ಭಾರತದಿಂದ ಕಾಂಬೋಡಿಯಾಕ್ಕೆ ಕಾರಲ್ಲಿ ಹೋಗಿ ಬಂದವರ ಸಾಹಸಗಾಥೆಯಿದು!
ಕೃಷಿ ವಿಜ್ಞಾನಿ ಮತ್ತು ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಕೆ ಎನ್ ಗಣೇಶಯ್ಯ ಮಯನ್ಮಾರ್, ಥಾಯ್‌ಲ್ಯಾಂಡ್, ಕಾಂಬೋಡಿಯದ, ಆ್ಯಂಗ್‌ಕೋರ್ ವಾಟ್ ಪ್ರವಾಸ ಅನುಭವವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು-ಆ್ಯಂಗ್‌ಕೋರ್ ವಾಟ್ -ಬೆಂಗಳೂರು. ಸುಮಾರು ಏಳುನೂರು ವರ್ಷಗಳ ಹಿಂದೆ, ದೂರದ ಕಾಂಬೋಡಿಯದಲ್ಲಿ ಪ್ರಪಂಚದಲ್ಲಿಯೆ ಅತ್ಯಂತ ದೊಡ್ಡದಾದ, ‘ಆಂಗ್ಕರ್ ವಾಟ್’ (ಆ್ಯಂಗ್‌ಕೋರ್ = ರಾಜದಾನಿ; ವಾಟ್= ದೇವಾಲಯ) ಎಂಬ ಹಿಂದೂ ಧಾರ್ಮಿಕ ದೇಗುಲವನ್ನು ನಿರ್ಮಿಸುವಲ್ಲಿ ರೂವಾರಿಯಾದ ಭಾರತದ ರಕ್ತ ಹೊತ್ತ ರಾಜ ‘ಸೂರ್ಯವರ್ಮ’ ನ ಹೆಸರಿನಲ್ಲಿ ಕೈಗೊಂಡ ನಮ್ಮ ಯಾನವನ್ನು ಕೆಲವರು ಕರೆದದ್ದು ‘ಇಂಡಿಯಾ ಟು ಕಾಂಬೋಡಿಯಾ- ಆ್ಯನ್ ಎಪಿಕ್ ಡ್ರೈವ್’ ಎಂದು.
ಬೆಂಗಳೂರಿನಿಂದ ಸೆಪ್ಟೆಂಬರ್ 15, 2019 ರಂದು ಪ್ರಾರಂಬವಾದ ನಮ್ಮ ಯಾನ, ಭಾರತ, ಮಾಯನ್ಮಾರ್, ಥಾಯ್‌ಲ್ಯಾಂಡ್ ಮೂಲಕ ಅಕ್ಟೋಬರ್ 15 ರಂದು ಕಾಂಬೋಡಿಯದ, ಆ್ಯಂಗ್‌ಕೋರ್ ವಾಟ್ ತಲುಪಿ, ಎರಡು ದಿನಗಳ ನಂತರ, ಮತ್ತೆ ಥಾಯ್‌ಲ್ಯಾಂಡ್, ಮಾಯನ್ಮಾರ್ ಮೂಲಕ ಭಾರತಕ್ಕೆ ತಲುಪಿ, ಅಕ್ಟೋಬರ್ 29 ರಂದು ಬೆಂಗಳೂರಿನಲ್ಲಿ ಮುಕ್ತಾಯಗೊಂಡಿತು.
ಕೈಲಾಸ ಪರ್ವತದ ನಿಗೂಢ ವಿಷಯಗಳನ್ನು ಕೇಳಿದ್ರೆ ಅಲ್ಲಿ ದೇವರಿರೋದನ್ನ ನಂಬ್ಲೇಬೇಕು!
ನಾಲ್ಕು ದೇಶಗಳ ಮೂಲಕ, ಒಟ್ಟಿಗೆ ಹದಿನಾಲ್ಕು ಸಾವಿರದ ನಾನೂರ ಐವತ್ತು ಕಿಮೀಗಳ ಕಾರು ಪ್ರಯಾಣ. ಸುಮಾರು ಮೂವತ್ತು ಐತಿಹಾಸಿಕ ಹಾಗೂ ಪ್ರಾಕೃತಿಕ ಸ್ಥಳಗಳಿಗೆ ಭೇಟಿ. ಕ್ರೇಟಾ ಕಾರಿನೊಳಗೆ 4 ಗಿ೪ ಅಡಿಗಳ ಜಾಗದಲ್ಲಿಯೇ ನಲವತ್ತೈದು ದಿನಗಳ ಕಾಲ ನಾಲ್ಕು ಜನರ ಜೀವನ. ಯಾವುದೋ ಪರ್ವತ ಹತ್ತುವಾಗ, ದೂರದ ಜಾಗದಲ್ಲಿ ಕಾರು ಕೆಟ್ಟರೆ? ಎಲ್ಲೋ ಹಳ್ಳದಲ್ಲಿ ಸಿಕ್ಕಿಹಾಕಿಕೊಂಡರೆ? ಯಾವುದೋ ಕಾಡಿನಲ್ಲಿ ರಾತ್ರಿಯೆಲ್ಲ ಕಳೆಯಬೇಕಾಗಿ ಬಂದರೆ? ಮಣಿಪುರ, ನಾಗಾಲ್ಯಾಂಡ್ ಮೂಲಕ ಪ್ರಯಾಣಿಸುವಾಗ, ಉಗ್ರರ ಕೈಲಿ ಸಿಕ್ಕಿಹಾಕಿಕೊಂಡರೆ? ಅಲ್ಲಿ ನಡೆಯುವ ಹರತಾಳಗಳಿಂದಾಗಿ ದಿನಗಟ್ಟಲೆ ದಾರಿ ಮುಚ್ಚಿದರೆ? ಯಾರದೋ ತಪ್ಪಿನಿಂದ ಅಪಘಾತವಾದರೆ? ಗಾಯಗೊಂಡು ಆಸ್ಪತ್ರೆಗೆ ಸೇರುವ ಅನಿವಾರ್ಯತೆ ಬಂದರೆ? ನಾವು ನಾಲ್ವರೂ ೬೫ ವರ್ಷ ದಾಟಿದ, ನಿವೃತ್ತರಾಗಿರುವ ಪ್ರಾಧ್ಯಾಪಕರಿಂದ ಇವೆಲ್ಲವನ್ನೂ ನಿಭಾಯಿಸಲು ಸಾಧ್ಯವೆ ? ಪ್ರತಿ ಕ್ಷಣವೂ ಇಂತಹ ಆತಂಕಗಳ ಸುಳಿಯಲ್ಲಿಯೇ ಪ್ರಯಾಣ.
ಆದರೆ ನಾಲ್ಕೂ ಜನರಲ್ಲಿದ್ದ ಹುಮ್ಮಸ್ಸು, ಸಹಕಾರ, ಆತಂಕದ ಸಮಯಗಳಲ್ಲಿ ಒಬ್ಬರಿಗೊಬ್ಬರು ನೀಡುತ್ತಿದ್ದ ಪ್ರೋತ್ಸಾಹ, ಸಿಕ್ಕ ಪ್ರತಿ ಅವಕಾಶವನ್ನೂ ಸಂತೋಶದತ್ತ ಪರಿವರ್ತಿಸುವ ಪ್ರವೃತ್ತಿ, ಎದುರಾದ ತೊಂದರೆಯನ್ನು ನಗೆಯಲ್ಲಿ ತೇಲಿಸಿ ಮುನ್ನಡೆವ ಮನೋಭಾವ, ಇವುಗಳ ಜೊತೆಗೆ, ದಾರಿಯುದ್ದಕ್ಕೂ, ನಾಲ್ಕೂ ದೇಶಗಳಲ್ಲಿ ಕಂಡ ಧಾರ್ಮಿಕ, ಸಾಂಸ್ಕೃತಿಕ, ಕೃಷಿ, ಹಾಗೂ ಜನಜೀವನದ ವೈವಿಧ್ಯತೆ- ಎಲ್ಲಕ್ಕೂ ಮಿಗಿಲಾಗಿ ಪ್ರಕೃತಿಯ ಅಭೂತ ಪೂರ್ವ ಸೌಂದರ್ಯ ಇವೆಲ್ಲವೂ ಆ ಎಲ್ಲ ಆತಂಕಗಳನ್ನು ಮರೆಸಿದ್ದವು.
ಮಾಧ್ಯಮ ಅನೇಕದ ಅನು ಮತ್ತು ಅರವಿಂದ ಅವರು ನಮ್ಮ ಪ್ರಯಾಣದ ಬಗ್ಗೆ ಆಗಾಗ ತಯಾರಿಸಿ ಬಿಡುಗಡೆ ಮಾಡುತ್ತಿದ್ದ ವೀಡಿಯೋಗಳಂತೂ ನಮ್ಮಲ್ಲಿನ ಉತ್ಸಾಹವನ್ನು ನೂರ್ಮಡಿಗೊಳಿಸಿದ್ದವು. ಮ್ಯಾನೇಜರಮ್ಮ ಶಕುಂತಲ ಅವರು ನಿರೀಕ್ಷಿತ ಸವಾಲುಗಳನ್ನು ಎದುರಿಸಲು, ಹಾಗೂ ನಮ್ಮ ಅತೀ ಸೂಕ್ಷ್ಮ ಅವಶ್ಯಕತೆಗಳನ್ನೂ ನೀಗಿಸಲು ತೋರಿದ ಕಾಳಜಿ, ಮತ್ತು, ಪ್ರತಿ ಜಾಗದ ಬಗ್ಗೆ ಪೂರ್ವಸಿದ್ದತೆಯಾಗಿ ಬೆಳವಾಡಿ ನೀಡುತ್ತಿದ್ದ ವಿವರಗಳು ನಮ್ಮಲ್ಲಿ ಮುಂದೆ ಸಾಗುವ ಕಾತುರತೆಯನ್ನು ಸದಾ ತುಂಬುತ್ತಿದ್ದವು.
ಇನ್ನು ಡ್ರೈವಿಂಗ್ ಚಾಲೆಂಜ್: ನಾಲ್ಕು ದೇಶಗಳ ಮೂಲಕ ಹೋಗಿ ಬರುವಾಗ, ಡ್ರೈವಿಂಗ್ ಪಥದ ಅವಿರತ ಬದಲಾವಣೆ: ಭಾರತ(ಎಡ), ಮಾಯನ್ಮಾರ್(ಬಲ), ಥೈಲ್ಯಾಂಡ್ (ಎಡ), ಕಾಂಬೋಡಿಯ (ಬಲ), ಮತ್ತೆ ಹಿಂದಿರುಗುವಾಗ ಥಾಯ್ ಲ್ಯಾಂಡ್ (ಎಡ), ಮಾಯನ್ಮಾರ್(ಬಲ), ಭಾರತ(ಎಡ) -ಹೀಗೆ ತಲೆಕೆಡಿಸುವ ಬದಲಾವಣೆಯಲ್ಲೂ ದಿಕ್ಕು ಕೆಡಿಸದೆ ದಡ ಮುಟ್ಟುವಲ್ಲಿ ಪ್ರಮುಖ ಪಾತ್ರ ಮೂವರದ್ದು: ಸಣ್ಣ ವೀರಪ್ಪ,
ಗಣೇಶಯ್ಯ ಮತ್ತು ಕ್ರೇಟಾ! ಇವೆಲ್ಲಕ್ಕೂ ಬೇಕಾದ ಸಿದ್ದತೆಗಳು?
ನಮಗೆ ವೀಸಾ, ಕಾರಿಗೆ ಪ್ರವೇಶ ಪರ್ಮಿಟ್ (ಕಾರ್ ನೆಟ್), ಚಾಲಕರಿಗೆ ಐ ಡಿ ಪಿ - ಇಂಟರ್‌ನ್ಯಾಷನಲ್ ಡ್ರೈವಿಂಗ್ ಪರ್ಮಿಟ್; ಕಾರಿಗೂ ನಮಗೂ ಇನ್ಸೂರೆನ್ಸ್; ಕಾರನ್ನು ಗಡಿ ದಾಟಿಸುವಾಗ ಕಸ್ಟಮ್ಸ್ ಪರ್ಮಿಟ್, ಭಾರತ ದಾಟಿದಂತೆ ನಮ್ಮನ್ನು ಕರೆದೊಯ್ಯಲು ಅಲ್ಲಿನ ಒಬ್ಬ ಟೂರಿಸ್ಟ್ ಗೈಡ್ ಮತ್ತು ಎಸ್ಕಾರ್ಟ್ (ಅವರಿಲ್ಲದೆ ನಾವು ಹೋಗುವ ಹಾಗಿಲ್ಲ). ಇವೆಲ್ಲವನ್ನೂ ನಮಗೆ ಒದಗಿಸಿದ್ದು ‘ಓವರ್ ಲ್ಯಾಂಡ್
ಅಡ್ವೆಂಚರ್ಸ್’ ನ ನರೇನ್. ವಿಚಿತ್ರವೆಂದರೆ ಇವೆಲ್ಲ ಇದ್ದರೂ ಕೆಲವೊಮ್ಮೆ ಆತಂಕದ ಕ್ಷಣಗಳು ಬಂದೇ ಇರುತ್ತವೆ. ಎಲ್ಲಕ್ಕೂ ಮಿಗಿಲಾಗಿ ಬೇಕಾದದ್ದು: ಏನೇ ಆಗಲಿ, ಏನೇ ಬರಲಿ ನಮ್ಮ ಯಾನವನ್ನು ಮುಗಿಸುತ್ತೇವೆ ಎಂಬ ದೃಡ ನಿರ್ಧಾರ.
ಸ್ಪಷ್ಟವಾಗಿ ಕಾಣತೊಡಗುತ್ತದೆ. ಇದನ್ನು ಧೃಡೀಕರಿಸಲು ಒಂದು ಉದಾಹರಣೆ ಸೂಕ್ತ: ಮಯನ್ಮಾರ್‌ನ ಗ್ಯಾಂಗಾವ್ ಎಂಬ ಒಂದು ಸಣ್ಣ ಪಟ್ಟಣ ಪ್ರದೇಶಕ್ಕೆ ನಾವು ಒಂದು ರಾತ್ರಿ ಸುಮಾರು ೮ ಘಂಟೆಗೆ ತಲುಪಿದೆವು. ಊಟಕ್ಕೆಂದು ಅಲ್ಲಿನ ಒಂದು ಸಣ್ಣ ಹೋಟೆಲ್ ಅನ್ನು ನಮಗೆ ಸೂಚಿಸಲಾಯಿತು. ನಾವು ತಯಾರಾಗಿ ಅಲ್ಲಿಗೆ ಹೋಗುವಷ್ಟರಲ್ಲಿ ರಾತ್ರಿ ಸುಮಾರು ಒಂಬತ್ತು ಘಂಟೆಯಾಗಿತ್ತು. ಅತೀ ಸಣ್ಣದಾದ ಆ ಇಡೀ ಪಟ್ಟಣ ಬಹುಪಾಲು ನಿದ್ರೆಗೆ ಜಾರುತ್ತಿತ್ತು ಎನ್ನಬಹುದು.
ಆದರೂ ಅಲ್ಲಿನ ಹೆಣ್ಣುಮಕ್ಕಳು ಶಕ್ತಿ ದುಡಿತದಲ್ಲಿ ಎಷ್ಟು ನಿರತರು ಎನ್ನುವುದನ್ನು ನಾವು ಹೋಟೆಲ್ ತಲುಪಿದಾಗ ಕಂಡೆವು. ಹೋಟೆಲ್‌ಗೆ ಅಂಟಿಕೊಂಡಂತೆ ಅದರ ಪ್ರವೇಶದ್ವಾರದ ಬಳಿ ಹೊರಗೆ ಒಂದು ಸಣ್ಣ ಪೆಟ್ಟಿಗೆ ಅಂಗಡಿಯಂತಹ ವ್ಯವಸ್ಥೆ. ಅದರಲ್ಲಿ ಇಬ್ಬರು ಹುಡುಗಿಯರು ಕೋಳಿ, ಅಣಬೆ, ಬೆಂಡೆಕಾಯಿ, ಆಲೂಗಡ್ಡೆ ಮುಂತಾದುವನ್ನು
ಬೆಂಕಿಯ ಮೇಲೆ ಸುಟ್ಟು ಮಾರುತ್ತಿದ್ದರು- ಹೋಟೆಲ್‌ಗೆ ಬರುವ ಗಿರಾಕಿಗಳಿಗೆ.
2 ಲಕ್ಷದೊಳಗೆ ಕೈಗೆಟುಕುವ ವಿದೇಶಿ ಹನಿಮೂನ್ ತಾಣಗಳು!
ಇನ್ನು ಒಳಗೆ ಕುಳಿತಾಗ ನಮಗೆ ಮೆನು ಕಾರ್ಡ್ ಕೊಟ್ಟವಳು ಒಬ್ಬ ಹುಡುಗಿ. ಆದರೆ ಆ ಮೆನುಕಾರ್ಡ್ ಬರ್ಮಾ ಭಾಷೆಯಲ್ಲಿದ್ದುದರಿಂದ ಏನೂ ಅರ್ಥವಾಗಲಿಲ್ಲ. ನಮಗೆ ಶಾಖಾಹಾರದ (ವೆಜಿಟೇರಿಯನ್) ಊಟ ಬೇಕೆಂದು ಕೇಳಬೇಕಿತ್ತು. ಅಲ್ಲಿಗೆ ಬಂದ ಒಬ್ಬ ಸಪ್ಲೈಯರ್ ಗಂಡಸು, ನಾವು ಹೇಳಿದ್ದು ಏನೂ ಅರ್ಥವಾಗದೆ ತಬ್ಬಿಬ್ಬಾದ. ಆಗ ನಾನು, ಅಂಥ ಸಂದರ್ಭಗಳಲ್ಲಿ ಎಲ್ಲೆಲ್ಲೂ ಮಾಡುತ್ತಿದ್ದಂತೆ ಅಡುಗೆ ಕೋಣೆಗೇ ನುಗ್ಗಿ ನಮಗೆ ಏನು ಬೇಕೆಂದು ತಿಳಿಸಲು ಎದ್ದು ಹೊರಟೆ. ಧುತ್ತನೆ ‘ಹಲೋ ಸರ್. ಮೇ ಐ ಹೆಲ್ಪ್ ಯು?’ ಎಂದು ಯಾರೋ ಇಂಗ್ಲಿಷ್ ಬಾಷೆಯಲ್ಲಿ ಕೇಳಿದರು. ತಿರುಗಿ ನೋಡಿದೆ. ಅಲ್ಲಿನ ಸಣ್ಣ ಕ್ಯಾಬಿನ್ ಒಳಗೆ ಇಡೀ ಹೋಟೆಲ್‌ನ ವ್ಯವಹಾರ ನೋಡಿಕೊಳ್ಳುತ್ತಿದ್ದ ಒಬ್ಬ ಹುಡುಗಿ! ಕೊನೆಗೆ ಅವಳೆ ಬಂದು ನಮಗೆ ಬೇಕಾದುದನ್ನು ಒದಗಿಸಿಕೊಟ್ಟಳು.
ವಿಚಿತ್ರವೆಂದರೆ, ಹಾಗೆ ದುಡಿಯುತ್ತಿದ್ದ ಹೆಂಗಸರ ಹೊರತಾಗಿ ಆ ಹೋಟೆಲ್‌ನಲ್ಲಿ ನಮಗೆ ಕಂಡದ್ದು, ಎರಡು ವಿಸ್ಕಿ ಬಾಟಲ್‌ಗಳನ್ನು ಈಗಾಗಲೆ ಖಾಲಿ ಮಾಡಿ ಊಟ ಮುಕ್ಕುವಲ್ಲಿ ತೊಡಗಿಕೊಂಡಿದ್ದ ಗಿರಾಕಿ-ಹುಡುಗರ ಸಣ್ಣ ಗುಂಪು. ಅಷ್ಟೆ. ಇಡೀ ಚಿತ್ರಣವನ್ನು ನೋಡುತ್ತಿದ್ದಂತೆ ನಮ್ಮಲ್ಲಿ ಸ್ವಾಭಾವಿಕವಾಗಿ ಮೂಡಿದ ಪ್ರಶ್ನೆ: ಹುಡುಗಿಯರು ಹೀಗೆ ದುಡಿಯುತ್ತಿರುವ ಈ ಪರಿಸರದಲ್ಲಿ ಇಲ್ಲಿನ ಹುಡುಗರು ಕುಡಿಯುವ, ತಿನ್ನುವುದರ ಹೊರತಾಗಿ ಮತ್ತೇನನ್ನೂ ಮಾಡುವುದಿಲ್ಲವೆ ಎಂದು!
ಈ ಘಟನೆ ಇಡೀ ಮೈಯನ್ಮಾರ್ ನಲ್ಲಿ ನಾವು ಕಂಡ ಹೆಣ್ಣು ಪ್ರಾಧಾನ್ಯದ ಒಂದು ಸ್ಯಾಂಪಲ್ ಅಷ್ಟೆ. ಮೈಯನ್ಮಾರ್ ನಲ್ಲಿ ಮಣಿಪುರಕ್ಕಿಂತಲೂ ಹೆಚ್ಚಾಗಿ ಎಲ್ಲೆಲ್ಲೂ ಹೆಂಗಸರೆ ಎಲ್ಲ ರೀತಿಯ ಕೆಲಸಗಳನ್ನೂ ಮಾಡುತ್ತಿರುವುದರ ಚಿತ್ರಣ ಸ್ಪಷ್ಟವಾಗಿ ಕಾಣುತ್ತಿತ್ತು. ಅಷ್ಟೆ ಅಲ್ಲದೆ ಹೆಂಗಸರು ಎಲ್ಲ ವಿಭಾಗಗಳಲ್ಲೂ-ವಿದ್ಯಾಭ್ಯಾಸ, ರಸ್ತೆಯ ನಿರ್ಮಾಣ, ಹಲವು ರೀತಿಯ ಯೋಜನೆಗಳ ನಿರ್ವಹಣೆ, ಹೀಗೆ ಎಲ್ಲ ಉದ್ಯೋಗಗಳಲ್ಲೂ ತೊಡಗಿಕೊಳ್ಳುವುದರ ಜೊತೆಗೆ ಅತ್ಯಂತ ನಿರ್ಭಿಡೆಯಿಂದ ಸ್ವತಂತ್ರವಾಗಿ ಕೆಲಸ ಮಾಡುವುದನ್ನೂ ಕಂಡೆವು. ನಮ್ಮೆಲ್ಲರಲ್ಲಿ ಅಚ್ಚಳಿಯದೆ ಉಳಿದ ಒಂದು ದೃಶ್ಯವೆಂದರೆ, ಒಂದು ದಿನ ನಾವು ಕಾರಿನಲ್ಲಿ ನಿರ್ಜನವಾದ ಬೆಟ್ಟಗುಡ್ಡಗಳ ಕಾಡಿನ ಮೂಲಕ ಕೆಲವು ಘಂಟೆಗಳ ಕಾಲ ಹಾದು ಪರ್ವತದ ತುಟ್ಟ ತುದಿ ತಲುಪಿದ್ದೆವು.
ಹಲವು ಹತ್ತು ಕಿ. ಮೀ ಗಳವರೆಗೆ ಯಾವುದೇ ಜನವಸತಿ ಇಲ್ಲದ ಪ್ರದೇಶ. ಅಲ್ಲಿಯೂ, ಆ ಕಾಡಿನ ಮಧ್ಯೆಯೂ, ಹದಿಹರೆಯದ ಒಬ್ಬ ಹುಡುಗಿ ಒಂದು ಸಣ್ಣ ಮೋಟಾರು ಬೈಕಿನಲ್ಲಿ, ನಿರ್ಭಯದಿಂದ ಏಕಾಂಗಿಯಾಗಿ ಸಾಗುತಿದ್ದಳು. ಮೈಯನ್ಮಾರ್ ನಲ್ಲಿ ಹೆಣ್ಣು ಮಕ್ಕಳು ನಿಜಕ್ಕೂ ‘ಎಂಪವರ್’ ಆಗಿದ್ದಾರೆ ಎಂಬ ಭಾವನೆ ಮೂಡಿತ್ತು. ಆದರೆ ಇದಕ್ಕೆ ಮತ್ತೂ ಒಂದು ಮುಖವಿದೆ ಎಂದು ತಿಳಿದದ್ದು ಒಂದು ದೀರ್ಘ
ಅವಲೋಕನೆಯ ನಂತರ.
ಇನ್ನು ಹೆಣ್ಣು ಮಕ್ಕಳ ಪ್ರಾಧಾನ್ಯತೆ ಕೇವಲ ಪಟ್ಟಣ ಪ್ರದೇಶಗಳ ವಿಶೇಷತೆ ಎನ್ನುವ ಹಾಗಿಲ್ಲ. ಪರ್ವತ ಪ್ರದೇಶದಲ್ಲಿ ಒಮ್ಮೆ, ಸುಮಾರು ಐದು ಗಂಟೆಗಳ ಪ್ರಯಾಣ ಮಾಡಿದ ನಂತರ, ಮಧ್ಯಾಹ್ನದ ಊಟಕ್ಕೆ ಯಾವುದೆ ಹೊಟೇಲ್ ಸಿಗದೆ, ಕಾಡಿನ ನಡುವೆ ಕಂಡ ಒಂದು ಸಣ್ಣ ಮನೆಯ ಹೊಟೇಲನ್ನು ಹೊಕ್ಕೆವು.
ಅಲ್ಲಿ ಅಡುಗೆ ಮಾಡುತ್ತಿದ್ದವಳು ಒಬ್ಬ ತಾಯಿ. ಅದನ್ನು ಬಡಿಸುತ್ತಿದ್ದದ್ದು ಒಬ್ಬ ಮಗಳು, ಲೆಕ್ಕ ಬರೆದು ಹಣ ಪಡೆಯುತ್ತಿದ್ದದ್ದು ಮತ್ತೊಬ್ಬ ಹುಡುಗಿ. ನಮಗೆ ಬಡಿಸಿದ್ದು ಮತ್ತೊಬ್ಬಳು. ಹೀಗೆ ಇಡೀ ಕುಟುಂಬದ ಹೆಣ್ಣು ಮಕ್ಕಳು, ತಾಯಿ, ಆ ಹೋಟೆಲ್ ನಡೆಸುವ ವೃತ್ತಿಯಲ್ಲಿ ನಿರತರಾಗಿದ್ದರು. ಕೇವಲ ೩೦ ನಿಮಿಷದಲ್ಲಿ ಅವರು ನಮಗೆ ಅತೀ ಪರಿಚಿತರಾದಂತೆ ನಿಕಟವಾದರು.
ಕೊನೆಗೆ ಅವರೆಲ್ಲರ ಜೊತೆ ಫೋಟೋ ತೆಗೆಸಿಕೊಳ್ಳುವ ಸಮಯಕ್ಕೆ ಮನೆಯ ಯಜಮಾನ ಬಂದ- ಎಲ್ಲಿಂದಲೋ, ಹೇಗೋ, ಒಬ್ಬ ಗಂಡಸು!! ಹೆಣ್ಣಿನ ದುಡಿತ, ಗಂಡಿನ ಕುಡಿತ ಇದೆಲ್ಲದರ ಜೊತೆಗೆ ಮೈಯನ್ಮಾರ್‌ನಲ್ಲಿ ನಾವು ನಿಚ್ಚಳವಾಗಿ ಕಂಡದ್ದು ಗಂಡುಹುಡುಗರ ಬೇಜವಾಬ್ದಾರಿತನ ಮತ್ತು ಹುಂಬಾಟ. ಮುಂಜಾನೆ ಹತ್ತು ಗಂಟೆಗೆಲ್ಲ ಹೋಟೆಲ್‌ನಲ್ಲಿ ವಿಸ್ಕಿ ಬಾಟಲ್ ಹಿಡಿದು ಕುಳಿತು ಸಮಯ ಕಳೆಯುತ್ತಿದ್ದ ಕೆಲವು ಹುಡುಗರ ಗುಂಪನ್ನು ಹಲವು ಕಡೆ ಕಂಡಿದ್ದೇವೆ. ಆದರೆ ಥೈಲ್ಯಾಂಡಿನ ಹುಡುಗರಲ್ಲಿ ಅಂಥಾ ಬೇಜವಾಬ್ದಾರಿತನ ಕಾಣಲಿಲ್ಲ.
ಜೋಗಕ್ಕೆ ಹೋಗುವವರು ಗೇರುಸೊಪ್ಪುವನ್ನು ನೋಡೋದು ಮಿಸ್ ಮಾಡ್ಕೋಬೇಡಿ!
ಕೇವಲ ಕೆಲವೆ ದಿನಗಳ ಅನುಭವ ಮತ್ತು ತೃಣಮಾತ್ರದ ವೀಕ್ಷಣೆಯನ್ನಾಧರಿಸಿ ಒಂದು ಇಡೀ ದೇಶದ ಗಂಡುಹುಡುಗರ ಬಗ್ಗೆ ಅಂಥ ಯಾವುದೇ ತೀರ್ಮಾನಕ್ಕೆ ಬರುವುದು ಸೂಕ್ತವಲ್ಲ ಎನ್ನುವುದು ಸತ್ಯವಾದರೂ, ಥೈಲ್ಯಾಂಡಿನಲ್ಲಿ ವಿಫುಲವಾಗಿ ದೊರಕುವ ಉದ್ಯೋಗಾವಕಾಶಗಳಿಂದಾಗಿಯೂ ಅಲ್ಲಿನ ಯುವಕರು ಸದಾ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಗಳಿಂದಾಗಿ ಅಂಥ ಸ್ಥಿತಿ ಸೃಷ್ಟಿಯಾಗಿರಲೂ ಸಾಕು. ಎರಡೂ ದೇಶಗಳ ಈ ಭಿನ್ನತೆಯ ಸತ್ಯಾಸತ್ಯತೆಯ ಹೊರತಾಗಿಯೂ, ಥೈಲ್ಯಾಂಡಿನ ಹೆಣ್ಣುಮಕ್ಕಳು ಸಕಲ ಕರ್ಮಿಗಳು ಎನ್ನುವುದು ಸ್ಪಷ್ಟ.
ಮೈಯನ್ಮಾರ್ ನಿಂದ ಕೆಳಗೆ ಹಾದು ಥೈಲ್ಯಾಂಡ್ ಪ್ರವೇಶಿಸುತ್ತಿದ್ದಂತೆ ಆ ದೇಶದ ಹೆಣ್ಣು ಪ್ರಾಧಾನ್ಯ ಚಿತ್ರಣ ತೀವ್ರವಾಗಿ ಎದ್ದು ಕಾಣುತ್ತದೆ. ಹೆಣ್ಣು ಮಕ್ಕಳು ಎಲ್ಲ ಉದ್ಯೋಗಗಳಲ್ಲೂ ತೊಡಗಿಕೊಂಡಿರುವುದು ಇನ್ನೂ ಸ್ಪಷ್ಟವಾಗುತ್ತದೆ. ನಮಗೆ ಅತೀ ಆಶ್ಚರ್ಯವಾದದ್ದು ಒಂದು ರಾತ್ರಿ ನಡೆದ ಘಟನೆ: ಅಂದು ಸಂಜೆ ಸುಮಾರು ಏಳು ಘಂಟೆಗೆ ನಮ್ಮ ಕಾರನ್ನು ತೊಳೆಸಲೆಂದು ಶೆಲ್ ಪೆಟ್ರೋಲ್ ಬಂಕ್‌ಗೆ ಹೋಗಿದ್ದೆವು ( ಅಲ್ಲಿ ಬಹುಪಾಲು ಎಲ್ಲ ಬಂಕ್ ಗಳಲ್ಲೂ ಕಾರು ತೊಳೆಯುವ ಸೌಲಭ್ಯ ಇರುತ್ತದೆ).
ಬಂಕಿನ ವ್ಯವಹಾರ ನೋಡಿಕೊಳ್ಳುತ್ತಿದ್ದ ಮಧ್ಯ ವಯಸ್ಸಿನ ಹೆಂಗಸು ತನ್ನ ಬಂಕ್‌ನಲ್ಲಿ ತೊಳೆಯುವ ಕೆಲಸವನ್ನು ಅದಾಗ ತಾನೆ ಮುಚ್ಚಲಾಯಿತೆಂದು ಹೇಳಿದರೂ, ‘ನೋಡೋಣ ತಾಳಿ’ ಎಂದು ಕಾರ ತೊಳೆಯುವ ಘಟಕಕ್ಕೆ ಕರೆಮಾಡಿ ಯಾರನ್ನೋ ಕರೆದಳು- ತೊಳೆಯಲು ಸಾಧ್ಯವೆ ಎಂದು ಕೇಳಲು. ಆ ಕರೆಗೆ ಓಗೊಟ್ಟು ಬಂದವಳು ಒಬ್ಬ ೨೫ ವರ್ಷದ ಹುಡುಗಿ- ಆ ಘಟಕದ ನಿರ್ವಾಹಕಿ! ತಮ್ಮ ಘಟಕ ಮುಚ್ಚಿ ಸುಮಾರು ಅರ್ಧ ತಾಸು ಕಳೆಯುತೆಂದೂ, ಎಲ್ಲರೂ ಈಗಾಗಲೆ ಮನೆಗೆ ಹಿಂದಿರುಗಿರುವುದರಿಂದ ಅಂದು ತೊಳೆಯಲು ಸಾಧ್ಯವಿಲ್ಲವೆಂದೂ ನಮ್ಮ ಕೋರಿಕೆಯನ್ನು ತಳ್ಳಿ ಹಾಕಿದರೂ, ಆ ನಿರ್ವಾಹಕಿ, ಮತ್ಯಾರಿಗೋ ಪೋನ್ ಮಾಡಿ ವಿವರ ಪಡೆದು ನಮ್ಮನ್ನು ಮತ್ತೊಂದು ಬಂಕ್‌ಗೆ ತಕ್ಷಣ ಕಳುಹಿಸಿಕೊಟ್ಟಳು. ನಾವು ಅಲ್ಲಿಗೆ ಹೋಗುತ್ತಿದ್ದಂತೆ ಒಂದು ಸಣ್ಣ ಟ್ರಕ್‌ನಲ್ಲಿ ಬಂದಿಳಿದ ಎಂಟು ಮಂದಿ ಯುವಕ-ಯುವತಿಯರಿಗೆ ನನ್ನ ಕಾರಿನ ಹೊಣೆ ಹೊರೆಸಲಾಯಿತು.
ಕ್ಷಣಾರ್ಧದಲ್ಲಿ ಛಂಗನೆ ಕಾರ್ಯನಿರತರಾದ ಅವರು ಪೂರ್ವನಿಗದಿತವಾಗಿ ಕೆಲಸಗಳನ್ನು ಹಂಚಿಕೊಂಡಂತೆ ಪ್ರತಿಯೊಬ್ಬರೂ ಗಡಿಯಾರದ ಗಂಟೆ, ನಿಮಿಷ ಮತ್ತು ಸೆಕೆಂಡಿನ ಮುಳ್ಳುಗಳು ಓಡುವಂತೆ ತಮ್ಮ ತಮ್ಮ ಕೆಲಸಗಳನ್ನು ಮತ್ತೊಬ್ಬರ ಕೆಲಸಕ್ಕೆ ಅಡ್ಡಿ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಿ ಕೇವಲ ೨೫ ನಿಮಿಷಗಳಲ್ಲಿ ಕಾರನ್ನು, ತೊಳೆದು, ಸ್ವಚ್ಛವಾಗಿ ಒರೆಸಿ ಸಿದ್ಧಗೊಳಿಸಿದರು. ವಿಶೇಷವೆಂದರೆ ಆ ಗುಂಪಿನಲ್ಲಿಯೂ ಕೆಲವರು ಹುಡುಗಿಯರಿದ್ದರು- ಹುಡುಗರಂತೆಯೆ ಎಲ್ಲ ಕೆಲಸಗಳನ್ನೂ ನಿಭಾಯಿಸುತ್ತ. ಹೀಗೆ ಥೈಲ್ಯಾಂಡಿನಲ್ಲಿ ಎಲ್ಲಾ ವಿಧದ ಕೆಲಸಗಳಲ್ಲಿಯೂ ಹೆಣ್ಣು ಮಕ್ಕಳು ಭಾಗಿಯಾಗುತ್ತಾರೆ.
ವಿಶಿಷ್ಟ ಲಿಂಗಾನುಪಾತ ಈ ದೇಶಗಳಲ್ಲಿ ಹೆಣ್ಣು ಹೀಗೆ ಪ್ರಾಧಾನ್ಯವಾಗಿ ಕಾಣಿಸಿಕೊಳ್ಳಲು ಕಾರಣಗಳನ್ನು, ಹಾಗೂ ಅದರ ಪರಿಣಾಮಗಳನ್ನೂ ಚರ್ಚಿಸುತ್ತಿರುವಾಗ ಬೆಳವಾಡಿ ಇಲ್ಲಿನ ಹೆಣ್ಣು ಗಂಡುಗಳ ಅನುಪಾತದ ಬಗ್ಗೆ ಒಂದು ಕುತೂಹಲಕರ ಮಾಹಿತಿಯನ್ನು ಹುಡುಕಿ ತೆಗೆದ: ಅದರಂತೆ, ಥೈಲ್ಯಾಂಡಿನಲ್ಲಿ, ಕ್ರಮೇಣ ಶೇಕಡಾವಾರು ಗಂಡಸರ ಸಂಖ್ಯೆ ಗಮನೀಯವಾಗಿ ಕಡಿಮೆಯಾಗುತ್ತಿದೆ! 1960-70 ರಲ್ಲಿ ಸರಿ ಸುಮಾರು ಪ್ರತಿ ಹೆಣ್ಣಿಗೆ ಒಬ್ಬ ಗಂಡು ಇದ್ದರೆ, 2015 ರಿಂದೀಚೆಗೆ ಪ್ರತಿ 100 ಹೆಣ್ಣಿಗೆ 95 ಗಂಡಸರು ಮಾತ್ರ ಇರುವುದನ್ನು ಹಲವು ಗಣತಿಗಳು ಸೂಚಿಸುತ್ತಿವೆ. ಮೊದಲ ನೋಟಕ್ಕೆ ಈ ಅನುಪಾತದಲ್ಲಿ ಏನೂ ವಿಶೇಷತೆ ಕಾಣದಿದ್ದರೂ, ಇಡೀ ಪ್ರಪಂಚದ ಲಿಂಗಾನುಪಾತಕ್ಕೆ ಹೋಲಿಸಿದರೆ, ಈ ದೇಶದಲ್ಲಿ ಹೆಣ್ಣು ಮಕ್ಕಳು ಗಮನೀಯವಾಗಿ ಹೆಚ್ಚು ಎನ್ನುವ ವಿಚಿತ್ರ ಸತ್ಯ ಎದ್ದು ಕಾಣುತ್ತದೆ. ಪ್ರತಿ 1000 ಹೆಣ್ಣುಗಳಿಗೆ ಇಡೀ ಪ್ರಪಂಚದಲ್ಲಿ 1016 ಗಂಡಸರಿದ್ದರೆ, ಥೈಲ್ಯಾಂಡಿನಲ್ಲಿ 950 ಗಂಡಸರು ಮಾತ್ರ!
ಹಾಗಾಗಿ ಪ್ರಪಂಚದ ಸರಾಸರಿ ಅನುಪಾತಕ್ಕೆ ಹೋಲಿಸಿದರೆ, ಥೈಲ್ಯಾಂಡಿನಲ್ಲಿ ಪ್ರತಿ ಸಾವಿರ ಹೆಂಗಸರಿಗೆ ೬೬ ಗಂಡಸರು ಕಡಿಮೆ ಎಂದಾಗುತ್ತದೆ. ಅಂದರೆ ಈ ದೇಶದಲ್ಲಿ ವಾಸ್ತವವಾಗಿ ಹೆಂಗಸರು ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎನ್ನುವುದು ವಿಧಿತ. ಇಲ್ಲಿ ಗಂಡಸರು ‘ಅಪರೂಪ’ದ ಲಿಂಗ! ಈ ಲಿಂಗಾನುಪಾತದ ವ್ಯತ್ಯಾಸದಿಂದಾಗಿಯೆ, ಇತರೆ ದೇಶಗಳಿಗಿಂತ ಥೈಲ್ಯಾಂಡಿನಲ್ಲಿ ಎಲ್ಲ ವ್ಯವಹಾರದಲ್ಲಿಯೂ ಹೆಂಗಸರು ಹೆಚ್ಚು ಕಾಣಿಸಿಕೊಳ್ಳುವುದು ಸ್ವಾಭಾವಿಕವಿರಬಹುದೆ.. ಜೊತೆಗೆ, ಈ ಭಿನ್ನ ಅನುಪಾತದಿಂದಾಗಿ ಹೆಂಗಸರು ಕೊಂಚ ಹೆಚ್ಚು ಕಾಣುವುದರಿಂದ, ಗಂಡು ಪ್ರಾಧಾನ್ಯ ಪ್ರದೇಶದಿಂದ ಹೋದ ನಮ್ಮ ಗ್ರಹಿಕೆಗೆ, ಅಲ್ಲಿನ ಈ ಸಣ್ಣ ವ್ಯತ್ಯಾಸವೂ ವಿಭಿನ್ನವಾಗಿ ಕಂಡು ‘ಇದು ಹೆಣ್ಣು ಪ್ರಾಧಾನ್ಯ ರಾಜ್ಯ’ ಎಂಬ ಅನಿಸಿಕೆ ಮೂಡಲು ಕಾರಣವಾಗಿರಬಹುದೆ ಎಂಬ ಶಂಕೆಯೂ ಮೂಡುತ್ತದೆ.
ಅವಳು ಅವಳಲ್ಲದಾದಾಗ!
ಇಲ್ಲಿನ ಯುವ ಜನತೆಯ ಮತ್ತೊಂದು ವಿಚಿತ್ರ ಬೆಳವಣಿಗೆ ಕೂಡ ಈ ದೇಶದಲ್ಲಿ ಕಾಣುವ ಹೆಣ್ಣು ಪ್ರಾಧಾನ್ಯ ಚಿತ್ರಣವನ್ನು ವೃದ್ಧಿಗೊಳಿಸುವ ಸಾಧ್ಯತೆ ಇದೆ. ಇಲ್ಲಿನ ಕೆಲವು ಗಂಡಸರು ಹೆಣ್ಣಿನ ಹಾಗೆ ವರ್ತಿಸುವುದು ಇತ್ತೀಚೆಗೆ ‘ಸ್ವೀಕೃತ’ವಾದ ಸಾಮಾಜಿಕ ನಡೆಯೂ ಆಗಿಹೋಗಿದೆ. ಉದಾಹರಣೆಗೆ ಈ ದೇಶದ ಒಬ್ಬ ಪ್ರಸಿದ್ದ ‘ನಾಯಕಿ’ ಪಾತ್ರಧಾರಿ ಗಂಡಸು! ಆಕೆ(ತ) ಟಿವಿ ಯಲ್ಲಿ ಕೂಡ ತನ್ನ ಮೂಲ ಲಿಂಗತ್ವಕ್ಕಿಂತ, ಹೆಣ್ಣಾಗಿ ಬಾಳುವುದು ತನಗೆ ಅತ್ಯುಚಿತ ಎಂದು ಹೇಳಿಕೊಂಡಿದ್ದಾನೆ. ಅಂಥ ಬಹಳಷ್ಟು ಹುಡುಗರು ‘ಹುಡುಗಿ’ಯರಾಗಿ ವರ್ತಿಸುವುದು, ಜೀವನ ನಡೆಸುವುದು ಇಲ್ಲಿ ಸಾಮಾನ್ಯವೂ, ಸಮಾಜದಲ್ಲಿ ಸ್ವೀಕೃತ ನಡೆಯೂ ಆಗಿದೆ.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕಮ್ಮಟಕ್ಕೆಂದು ಬ್ಯಾಂಕಾಕ್‌ಗೆ ಹೋಗಿದ್ದಾಗ, ಒಂದು ಹೋಟೆಲ್‌ನಲ್ಲಿ ಭೋಜನಕೂಟವನ್ನೂ ಏರ್ಪಡಿಸಲಾಗಿತ್ತು. ಅಲ್ಲಿ ‘ರಾಮಾಯಣ’ವನ್ನು ದೃಶ್ಯ ರೂಪಕದಲ್ಲಿ ಅಭಿನಯಿಸಿದ ಸುಮಾರು 20 ಹೆಣ್ಣು ಕಲಾಕಾರರ ಗುಂಪಿನಲ್ಲಿ ಇಬ್ಬರು ಗಂಡಸರು ಎನ್ನುವುದನ್ನು ಒಬ್ಬ ವಿಜ್ಞಾನಿ ಸಹಪಾಠಿ ಸೂಚಿಸಿದ್ದ. ಆ ನೃತ್ಯಗಾರರ ಪಟ್ಟಿಯನ್ನು ವಿಶದವಾಗಿ ಪರಿಶೀಲಿಸಿ ಅದಕ್ಕೆ ಪುರಾವೆಯನ್ನೂ ಒದಗಿಸಿದ್ದ! ಹಾಗಾಗಿ ಹೆಂಗಸರಂತೆ ನಟಿಸುವ ಗಂಡಸರಿಂದಾಗಿಯೂ ಈ ದೇಶದಲ್ಲಿ ಹೆಣ್ಣು ಹೆಚ್ಚು ಪ್ರಾಧಾನ್ಯಳು, ಸ್ವತಂತ್ರಳು ಎನ್ನಿವ ಅನಿಸಿಕೆ ಮೂಡಿರಲೂ ಸಾಧ್ಯ. ಆದರೆ ಥೈಲ್ಯಾಂಡಿನ ಹೆಣ್ಣು ಪ್ರಾಧಾನ್ಯತೆಯನ್ನು ವಿವರಿಸಲು ಇಷ್ಟು ಸಾಕೆ?
ನಿಜಕ್ಕೂ ಸಾಲದು!
ಲಿಂಗಾನುಪಾತದ ಭಿನ್ನತೆ ಮತ್ತು ಸಾಮಾಜಿಕ ನಡತೆ ಥೈಲ್ಯಾಂಡಿನ ಅಥವಾ ಮೈಯನ್ಮಾರ್ ನ ಹೆಣ್ಣು ಪ್ರಾಧಾನ್ಯ ಸಮಾಜವನ್ನು ಕಂಡಾಗ ಮೊದಲ ನೋಟಕ್ಕೆ ಮೂಡುವ ಅನಿಸಿಕೆ ಎಂದರೆ ಹೆಣ್ಣು ಇಲ್ಲಿ ಹೆಚ್ಚು ಸ್ವತಂತ್ರಳು, ವಿಮುಕ್ತಳು (ಲಿಬರೇಟೆಡ್) ಹಾಗೂ ಶಕ್ತಿವಂತಳು (ಎಮ್ಪವರ್ಡ್) ಎಂದು. ಆದರೆ ನಮ್ಮ ಚರ್ಚೆಯಲ್ಲಿ ಇದಕ್ಕೆ ಒಮ್ಮತವಿರಲಿಲ್ಲ. ಆ ಚರ್ಚೆಯಲ್ಲಿ ಒಮ್ಮೆ ಡಾ ಸಣ್ಣ
ವೀರಪ್ಪನವರು ಹೀಗೆ ಹೇಳಿದ್ದರು:
‘ಥೈಲ್ಯಾಂಡಿನ ಬಗ್ಗೆ ಅದು ಸತ್ಯವಿರಬಹುದೇನೋ. ಆದರೆ ಮೈಯನ್ಮಾರ್ ನ ಹೆಂಗಸರ ಬಗ್ಗೆ ಹಾಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ’ ‘ಯಾಕೆ?’ ಕೇಳಿದ ಬೆಳವಾಡಿ. ‘ಈ ಪ್ರದೇಶಗಳಲ್ಲಿ ಸಾವಿರ ಹೆಣ್ಣಿಗೆ ಸುಮಾರು 50 ಗಂಡಸರು ಕಡಿಮೆ ಎಂದಾದರೆ, 10 ಸಾವಿರ ಹೆಣ್ಣಿಗೆ 500 ಗಂಡಸರೂ, ಒಂದು ಲಕ್ಷ ಹೆಣ್ಣಿಗೆ 5000 ಗಂಡಸರೂ, ಹಾಗೆ ಒಂದು ಕೋಟಿ ಜನಸಂಖ್ಯೆಯಲ್ಲಿ ಐದು ಲಕ್ಷ ಗಂಡಸರು ಕಡಿಮೆ ಎಂದಾಗುತ್ತದೆ. ಅಂದರೆ ಐದು ಲಕ್ಷ ಹೆಣ್ಣು ಮಕ್ಕಳಿಗೆ ‘ಅಪರೂಪ’ವಾದ ಗಂಡು ಸಂಗಾತಿ ಸಿಗಲು ಸಾಧ್ಯವಿಲ್ಲ.
ಅಂದರೆ ಕೋಟಿ ಜನಸಂಖ್ಯೆಯಲ್ಲಿ ಐದು ಲಕ್ಷ ಹೆಣ್ಣುಮಕ್ಕಳು ಸಂಗಾತಿಯಿಲ್ಲದೆ ವಂಚಿತರಾಗುವ ಸ್ಥಿತಿ ಒದಗುತ್ತದೆ. ಆದರೆ ಯಾರೂ ಸಹ ಸಂಗಾತಿ ಇಲ್ಲದೆ ಬಾಳಲು ಇಚ್ಚಿಸರು. ಸ್ವಾಭಾವಿಕವಾಗಿ, ಮದುವೆ ವಯಸ್ಸಿಗೆ ಬಂದ ಯುವತಿಯರಲ್ಲಿ ಹೀಗೆ ಅಪರೂಪವಾದ ಗಂಡನ್ನು ತಮ್ಮ ಜೀವನ ಸಂಗಾತಿಯಾಗಿ ಪಡೆಯಲು ಆತಂಕ ಸೃಷ್ಟಿಯಾಗುತ್ತದೆ. ಇದರಿಂದಾಗಿ ಹೆಣ್ಣು ಮಕ್ಕಳಲ್ಲಿ ಒಂದು ಬಗೆಯ ಸ್ಪರ್ಧಾತ್ಮಕ ಸ್ಥಿತಿ ಬೆಳೆಯುತ್ತದೆ- ಸೂಕ್ತವಾದ ಗಂಡು ಸಂಗಾತಿ ಪಡೆಯಲು. ಈ ಸ್ಥಿತಿ ಎರಡು ರೀತಿಯ ಸಮಾಜವನ್ನು ರೂಪಿಸುವ ಸಾಧ್ಯತೆ ಇದೆ.’ ‘ಎರಡು ರೀತಿಯ ಸಮಾಜ?’ ಕೇಳಿದರು ಶಕುಂತಲ.
‘ಹೌದು. ಒಂದು, ಸ್ಪರ್ಧಾತ್ಮಕ ಹೆಣ್ಣು ತನ್ನ ಸಂಕೋಲೆಗಳಿಂದ ಬಿಡುಗಡೆ ಪಡೆಯುವ ಸಮಾಜ- ಸ್ವತಂತ್ರ್ಯ-ಹೆಣ್ಣಿನ ಸಮಾಜ. ‘ಅಪರೂಪ’ ಅಥವ ‘ವಿರಳ’ವಾದ ಜೀವನ ಸಂಗಾತಿಯನ್ನು ಪಡೆಯುವ ದಿಕ್ಕಿನಲ್ಲಿ ಹೆಣ್ಣು ತಾನು ಹೆಚ್ಚು ‘ಯೋಗ್ಯ’ಳಾಗಲು ಪ್ರಯತ್ನಿಸುತ್ತಾಳೆ. ಅಂದರೆ ಆಕೆ ಹೆಚ್ಚು ವಿದ್ಯಾವಂತಳೂ, ಹೆಚ್ಚಿನ ‘ದುಡಿಮೆ’ ಗಳಿಸುವವಳೂ, ಸಂಸಾರವನ್ನು ನೀಗಿಸಲು ಇತರರಿಗಿಂತ ಹೆಚ್ಚು ‘ಅರ್ಹ’ಳೂ ಆಗಲು ಮುಂದಾಗುತ್ತಾಳೆ. ಇದನ್ನು ಸಾಧಿಸಲು ತಾನು ಸ್ವತಂತ್ರಳಾಗಿ (ಲಿಬರೇಟೆಡ್), ಹಾಗೂ ಶಕ್ತಿವಂತಳಾಗಿ (ಎಮ್ಪವರ್ಡ್) ಆಗುತ್ತಾಳೆ. ಅಂಥಹ ಸಮಾಜದಲ್ಲಿ ಹೆಣ್ಣು ಸ್ವತಂತ್ರಳಾಗಿ ಬೆಳೆಯುತ್ತಾಳೆ.’
ಅವರು ಮುಂದುವರಿಸಿ ಹೇಳಿದರು.
‘ಹಾಗೆಯೇ ಮತ್ತೊಂದು ಸಾಧ್ಯತೆಯೂ ಇದೆ. ದಾಸ್ಯ ಹೆಣ್ಣಿನ ಸಮಾಜ’ ‘ಹೇಗೆ?’ ‘ತನ್ನನ್ನು ಪಡೆಯಲು ಹೆಣ್ಣು ಕಾತರಿಸುತ್ತಿದ್ದಾಳೆ, ನಾನು ‘ಅಪರೂಪ’ದವನು ಎಂಬ ಅರಿವು ಮೂಡಿದ ಗಂಡು ಹೆಣ್ಣನ್ನು ದಾಸ್ಯಳನ್ನಾಗಿಸಿಕೊಳ್ಳಲು ಪ್ರಯತ್ನಿಸುವ ಸಾಧ್ಯತೆ ಇದೆ. ಬೆಳೆಯಲು ಹೆಚ್ಚು ಅವಕಾಶಗಳಿಲ್ಲದ ಸ್ಥಿತಿಯಲ್ಲಿ, ಹೆಚ್ಚು ಉದ್ಯೋಗಾವಕಾಶಗಳು, ವಿಧ್ಯಾಬ್ಯಾಸಕ್ಕೆ ಅವಕಾಶಗಳೂ ಇಲ್ಲದ ಪರಿಸ್ಥಿತಿಯಲ್ಲಿ ಹೆಣ್ಣು ಕೇವಲ ದುಡಿಮೆಯ ಪ್ರಾಣಿಯಾಗಿ, ಗಂಡು ಅವಳ ಹೆಗಲ ಮೇಲೆ ಕೂರುವ ಯಜಮಾನನಾಗುತ್ತಾನೆ. ಅಂಥಹ ದೇಶದಲ್ಲಿ ದಾಸ್ಯ-ಹೆಣ್ಣಿನ ಸಮಾಜ ಸೃಷ್ಟಿಯಾಗುವ ಸಂಭವವಿದೆ.’ ‘ಈ ಎರಡೂ ವಿರುದ್ಧ ದಿಕ್ಕುಗಳ ಬೆಳವಣಿಗೆ ಆಗಲು ಹೇಗೆ ಸಾಧ್ಯ?’ ಕೇಳಿದರು ಶಕುಂತಲ.
‘ಅದು ಆಯಾ ದೇಶದ ಆರ್ಥಿಕ ಸ್ಥಿತಿಯನ್ನೂ, ಯುವಕರಿಗೆ ಸಿಗುವ ಅವಕಾಶದ ದಾರಿಗಳನ್ನೂ ಅವಲಂಬಿಸುತ್ತದೆ ಎಂದು ನನ್ನ ನಂಬಿಕೆ. ಆರ್ಥಿಕವಾಗಿ ಮುಂದುವರಿದಿರುವ ಥೈಲ್ಯಾಂಡಿನಲ್ಲಿ ಹೆಣ್ಣಿಗೆ ವಿಪುಲವಾದ ಅವಕಾಶಗಳಿರುವುದರಿಂದ ಆ ಸಮಾಜ ಸ್ವತಂತ್ರ ಹೆಣ್ಣಿನ ಸಮಾಜವಾಗಿ ಬೆಳೆಯುವ ಸಾಧ್ಯತೆ ಇದೆ. ಆದರೆ ಆರ್ಥಿಕತೆಯಲ್ಲಿ ಉನ್ನತಿ ಸಾಧಿಸದ ಮೈಯನ್ಮಾರ್‌ನಲ್ಲಿ ಹೆಣ್ಣಿಗೆ ವಿವಿಧ ಮುಖಗಳಲ್ಲಿ ಬೆಳೆಯಲು ಅವಕಾಶಗಳಿಲ್ಲದ ಕಾರಣ ಆಕೆ ಗಂಡಿಗೆ ಗುಲಾಮಳಾಗಿ ಬದುಕುವ ಸ್ಥಿತಿ ಸೃಷ್ಟಿಯಾಗುವ ಸಾಧ್ಯತೆಯೆ ಹೆಚ್ಚು.’ ‘ಹೋ! ಈ ಕಾರಣದಿಂದಲೆ ಮೈಯನ್ಮಾರ್‌ನಲ್ಲಿ ಹೆಂಗಸರು ಸದಾ ಯಾವುದೋ
ಕೆಲಸದಲ್ಲಿ ತೊಡಗಿಕೊಂಡಿರುವುದನ್ನೂ ಹೆಚ್ಚು ಯುವಕರು ಬೇಜವಾಬ್ದಾರಿತನದಿಂದ ಬದುಕುವುದನ್ನೂ ಕಂಡಿರಲು ಸಾಧ್ಯ ಎನ್ನುವಿರಾ..
ಹಾಗೆಯೆ ಥೈಲ್ಯಾಂಡಿನಲ್ಲಿ ಹೆಣ್ಣು ಮಕ್ಕಳು ಎಲ್ಲಾ ಸ್ತರದ ಉದ್ಯೋಗಗಳಲ್ಲೂ ತೊಡಗಿಕೊಂಡಿರುವುದನ್ನು ಕಂಡೆವು ಎನ್ನುವುದು ನಿಮ್ಮ ವಾದವೆ?’ ‘ಇದು ನನ್ನ ಅವಲೋಕನೆ ಅಷ್ಟೆ. ಸಮಾಜ ಶಾಸ್ತ್ರಜ್ಞರ ಆಳವಾದ ಹಾಗೂ ಸೂಕ್ಷ್ಮವಾದ ಅಧ್ಯಯನದಿಂದ ಮಾತ್ರವೆ ನಿಜವಾದ ಸತ್ಯ ತಿಳಿಯಲು ಸಾಧ್ಯ’ ಎಂದರು. ಅದಕ್ಕೆ ಎಲ್ಲರೂ ತಲೆದೂಗಿದೆವು.
- ಕೆ ಎನ್ ಗಣೇಶಯ್ಯ