ಥಾಯ್‌ ಮಸಾಜ್‌ ಕಲಿಸಿದ ಕೆಲವು ಪಾಠಗಳು

By Kannadaprabha NewsFirst Published Dec 1, 2019, 1:06 PM IST
Highlights

ಥಾಯ್ ಮಸಾಜ್ ಮತ್ತು ಆಯುರ್ವೇದ ಮಸಾಜ್ ಹೇಗೆ ಬೇರೆ ಬೇರೆ? ಥಾಯ್ ಮಸಾಜ್ ಹೆಂಗಸರೇ ಮಾಡಲು ಏನು ಕಾರಣ? ಥಾಯ್ ಮಸಾಜ್ ಮಾಡುವಾಕೆ ಸರಳ ರೀತಿಯಲ್ಲಿ ಒತ್ತುತ್ತಿದ್ದರೂ ನರಗಳ ಮೇಲೆ ಮಣಭಾರ ತೂಕ ಹಾಕಿದ ಅನುಭವ ಆಗುವುದು ಯಾಕೆ? -ಹೀಗೆ ಅನೇಕ ಪ್ರಶ್ನೆಗಳಿಗೆ ಕಾದಂಬರಿಕಾರ ಕೆ.ಎನ್. ಗಣೇಶಯ್ಯನವರ ಈ ಬರಹ ಉತ್ತರ ನೀಡುತ್ತದೆ. 

- ಕೆ ಎನ್ ಗಣೇಶಯ್ಯ 

1996 ರ ಒಂದು ದಿನ.

ಗೌಹಾಟಿಗೆ ಹೋಗಲೆಂದು ಹೈದರಾಬಾದಿನ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಆ ವಿಮಾನ ಸುಮಾರು ನಾಲ್ಕು ಘಂಟೆಗಳ ಕಾಲ ತಡವಾಗಿದೆಯೆಂದು ಹಠಾತ್ತನೆ ಪ್ರಕಟಿಸಲಾಯಿತು. ನಾಲ್ಕು ಘಂಟೆ ಕಳೆಯುವ ಬಗ್ಗೆ ಯೋಚಿಸಿದಾಗ ಕಂಡದ್ದು ‘ಬುದ್ಧ ಮಸಾಜ್‌’ ಎಂಬ ಫಲಕ. ಆ ಕಾಲಕ್ಕೇ ಎಂಟು ನೂರು ರುಪಾಯಿಗಳ ದುಬಾರಿ ಬೆಲೆ.

ಒಳಗೆ ಹೋದರೆ ಒಂದು ಸಣ್ಣ ಕೋಣೆಯಲ್ಲಿ ಮೂವರು ಪ್ರಯಾಣಿಕರಿಗೆ ಮೂವರು ಹೆಣ್ಮಕ್ಕಳು ಮಸಾಜ್‌ ಮಾಡುತ್ತಿದ್ದರು. ನಾಲ್ಕನೆಯಾಕೆ ನನಗೊಂದು ಕುರ್ಚಿ ತೋರಿಸಿದಳು, ಮಸಾಜ್‌ ಆರಂಭಿಸಿದಳು. ಆರಂಭದಲ್ಲಿ ನನ್ನನ್ನೊಂದಷ್ಟುಪಾಪಪ್ರಜ್ಞೆ ಕಾಡಿತು. ನನ್ನದೇ ವಯಸ್ಸಿನ ಅಪರಿಚಿತ ಹೆಣ್ಣುಮಗಳಿಂದ ಮೈ ಕೈ ತೀಡಿಸಿಕೊಳ್ಳುವುದು ಮುಜುಗರ ಅನ್ನಿಸಿತು.

ಅದೇ ಹೊತ್ತಿಗೆ ನನಗೆ ಬಾಲ್ಯದಲ್ಲಿ ಅಮ್ಮ ಮಾಡುತ್ತಿದ್ದ ಎಣ್ಣೆ ಸ್ನಾನ, ತಂಗಿ ಸುನಂದಾ ಬೆನ್ನಿಗೆ ಎಣ್ಣೆ ಹಚ್ಚುತ್ತಿದ್ದದ್ದು, ಮದುವೆಯ ನಂತರ ವೀಣಾ ತೈಲಾಭ್ಯಂಜನ ಮಾಡಿಸಿದಾಗ ಮುದಗೊಳ್ಳುತ್ತಿದ್ದದ್ದು, ಪುಣ್ಯ ಐದಾರು ವರ್ಷದವಳಾಗಿದ್ದಾಗ ದಿನವೂ ಬೆನ್ನು ಕೈ ಕಾಲುಗಳನ್ನೆಲ್ಲ ತುಳಿಯುತ್ತಿದ್ದದ್ದು ನೆನಪಾದವು.

ರಾಜಸ್ಥಾನದಲ್ಲೊಂದು Solo Ride; 1846 ಕಿಮೀ ಸುತ್ತಿದ ಅಜಿತರ ಅನುಭವ ಕಥನ !

ಆವರೆಲ್ಲ ಮಸಾಜ್‌ ಮಾಡಿದಾಗ ಆಗದ ಮುಜುಗರ ಈಗೇಕೆ ಅಂತ ಯೋಚಿಸಿದರೆ ಅವರೆಲ್ಲ ನನ್ನವರು, ರಕ್ತಸಂಬಂಧಿಗಳು, ಈಕೆ ಪರಸ್ತ್ರೀ. ಅದೇ ಯೋಚನೆಯಲ್ಲಿ ನನಗೆ ಮಸಾಜ್‌ ಆನಂದ ಕೊಡಲಿಲ್ಲ. ಆಗ ನಾನು ಇದೇ ವಯಸ್ಸಿನ ನರ್ಸ್‌ ಪರೀಕ್ಷೆ ಮಾಡುವಾಗ ಹೀಗನ್ನಿಸುತ್ತಿದ್ದೆಯೇ ಎಂದು ಯೋಚಿಸಿದೆ. ಇಲ್ಲ ಅನ್ನಿಸಿತು.

ಅದು ಅವರ ಉದ್ಯೋಗ, ನಾನು ರೋಗಿ. ಅದೆಲ್ಲ ಯೋಚನೆ ಮಾಡಿದ ನಂತರ ನಂತರ ದುಗುಡ ಮಾಯವಾಯಿತು. ಈ ಮಸಾಜ್‌ ನನ್ನ ಮನಸ್ಸಿನ ಮುದಕ್ಕಾಗಿ ಪಡೆಯುತ್ತಿರುವ ಶುಶ್ರೂಷೆ ಅಂದುಕೊಂಡೆ. ಆಗ ಅದೊಂದು ಅದ್ಭುತ ಅನುಭವವಾಗಿ ಕಂಡಿತು.

ಅದಾದ ನಂತರ ‘ಬುದ್ದ ಮಸಾಜ್‌’ ಏಕೆ ಅಷ್ಟುಮುದ ಕೊಡುತ್ತದೆ ಎಂಬ ಪ್ರಶ್ನೆ ನನ್ನನ್ನು ಕಾಡಲಾರಂಭಿಸಿತು. ಬೆಂಗಳೂರಿಗೆ ಬಂದ ನಂತರ ವೀಣಾ ಜೊತೆ ಚರ್ಚಿಸಿದೆ.

‘ನಾವು ಮಾಡುವ ಮಸಾಜ್‌ಗಿಂತ ಬುದ್ದ ಮಸಾಜ್‌ ಆಗಲಿ, ಆಯುರ್ವೇದದ ಮಸಾಜ್‌ ಆಗಲಿ ಹೆಚ್ಚು ಪ್ರಭಾವಕಾರಿ. ಕಾರಣ ಅವು ಶತಮಾನಗಳ ಕಾಲದಿಂದ ಪರಿಷ್ಕೃತಗೊಂಡಿರುವ ಕಲೆಗಳು. ಕೇವಲ ಮಸಾಜ್‌ನ ತೀಟೆ ತೀರಿಸಲು ರೂಪುಗೊಂಡಿರುವ ವ್ಯಾಯಾಮಗಳಲ್ಲ. ಒಂದು ರೀತಿಯಲ್ಲಿ ಅವು ವೈಜ್ಞಾನಿಕವಾಗಿ ರಚಿತಗೊಂಡಿರುವ ಶುಶ್ರೂಷಾಕ್ರಮಗಳು. ಹಾಗಾಗಿ ಆಯಾ ಮಸಾಜ್‌ಗಳನ್ನು ಪರಿಣಿತರು ಮಾಡುವುದರಿಂದ ಮನಸ್ಸಿಗೆ ಮತ್ತು ಶರೀರಕ್ಕೆ ಹೆಚ್ಚಿನ ಮುದ ದೊರೆಯುತ್ತದೆ’ ಎಂದಳು.

ಕಳೆದೆರಡು ತಿಂಗಳ ಹಿಂದೆ ಬೆಂಗಳೂರಿನಿಂದ ಕಾಂಬೋಡಿಯಾದ ಆಂಗ್‌ಕೋರ್‌ವಾಟ್‌ ತನಕ ಕಾರಲ್ಲಿ ಹೋಗಿದ್ದೆವು. ಥಾಯ್ಲೆಂಡಿನ ಫೈ ನಗರ ತಲುಪಿದಾಗ ಸತತ 25 ದಿನಗಳ ಡ್ರೈವಿಂಗ್‌ ಸುಸ್ತಿನಿಂದ ಪಾರಾಗಲು ಮಸಾಜ್‌ ಮಾಡಿಸಿಕೊಳ್ಳಿ ಅಂತ ಮಗಳು ಪುಣ್ಯ ಒತ್ತಾಯಿಸಿದ್ದಳು.

ಭಾರತದಿಂದ ಕಾಂಬೋಡಿಯಾಕ್ಕೆ ಕಾರಲ್ಲಿ ಹೋಗಿ ಬಂದವರ ಸಾಹಸಗಾಥೆಯಿದು!

ಸಂಜೆ ಸುಮಾರು 450 ರುಪಾಯಿ ಕೊಟ್ಟು ಒಂದು ಗಂಟೆಯ ಮಸಾಜಿಗೆ ಒಡ್ಡಿಕೊಂಡೆ. ಇಡೀ 60 ನಿಮಿಷಗಳ ಕಾಲವೂ ಥಾಯ್‌ ಮಸಾಜ್‌ ನಲ್ಲಿ ವೀಣಾ ಹೇಳಿದ ‘ವೈಜ್ಞಾನಿಕತೆ’ಯನ್ನು ಹುಡುಕುತ್ತಿದ್ದೆ. ಥಾಯ್‌ ಮಸಾಜ್‌ನ ಆಳವಾದ ಜ್ಞಾನ ನನಗಿಲ್ಲವಾದರೂ, ಅದರ ಬಗ್ಗೆ ಯಾವುದೇ ಅಧ್ಯಯನ ನಾನು ಮಾಡಿಲ್ಲವಾದರೂ ಮೂರು ಅಂಶಗಳು ಸ್ಪಷ್ಟವಾಗಿ ಕಂಡವು:

1. ಥಾಯ್‌ ಮಸಾಜ್‌ ಮಾಡುವಾಕೆ ಕೈ ಕಾಲುಗಳನ್ನು, ಬೆನ್ನನ್ನು ಒತ್ತುವಾಗ, ಅದುವರೆಗೆ ನಮ್ಮ ಪ್ರಜ್ಞೆಗೆ ಅಜ್ಞಾತವಾಗಿದ್ದ ಜೀವಕೋಶಗಳ, ಮಾಂಸಖಂಡಗಳ ಪರಿಚಯ ನಮಗಾಗತೊಡಗುತ್ತದೆ. ನಮಗರಿವಿಲ್ಲದಿದ್ದ ನಮ್ಮನ್ನೆ ನಾವು ಕಂಡುಕೊಳ್ಳತೊಡಗುತ್ತೇವೆ.

2. ಥಾಯ್‌ ಮಸಾಜ್‌ ಮಾಡುವಾಕೆ ಕೆಲವೊಮ್ಮೆ ಸರಳ ರೀತಿಯಲ್ಲಿ ಒತ್ತುತ್ತಿದ್ದರೂ ಯಾವುದೋ ಮಣದಷ್ಟುಭಾರವಾದ ತೂಕವನ್ನು ನಮ್ಮ ನರಗಳ ಮೇಲೆ, ಮಾಂಸಖಂಡಗಳ ಮೇಲೆ ತೂಗುಹಾಕಿದ ಅನುಭವ ಸಿಗಲಾರಂಭಿಸುತ್ತದೆ. ಇದು ಆ ಮಸಾಜ್‌ ಮಾಡುವಾಕೆಯ ಶಕ್ತಿಯ ಪ್ರದರ್ಶನವಲ್ಲ. ಬದಲಿಗೆ ಮಸಾಜ್‌ ಮಾಡುವ ಕಲೆಯ ಸೂಕ್ಷ್ಮತೆಯನ್ನೂ, ಚಾಕಚಕ್ಯತೆಯನ್ನೂ ಸೂಚಿಸುತ್ತದೆ. ಥಾಯ್‌ ಮಸಾಜ್‌ ಮಾಡುವ ರೀತಿಯಲ್ಲಿ ಒಂದು ವಿಶಿಷ್ಟಕ್ರಮ, ವಿಶೇಷತೆ ಇರುವುದರ ಅರಿವಾಗುತ್ತದೆ.

3. ಥಾಯ್‌ ಮಸಾಜ್‌ನ ಕೆಲವು ಪಟ್ಟುಗಳಲ್ಲಿ ದೇಹವನ್ನು ಒತ್ತುವಾಗ, ಮೊದಲು ನೋವು ಅನಿಸಿದರೂ, ನಂತರ ಅದ್ಭುತವಾದ ಮುದ ಬರಲು ಕಾರಣ, ಅಸ್ತಿತ್ವದಲ್ಲಿದ್ದರೂ ದೀರ್ಘ ಕಾಲದವರೆಗೆ ಮೌನವಾಗಿದ್ದ ಅಂಗಾಂಶಗಳನ್ನು ಎಚ್ಚರಗೊಳಿಸುವಿಕೆಯಿಂದ ಅಥವಾ ಹಿಂಡುವಿಕೆಗೆ ಒಳಗಾಗಿಸುವುದರಿಂದ ಅಲ್ಲಿ ಉತ್ಪತ್ತಿಯಾಗುವ ‘ಎಂಡಾರ್ಫಿನ್‌’ ಎಂಬ ಹಾರ್ಮೋನ್‌ನಿಂದಾಗಿ. ಈ ಹಾರ್ಮೋನುಗಳು ನಮ್ಮಲ್ಲಿ ‘ಆನಂದಾನುಭವ’ವನ್ನು ತರುತ್ತವೆ. ಇದೇ ಹಾರ್ಮೋನುಗಳು ನಾವು ನಕ್ಕಾಗ, ಆಟ ಆಡಿದಾಗ, ವ್ಯಾಯಾಮ ಮಾಡಿದಾಗ ಕೂಡ ಉತ್ಪತ್ತಿಯಾಗುತ್ತವೆ ಎಂದು ತೋರಿಸಿಕೊಡಲಾಗಿದೆ.

4. ಥಾಯ್‌ ಮಸಾಜ್‌ನ ಕೆಲವು ಪಟ್ಟುಗಳಂತೂ ಯೋಗದ ಪಟ್ಟುಗಳನ್ನು ಹೋಲುತ್ತವೆಯಷ್ಟೇ ಅಲ್ಲದೆ, ನಾವಾಗಿಯೇ ಮಾಡಲಾಗದ ದೇಹ ಚಲನೆಯನ್ನು ಥಾಯ್‌ ಮಸಾಜ್‌ ಸಾಧ್ಯವಾಗಿಸುತ್ತದೆ. ಒಂದು ರೀತಿಯಲ್ಲಿ ಥಾಯ್‌ ಮಸಾಜ್‌ ದೇಹವನ್ನು ಕೆಲವು ಯೋಗಪಟ್ಟುಗಳಿಗೆ ಸುಲಭವಾಗಿ ಒತ್ತಾಯಿಸಿ ನಿಲ್ಲಿಸುವ ಕ್ರಮ ಎಂದರೂ ಸರಿ ಎನಿಸುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಥಾಯ್‌ಮಸಾಜ್‌ನಲ್ಲಿ ಯೋಗದ ಅಂಶಗಳೂ ಒಳಗೊಂಡಿವೆ ಎನ್ನಬಹುದು.

ಕೈಲಾಸ ಪರ್ವತದ ನಿಗೂಢ ವಿಷಯಗಳನ್ನು ಕೇಳಿದ್ರೆ ಅಲ್ಲಿ ದೇವರಿರೋದನ್ನ ನಂಬ್ಲೇಬೇಕು!

5. ಕೆಲವೊಮ್ಮೆ ನಮ್ಮ ಕೈಕಾಲುಗಳನ್ನು ವಿಶಿಷ್ಟವಾದ ಕೋನಗಳಲ್ಲಿ ಬಂಧಿಸಿ, ದೇಹವನ್ನು ಬೇರೆಡೆಗೆ ಅಥವ ವಿರುದ್ಧ ದಿಕ್ಕಿಗೆ ಸೆಳೆಯುವಾಗ, ಅಜ್ಞಾತ ಕಡೆಗಳಿಂದ ಪಟಪಟನೆ ಸುರಿಯುವ ‘ನೆಟಿಕೆ’ಗಳಿಂದಾಗಿ ದೇಹ ಹಗುರಾಗುತ್ತದೆ.

ಒಮ್ಮೆ ವೀಣಾ ‘ಮಸಾಜ್‌ ನಿಂದಾಗಿ ನಮ್ಮ ದೇಹದಲ್ಲಿ ಎಂಡಾರ್ಫಿನ್‌ಗಳು ಸ್ಪುರಿಸುವುದರಿಂದ, ಅದನ್ನು ಮತ್ತೆ ಮತ್ತೆ ಅನುಭವಿಸುವ ಹಂಬಲ ಉಂಟಾಗುವುದು ಸಹಜ. ಆ ಸೆಳೆತಕ್ಕೆ ಸೋತು ಬಲಿಯಾದರೆ ನಾವು ಮಸಾಜ್‌ಗೆ ದಾಸರಾಗಿ ಅದಕ್ಕೆ ಅಡಿಕ್ಟ್ ಆಗಿಬಿಡುವ ಸಾಧ್ಯತೆಯೂ ಇದೆ. ಹಾಗಾಗಿ ನಾವು ಎಚ್ಚರಿಕೆಯಿಂದ ಇರಬೇಕು’ ಎಂದಿದ್ದಳು.

ನಾನು ನಂಬಿರಲಿಲ್ಲ. ಆಯುರ್ವೇದದ ಮಸಾಜ್‌ ನನ್ನಲ್ಲಿ ಎಂದೂ ಅಂಥಾ ಸೆಳೆತ ಮೂಡಿಸಿಲ್ಲ. ಬಹುಶಃ ಮೂರು ಪ್ರಮುಖ ಕಾರಣಗಳಿರಬಹುದು ಎಂದು ನನ್ನ ಅಭಿಪ್ರಾಯ:

1. ಆಯುರ್ವೇದದ ಮಸಾಜ್‌ ನಲ್ಲಿ ಮೈತುಂಬ ಎಣ್ಣೆ ಹಚ್ಚಿ ಮಸಾಜ್‌ ಮಾಡುವಾಗ ಅಂಗಾಂಶಗಳ ಮೇಲೆ ಒತ್ತುವಿಕೆ ಕೈಗಳು ಜಾರುತ್ತ ಸಾಗುತ್ತವೆ. ಇದರಿಂದಾಗಿ ಅಜ್ಞಾತ ಮಾಂಸಖಂಡಗಳನ್ನು ಎಚ್ಚರಿಸಿ ನಮ್ಮ ಪರಿಚಯಕ್ಕೆ ತರುವ ಕ್ರಮ ಥಾಯ್‌ ಮಸಾಜ್‌ನಲ್ಲಿರುವಷ್ಟುತೀವ್ರವಾಗಿ ಆಯುರ್ವೇದ ಕ್ರಮದಲ್ಲಿ ನನಗೆ ಕಂಡುಬರಲಿಲ್ಲ.

2. ಆಯುರ್ವೇದದ ಮಸಾಜ್‌ನಲ್ಲಿ ಬಹಳಷ್ಟುಬಾರಿ ನಿದ್ದೆಗೆ ಜಾರುತ್ತೇವೆ. ಮಸಾಜ್‌ನ ಕಾಲದುದ್ದಕ್ಕೂ ಏನಾಗುತ್ತಿದೆ ಎಂಬುದರ ಪರಿಚಯವೂ ಇರದು.

3. ಇನ್ನು ಮಸಾಜ್‌ ಮುಗಿದ ಮೇಲೆ ಎಣ್ಣೆಯನ್ನು ತೆಗೆಯಲೆಂದು ಅಲ್ಲಿಯೇ ಸ್ನಾನ ಮಾಡುವ ವ್ಯವಸ್ಥೆಯಂತೂ ನನಗೆ ಕೊಂಚ ಅಹಿತಕರವಾಗಿದ್ದು, ಮುಜುಗರ ಮೂಡಿಸುತ್ತದೆ.

ನನಗಂತೂ ಥಾಯ್‌ ಮಸಾಜ್‌, ನಮ್ಮ ಆಯುರ್ವೇದದ ಮಸಾಜ್‌ಗಿಂತಲೂ ಅತ್ಯಂತ ಅಪ್ಯಾಯ, ಮಾದಕ ಹಾಗೂ ಖುಷಿ ತರುವ ಒಂದು ಫಿಜಿಯೋಥೆರಪಿಯಾಗಿ ಕಾಣುತ್ತದೆ. ಅರವತ್ತು ನಿಮಿಷಗಳ ಮಸಾಜ್‌ ಒಂದು ಅನನ್ಯ ಅನುಭವವಾಗುವುದರಲ್ಲಿ ಎರಡು ಮಾತಿಲ್ಲ. ಮತ್ತೆ ಅವಕಾಶ ದೊರಕಿದಾಗ ನಿಜವಾದ ಥಾಯ್‌ ಮಸಾಜ್‌ ಮಾಡಿಸಿಕೊಳ್ಳಲು ನಾನು ಹಿಂಜರಿಯುವುದಿಲ್ಲ.

ಆದರೂ ಈ ಥಾಯ್‌ ಮಸಾಜ್‌ ಬಗ್ಗೆ ನಮ್ಮ ಸಮಾಜದಲ್ಲಿ ಸದಾ ಋುಣಾತ್ಮಕ ಚಿತ್ರಣ ಮೂಡಿರುವುದು ಸತ್ಯ. ಕಾರಣ, ವೀಣಾ ಹೇಳಿದ ಹಾಗೆ ಇದು ಕೆಲವು ವಿಚಿತ್ರ ಖಯಾಲಿಗಳ ಕೆಟ್ಟದೃಷ್ಟಿ, ಕೆಟ್ಟಯೋಚನೆಗಳಿಂದ ಉದ್ಭವಿಸಿರುವ ದುರದೃಷ್ಟಚಿತ್ರಣ ಎಂದೇ ಹೇಳಬೇಕು. ಆದರೂ ಒಂದು ಪ್ರಶ್ನೆ. ಆಯುರ್ವೇದ ಮಸಾಜ್‌ಗಳಲ್ಲಿ, ಗಂಡಸರು ಗಂಡಸರಿಗೆ, ಹೆಂಗಸರು ಹೆಂಗಸರಿಗೆ ಮಸಾಜ್‌ ಮಾಡುತ್ತಾರೆ.

2019 ರಲ್ಲಿ ಎಸ್ಟೋನಿಯಾಗೆ ಹೋಗಿದ್ದಾಗ, ಪುಣ್ಯ ಸುಮಾರು 60 ಯೂರೋ ಕೊಟ್ಟು ನನಗೊಂದು ಸ್ವೀಡಿಶ್‌ ಮಸಾಜ್‌ ಕೊಡಿಸಿದ್ದಳು. ಅಲ್ಲಿಯೂ ಸಹ ನಾನು ಗಮನಿಸಿದ ಹಾಗೆ, ಗಂಡಸರಿಗೆ ಗಂಡಸರು, ಹೆಂಗಸರಿಗೆ ಹೆಂಗಸರು ಮಾಡುತ್ತಿದ್ದರು. ಆದರೆ ಥಾಯ್‌ ಮಸಾಜ್‌ ಮಾಡುವವರು ಸಾಮಾನ್ಯವಾಗಿ ಎಲ್ಲೆಲ್ಲೂ, ಯಾವಾಗಲೂ ಹೆಂಗಸರೆ!

ಈಗಾಗಲೆ ಹೇಳಿದ ಹಾಗೆ ಥಾಯ್‌ ಮಸಾಜ್‌ ನಲ್ಲಿ ಸೂಕ್ಷ್ಮವಾದ ಪಟ್ಟುಗಳಿವೆ. ಅವಕ್ಕೆ ಬೇಕಿರುವುದು ಶಕ್ತಿಯಲ್ಲ ಬದಲಿಗೆ ಸೂಕ್ತವಾದ ಕಲೆ ಮತ್ತು ಚಾಕಚಕ್ಯತೆ. ಆ ಮಸಾಜ್‌ ಮಾಡುವಾಗ ಕೆಲವೊಮ್ಮೆ ಸೂಕ್ತ ರೀತಿಯಲ್ಲಿ ಅವಶ್ಯಕ ಶಕ್ತಿಯನ್ನು ಮಾತ್ರ ಉಪಯೋಗಿಸಬೇಕು.

ಇಲ್ಲವಾದಲ್ಲಿ ನಮ್ಮ ಕೈಕಾಲು ಮೂಳೆಗಳು ಲಟಕ್ಕೆನ್ನುವ ಸಾಧ್ಯತೆಯೂ ಇದೆ! ಬಹುಷಃ ಈ ಕಾರಣಕ್ಕೆ ಸಾಮಾನ್ಯವಾಗಿ ಹೆಚ್ಚಿನ ಶಕ್ತಿ ಇರುವ ಗಂಡಸರು ಈ ಮಸಾಜ್‌ಗೆ ಸೂಕ್ತವಲ್ಲದಿರಬಹುದೆ? ಸಂಪೂರ್ಣ ಸತ್ಯ ತಿಳಿಯದು. ಆದರೆ ನನಗಂತೂ ಪರ ಹೆಣ್ಣೊಬ್ಬಳ ಕೈಲಿ ಥಾಯ್‌ ಮಸಾಜ್‌ ಮಾಡಿಸಿಕೊಳ್ಳಲು ಈಗ ಯಾವುದೋ ಸಂಕೋಚವಿಲ್ಲ.

 

click me!