Asianet Suvarna News Asianet Suvarna News

ರಾಜಸ್ಥಾನದಲ್ಲೊಂದು Solo Ride; 1846 ಕಿಮೀ ಸುತ್ತಿದ ಅಜಿತರ ಅನುಭವ ಕಥನ !

ಧ್ಯಾನಸ್ಥಿತಿಯ ಆಳಕ್ಕೆ ಇಳಿಯುತ್ತ ಹೋದಂತೆ ಮನಸ್ಸು ತಿಳಿಯಾಗುತ್ತೆ. ಮೆದುಳಿನ ತುಂಬ ಲಂಗು ಲಗಾಮಿಲ್ಲದೇ ಓಡುತ್ತಿರುವ ಯೋಚನೆಗಳೆಲ್ಲ ನಿಯಂತ್ರಣಕ್ಕೆ ಬಂದು ಗಮನ ಒಂದೇ ಕಡೆ ಕೇಂದ್ರೀಕೃತವಾಗುತ್ತೆ. ಧ್ಯಾನದ ಉತ್ತುಂಗದಲ್ಲಿ ದೇಹ ಹಗುರ, ಹಗುರ... ನನಗೆ ಇದೆಲ್ಲ ಆಗುವುದು ಬೈಕ್ ಓಡಿಸುವಾಗ..! ಶುದ್ಧಾನು ಶುದ್ಧ ಧ್ಯಾನಮಗ್ನ ಸ್ಥಿತಿ. ಧ್ಯಾನ ಆನ್ ದಿ ಬೈಕ್..!
 

Suvarna news head Ajit Hanamakkanavar shares solo ride moments in rajasthan
Author
Bengaluru, First Published Nov 25, 2019, 2:44 PM IST
  • Facebook
  • Twitter
  • Whatsapp

ಪಿಎಂಎಸ್ ಅಂತ ಒಂದು ಕಾಯಿಲೆ ಇದೆ. ಪಾರ್ಕಿಡ್ ಬೈಕ್ ಸಿಂಡ್ರೋಮ್ ಅಂತಾರೆ. ನಿಲ್ಲಿಸಿದ ಬೈಕ್ ಕಡೆ ವಿನಾಕಾರಣ ಆವಾಗಾವಾಗ ಹೋಗಿ ಬರುವುದು, ಬೈಕನ್ನು ಸವರಿ ಭಾವುಕರಾಗುವುದು, ಮನೆಯಲ್ಲಿ ಏನನ್ನೋ ಹುಡುಕುತ್ತಿರುವಾಗ ಅಚಾನಕ್ಕಾಗಿ ರೈಡಿಂಗ್ ಗೇರ್ ಕಾಣಿಸಿದರೆ ಕಣ್ಣು ಒದ್ದೆಯಾಗುವುದು, ಕಾರು ಹತ್ತಿದ ತಕ್ಷಣ ದುಃಖ ಉಮ್ಮಳಿಸಿಕೊಂಡು ಬರೋದು ಈ ಕಾಯಿಲೆಯ ಲಕ್ಷಣ.

ಇದನ್ನು ನಿರ್ಲಕ್ಷಿಸಿಬಿಟ್ಟರೆ ಮಾಡುವ ಕೆಲಸದಲ್ಲಿ ನಿರಾಸಕ್ತಿಯಿಂದ ಹಿಡಿದು ಸಿಡುಕು, ಖಿನ್ನತೆಯ ತನಕ ಗಂಭೀರ ಸಮಸ್ಯೆಗಳು ಉದ್ಭವಿಸುತ್ತವೆ. ಪಿಎಂಎಸ್ ಇರುವ ಏಕೈಕ ಚಿಕಿತ್ಸೆ ಕೈಗೆ ಸಿಕ್ಕ ನಾಲ್ಕು ಬಟ್ಟೆ ಬ್ಯಾಗಿಗೆ ತುರುಕಿಕೊಂಡು ಯಾವುದೋ ಗಮ್ಯ ಫಿಕ್ಸ್ ಮಾಡಿಕೊಂಡು ಹೊರಟುಬಿಡುವುದು. ಒಬ್ಬರೇ ಹೋದರೆ ಪರಿಣಾಮ ಶೀಘ್ರ ಮತ್ತು ಖಚಿತ. ‘ಎಲ್ಲಿಗೆ’ ಅನ್ನೋದು ಅಷ್ಟು ಮುಖ್ಯವಲ್ಲ. ಸಾಗಬೇಕಾದ ದಾರಿ  ಹೊಸದಾಗಿದ್ದರೆ ದೂರ ಸಾವಿರ ಕಿಮೀ ಲೆಕ್ಕದಲ್ಲಿ ಇದ್ದರೆ ಸಾಕು.

ನಾನು ಮಾಡಿದ್ದೂ ಅದನ್ನೇ. ಬಾಲಿವುಡ್ ಸಿನಿಮಾ ಇದೆಯಲ್ಲಾ. ‘ಬಾರ್ಡರ್’ ಅದನ್ನ ಎಷ್ಟೊತ್ತಿನಲ್ಲಿ ಎಷ್ಟು ಸಲ ನೋಡಿದರೂ ಮೈ ಮೇಲಿನ ರೋಮ ರೋಮಗಳೆಲ್ಲಾ ನೆಟ್ಟಗಾಗುತ್ತವೆ. 1971 ರ ಡಿಸೆಂಬರ್ ೪ರ ಮಧ್ಯರಾತ್ರಿ 172 ಭಾರತೀಯ ಸೈನಿಕರು ಸುಮಾರು 3000 ಪಾಕಿಸ್ತಾನಿ ಸೈನಿಕರನ್ನ ಅವರ 45- 50 ಯುದ್ಧ ಟ್ಯಾಂಕರ್‌ಗಳ ಸಮೇತ ಹೆಡೆಮುರಿ ಕಟ್ಟಿದ ಸತ್ಯಕತೆ ಅದು. ಪ್ರಪಂಚದ ಯುದ್ಧ ಇತಿಹಾಸದಲ್ಲಿ ಬ್ಯಾಟಲ್ ಆಫ್ ಲೋಂಗೇವಾಲಾ’ ಅಂತ ಶಾಶ್ವತವಾಗಿ ದಾಖಲಾಗಿರುವ ಕಾಳಗ.

ಆ ಕದನ ಭೂಮಿಯ ದರ್ಶನ ಮಾಡಬೇಕೆಂಬ ಆಸೆ ತುಂಬಾ ದಿನಗಳಿಂದ ಇತ್ತು. ಉಲ್ಬಣಗೊಂಡಿದ್ದ  ಪಿಎಂಎಸ್‌ಗೆ ಚಿಕಿತ್ಸೆಯೂ ಆಯಿತು, ಲೋಂಗೇವಾಲಾ ವೀರಭೂಮಿಯ ದರ್ಶನವೂ ಆಯಿತು ಅಂತ ಯೋಚಿಸಿದಾಗ ಸಿದ್ಧವಾದದ್ದು ರಾಜಸ್ಥಾನ್ ಸೋಲೋ ರೈಡ್ ಪ್ಲ್ಯಾನ್. ನನ್ನ ಬೈಕರ್ ಬಳಗ ದೊಡ್ಡದಿರೋದರಿಂದ ರೈಡ್ ಪ್ಲ್ಯಾನ್‌ನ ರಹಸ್ಯವಾಗಿಡಬೇಕಿತ್ತು. ಸರಿ ಹೊತ್ತಿನಲ್ಲಿ ಕರೆದರೂ ಬೈಕ್ ಹತ್ತಿಕೊಂಡು ಬಂದೇ ಬಿಡುವವರ ದಂಡೇ ಇದೇ ಅಲ್ಲ. ನನ್ನ ತಲೆಯಲ್ಲಿದ್ದದ್ದು ಏಕಾಂಗಿ ಪ್ರವಾಸ. ಗುಂಪಿನಲ್ಲಿ ಧ್ಯಾನ ಮಾಡೋದು ಕಷ್ಟ ನೋಡಿ ಅದಕ್ಕೆ. 1965- 71 ರ ಯುದ್ಧದಲ್ಲಿ ಲೋಂಗೇವಾಲಾಕ್ಕೆ ಹತ್ತಿರದಲ್ಲೇ ತನೋತ್ ಮಾತಾ ಮಂದಿರ ಇದೆ. ಪಾಕಿಸ್ತಾನಿ ತೋಪುಗಳಿಂದ ಹಾರಿಬಂದ ಒಂದೇ ಒಂದು ಶೆಲ್ ಸಿಡಿಯಲಿಲ್ಲವಲ್ಲ, ಅದಕ್ಕೆ ಮಾತೆಯ ರಕ್ಷಾ ಕವಚವೇ ಕಾರಣ ಅನ್ನೋ ನಂಬಿಕೆ ಸ್ಥಳೀಯರಲ್ಲೂ ಇದೆ, ಬಿಎಸ್‌ಎಫ್ ಯೋಧರಲ್ಲೂ ಇದೆ.

ಭಾರತದಲ್ಲಿದೆ ಜಗತ್ತಿನ ಏಕೈಕ ತೇಲುವ ವನ್ಯಜೀವಿ ಅಭಯಾರಣ್ಯ !

ಆ ದೇವಿಗೆ ಬಿಎಸ್‌ಎಫ್ ಯೋಧರೇ ಪುರೋಹಿತರು. ಯುನಿಫಾರ್ಮ್‌ನಲ್ಲೇ ಪೂಜೆ ಪುನಸ್ಕಾರ. ತನೋತ್ ಮಾತೆಯ ದರ್ಶನ ಪಡೆಯಬೇಕು ಅಂತಿತ್ತು. ಜೊತೆಗೆ ಪುಷ್ಕರ್‌ನಲ್ಲಿ ನಡೆಯುವ ಜಗತ್ತಿನ ಅತಿ ದೊಡ್ಡ ಒಂಟೆ ಮೇಳವನ್ನೂ ನೋಡಬೇಕು. ರಣಥಂಬೋರ್‌ನ ಕಾಡಿನಲ್ಲಿ ಹುಲಿ ಕಾಣಿಸುವ ಸಾಧ್ಯತೆ ಜಾಸ್ತಿ. ಹೀಗೆ ಒಂದಷ್ಟು ರೂಟ್ ಐಡಿಯಾ ಇತ್ತೇ ಹೊರತು, ರೂಟ್ ಮ್ಯಾಪ್ ಅಂತ ಇರಲಿಲ್ಲ. ಒಬ್ಬಂಟಿ ಪ್ರವಾಸದ ಅತಿ ದೊಡ್ಡ ಸುಖವೇ ಅದು. ಸುಸ್ತಾದಲ್ಲಿ ಒರಗಬೇಕು, ಹಸಿವಾದಲ್ಲಿ ಉಣ್ಣಬೇಕು. ನಿದ್ದೆ ಬಂದಲ್ಲಿ ಮಲಗಬೇಕು, ಮನಸ್ಸಿಗೆ ಬಂದ ದಿಕ್ಕಿಗೆ ಬೈಕ್ ಓಡಿಸಬೇಕು.

ಹತ್ತು ದಿನದ ಅವಕಾಶ ಮಾತ್ರ ಇದ್ದದ್ದು. ಜೈಪುರದ ತನಕ ವಿಮಾನ ಅಲ್ಲಿಂದ ಮುಂದೆ ಬೈಕ್ ವಾಪಸ್ ಬೆಂಗಳೂರಿಗೆ ವಿಮಾನ ಆದರೆ ಮಾತ್ರ ಸಾಧ್ಯ. ಜೈಪುರದಲ್ಲಿ ಬೈಕ್ ಬಾಡಿಗೆಗೆ ಕೊಡುವ ಕಂಪನಿಗಳು ದಂಡಿಯಾಗಿ ಇವೆ. ಆದರೆ ನನಗೆ ಬೇಕಾಗಿದ್ದು ರಾಯಲ್ ಎನ್‌ಫೀಲ್ಡ್ ಹಿಮಾಲಯನ್. ಅದೊಂದು ವಿಷಯದಲ್ಲಿ ನೋ ರಾಜಿ. ನಾನು ಅಂದುಕೊಂಡಿದ್ದ ಡೇಟಿಗೆ ಹಿಮಾಲಯನ್ ಬೈಕ್ ಬಾಡಿಗೆಗೆ ಲಭ್ಯ ಇದ್ದದ್ದು ರಾಜಸ್ಥಾನ್ ಬೈಕ್ ಅನ್ನುವ ಒಂದೇ ಒಂದು ಕಂಪನಿಯಲ್ಲಿ. ಒಂದು ದಿನಕ್ಕೆ ಸಾವಿರದ ಏಳುನೂರು ರುಪಾಯಿ.

 ನವೆಂಬರ್ 2 ರ ರಾತ್ರಿ ಜೈಪುರ ತಲುಪಿ ಮಾರನೇ ದಿನ ಬೈಕ್ ಹತ್ರ ಹೋದೆ. ಅಷ್ಟೂ ಬಾಡಿಗೆ ಮೊದಲೇ ಕೊಡಬೇಕು, ಐದು ಸಾವಿರ ಡೆಪಾಸಿಟ್ ಇಡಬೇಕು. ಒರಿಜಿನಲ್ ಡ್ರೈವಿಂಗ್ ಲೈಸೆನ್ಸ್ ತೋರಿಸಬೇಕು, ಒರಿಜಿನಲ್ ಗುರುತಿನ ಚೀಟಿ ಪತ್ರ ಅಲ್ಲೇ ಇಡಬೇಕು, ಕೊನೆಯದಾಗಿ ಬೈಕ್ ಏನೇ ಆದರೂ ನಾನೇ ಜವಾಬ್ಧಾರಿ, ನಾನು ಬೀದಿ ಹೆಣ ಆದರೂ ಅವರಿಗೆ ಸಂಬಂಧ ಇಲ್ಲ ಅನ್ನೋ ಎರಡು ವಾಕ್ಯಗಳನ್ನೇ ತಿರುವಾ ಮುರುವಾ ಮಾಡಿ ಬರೆಯಲಾಗಿದ್ದ ಇಷ್ಟುದ್ದದ ಅಗ್ರಿಮೆಂಟ್ ಒಂದಕ್ಕೆ ಸಹಿ ಹಾಕಿ ಕೊಡಬೇಕು. ಎಲ್ಲಾ ಸೇರಿಂದತೆ ಒಂದು ಗಂಟೆಯ ಕೆಲಸ. ಅಷ್ಟಾದ ಮೇಲೆ ಕೈಗೆ ಬಂದಿತ್ತು ಕಡುನೀಲಿ ಬಣ್ಣದಲ್ಲಿ ಕಂಗೊಳಿಸುತ್ತಿದ್ದ ಹಿಮಾಲಯನ್.

ಜೈಪುರದ ಅರಮನೆ ಪ್ರವಾಸಿಗರಿಗೆ ಮುಕ್ತ, ನೀವೂ ಆಗಿ ಏಕ್ ದಿನ್ ಕಾ ಸುಲ್ತಾನ್

ಹತ್ತಿರದ ಗ್ಯಾರೇಜಿಗೆ ತಕೊಂಡ್ಹೋಗಿ ಬ್ರೇಕು, ಕ್ಲಚ್ಚು, ಹ್ಯಾಂಡೆಲ್ ಬಾರ್‌ಗಳನ್ನೆಲ್ಲಾ ನನಗೆ ಬೇಕಾದಂತೆ ಸೆಟ್ ಮಾಡಿಸಿಕೊಂಡೆ. ಆಹ್ ಕಾಥೇವಾಡಿ ಕುದುರೆಯಂತೆ ಕೆನೆಯುತ್ತಿತ್ತು ಬೈಕ್. ಡಿಸೆಂಬರ್ 4 ರ ಬೆಳಿಗ್ಗೆ ತಿಂಡಿ ಮುಗಿಸಿ ಶುಭ ಮಹೂರ್ತ ಸಾವಾಧಾನ ಅಂತ ಶುರುವಾಯ್ತು ಪ್ರಯಾಣ. ಲೋಂಗೇವಾಲಾದಿಂದ ತದ್ವಿರುದ್ಧ ದಿಕ್ಕಿಗೆ ಜೈಪುರದಿಂದ 135 ಕಿಮೀ ದೂರ ಇರುವ ರಣಥಂಬೋರ್ ಕಾಡಿಗೆ. ಬುಲೆಟ್ ಕಂಪನಿಯವರ ಏಕೈಕ ಟೂರಿಂಗ್ ಬೈಕ್ ಹಿಮಾಲಯನ್. ಗೆಳೆಯನೊಬ್ಬನ ಹಿಮಾಲಯನ್‌ನ ಕನಕಪುರ ರಸ್ತೆಯ ಪಕ್ಕದ ಬೆಟ್ಟವೊಂದನ್ನು ಕಳೆದ ವರ್ಷ ಹತ್ತಿಸಿ ಇಳಿಸಿದ್ದೆ ಅನ್ನೋದು ಬಿಟ್ರೆ, ಹೈವೇದಲ್ಲಿ ಮೊದಲನೇ ಸಲ. ಒಂದೈವತ್ತು ಕಿಮೀ ಬೇಕು ಹಿಡಿತ ಸಿಗೋದಕ್ಕೆ. ಆನಂತರ ನಾಗಾಲೋಟ.

ರಣಥಂಬೋರ್‌ನಲ್ಲಿ ನೋಡುವುದಕ್ಕಿರುವುದು ಕಾಡೊಂದೇ ಅಲ್ಲ. ಕಾಡಿನ ಮಧ್ಯೆ ಪಾಳುಬಿದ್ದಿರುವ ಕೋಟೆ ಕೊತ್ತಲಗಳು, ಅರಮನೆ, ಸರೋವರದ ದಂಡೆಯ ಮೇಲೆ ಕಟ್ಟಿಸಿಕೊಂಡಿದ್ದ ಅಮೃತಶಿಲೆಯ ಮಂಟಪದಲ್ಲಿ ಅದ್ಯಾವ ರಾಜ ತನ್ನ ಪಟ್ಟದರಸಿಯ ಜತೆ ಬೆಳದಿಂಗಳ ರಾತ್ರಿ ಧ್ವಜಾರೋಹಣ ಮಾಡಿ ಸಂಭ್ರಮಿಸಿದ್ದನೋ. ಅಲ್ಲಿ ಈಗ ಮಂಗಗಳು ಕಕ್ಕ ಮಾಡಿ ಹೋಗುತ್ತವೆ. ಒಂದು ಕಾಲದಲ್ಲಿ ಮಹಾರಾಜನ ಅಹಮ್ಮಿಗೆ ಬೆಣ್ಣೆ ಹಚ್ಚುತ್ತಾ ಆಕಾಶದೆತ್ತರಕ್ಕೆ ನಿಂತಿದ್ದ ಭವ್ಯಕೋಟೆಗೆ ಈತ ಸುಣ್ಣ ಹಚ್ಚುವವರಿಲ್ಲ. 

ಹುಲಿ ನೋಡಬೇಕು ಅಂದರೆ ಬೇಸಿಗೆಯಲ್ಲಿ ಬರಬೇಕು ನೀವು ಅನ್ನುತ್ತಲೇ ಕಾಡನ್ನು ಪರಿಚಯಿಸುತ್ತ ಹೋದ ಗೈಡ್ ರಾಮವಾಲನ ಅಗಾಧ ಜ್ಞಾನಕ್ಕೆ ನಮೋ ನಮಃ. ಎರಡನೇ ಸಫಾರಿಯಲ್ಲಿ ಚಿರತೆಯೊಂದು ಏಳೆಂಟು ನಿಮಿಷ ದರ್ಶನ ಕೊಟ್ಟು ಪುಣ್ಯ ಕಟ್ಟಿಕೊಂಡಿತು. ಒಂದು ರಾತ್ರಿ ರಣಥಂಬೋರ ಪಕ್ಕದ ಸವಾಯ್ ಮಾಧವಪುರದಲ್ಲಿ, ಮೂರನೇ ದಿನ ಸಂಜೆ ಹೊರಟಿದ್ದು ಅಜ್ಮೈರ್ ಕಡೆ. ಹತ್ ಹತ್ರ ನೂರೈವತ್ತು ಕಿಮೀ. ರಾತ್ರಿ ಎಲ್ಲಾದರೂ ಒಂದು ಕಡೆ ಮಲಗಿ ಬೆಳಿಗ್ಗೆ ಅಜ್ಮೈರ್ ತಲುಪುವುದು ಅಂತಂದುಕೊಂಡೆ.

ಭಾರತದಿಂದ ಕಾಂಬೋಡಿಯಾಕ್ಕೆ ಕಾರಲ್ಲಿ ಹೋಗಿ ಬಂದವರ ಸಾಹಸಗಾಥೆಯಿದು!

ಹಂಗಿದ್ದ ಮೇಲೆ ಹೈವೇಯಲ್ಲಿ ಯಾಕೆ ಹೋಗೋದು? ಹಳ್ಳಿಯ ಕಚ್ಚಾರಸ್ತೆ ಹಿಡಿದರಾಯ್ತು ಅಂದುಕೊಂಡು ಒಂದು ಕಡೆ ಎಡಕ್ಕೆ ಬೈಕ್ ತಿರುಗಿಸಿದೆ. ಬ್ಯಾಡ ಅದು ಕತೆ. ರಾಜಸ್ಥಾನದ ಹಳ್ಳಿಗಳಿಗೆ ಎಂಟೂವರೆ ಒಂಭತ್ತುರ ಹೊತ್ತಿಗೆ ಸಂಪು ನಿದ್ದೆ. ನನ್ನ ಬೈಕಿನ ಪೆಟ್ರೋಲ್ ಖಾಲಿ ಆಗ್ತಿದೆ. ಪೆಟ್ರೋಲ್ ಬಂಕ್ ಎಲ್ಲಿದೆ ಹುಡುಕೋಣ ಅಂದರೆ ಮೊಬೈಲ್‌ನಲ್ಲಿ ಇಂಟರ್ನೆಟ್ ಸಿಗ್ತಿಲ್ಲ. ಕೇಳೋಣ ಎಂದರೆ ಒಂದೇ ಒಂದು ನರಪಿಳ್ಳೆ ಎಚ್ಚರ ಇಲ್ಲ.

ಒಂದು ಮನೆ ಎದುರು ಬೈಕ್ ನಿಂತಿತ್ತು. ಬಾಗಿಲು ಬಡಿದು ಎಬ್ಬಿಸಿ ತುಟುಕು ಪೆಟ್ರೋಲ್ ಕೊಡ್ತೀರಾ ಅಂದೆ. ಇಪ್ಪತ್ತು ಕಿಮೀ ಹೋದರೆ ಬಂಕ್ ಸಿಗುತ್ತೆ ಅಂದ ಮನೆಯ ಯಜಮಾನ ತನ್ನ ಬೈಕ್‌ನಿಂದ ಒಂದು ಲೀ. ಪೆಟ್ರೋಲ್ ಬಸಿದುಕೊಟ್ಟ. ಹೆಂಡತಿಯನ್ನು ಎಬ್ಬಿಸಿ ಸಜ್ಜೆ ರೋಟ್ಟಿ, ಮೆಣಸಿನಕಾಯಿ ಪಲ್ಯ ಮಾಡಿಸಿ ಸಾಕು ಸಾಕು ಎಂದರೂ ಕೇಳದೇ ಊಟ ಮಾಡಿಸಿದ. ಇಲ್ಲೇ ಮಲಗಿ ಬೆಳಿಗ್ಗೆಗೆ ಎದ್ದು ಹೋಗಿ ಎಂದು ಇಡೀ ಕುಟುಂಬ ಹೇಳಿತು. ಇನ್ನೊಂದು ನೂರು ಕಿಮೀ ಹೋಗಬೇಕು ಎಂದುಕೊಂಡಿದ್ದರಿಂದ ಹೊರಟುಬಿಟ್ಟೆ. ಆ ಮೆಣಸಿನಕಾಯಿ ಪಲ್ಯದ ಖಾರ ನಾಲಗೆಯಲ್ಲಿ ಇನ್ನೂ ಇದೆ.

ಮೂರನೇ ದಿನ ಅಜ್ಮೈರ್‌ನಲ್ಲಿ ಸುಶ್ರಾವ್ಯ ಕವಾಲಿ ಕೇಳುತ್ತಾ ದರ್ಗಾ ದರ್ಶನ ಮಾಡಿಕೊಂಡು ಪಕ್ಕದಲ್ಲೇ ಇರುವ ಪುಷ್ಕರ್ ತಲುಪಿದಾಗ ಮಧ್ಯಾಹ್ನ ಜಗತ್ತಿನ ಬಣ್ಣಗಳೆಲ್ಲಾ ಆ ಒಂದೇ ಊರಿನಲ್ಲಿವೆಯೇನೋ ಎಂಬಂಥ ಜಾತ್ರೆ. ಒಂಟೆ, ಕುದುರೆ, ಹಸು, ಎಮ್ಮೆ ಹೀಗೆ ಪ್ರಪಂಚದ ಅತಿದೊಡ್ಡ ಸಂತೆ ಅದು. ಸುಮ್ನೆ ರೇಟು ಕೇಳೋಕೆ ನಂದೇನು? ಒಂಟೆ ಒಂದು ಲಕ್ಷದ ಆಸುಪಾಸು. ಕುದುರೆ ಇಪ್ಪತ್ತೈದು ಲಕ್ಷದ ತನಕ.

ಒಂದು ಕಟ್ಟುಮಸ್ತಾದ ಕೋಣ ಇತ್ತು. ಎಷ್ಟಕ್ ಕೊಡ್ತೀಯಾ ಅಂದೆ? ಹದಿನಾಲ್ಕು ಕೋಟಿಗೆ ಕೇಳಿದ್ರೂ ಕೊಟ್ಟಿಲ್ಲ ಅಂದ..! ಪ್ರಪಂಚದ ಏಕೈಕ ಬ್ರಹ್ಮದೇವಸ್ಥಾನ ಇರುವುದು ಪುಷ್ಕರ್‌ನಲ್ಲಿ. ಸೃಷ್ಟಿ ಕ್ರಿಯೆ ಆರಂಭವಾಗಿದ್ದೇ ಅಲ್ಲಿಂದ ಅಂತೆ..! ಬ್ರಹ್ಮನಿಗೂ ಬ್ರಹ್ಮನ ಹೆಂಡತಿಗೂ ಜಗಳ ಆದ ಜಾಗ..! ಅಲ್ಲಿ ಕಳೆದದ್ದು ಎರಡು ರಾತ್ರಿ. ಅಲ್ಲಿಂದ ಜೋಧಪುರ ಅಂದುಕೊಂಡಿದ್ದವನು ಅದ್ಯಾಕೋ ಮನಸ್ಸು ಬದಲಿಸಿ ಜೈಸಲ್ಮೇರ್ ದಾರಿ ಹಿಡಿದೆ. ಮತ್ತೆ ಹೈವೇ ಬಿಟ್ಟು ಹಳ್ಳಿ ಹಳ್ಳಿ, ಪಟ್ಟಣ ಪಟ್ಟಣ. ಐನೂರು ಕಿಮೀಗೆ ಜೈಸಲ್ಮೇರ್.

ಆಹ್.. ಊರಾ ಅದು..! ಅಲ್ಲಿನ ಗೌಂಡಿಗಳಗೆ ನಾರ್ಮಲ್ ಮನೆ ಕಟ್ಟೋದಕ್ಕೆ ಬರೋದೇ ಇಲ್ವೇನೋ. ಪ್ರತಿ ಮನೆಯೂ ಕಲಾಕೃತಿ. ಕಿಟಕಿ, ಬಾಗಿಲು ಕಲ್ಲಿನ ಕೆತ್ತನೆ ಕಣ್ಣಿಗೆ ಹಬ್ಬ. ಕಾರ್ಪೊರೇಷನ್ ಆಫೀಸಿಗೊಂದು ಕಾಂಪೌಂಡ್ ಕಟ್ಟಿ ಅಂದರೂ ಅದರ ಮೇಲೆ ಆರಡಿಗೊಂದು ಮಂಟಪ ಕಟ್ಟಿ ಇಟ್ಟಿದ್ದಾರೆ. ಊರ ಹೊರಗಿನ ಬೆಟ್ಟಗಳ ನೆತ್ತಿಯ ಮೇಲೂ ಅಂಥವೇ ದೊಡ್ಡ ಮಂಟಪಗಳು. ಅವನ್ಯಾಕೆ ಕಟ್ಟಿದ್ದಾರೆ ಅಂತ ಗೈಡ್‌ನ ಕೇಳಿದೆ. ಕೂತ್ಕೊಂಡು ಮಾತಾಡೋದಕ್ಕೆ ಅಂದ. ಅದಕ್ಕೆ ಊರ ಹೊರಗೆ ಬರಬೇಕೇನಯ್ಯಾ ಅಂದೆ. ಹಳೇ ಕಾಲದ ಜನರಿಗೆ ಪರ್ಸನಲ್ ವಿಷಯ ಮಾತಾಡೋದಕ್ಕಿರ್ತಿತ್ತಲ್ವಾ ಸಾರ್ ಅಂದ. ಅರೇ ಇಸ್ಕಿ..

ಜೋಗಕ್ಕೆ ಹೋಗುವವರು ಗೇರುಸೊಪ್ಪವನ್ನು ನೋಡೋದು ಮಿಸ್ ಮಾಡ್ಕೋಬೇಡಿ!

ಒಂದೇ ಮಂಟಪದಲ್ಲಿ ಕೂತ್ಕೊಂಡು ಮಾತಾಡಬಹುದಿತ್ತಲ್ವಾ. ಒಂದರ ಪಕ್ಕ ಒಂದರಂತೆ ಅಷ್ಟ್ಯಾಕೆ ಕಟ್ಟಿದರು ಅಂದೆ? ತಲೆ ಕೆರೆದುಕೊಂಡ. ರಾಜಸ್ಥಾನ್ ಒಬ್ಬಂಟಿ ಪ್ರವಾಸದ ಬೆಸ್ಟ್ ಪಾರ್ಟ್ ಯಾವುದು ಗೊತ್ತಾ? ಜೈಸಲ್ಮೇರ್‌ನಿಂದ ತನೋತ್‌ಮಾತಾ ದೇವಸ್ಥಾನದ ತನಕ 122 ಕಿಮೀ ಹಾದಿ. ಆಹ್.. ನೆಟ್ಟಗಿನ ನುಣುಪಾದ ರಸ್ತೆ. ಅಕ್ಕಪಕ್ಕ ಎಷ್ಟು ದೂರು ನೋಡಿದರೆ ಅಷ್ಟು ದೂರ ಮರಳುಗಾಡು, ಕುರುಚಲು ಗಿಡಗಳು, ಅಲ್ಲಲ್ಲಿ ಮಿಲಿಟರಿ ವಾಹನಗಳು, ಸೈನಿಕರು. ಅಪರೂಪಕ್ಕೊಮ್ಮೆ ಎದುರಾಗುವ ಪ್ರವಾಸದ ಗಾಡಿಗಳು. ಈಗ ನೆನಪಿಸಿಕೊಂಡರೆ ನನಗೂ ನಗು ಬರುತ್ತೆ. ಒಂದು ಕಡೆ ಬೈಕ್ ನಿಲ್ಲಿಸಿ ಪಕ್ಕದ ಮರಳು ಗಡ್ಡೆಯ ಮೇಲೆ ಹೋಗಿ ನಿಂತು ಆಕಾಶದ ಕಡೆ ಮುಖ ಮಾಡಿ, ಗಂಟಲು ಹರಿದುಹೋಗುವಂತೆ ಕೇಕೆ ಹಾಕಿದೆ. ಏನಾಯ್ತು ಅಂತ ಕೇಳೋದಕ್ಕೆ ಯಾರೂ ಇರಲಿಲ್ಲ..!

ತನೋತ್‌ಮಾತಾ ದೇವಸ್ಥಾನದಿಂದ ಲೋಂಗೇವಾಲಾ ಪೋಸ್ಟ್ ತನಕದ ನಲವತ್ತೆರಡು ಕಿಮೀ ದಾರಿ ಇದೆಯಲ್ಲ. ಹಿಮಾಲಯನ್ ಬೈಕ್‌ನ ತಾಕತ್ತು ಪರೀಕ್ಷೆಯಾಗುವುದು ಅಲ್ಲೇ. ಹೊಸಾ ರೋಡ್ ಮಾಡ್ತಿದ್ದಾರೆ. ಗಾಳಿಯ ಹೊಡೆತಕ್ಕೆ ಮರಳೆಲ್ಲಾ ರೋಡಿಗೆ ಬಂದು ರಸ್ತೆ ಎಲ್ಲಿದೆ ಅನ್ನೋದೇ ಕಾಣಲ್ಲ. ಎರಡು ಸಲ ಬಿದ್ದು ಗಾಯ ಮಾಡಿಕೊಂಡಿದ್ದಕ್ಕೇನೋ, ಆ ರಸ್ತೆ ಇನ್ನೂ ಮೆಮೊರೆಬಲ್ ಅನ್ನಿಸ್ತು. ಹಂಗೇ ಹೋಗಿ ಲೋಂಗೇವಾಲಾ ತಲುಪಿದರೆ, ಇಷ್ಟದೇವರ ದರ್ಶನಕ್ಕೆ ತೀರ್ಥಯಾತ್ರೆ ಹೊರಟ ಭಕ್ತ ಗರ್ಭಗುಡಿಯೆದುರು ನಿಂತುಕೊಂಡಂಥ ಭಾವ.

ಪಾಕಿಸ್ತಾನಿ ಸೈನಿಕರು ಬಿಟ್ಟು ಓಡಿಹೋದ ಯುದ್ಧ ಟ್ಯಾಂಕರ್ ಮೇಲೆ ಪಟಪಟಿಸುತ್ತಿರುವ ತ್ರಿವರ್ಣ ಧ್ವಜ. ಮರಳಿನಲ್ಲಿ ಚದುರಿಂದಂತೆ ನಿಂತಿರುವ ಆಗಿನ ಕಾಲದ ಮಿಲಿಟರಿ ವಾಹನಗಳು. 1971 ರ ಡಿಸೆಂಬರ್ 04 ರ ರಾತ್ರಿ ಪಾಕಿಸ್ತಾನಿ ಸೈನಿಕರಿಂದ ವಶಪಡಿಸಿಕೊಳ್ಳಲಾದ ಆಯುಧಗಳು, ಐಡೆಂಟಿಟಿ ಕಾರ್ಡ್‌ಗಳು, ಹದಿನೈದು ನಿಮಿಷಗಳದ್ದೊಂದು ವಿಡಿಯೋ ಪ್ಲೇ ಮಾಡ್ತಾರೆ ಅಲ್ಲಿ, ನೋಡಬೇಕು ಅದನ್ನ. ಆವತ್ತಿನ ಕಾಳಗದಲ್ಲಿ ಪಾಕಿಸ್ತಾನಿ ಟ್ಯಾಂಕರ್‌ಗಳ ಎದುರು ಎದೆ ಸೆಟೆಸಿಕೊಂಡು ನಿಂತ ಮೇಜರ್ ಕುಲದೀಪ್ ಸಿಂಗ್ ಚಾಂದ್‌ಪುರಿಯವರ ಬಗ್ಗೆ ವಿವರಿಸಲಾಗದ ಅಭಿಮಾನವೊಂದು ಮೂಡುತ್ತೆ. ಎರಡು ಗಂಟೆ ಅಲ್ಲಿದ್ದು ಹೊರಡಬೇಕು ಅಂದುಕೊಂಡವನು ಆರು ತಾಸಿದ್ದೆ.

ಅಲ್ಲಿಂದ ಜೈಸಲ್ಮೇರ್. ಮಾರನೇ ದಿನ ಮರುಭೂಮಿಯ ಮಧ್ಯದ ಒಬ್ಬಂಟಿ ಟೆಂಟ್‌ನಲ್ಲಿ ರಾತ್ರಿ ಕಳೆದದ್ದನ್ನು ಯಾವತ್ತೂ ಮರೆಯಲಾರೆ. ಜೈಸಲ್ಮೇರ್‌ನಿಂದ ಜೈಪುರ ತನಕ 555 ಕಿಮೀ ಒಂದೇ ಹೈವೇ. ಬೆಳ್ ಬೆಳಿಗ್ಗೆ ಹೊರಟು ರಾತ್ರಿ ಬಂದು ತಲುಪುವಷ್ಟರಲ್ಲಿ ದೇಹ ಅನ್ನೋದು ಹಿಂಡಿ ಹಾಕಿದಂತಾಗಿತ್ತು. ರಾಜಸ್ಥಾನ ಬೈಕ್ಸ್ ಗೆ ಹಿಮಾಲಯನ್ ವಾಪಸ್ ಕೊಟ್ಟಾಗಿ ಓಡೋ ಮೀಟರ್ 1846 ಕಿಮೀ ತೋರಿಸುತ್ತಿತ್ತು. ನಾಟ್ ಬ್ಯಾಡ್...

- ಅಜಿತ್ ಹನಮಕ್ಕನವರ್ 

ಸುವರ್ಣನ್ಯೂಸ್ ಮುಖ್ಯಸ್ಥರು 

 


 

Follow Us:
Download App:
  • android
  • ios