ಭಾರತದಲ್ಲಿಯೇ ಶುರುವಾಗುತ್ತೆ ಆ್ಯಪಲ್ ಆನ್‌ಲೈನ್ ಸ್ಟೋರ್!

By Suvarna News  |  First Published Aug 27, 2020, 1:17 PM IST

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಟ್ಯಾಂಡರ್ಡ್ ಉಳಿಸಿಕೊಂಡು ಬಂದಿರುವ ಆ್ಯಪಲ್ ಈವರೆಗೂ ಯಾವುದಕ್ಕೂ ರಾಜಿಯಾಗಿಲ್ಲ. ದರ ಹಾಗೂ ಗುಣಮಟ್ಟದ ಬಗ್ಗೆಯೂ ಅಷ್ಟೇ. ಈ ಹಿನ್ನೆಲೆಯಲ್ಲಿ ಒಂದು ವರ್ಗದ ಜನಕ್ಕೆ ಸೀಮಿತವಾಗಿದೆ ಎಂದರೂ ತಪ್ಪಾಗಲಾರದು. ಆದರೂ, ಐ ಫೋನ್ ಅನ್ನು ಇಷ್ಟಪಡುವವರು ಹಲವರಿದ್ದಾರೆ. ಇನ್ನು ಬಳಸಿ ಇಷ್ಟಪಡದವರೂ ಇದ್ದಾರೆ. ಅದಿರಲಿ, ಈಗ ಇ-ಮಾರಾಟ ಕ್ಷೇತ್ರಗಳಾದ ಫ್ಲಿಪ್‌ಕಾರ್ಟ್, ಅಮೆಜಾನ್‌ಗಳಂತಹ ಸಂಸ್ಥೆಗಳ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಆ್ಯಪಲ್ ಈಗ ತನ್ನದೇ ಆನ್‌ಲೈನ್ ಮಳಿಗೆಯನ್ನು ತೆರೆಯಲು ಹೊರಟಿದೆ. ಈ ಮೂಲಕ ಹೊಸ ಮುನ್ನುಡಿ ಬರೆಯಲು ಹೊರಟಿದೆ.


ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ ತನ್ನದೇ ವರ್ಗದ ಗ್ರಾಹಕರನ್ನು ಹೊಂದಿರುವ ಆ್ಯಪಲ್ ಇದೀಗ ಅತಿವೇಗವಾಗಿ ಮುನ್ನುಗ್ಗುತ್ತಿರುವ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ. ಸುರಕ್ಷಿತ ಹಾಗೂ ವಿಶೇಷ ಬಳಕೆ ಹಾಗೂ ವಿಭಿನ್ನ ಫೀಚರ್‌ಗಳಿಂದ ಹೆಸರುವಾಸಿಯಾಗಿರುವ ಆ್ಯಪಲ್ ಈಗ ಆನ್‌ಲೈನ್ ಸ್ಟೋರ್ ತೆರೆಯಲು ಮುಂದಾಗಿದೆ. 

ಸ್ಮಾರ್ಟ್‌ಫೋನ್‌ಗಳಿಗೆ ಅತಿ ಪ್ರಿಯವಾದ ಮಾರುಕಟ್ಟೆ ಎಂದರೆ ಭಾರತ. ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳು ವೇಗವಾಗಿ ಮಾರಾಟ ವಾಗುವಷ್ಟು ಬೇರೆ ಕಡೆ ಆಗದು ಎಂಬ ಮಾತು ಇದೆ. ಹೀಗಾಗಿ ಎಲ್ಲ ಕಂಪೆನಿಗಳಿಗೂ ಈ ದೇಶ ಅಚ್ಚುಮೆಚ್ಚು. ಇದಕ್ಕೋಸ್ಕರ ಬಹುತೇಕ ಕಂಪನಿಗಳು ಆಫ್ಲೈನ್ ಮಾರುಕಟ್ಟೆಗಳನ್ನು ಹೊಂದಿದ್ದರೂ ಸಹ ಆನ್‌ಲೈನ್ ಸ್ಟೋರ್‌ಗಳನ್ನು ಹೊಂದುವ ಮೂಲಕ ತಮ್ಮ ಮಾರುಕಟ್ಟೆಗಳನ್ನು ವಿಸ್ತರಣೆ ಮಾಡಿಕೊಳ್ಳುತ್ತಲೇ ಬಂದಿವೆ. ಆದರೆ ಆ್ಯಪಲ್ ಮಾತ್ರ ಇದಕ್ಕೆ ಮನಸ್ಸು ಮಾಡಲಿಲ್ಲ.

ಇದನ್ನು ಓದಿ: ಅಂಡಮಾನ್-ನಿಕೋಬಾರ್‌ನಲ್ಲೂ ಈಗ ಸಿಗುತ್ತೆ ಹೈಸ್ಪೀಡ್ 4ಜಿ ಇಂಟರ್ನೆಟ್..

ಸೆಪ್ಟೆಂಬರ್‌ನಲ್ಲಿ ಪ್ರಾರಂಭ
ಇದೀಗ ಕಳೆದ ಐದಾರು ತಿಂಗಳಿನಿಂದ ಕರೋನಾ ಮಹಾ ಸೋಂಕಿನ ಪರಿಣಾಮ ಎಲ್ಲ ಮಾರುಕಟ್ಟೆಗಳು ನೆಲಕಚ್ಚಿವೆ. ಇದಕ್ಕೆ ಸ್ಮಾರ್ಟ್‌ಫೋನ್ ಕ್ಷೇತ್ರಗಳು ಹೊರತಾಗಿಲ್ಲ ಹೊರಗೆ ಜನ ಬಾರದೆ ಮಾರಾಟಗಳು ಕಡಿಮೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಮಾರುಕಟ್ಟೆ ಹೆಚ್ಚಿನ ವೇಗವನ್ನು ಪಡೆದುಕೊಂಡಿದೆ ಎಲ್ಲ ಅಗತ್ಯ ವಸ್ತುಗಳು ಸಹ ಆನ್‌ಲೈನ್ ಮೂಲಕವೇ ಖರೀದಿಗೊಳಪಡುತ್ತಿವೆ. ಈ ಎಲ್ಲ ಲೆಕ್ಕಾಚಾರಗಳನ್ನು ಹೊಂದಿರುವ ಆ್ಯಪಲ್ ಈಗ ಆನ್‌ಲೈನ್ ಮೂಲಕವೂ ತನ್ನ ಸ್ಟೋರ್ ಅನ್ನು ಇದೇ ಸೆಪ್ಟೆಂಬರ್‌ನಲ್ಲಿ ಪ್ರಾರಂಭ ಮಾಡಲಿದೆ. 



ದೀಪಾವಳಿಗೋಸ್ಕರ ಕಾಯುತ್ತಿರುವ ಆ್ಯಪಲ್
ಈಗಾಗಲೇ ಆನ್‌ಲೈನ್ ಮೂಲಕ ಮಾರಾಟ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಆ್ಯಪಲ್, ದೀಪಾವಳಿ ಹಬ್ಬಕ್ಕೋಸ್ಕರ ಕಾಯುತ್ತಿದೆ. ಇದಕ್ಕಾಗಿ ಹಬ್ಬಕ್ಕೆ ಮುಂಚಿತವಾಗಿ ಆನ್‌ಲೈನ್ ಸ್ಟೋರನ್ನು ಬಿಡುವ ಮೂಲಕ ಅಲ್ಲಿ ಭರ್ಜರಿ ಆಫರ್ ನೀಡುವ ತಯಾರಿಯಲ್ಲಿದೆಯೇ ಎಂದು ಊಹಿಸಲಾಗುತ್ತಿದೆ. ಭಾರತದಲ್ಲಿ ಸುಮಾರು 1.3 ಶತಕೋಟಿ ಮಂದಿ ಅತಿದೊಡ್ಡ ಹಾಗೂ ಅಲ್ಪ ಪ್ರಮಾಣದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದರ ಲಾಭ ಪಡೆಯಲು ಆ್ಯಪಲ್ ಸಂಸ್ಥೆ ಮುಂದಾಗಿದೆ. 

ಇದನ್ನು ಓದಿ: ನಿಮ್ಮ ಮೊಬೈಲ್‌ನಲ್ಲಿ ಹೀಗಾಗುತ್ತಿದ್ದರೆ ಹ್ಯಾಕ್ ಆಗಿದೆ ಎಂದರ್ಥ..! 

Latest Videos

ಬರೋಬ್ಬರಿ ಎರಡು ಟ್ರಿಲಿಯನ್ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಆ್ಯಪಲ್ ಸಂಸ್ಥೆ ಇತಿಹಾಸವನ್ನು ಸೃಷ್ಟಿಸಿದೆ. ಈ ಮಧ್ಯೆ ಚೀನಾ ವಿರುದ್ಧ ಅಭಿಯಾನಗಳು ಪ್ರಾರಂಭವಾಗಿದ್ದಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದಕ್ಷಿಣ ಏಷ್ಯಾ ಭಾಗದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಆ್ಯಪಲ್ ಸಂಸ್ಥೆ ಮುಂದಾಗಿದೆ.

ಕ್ಯಾಲಿಫೋರ್ನಿಯಾ ಮೂಲದ ಕೋರ್ಟಿನ ಸಂಸ್ಥೆ ಸಹ ಇದೀಗ ಬೆಂಗಳೂರಿನಲ್ಲಿ ಮಳಿಗೆ ತೆರೆಯಲು ಹೊರಟಿದ್ದು, ಈ ಮೂಲಕ ಟೆಕ್ನಾಲಜಿ ಹಬ್‌ನಲ್ಲಿ ಎರಡನೇ ಹೆಜ್ಜೆ ಇಡಲು ಹೊರಟಿದೆ. ಈ ಸಂಸ್ಥೆ ಮುಂಬೈನಲ್ಲಿ ಈಗಾಗಲೇ ಒಂದು ಭರ್ಜರಿ ಔಟ್ಲೆಟ್ ಪ್ರಾರಂಭಿಸಲು, ಇದು ಮೊದಲನೆ ಹೆಜ್ಜೆಯಾಗಿದೆ ಎಂದು ಹೇಳಲಾಗುತ್ತಿದೆ. 

ಇದನ್ನು ಓದಿ: ವಾಟ್ಸಪ್‌ನಲ್ಲಿ ಶೀಘ್ರ ಬರುತ್ತೆ ಇನ್ನೂ 138 ಹೊಸ ಇಮೋಜಿಗಳು..! 

ಹೆಚ್ಚಲಿದೆಯೇ ಪೈಪೋಟಿ..?
ಈಗ ಆ್ಯಪಲ್ ಸಂಸ್ಥೆಯು ತನ್ನ ಉತ್ಪನ್ನಗಳನ್ನು ಭಾರತದಲ್ಲಿ ಆನ್‌ಲೈನ್ ವೇದಿಕೆಗಳಾದ ಅಮೇಜಾನ್, ವಾಲ್ಮಾರ್ಟ್, ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡುತ್ತಿದೆ. ಆದರೆ, ಈಗ ತನ್ನದೇ ಆನ್‌ಲೈನ್ ಸ್ಟೋರ್ ಮೂಲಕ ಮಾರಾಟ ಮಾಡಲು ಆರಂಭಿಸಿದರೆ, ತನ್ನ ಬ್ರಾಂಡ್ ವ್ಯಾಲ್ಯೂ ಹೆಚ್ಚಿಸಿಕೊಳ್ಳುವುದಲ್ಲದೆ, ಗ್ರಾಹಕರ ವಿಶ್ವಾಸಾರ್ಹತೆ ಗಳಿಸಿಕೊಳ್ಳುವುದೂ ಸಾಧ್ಯ ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಮೂಲಕ ಚೀನಾ ಒಡೆತನದ ಒನ್ ಪ್ಲಸ್ ಹಾಗೂ ದಕ್ಷಿಣ ಕೋರಿಯಾದ ಸ್ಯಾಮ್ಸಂಗ್‌ಗೆ ಟಕ್ಕರ್ ಕೊಡಲು ಹೊರಟಿದೆ. ಒಟ್ಟಿನಲ್ಲಿ ಆನ್‌ಲೈನ್ ಸ್ಟೋರ್ ಅನ್ನು ಪ್ರಾರಂಭಿಸಿದ್ದೇ ಆದಲ್ಲಿ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಮತ್ತಷ್ಟು ಪೈಪೋಟಿಯಾಗುವ ಸಾಧ್ಯತೆ ಹೆಚ್ಚಿದೆ ಎಂಬುದು ಟೆಕ್ ತಜ್ಞರ ಅಭಿಪ್ರಾಯವಾಗಿದೆ. 

click me!