ಭಾರತದ ಪೊಲೀಸರ ಚಿತ್ರಹಿಂಸೆ ʼಭಯಾನಕʼ ಅಂತೆ! ಹೇಳಿದ್ದು ಯಾರು?

Published : Jun 27, 2025, 10:23 PM IST
torture .jpg

ಸಾರಾಂಶ

ಭಾರತವು ಚಿತ್ರಹಿಂಸೆ ನೀಡುವ ದೇಶಗಳಲ್ಲಿ ಮುಂಚೂಣಿಯಲ್ಲಿದೆಯಂತೆ. ಹೀಗೆ ಹೇಳಿದವರು ನಾವಲ್ಲ. ಪೊಲೀಸ್ ಕಸ್ಟಡಿಯಲ್ಲಿ ಸಾವುಗಳು ಹೆಚ್ಚುತ್ತಿವೆ ಮತ್ತು ಚಿತ್ರಹಿಂಸೆ ವ್ಯವಸ್ಥಿತವಾಗಿದೆ ಎಂದು ಜಾಗತಿಕ ಅಧ್ಯಯನವೊಂದರ ವರದಿ ತಿಳಿಸುತ್ತದೆ.

ಜಗತ್ತಿನ ಎಲ್ಲ ಕಡೆಯ ಪೊಲೀಸರ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಒಂದು ಬಗೆಯ ಭಯಭೀತಿ ಇದೆ- ಹಾಗೇ ಭಾರತದಲ್ಲಿಯೂ ಇದೆ. ಅದಕ್ಕೆ ಮುಖ್ಯ ಕಾರಣ ಅವರು ನೀಡುವ ಚಿತ್ರಹಿಂಸೆ. ಅಪರಾಧಿಗಳನ್ನು ಹೇಗೂ ಹಿಂಸಿಸಿ ಸತ್ಯ ಹೊರಡಿಸುವ, ಮಾಡಿದ ಮತ್ತು ಮಾಡದ ಅಪರಾಧವನ್ನೂ ಒಪ್ಪಿಕೊಳ್ಳುವಂತೆ ಮಾಡುವ ʼಕಲೆʼ ಪೊಲೀಸರದು. ಹೀಗಾಗಿ ಭಾರತದ ಅಪರಾಧಿಗಳು ಮಾತ್ರವಲ್ಲ, ನಿರಪರಾಧಿಗಳೂ ಪೊಲೀಸರೆಂದರೆ ಗಡಗಡ ನಡುಗುತ್ತಾರೆ. ಇದು ಸುಮ್ಮನೇ ಆಡುತ್ತಿರುವ ಮಾತಲ್ಲ. ಇದೀಗ ಜಾಗತಿಕವಾಗಿಯೂ ಒಂದು ಸಮೀಕ್ಷೆಯ ಮೂಲಕ ರುಜುವಾತಾದ ಸಂಗತಿ. ʼಚಿತ್ರಹಿಂಸೆʼ ಅಥವಾ ಟಾರ್ಚರ್‌ ಕೊಡುವಲ್ಲಿ ಭಾರತದ ಸೂಚ್ಯಂಕವೂ ಏರಿಕೆಯಾಗಿದೆ. ಹೆಚ್ಚಿನ ಚಿತ್ರಹಿಂಸೆಯ ಅಪಾಯ ಹೊಂದಿರುವ ದೇಶಗಳಲ್ಲಿ ಭಾರತ ಮೊದಲ ಶ್ರೇಣಿಯಲ್ಲಿದೆಯಂತೆ.

ಇದು ʼಜಾಗತಿಕ ಹಿಂಸೆ ಸೂಚ್ಯಂಕ- 2025ʼ ಎಂಬ ಸಮೀಕ್ಷೆಯಲ್ಲಿ ಕಂಡುಬಂದ ವಿಷಯ. ʼವಿಶ್ವ ಹಿಂಸೆ ವಿರೋಧಿ ಸಂಸ್ಥೆʼ (OMCT) ದೇಶದ ಐದು ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ನಾಗರಿಕ ಸಮಾಜ ಸಂಸ್ಥೆಗಳ ಸಹಯೋಗದೊಂದಿಗೆ ಸಂಗ್ರಹಿಸಿದ ಡೇಟಾ ಇಟ್ಟುಕೊಂಡು ಮಾಡಿದ ವಾರ್ಷಿಕ ಮೌಲ್ಯಮಾಪನವಿದು, ಇದು ಈ ಥರದ ಮೊದಲ ಅಧ್ಯಯನವಂತೆ. ಬೇರೆ ಬೇರೆ ಏಳು ವಿಷಯಗಳು, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳಿಂದ ಪಡೆದ ವಿಧಾನವನ್ನು ಆಧರಿಸಿ, ಚಿತ್ರಹಿಂಸೆಯ ಕುರಿತು ಸೂಚ್ಯಂಕ ಕಲೆಹಾಕಲಾಗಿದೆ. 26 ದೇಶಗಳನ್ನು ಮೌಲ್ಯಮಾಪನ ಮಾಡಲಾಗಿದೆ.

ತಮಿಳುನಾಡು ಮೂಲದ ಪೀಪಲ್ಸ್ ವಾಚ್‌ನ ಸಹಭಾಗಿತ್ವದಲ್ಲಿ ಈ ಸಮೀಕ್ಷೆ ಮಾಡಲಾಗಿದೆ. ಭಾರತದ ಬಗ್ಗೆ ಇದರಲ್ಲಿ ಒಂದು ಕಠೋರ ಚಿತ್ರಣ ಸಿಗುತ್ತದೆ. ಭಾರತದಲ್ಲಿ ಚಿತ್ರಹಿಂಸೆ ಕೇವಲ ಪ್ರಚಲಿತವಾಗಿ ಇರುವುದಷ್ಟೇ ಅಲ್ಲ, ವ್ಯವಸ್ಥಿತವಾಗಿಯೂ ಇದೆಯಂತೆ. ದಲಿತರು, ಆದಿವಾಸಿಗಳು, ಮುಸ್ಲಿಮರು, LGBTQIA+ ವ್ಯಕ್ತಿಗಳು ಮತ್ತು ವಲಸೆ ಕಾರ್ಮಿಕರ ಮೇಲೆ ಹೆಚ್ಚಿನ ಹಿಂಸೆ ನಡೆಯುತ್ತದಂತೆ. 2024ರಲ್ಲಿ ಪೊಲೀಸ್‌ ಕಸ್ಟಡಿಯಲ್ಲಿ ದೇಶದಲ್ಲಿ 2,739 ಸಾವುಗಳು ಆಗಿವೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ವರದಿ ಮಾಡಿದೆ. 2023ರಲ್ಲಿ ಇಂಥ ಸಾವುಗಳ ಸಂಖ್ಯೆ 2,400 ಇತ್ತು. ಅಂದರೆ ವರ್ಷದಿಂದ ವರ್ಷಕ್ಕೆ ಇದು ಏರುತ್ತಿದೆ.

ಹೀಗೆ ಹೆಚ್ಚಿನ ಟಾರ್ಚರ್‌ ಸೂಚ್ಯಂಕ ಹೊಂದಿರುವ ದೇಶಗಳು ಲಿಬಿಯಾ, ಹೊಂಡುರಾಸ್, ಬೆಲಾರಸ್, ಕೊಲಂಬಿಯಾ, ಟರ್ಕಿ, ಫಿಲಿಪೈನ್ಸ್ ಮತ್ತು ಟುನೀಶಿಯಾ ಇತ್ಯಾದಿ. ಇವುಗಳ ಜೊತೆಗೆ ಇದೀಗ ಭಾರತವೂ ಸೇರಿದೆ. ಇದೇನೂ ಒಳ್ಳೆಯ ವಿಷಯ ಅಲ್ಲ. ಯಾಕೆಂದರೆ ಈ ಪಟ್ಟಿಯಲ್ಲಿ ಅಮೆರಿಕ, ಇಂಗ್ಲೆಂಡ್‌ ಮೊದಲಾದ ದೇಶಗಳು ನಮ್ಮ ಆಸುಪಾಸಿನಲ್ಲಿ ಇಲ್ಲ. ಅಲ್ಲಿ ಚಿತ್ರಹಿಂಸೆ ಕಡಿಮೆಯಂತೆ.

ಸಮೀಕ್ಷೆಯಲ್ಲಿ ಸ್ಪಷ್ಟವಾದ ವಿಷಯಗಳು ಇವು: ಇಲ್ಲಿ ಪೊಲೀಸ್ ದೌರ್ಜನ್ಯ ಮತ್ತು ಸಾಂಸ್ಥಿಕ ಹಿಂಸಾಚಾರ ಅನಿಯಂತ್ರಿತವಾಗಿದೆ. ಕಾನೂನುಬಾಹಿರ ಹತ್ಯೆಗಳು ಮತ್ತು ಕಾನೂನುಬಾಹಿರ ಬಂಧನಗಳು ನಡೆಯುತ್ತವೆ. ಇದಕ್ಕೆ ಶಿಕ್ಷೆಯ ಬದಲು ಬಡ್ತಿ ನೀಡಲಾಗುತ್ತದೆ. ಕಸ್ಟಡಿ ಪರಿಸ್ಥಿತಿಗಳು ಭೀಕರವಾಗಿವೆ. 2022ರಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿ 1,995 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. 75%ಕ್ಕಿಂತ ಹೆಚ್ಚು ಕೈದಿಗಳು ವಿಚಾರಣಾಧೀನ ಬಂಧಿತರು. ಜೈಲುಗಳು 131.4%ರಷ್ಟು ಕಿಕ್ಕಿರಿದ ಸ್ಥಳಗಳಾಗಿವೆ.

ಕೊಪ್ಪಳ: 3ನೇ ಪತ್ನಿ ಕೊಲೆ ಮಾಡಿದ್ದ ವ್ಯಕ್ತಿಯನ್ನು 23 ವರ್ಷದ ಬಳಿಕ ಬಂಧಿಸಿದ ಪೊಲೀಸರು

ಯುಎಪಿಎ ಕಾಯಿದೆಯನ್ನು ಸಾಮಾಜಿಕ ಕಾರ್ಯಕರ್ತರು ಮತ್ತು ನಾಗರಿಕರ ವಿರುದ್ಧ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದು ಅನಿಯಂತ್ರಿತ ಬಂಧನಗಳು ಮತ್ತು ದೀರ್ಘಕಾಲದ ಬಂಧನಗಳಿಗೆ ಅನುವು ಮಾಡಿಕೊಡುತ್ತದೆ. ಇಷ್ಟೆಲ್ಲ ಇದ್ದರೂ ಭಾರತದಲ್ಲಿ ಚಿತ್ರಹಿಂಸೆ ಅಥವಾ CIDTP (ಕ್ರೂರ, ಅಮಾನವೀಯ ಅಥವಾ ಅವಮಾನಕರ ಶಿಕ್ಷೆ) ಯನ್ನು ಅಪರಾಧ ಎಂದು ವರ್ಗೀಕರಿಸಿ ಅದಕ್ಕೆ ಶಿಕ್ಷೆ ನೀಡುವ ಯಾವುದೇ ಕಾನೂನು ಇಲ್ಲ. ದೇಶ ಇನ್ನೂ ವಿಶ್ವಸಂಸ್ಥೆಯ ಚಿತ್ರಹಿಂಸೆ ವಿರುದ್ಧದ ಸನ್ನದು (UNCAT) ಅಥವಾ ಅದರ ಐಚ್ಛಿಕ ಪ್ರೋಟೋಕಾಲ್ ಅನ್ನು ಅಂಗೀಕರಿಸಿಲ್ಲ.

ಇಲ್ಲಿ ಚಿತ್ರಹಿಂಸೆಯನ್ನು ಎದುರಿಸಲು ರಾಜಕೀಯ ಇಚ್ಛಾಶಕ್ತಿ ಇಲ್ಲ. ಬಂಧನದಲ್ಲಿರುವಾಗ ಚಿತ್ರಹಿಂಸೆಯಿಂದ ಸ್ವಾತಂತ್ರ್ಯ ಇಲ್ಲ. ಬಲಿಪಶುಗಳ ಹಕ್ಕುಗಳನ್ನು ಪಟ್ಟು ಹಿಡಿದು ಜಾರಿ ಮಾಡುವುದು ಕಷ್ಟ. ಈ ಸಮೀಕ್ಷೆಯಲ್ಲಿ ದೇಶಗಳನ್ನು ಅತಿ ಹೆಚ್ಚಿನ ಅಪಾಯ, ಹೆಚ್ಚಿನ ಅಪಾಯ, ಗಣನೀಯ ಅಪಾಯ, ಮಧ್ಯಮ ಅಪಾಯ ಹಾಗೂ ಕಡಿಮೆ ಅಪಾಯದ ದೇಶಗಳೆಂದು ವರ್ಗೀಕರಿಸಲಾಗಿದೆ. ಭಾರತ ಅತಿ ಹೆಚ್ಚಿನ ಅಪಾಯದಲ್ಲಿದೆ. ಪಟ್ಟಿಯಲ್ಲಿರುವ ಯಾವುದೇ ದೇಶವೂ ಕಡಿಮೆ ಅಪಾಯದಲ್ಲಿಲ್ಲ.

Live-Streaming Racket: ಮುಖಕ್ಕೆ ಮಾಸ್ಕ್ ಧರಿಸಿ ಲೈವ್ ಸ್ಟ್ರೀಮಿಂಗ್‌ನಲ್ಲಿ ದಂಪತಿ ತೋರಿಸಿದ್ದೇನು? ಪೊಲೀಸರಿಂದ ಬಂಧನ

 

 

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್