ಚರಿತ್ರೆ ಸೃಷ್ಟಿಸಿದ ಹೊಸ ರೋಗ ಕೊರೋನಾಗೆ ಇನ್ನೂ ಮದ್ದು ಸಿಕ್ಕಿಲ್ಲ. ಹೋಗಲಿ ರೋಗ ಎದುರಿಗಿದ್ದವನಿಗೆ ಬಂದಿದೆ ಎಂದು ತಿಳಿದುಕೊಳ್ಳಲೂ ಸರಿಯಾಗಿ ಗೊತ್ತಾಗುವುದಿಲ್ಲ. ಕೆಲವರು ತಮಗೆ ರೋಗ ಬಾಧಿಸಿರುವುದು ಗೊತ್ತಿದ್ದರೂ ಹೇಳೋದಿಲ್ಲ, ಮತ್ತೆ ಕೆಲವರಿಗೆ ರೋಗ ಬಂದಿದ್ದು ಗೊತ್ತಿಲ್ಲದಿದ್ದರೂ ಊರು ತುಂಬಾ ಓಡಾಡಿ ಇಲ್ಲದಿದ್ದವರಿಗೂ ತಗುಲಿಸಿ ಬರುತ್ತಾರೆ. ಆದರೆ, ಈಗ ಸ್ವಲ್ಪ ನೆಮ್ಮದಿಯ ಸುದ್ದಿ ಸಿಕ್ಕಿದೆ. ಅಂಥವರು ಈಗ ನಮ್ಮ ಬಳಿ ಸುಳಿದರೂ ಸಾಕು ಗೊತ್ತಾಗಿ ಬಿಡುತ್ತದೆ. ಅಂಥದ್ದೊಂದು ಆ್ಯಪ್ ಈಗ ಸಿದ್ಧವಾಗುತ್ತಿದೆ.
ಹೌದು. ಕೊರೋನಾ ಮಹಾಮಾರಿ ವಿಶ್ವಕ್ಕೇ ವ್ಯಾಪಿಸಿದ್ದಲ್ಲದೆ, ಯಾರ ನಿಯಂತ್ರಣಕ್ಕೂ ಸಿಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಆ್ಯಪಲ್ ಹಾಗೂ ಗೂಗಲ್ ಈಗ ಜಂಟಿ ಕಾರ್ಯಾಚರಣೆಗೆ ಇಳಿದಿವೆ. ಜೊತೆಗೆ ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದು, ಶೀಘ್ರ ನಾಗರಿಕರಿಗೆ ಲಭ್ಯವಾಗಲಿದೆ.
ಇದನ್ನೂ ಓದಿ:
ಸುಳ್ಳು ಸಾಂಕ್ರಾಮಿಕಕ್ಕೆ ವ್ಯಾಟ್ಸ್‌ಆ್ಯಪ್ ಗುನ್ನ, ಒಬ್ಬರಿಗೆ ಒಂದೇ ಫಾರ್ವರ್ಡ್!
ಬ್ಲೂಟೂತ್ ಮುಖಾಂತರ ಕಾರ್ಯನಿರ್ವಹಣೆ:
ಸ್ಮಾರ್ಟ್‌ಫೋನ್ ಲೊಕೇಶನ್ ಟೆಕ್ನಾಲಜಿ ಸಿಸ್ಟಮ್ ಬಳಸಿಕೊಂಡು ಕೋವಿಡ್ -19 ಸೋಂಕಿತರ ಪತ್ತೆಗೆ ಮುಂದಾಗಲಾಗುತ್ತಿದೆ. ಹೀಗಾಗಿ ಬ್ಲೂಟೂತ್ ಮುಖಾಂತರವೇ ಕಾರ್ಯನಿರ್ವಹಿಸಲು ಅನುಕೂಲವಾಗುವ ಟೂಲ್ ಅಭಿವೃದ್ಧಿಗೆ ಆ್ಯಪಲ್ ಹಾಗೂ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಒಳಗೊಂಡ ಗೂಗಲ್ ಮುಂದಾಗಿವೆ.
ಹೇಗೆ ಕಾರ್ಯನಿರ್ವಹಿಸುತ್ತೆ?
ಈ ಹೊಸ ಸಾಫ್ಟ್‌ವೇರ್ ಸಿದ್ಧವಾದ ಮೇಲೆ ಮೊಬೈಲ್‌ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಇದು ಬ್ಲೂಟೂತ್ ಮುಖಾಂತರ ಕೆಲಸ ಮಾಡಲಿದೆ. ಇಂಥ ಸಾಫ್ಟ್‌ವೇರ್ ಅನ್ನು ಹಾಕಿಕೊಂಡ ಬಳಿಕ ಸಂಚರಿಸುವಾಗ ನಿಮ್ಮ ಬಳಿ ಸೋಂಕಿತ ವ್ಯಕ್ತಿ ಬರುತ್ತಿದ್ದಾರೆಂದಾದರೆ ಈ ಆ್ಯಪ್ ಸಿಗ್ನಲ್ ರವಾನಿಸುತ್ತದೆ ಎನ್ನಲಾಗಿದೆ. ಈ ಮೂಲಕ ಅಂಥವರಿಂದ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಅವರನ್ನು ಚಿಕಿತ್ಸೆಗೊಳಪಡಿಸಲೂ ಅನುಕೂಲವಾಗಲಿದೆ ಎನ್ನಲಾಗಿದೆ. ಆದರೆ, ಇನ್ನೂ ಕಂಪನಿಗಳು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.
ಇದನ್ನೂ ಓದಿ:
ಕೊರೋನಾ ನಿರಾಶ್ರಿತರಿಗೆ ಊಟ, ವಾಸ್ತವ್ಯದ ಜಾಗ ಹೇಳುತ್ತೆ ಗೂಗಲ್
ಮುಂದಿನ ತಿಂಗಳೇ ಸೇವೆಗೆ ಸಿದ್ಧ?
ಎರಡೂ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಯಾವುದೇ ತೆರನಾದ ಸಮಸ್ಯೆಗಳು ಆಗದೇ, ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಕಾರ್ಯ ಭರದಿಂದ ಸಾಗಿದ್ದು, ಅಂದುಕೊಂಡಂತೆ ಎಲ್ಲವೂ ಆದರೆ ಮುಂದಿನ ತಿಂಗಳಲ್ಲಿ ಸಾಫ್ಟ್‌ವೇರ್ ಬಳಕೆಗೆ ಸಿದ್ಧವಾಗಲಿದೆ.
ಎಲ್ಲ ದೇಶಗಳ ಜೊತೆ ಮಾತುಕತೆ:
ಈಗಾಗಲೇ ಎಲ್ಲ ದೇಶಗಳ ಸರ್ಕಾರಗಳ ಜೊತೆ ಮಾತುಕತೆ ನಡೆಸಲಾಗಿದ್ದು, ಕೋವಿಡ್-19 ಸೋಂಕಿತರ ಪತ್ತೆ ಹಾಗೂ ಅವರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಯುವ ಸಲುವಾಗಿ ಸಾಫ್ಟ್‌ವೇರ್ ಸಿದ್ಧಗೊಳಿಸಲಾಗುತ್ತಿದ್ದು, ನಾಗರಿಕರ ಖಾಸಗಿ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಾಚರಣೆ ಮಾಡಲಾಗುವುದು ಎಂದು ಉಭಯ ಕಂಪನಿಗಳು ಹೇಳಿವೆ.
ಇದನ್ನೂ ಓದಿ:
ಕೋರೋನಾ ಮಾಹಿತಿಗೆ ಟ್ವಿಟ್ಟರ್ ಶುರುಮಾಡಿದೆ ಸರ್ಚ್ ಪ್ರಾಂಪ್ಟ್!
ನಾಗರಿಕರ ಖಾಸಗಿ ಮಾಹಿತಿ ವಿಚಾರದಲ್ಲಿ ಗೌಪ್ಯತೆ, ಪಾರದರ್ಶಕತೆ ಮತ್ತು ಒಪ್ಪಿಗೆ ನಮ್ಮ ಮುಖ್ಯ ಆದ್ಯತೆ. ಆದರೆ ಜನ ನಮ್ಮ ಆ್ಯಪ್ ಅನ್ನು ನಂಬದಿದ್ದರೆ ನಮ್ಮ ಈ ಪ್ರಯತ್ನ ಫಲಕೊಡದು ಎಂದು ಆ್ಯಪಲ್ ಮತ್ತು ಗೂಗಲ್ ಹೇಳಿಕೊಂಡಿವೆ.
ಟ್ರಂಪ್ ಆಸಕ್ತಿ:
ವಿಶ್ವವೇ ಸಂಕಷ್ಟದಿಂದಿರುವ ಈ ಸನ್ನಿವೇಶದಲ್ಲಿ ನಾವು ಒಟ್ಟಾಗಿ ಕೆಲಸ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಸ್ವತಃ ಗೂಗಲ್ ಹಾಗೂ ಆ್ಯಪಲ್ ಜಂಟಿ ಹೇಳಿಕೆಗಳನ್ನು ನೀಡಿವೆ. ಅಲ್ಲದೆ, ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಆಸಕ್ತಿ ತೋರಿದ್ದು, ಶೀಘ್ರ ಜನಸೇವೆಗೆ ಲಭ್ಯವಾಗಲಿ ಎಂದಿದ್ದಾರೆ.