಿ ಹೋದರೆ ತಮಗೆ ಸೋಂಕಿದೆ ಎಂದು ಕ್ವಾರಂಟೇನ್ ಮಾಡಿಬಿಡುತ್ತಾರೆಂಬ ಭಯ ಬೇರೆ. ಇನ್ನು ಸಾಂಕ್ರಾಮಿಕ ಹೇಗೆ ಹರಡುತ್ತದೆ ಎಂಬುದೂ ಗೊತ್ತಿರದ ಪರಿಸ್ಥಿತಿಯಲ್ಲಿ ಆಗ ಜನರಿದ್ದರು. ಈ ಹಿನ್ನೆಲೆಯಲ್ಲಿ ಬಹುತೇಕರು ಕೆಲವು ರೋಗಗಳಿಗೆ ಆನ್‌ಲೈನ್ ಮೂಲಕ ಸ್ವ-ಚಿಕಿತ್ಸೆ ಪಡೆಯಲು ಹುಡುಕಾಡಿದ್ದಾರೆ. ಇದಕ್ಕಾಗಿ ಹಲವು ಆನ್‌ಲೈನ್ ಥೆರಪಿ ಸೆಶೆನ್ಸ್ ಕ್ಲಾಸ್‌ಗಳನ್ನು ಪ್ರಾರಂಭಿಸಲಾಗಿದೆ.
ಕೋವಿಡ್-19 ಔಷಧ
ಇನ್ನು ಹಲವರು ಕೋವಿಡ್-19 ಔಷಧಗಳ ಹುಡುಕಾಡಿದ್ದು, ಪ್ಲಾಸ್ಮಾ ಥೆರಪಿ, ವ್ಯಾಕ್ಸಿನ್ ಫಾರ್ ಕೋವಿಡ್-19, ಹೈಡ್ರೋಕ್ಲೋರೋಕ್ವಿನಿನ್ ಸೇರಿ ಇನ್ನಿತರ ಔಷಧಗಳ ಬಗ್ಗೆ ಹುಡುಕಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಮೂಲಕ ತಮಗೆ ಇಂತಹ ರೋಗಗಳು ಕಾಣಿಸಿಕೊಂಡರೆ ಎಂಬುದು ಒಂದು ಕಡೆಯಾದರೆ, ಆ ಬಗ್ಗೆ ವಿಷಯ ತಿಳಿದಿರಲಿ ಎಂಬುದು ಮತ್ತೊಂದು ಅಂಶವಾಗಿದೆ ಎಂದು ಹೇಳಲಾಗಿದೆ.
ಆರೋಗ್ಯ ಸೇತು ಆ್ಯಪ್ ಬಗ್ಗೆ ಮಾಹಿತಿ
ಇನ್ನು ಕೇಂದ್ರ ಸರ್ಕಾರವು ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಕೊರೋನಾ ಸೋಂಕಿತ ಪ್ರದೇಶಗಳ ಮಾಹಿತಿ ಪಡೆದುಕೊಳ್ಳುವ ಸಲುವಾಗಿ ರೂಪಿಸಿದ ಆರೋಗ್ಯ ಸೇತು ಆ್ಯಪ್ ಬಗ್ಗೆಯೂ ಹುಡುಕಿದ್ದಾರೆ. ಅಂದರೆ, ಆ್ಯಪ್ ಡೌನ್‌ಲೋಡ್ ಹೇಗೆ? ಅದರ ಕಾರ್ಯನಿರ್ವಹಣೆ ಏನು? ಏನೆಲ್ಲ ಉಪಯೋಗ ಎಂಬಿತ್ಯಾದಿ ಮಾಹಿತಿಗಳನ್ನು ತಿಳಿದುಕೊಳ್ಳಲು ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಗೂಗಲ್ ಮೊರೆ ಹೋಗಿದ್ದಾರೆ.
ಇದನ್ನು ಓದಿ: ಜೂಮ್ ಬಿಟ್ಹಾಕಿ, ಈ 5 ವಿಡಿಯೋ ಕಾಲಿಂಗ್ ಆ್ಯಪ್ ಬಳಸಿ!
ಲಾಕ್‌ಡೌನ್ ಸುದ್ದಿ
ಭಾರತದಲ್ಲಿ ಕೋವಿಡ್-19 ಹೇಗಿದೆ, ಯಾವ ರಾಜ್ಯದಲ್ಲಿ ಯಾವ ಮಟ್ಟದಲ್ಲಿದೆ, ಪಕ್ಕದ ಜಿಲ್ಲೆ, ಬೀದಿ ಸೇರಿದಂತೆ ಹಾಟ್‌ಸ್ಪಾಟ್ ಪ್ರದೇಶಗಳು ಯಾವುವು? ಬೆಂಗಳೂರು ಸೇರಿದಂತೆ ನವದೆಹಲಿಯಲ್ಲಿ ಯಾವ ಮಟ್ಟದಲ್ಲಿ ರೋಗ ಕಾಣಿಸಿಕೊಂಡಿದೆ? ಕೋವಿಡ್-19 ಟ್ರ್ಯಾಕರ್ ಯಾವುದು? ಅವುಗಳನ್ನು ಹೇಗೆ ಉಪಯೋಗಿಸುವುದು ಎಂಬ ಬಗ್ಗೆ ಲಕ್ಷಕ್ಕೂ ಹೆಚ್ಚು ಮಂದಿ ಹುಡುಕಾಡಿದ್ದಾರೆ. ಚೀನಾದಲ್ಲಿ ಕೊರೋನಾ ಹುಟ್ಟಿಕೊಂಡಿದ್ದು ಹೇಗೆ? ಚೀನಾದ ತಂತ್ರಗಾರಿಕೆಯ ಭಾಗವೇ? ಇದು ಮಾನವ ನಿರ್ಮಿತ ವೈರಸ್ ಹೌದೇ ಎಂಬ ಬಗ್ಗೆಯೂ ಜನ ಹುಡುಕಿದ್ದಾರೆ.
ಕೊರೋನಾ ವಾರಿಯರ್ಸ್ ಹಾಗೂ ಹೆಲ್ಪರ್ಸ್
ಕೊರೋನಾ ರೋಗ ಹರಡದಂತೆ ಹಗಲಿರುಳು ಶ್ರಮವಹಿಸಿದ ಕೊರೋನಾ ವಾರಿಯರ್ಸ್‌ಗಳಾದ ವೈದ್ಯರು, ನರ್ಸ್‌ಗಳು, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರ ಬಗೆಗಿನ ಸುದ್ದಿಯನ್ನು ಹೆಚ್ಚೆಚ್ಚು ಗಮನಿಸಲಾಗಿದೆ. ಅಲ್ಲದೆ, ಜನರ ನೆರವಿಗೆ ಧಾವಿಸುವ ವ್ಯಕ್ತಿಗಳ ಬಗ್ಗೆಯೂ ಹೆಚ್ಚಿನ ಹುಡುಕಾಟಗಳಾಗಿದ್ದು, ತಮಗೆ ಏನಾದರೂ ಸಮಸ್ಯೆಗಳಾದರೆ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಸಿಗಬಹುದೇ ಎಂದೂ ಸರ್ಚ್ ಮಾಡಿದ್ದಾರೆ.
ಕೊರೋನಾ ಮುಂಜಾಗ್ರತೆ
ಕೊರೋನಾ ವೈರಸ್ ಲಕ್ಷಣ ಹಾಗೂ ಮುಂಜಾಗ್ರತೆ ವಹಿಸುವುದು ಹೇಗೆ ಎಂಬ ಬಗ್ಗೆ ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕೆಮ್ಮು, ಜ್ವರ, ಶೀತ ಬಂದರಷ್ಟೇ ಕೊರೋನಾ ಬರುತ್ತದೆಯೇ? ಇಲ್ಲವೇ ಬೇರೆ ಲಕ್ಷಣಗಳೂ ಇವೆಯೇ? ರೋಗ ಬರದಂತೆ ಯಾವೆಲ್ಲ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು? ಹೀಗೆ ಹುಡುಕಾಟಗಳು ನಡೆದಿವೆ.
ಇದನ್ನು ಓದಿ: ಫೇಸ್ಬುಕ್ - ವಾಟ್ಸಪ್- ಟಿಕ್‌ಟಾಕ್‌ನಲ್ಲಿ ಹೊಸ ಫೀಚರ್‌ಗಳ ಹವಾ!
ರೆಸಿಪಿ ಮಾಡೋಣ ಬನ್ನಿ
ಈ ಕೊರೋನಾ ಅಬ್ಬರಗಳ ಸುದ್ದಿಗಳನ್ನು ಹಾಗೂ ಅವುಗಳಿಂದ ಕಾಪಾಡಿಕೊಳ್ಳುವ ಬಗೆಗಳನ್ನೆಲ್ಲ ಹುಡುಕಾಡಿದ ಮೇಲೆ ಕೊನೆಗೆ ಆ ಒತ್ತಡಗಳಿಂದ ಹೊರಬರಲು ಹಲವರು ಅಡುಗೆ ಪದಾರ್ಥಗಳ ತಯಾರಿ ಬಗ್ಗೆಯ ಮಾಹಿತಿಯ ಮೊರೆಹೋಗಿದ್ದಾರೆ. ಇಲ್ಲಿ ಡಾಲ್ಗೋನಾ ಕಾಫಿ ಸೇರಿದಂತೆ ಹೊಸ ಹೊಸ ಅಡುಗೆ ರೆಸಿಪಿಗಳ ಬಗ್ಗೆ ಗೂಗಲ್‌ನಲ್ಲಿ ತಡಕಾಡಿದ್ದಾರೆ.