ಮೊದಲ ಬಾರಿಗೆ ಕೋರ್ಟಲ್ಲಿ ChatGPT ಬಳಕೆ: ಜಾಮೀನು ತೀರ್ಪಿನ ವೇಳೆ ಕೃತಕ ಬುದ್ಧಿಮತ್ತೆ ಅಭಿಪ್ರಾಯ ಪಡೆದ ಹೈಕೋರ್ಟ್‌

By Kannadaprabha NewsFirst Published Mar 29, 2023, 12:54 PM IST
Highlights

ಜಾಮೀನು ತೀರ್ಪಿನ ವೇಳೆ ಪಂಜಾಬ್‌ ಹೈಕೋರ್ಟ್‌ ಚಾಟ್‌ ಜಿಪಿಟಿ ಅಭಿಪ್ರಾಯ ಆಲಿಸಿದ್ದು, ಇದು ದೇಶದ ಇತಿಹಾಸದಲ್ಲೇ ಮೊದಲ ಪ್ರಕರಣ ಆಗಿದೆ.

ಚಂಡೀಗಢ (ಮಾರ್ಚ್‌ 29, 2023): ಹತ್ಯೆ ಪ್ರಕರಣದ ಆರೋಪಿಯ ಜಾಮೀನು ಅರ್ಜಿಯ ತೀರ್ಪಿನ ವೇಳೆ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌, ಈ ವಿಷಯದಲ್ಲಿ ಜಾಗತಿಕ ನ್ಯಾಯ ವ್ಯವಸ್ಥೆಯ ಅಭಿಪ್ರಾಯ ಏನಿದೆ ಎಂದು ಚಾಟ್‌ ಜಿಪಿಟಿಯ ಮೂಲಕ ನೆರವು ಪಡೆದ ಘಟನೆ ಸೋಮವಾರ ನಡೆದಿದೆ. ಇಂಥ ಬೆಳವಣಿಗೆ ದೇಶದ ನ್ಯಾಯಾಂಗ ಇತಿಹಾಸದಲ್ಲೇ ಮೊದಲನೆಯದು ಎನ್ನಲಾಗಿದೆ.

ಜೊತೆಗೆ, ನ್ಯಾಯಾಲಯ ತನ್ನ ತೀರ್ಪಿನಲ್ಲೂ ಚಾಟ್‌ ಜಿಪಿಟಿಯ ವಿಷಯವನ್ನೂ ಉಲ್ಲೇಖಿಸುವ ಮೂಲಕ, ಕ್ರೂರತೆಯೇ ಮುಖ್ಯ ವಿಷಯವಾಗಿರುವ ಪ್ರಕರಣದ ಜಾಮೀನಿನ ವಿಷಯದಲ್ಲಿ ನ್ಯಾಯಶಾಸ್ತ್ರದ ವಿಶಾಲ ದೃಷ್ಟಿಕೋನವನ್ನು ಜನರ ಮುಂದಿಡುವ ಯತ್ನ ಮಾಡಿದೆ. ಆದರೆ ತೀರ್ಪಿಗೂ, ಚಾಟ್‌ ಜಿಪಿಟಿ ನೀಡಿರುವ ಮಾಹಿತಿಗೂ ಯಾವುದೇ ನಂಟು ಇಲ್ಲ ಎಂದೂ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಇದನ್ನು ಓದಿ: ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಫೇಲ್‌ ಆದ ChatGPT: ನೆಟ್ಟಿಗರಿಂದ ಸಖತ್‌ ಟ್ರೋಲ್‌

ಪ್ರಕರಣ ಹಿನ್ನೆಲೆ:
ಹತ್ಯೆ ಪ್ರಕರಣದ ಆರೋಪಿಯೊಬ್ಬ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಆದರೆ ಆರೋಪಿಗೆ ಕ್ರಿಮಿನಲ್‌ ಹಿನ್ನೆಲೆ ಇದೆ. ಜೊತೆಗೆ ಜಾಮೀನು ನೀಡಿದರೆ ಆತ ಪರಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಆತನಿಗೆ ಜಾಮೀನು ನೀಡಬಾರದು ಎಂದು ಸರ್ಕಾರ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಅರ್ಜಿ ಪರಿಶೀಲಿಸಿದ ನ್ಯಾ.ಅನೂಪ್‌ ಚಿತ್ಕಾರಾ ಅವರನ್ನೊಳಗೊಂಡ ನ್ಯಾಯಪೀಠ, ‘ಮೇಲ್ನೋಟಕ್ಕೆ ಆರೋಪಿ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವಂತೆ ಕಾಣುತ್ತದೆ ಮತ್ತು ಜಾಮೀನು ಕೋರಲು ಅಗತ್ಯವಾದ ಅಂಶಗಳನ್ನು ಪ್ರಸ್ತಾಪಿಸಿಲ್ಲ’ ಎಂದು ಹೇಳಿತು.

ಬಳಿಕ ‘ಹಲ್ಲೆ ಪ್ರಕರಣವು ಕ್ರೂರತೆಯನ್ನೂ ಒಳಗೊಂಡಿದ್ದಾಗ ಅಂಥ ವಿಷಯದಲ್ಲಿ ಜಾಗತಿಕ ನ್ಯಾಯಶಾಸ್ತ್ರದ ಅಭಿಪ್ರಾಯ ಏನಿದೆ?’ ಎಂದು ಕೃತಕ ಬುದ್ಧಿಮತ್ತೆ ವ್ಯವಸ್ಥೆಯಾದ ಚಾಟ್‌ ಜಿಪಿಟಿಯ ಅಭಿಪ್ರಾಯ ಕೋರಿತು.

ಇದನ್ನೂ ಓದಿ: ಚಾಟ್‌ ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ‘ಬರ್ಡ್‌’ ಶುರು; ಶೀಘ್ರವೇ ಹೊಸ ಸೇವೆ ಆರಂಭ: ಸುಂದರ್ ಪಿಚೈ

ಇದಕ್ಕೆ ಜಾಟ್‌ ಜಿಪಿಟಿ ‘ಹಲ್ಲೆ ಪ್ರಕರಣದಲ್ಲಿ ಕ್ರೂರತೆಯೇ ಮುಖ್ಯ ಅಂಶವಾಗಿರುವ ಪ್ರಕರಣದಲ್ಲಿ ಜಾಮೀನು ನೀಡುವುದು ಆಯಾ ದೇಶಗಳ ಕಾನೂನನ್ನು ಅವಲಂಬಿಸಿರುತ್ತದೆ. ಆದರೆ ಸಾಮಾನ್ಯವಾಗಿ ಕ್ರೂರತೆ, ಕ್ರೌರ್ಯ, ಭಾರೀ ಹಿಂಸೆಯನ್ನು ಒಳಗೊಂಡ ಹತ್ಯೆಯಂಥ ಪ್ರಕರಣಗಳಲ್ಲಿ ಆರೋಪಿಯನ್ನು ಸಮಾಜಕ್ಕೆ ಅಪಾಯಕಾರಿ ಮತ್ತು ಪರಾರಿಯಾಗುವ ಸಾಧ್ಯತೆ ಇದೆ ಎಂದು ಪರಿಗಣಿಸಲಾಗುತ್ತದೆ. ಇಂಥ ಸಂದರ್ಭದಲ್ಲಿ ನ್ಯಾಯಾಧೀಶರು ಜಾಮೀನು ನೀಡಲು ಹಿಂಜರಿಯುವ ಅಥವಾ ಜಾಮೀನು ನೀಡಲು ಹೆಚ್ಚಿನ ಠೇವಣಿ ಇಡುವಂತೆ ಸೂಚಿಸುತ್ತಾರೆ. ಈ ಮೂಲಕ ಆರೋಪಿ ನ್ಯಾಯಾಲಯಕ್ಕೆ ಹಾಜರಾಗುವುದನ್ನು ಮತ್ತು ಸಾರ್ವತ್ರಿಕ ಶಾಂತಿಗೆ ಭಂಗ ತರದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಜೊತೆಗೆ ಜಾಮೀನು ನೀಡುವಾಗ ನ್ಯಾಯಾಧೀಶರು ಹಲ್ಲೆಯ ಪ್ರಮಾಣ, ಆರೋಪಿಯ ಕ್ರಿಮಿನಲ್‌ ಹಿನ್ನೆಲೆ, ಆತನ ವಿರುದ್ಧದ ಪ್ರಬಲ ಸಾಕ್ಷಿ ಮೊದಲಾದ ಎಲ್ಲಾ ಅಂಶಗಳನ್ನು ಪರಿಗಣಿಸುತ್ತಾರೆ’ ಎಂದು ಹೇಳಿತು.

ಮುಂದುವರೆದು ‘ನ್ಯಾಯಾಂಗ ವ್ಯವಸ್ಥೆಯಲ್ಲಿ ನಿಷ್ಕಳಂಕತೆಯ ವಾದವು ಮೂಲಭೂತ ತತ್ವವಾಗಿದೆ, ಜೊತೆಗೆ ನಿರಾಕರಿಸಲೇಬೇಕಾದ ಅಂಶಗಳಿಲ್ಲದೇ ಹೋದರೆ, ಆತ ಜಾಮೀನು ಪಡೆಯಲು ಎಲ್ಲಾ ಅರ್ಹತೆಯನ್ನೂ ಹೊಂದಿರುತ್ತಾನೆ. ಹೀಗಾಗಿ ಹಲ್ಲೆ ವೇಳೆ ಆರೋಪಿ ಕ್ರೂರತೆ ಮೆರೆದ ಹೊರತಾಗಿಯೂ ಆತ ಸಮಾಜಕ್ಕೆ ಕಂಟಕ ಅಲ್ಲ ಮತ್ತು ಪರಾರಿಯಾಗುವ ಸಾಧ್ಯತೆ ಇಲ್ಲ ಎಂದು ನ್ಯಾಯಾಧೀಶರಿಗೆ ಖಚಿತವಾದರೆ ಅಂಥ ಸಂದರ್ಭದಲ್ಲಿ ಆರೋಪಿಗೆ ಜಾಮೀನು ನೀಡಬಹುದು’ ಎಂದು ಹೇಳಿದೆ.

ಇದನ್ನೂ ಓದಿ: ಬಿರಿಯಾನಿ ವಿಚಾರವಾಗಿ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಗೆ ಕ್ಷಮೆ ಕೋರಿದ ಚಾಟ್‌ಬಾಟ್‌..!

ಈ ಎಲ್ಲಾ ಅಭಿಪ್ರಾಯಗಳನ್ನು ಆಲಿಸಿದ ನ್ಯಾಯಪೀಠವು ‘ಹತ್ಯೆಗೆ ಕಾರಣವಾಗುವುದೇ ಕ್ರೂರ, ಅದರಲ್ಲೂ ಕ್ರೂರತೆಯಿಂದಲೇ ಸಾವಾದಲ್ಲಿ ಪ್ರಕರಣದ ತೀವ್ರತೆಯೇ ಬದಲಾಗುತ್ತದೆ. ದೈಹಿಕ ಹಲ್ಲೆಯನ್ನು ಕ್ರೂರತೆಯ ಮೂಲಕ ಎಸಗಿದರೆ, ಜಾಮೀನು ನೀಡಲು ಬಳಸುವ ಮಾನದಂಡ ಕೂಡಾ ಬದಲಾಗುತ್ತದೆ. ಇಂಥ ಕ್ರೂರ ವ್ಯಕ್ತಿಗಳು ಸಮಾಜದಲ್ಲಿ ಲಿಂಗ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗೆ ಕಾರಣರಾಗುತ್ತಾರೆ. ಹೀಗಾಗಿ ಆರೋಪಿ ಕ್ರೂರತೆಯ ಮೂಲಕ ಕೃತ್ಯ ಎಸಗಿದ್ದಾನೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಆದಲ್ಲಿ, ಆತನಿಗೆ ಜಾಮೀನು ನೀಡಬಾರದು. ಇದರ ಹೊರತಾಗಿಯೂ ಒಂದು ವೇಳೆ ಆತನಿಗೆ ಜಾಮೀನು ನೀಡುವುದಾದಲ್ಲಿ ಅದಕ್ಕೆ ಕಾರಣಗಳನ್ನು ನ್ಯಾಯಾಲಯಗಳು ನೀಡಬೇಕು’ ಎಂದು ಹೇಳಿ ಆರೋಪಿಯ ಜಾಮೀನು ಅರ್ಜಿ ವಜಾ ಮಾಡಿತು.

click me!