ಫೇಸ್ಬುಕ್ ಹೇಳ್ಬಿಟ್ಟಿದೆ ನಿಮ್ಮ ವಾಟ್ಸಪ್ ಸ್ಟೇಟಸ್‌ಗೆ ಆ್ಯಡ್ ಫಿಕ್ಸು..!

By Suvarna NewsFirst Published Apr 26, 2020, 7:28 PM IST
Highlights

ಫೇಸ್ಬುಕ್ ಕೊನೆಗೂ ತನ್ನ ಹಠ ಸಾಧಿಸುವತ್ತ ಹೆಜ್ಜೆ ಇಟ್ಟಿದೆ. ವಾಟ್ಸಪ್ ಸ್ಟೇಟಸ್‌ನಲ್ಲಿ ಜಾಹೀರಾತನ್ನು ತೂರಿಸಲು ಹೊರಟಿದೆ. ಇದಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಈ ಟ್ವೆಂಟಿ-20 ಯಲ್ಲೇ ನೂತನ ಫೀಚರ್ ಅಳವಡಿಕೆಗೆ ಮುಂದಾಗಿದ್ದು, ಈಗಾಗಲೇ ಇನ್‌ಸ್ಟಾಗ್ರಾಂ ನಲ್ಲಿ ಅಳವಡಿಕೆಯಾಗಿರುವ ಹಾಗೆ ಇರುತ್ತದೆಯೋ ಅಥವಾ ಭಿನ್ನ ರೀತಿಯಲ್ಲಿ ಅಳವಡಿಸಲಾಗುತ್ತಿದೆಯೋ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ಇದು ಏನು? ಎತ್ತ ಎಂಬ ಬಗ್ಗೆ ನೋಡೋಣ. 

ಬೆಂಗಳೂರು (ಏ.26): ಫೇಸ್ಬುಕ್ ಹೇಳಿಯಾಗಿದೆ, ಸಿದ್ಧತೆಗಳನ್ನು ಮಾಡ್ಕಂಡೂ ಆಗಿದೆ, ಈ ವರ್ಷದೊಳಗೆ ನಿಮ್ಮ ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಆ್ಯಡ್ (ಜಾಹೀರಾತು) ಬರೋದು ಫಿಕ್ಸು..!

ಹೌದು. ನಿಮ್ಮ ವಾಟ್ಸಪ್ ಸ್ಟೇಟಸ್‌ನ ಸ್ಟೇಟಸ್ ಇನ್ನು ಬದಲಾಗಿದೆ. ನಿಮಗೆ ಮಧ್ಯೆ ಮಧ್ಯೆ ಜಾಹೀರಾತಿನ ಕಿರಿಕಿರಿ ತಗುಲಿಕೊಳ್ಳಲಿದೆ. ಹಾಗಂತ ಈ ತಕ್ಷಣಕ್ಕೋ ಇಂದು ಮಧ್ಯರಾತ್ರಿಯಿಂದಲೋ ಈ ಹೊಸ ನಿಯಮವನ್ನು ಫೇಸ್ಬುಕ್ ಕಂಪನಿ ಜಾರಿಗೊಳಿಸುತ್ತಿಲ್ಲ. ಆದರೆ, ಇದನ್ನು ಇಂಪ್ಲಿಮೆಂಟ್ ಮಾಡೋದು ಪಕ್ಕಾ ಎಂಬ ಸಂದೇಶವನ್ನು ಫೇಸ್ಬುಕ್ ರವಾನಿಸಿದೆ. ಈಗ ಭಾರತದಲ್ಲೇ 400 ಮಿಲಿಯನ್ ವಾಟ್ಸಪ್ ಬಳಕೆದಾರರು ಇರುವುದು ಕಂಪನಿಗೆ ಪ್ಲಸ್ ಪಾಯಿಂಟ್. ಈ ಹಿನ್ನೆಲೆಯಲ್ಲಿ ತನ್ನ ದೂರದೃಷ್ಟಿಯಿಂದ ಸಿದ್ಧತೆಯನ್ನು ಕೈಗೊಂಡಿದೆ.

ಇದನ್ನೂ ಓದಿ: ಇನ್ನು ನಿಮಗೆ ವರ್ಕ್ ಫ್ರಂ ಹೋಂ ಫಿಕ್ಸ್?

2016ರಲ್ಲಿ ನಿರ್ಧರಿಸಿ ಹಿಂದೆ ಸರಿದಿತ್ತು
ವಾಟ್ಸಪ್ ಅಪ್ಲಿಕೇಶನ್‌ನ ಸ್ಟೇಟಸ್‌ನಲ್ಲಿ ಜಾಹೀರಾತು ಫೀಚರ್ ಅಳವಡಿಸಲಾಗುವುದು ಎಂದು 2016ರಲ್ಲಿಯೇ ಫೇಸ್ಬುಕ್ ಹೇಳಿಕೊಂಡಿತ್ತು. ಅಲ್ಲದೆ, ಐಫೋನ್‌ನಲ್ಲಿ ಪ್ರಾಯೋಗಿಕವಾಗಿ ಇದರ ನೂತನ ಫೀಚರ್ ಅನ್ನು ಬಿಟ್ಟು ನೋಡಿತ್ತು. ಇದು ನೆಟ್ಟಿಗರ ಪಿತ್ತ ನೆತ್ತಿಗೇರಿಸಿದ್ದಲ್ಲದೆ, ಟ್ವಿಟ್ಟರ್‌ನಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ತೀವ್ರ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಈ ನಿರ್ಧಾರ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದ ಫೇಸ್ಬುಕ್ ಬಳಿಕ ಸುಮ್ಮನಾಗಿತ್ತು. ಈಗ ಪುನಃ ತನ್ನ ನಿರ್ಧಾರ ಪ್ರಕಟಿಸಿದ್ದು, ಈ ಬಾರಿ ನಿರ್ಧಾರ ಅಚಲ ಎಂಬಂತೆ ನುಡಿದಿದೆ.

ಇದನ್ನೂ ಓದಿ: ಫೇಸ್ಬುಕ್ - ವಾಟ್ಸಪ್- ಟಿಕ್‌ಟಾಕ್‌ನಲ್ಲಿ ಹೊಸ ಫೀಚರ್‌ಗಳ ಹವಾ!

ತಕ್ಷಣ ಜಾರಿಗೆ ಬರಲ್ಲ, ಈ ವರ್ಷವೇ ಬರುತ್ತೆ!
ಈಗೇನೋ ಫೇಸ್ಬುಕ್ ತನ್ನ ಸಹಸಂಸ್ಥೆ ವಾಟ್ಸಪ್‌ನಲ್ಲಿ ನೂತನ ಫೀಚರ್ ಅನ್ನು ಅಳವಡಿಸುತ್ತೇನೆಂದು ಹೇಳಿಕೊಂಡರೂ ತಕ್ಷಣ ಜಾರಿಗೆ ಬರುವುದಿಲ್ಲ. ಕಾರಣ, ಇದಕ್ಕೆ ಫೇಸ್ಬುಕ್ ಹಾಗೂ ವಾಟ್ಸಪ್ ಅಕೌಂಟ್ ಗಳಲ್ಲಿರುವ ಮೊಬೈಲ್ ಸಂಖ್ಯೆಗಳು ಸಿಂಕ್ ಆಗಬೇಕು. ಒಂದಕ್ಕೊಂದು ತಾಳೆಯಾಗುತ್ತಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಹೀಗಾಗಿ ಫೇಸ್ಬುಕ್ ತನ್ನ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಾದ ಫೇಸ್ಬುಕ್ ಮೆಸೆಂಜರ್, ವಾಟ್ಸಪ್ ಹಾಗೂ ಇನ್‌ಸ್ಟಾಗ್ರಾಂಗಳ ಮೊಬೈಲ್ ಸಂಖ್ಯೆಗಳ ಸಾಮ್ಯತೆಯಲ್ಲಿ ತೊಡಗಿದೆ. ಒಮ್ಮೆ ಈ ಕಾರ್ಯ ಸಂಪೂರ್ಣವಾದ ಬಳಿಕವಷ್ಟೇ ಜಾಹೀರಾತು ಅಳವಡಿಕೆಯತ್ತ ಮುಖಮಾಡಲಿದೆ.

ಹೇಗಿರಬಹುದು ಜಾಹೀರಾತು ಸಹಿತ ಸ್ಟೇಟಸ್?
ವಾಟ್ಸಪ್ ಸ್ಟೇಟಸ್ ಬಗ್ಗೆ ನಿಮಗೆ ತಿಳಿದೇ ಇದೆ. ನೀವು ಫೋಟೋ ಇಲ್ಲವೇ ವಿಡಿಯೋಗಳನ್ನು ಪೋಸ್ಟ್ ಮಾಡಿದಾಗ ಒಂದು ಸ್ಟೇಟಸ್‌ನ ಬಳಿಕ ಈ ಜಾಹೀರಾತನ್ನು ಹಾಕಬಹುದು ಎಂದು ಹೇಳಲಾಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಇಂಥದ್ದೊಂದು ಫೀಚರ್ ಈಗಾಗಲೇ ಚಾಲ್ತಿಯಲ್ಲಿದೆ. ಇದೇ ಮಾದರಿಯನ್ನು ಅನುಸರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆಯಾದರೂ ಇನ್ನೂ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ಫೇಸ್‌ಬುಕ್ ಕಡೆಯಿಂದ ಸಿಕ್ಕಿಲ್ಲ. ಆದರೆ, ಈ ಜಾಹೀರಾತುಗಳು ನಿಮ್ಮ ಡೇಟಾವನ್ನು ಹೆಚ್ಚು ಬಳಸದಿರುವಂತೆ ಹಾಗೂ ಸಣ್ಣ ವಿಡಿಯೋ ತುಣುಕುಗಳನ್ನು ಹಾಕಬಹುದಾಗಿದ್ದು, ಇದು ವಾಟ್ಸಪ್ ಕಂಪನಿಯಿಂದ ಅಟೋಮ್ಯಾಟಿಕ್ ಆಗಿ ಅಪ್ಡೇಟ್ ಆಗುವಂತೆ ನೋಡಿಕೊಳ್ಳಲಾಗುತ್ತದೆ. 

ಇದನ್ನೂ ಓದಿ: ಜೂಮ್ ಬಿಟ್ಹಾಕಿ, ಈ 5 ವಿಡಿಯೋ ಕಾಲಿಂಗ್ ಆ್ಯಪ್ ಬಳಸಿ!

ಈ ಪ್ರಯತ್ನ ಅಷ್ಟು ಸುಲಭವೇ?
ಇಲ್ಲಿ ಬಹುಮುಖ್ಯವಾಗಿ ಫೇಸ್ಬುಕ್ ತನ್ನ ಬಳಕೆದಾರ ಹಾಗೂ ವಾಟ್ಸಪ್ ಬಳಸುವ ಒಂದೇ ಬಳಕೆದಾರನ ಒಟ್ಟುಗೂಡಿಸುವಿಕೆಗೆ ಪ್ರಯತ್ನಿಸುತ್ತಿದೆ. ಆದರೆ, ಕೆಲವು ಬಳಕೆದಾರರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನು ಮೆಸೇಜಿಂಗ್ ಆ್ಯಪ್ಗಳ ಜೊತೆ ಸೇರಿಸಲು ಒಪ್ಪಿಗೆ ನೀಡುವುದು ಬಹಳ ಕಷ್ಟ. ಆದರೆ, ಇದನ್ನು ಯಾವ ರೀತಿ ನಿಭಾಯಿಸುತ್ತದೆ ಎಂಬುದು ಸದ್ಯದ ಪ್ರಶ್ನೆ. 

click me!