
ಒಡಿಶಾ (ಮೇ.21) ಕಾಡಾನೆಗಳು ನಾಡಿಗೆ ಬರುವುದು, ಅಥವಾ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ, ಕಾಡು ರಸ್ತೆಗಳಲ್ಲಿ ಕಾಡಾನೆ ಎದುರಿಗೆ ಬಂದು ಅವಘಡ ಸಂಭವಿಸಿದ ಹಲವು ಘಟನೆಗಳಿವೆ. ರಸ್ತೆಗಳಲ್ಲಿ ಸಾಗುವಾಗ ಕಾಡಾನೆ ಮುಂದೆ ಸಾಹಸ ಪ್ರದರ್ಶಿಸಲು ಹೋಗಿ ಅಪಾಯ ಎದುರಿಸಿದವರೂ ಇದ್ದಾರೆ. ಆದರೆ ಇಲ್ಲೊಂದು ವಿಶೇಷ ಘಟನೆ ನಡೆದಿದೆ. ಕಾಡಾನೆ ಮಾರುದ್ದ ದೂರದಲ್ಲಿದೆ. ಇತ್ತ ಬರಲು ದೊಡ್ಡ ಕಂದಕವಿದೆ. ಹೀಗಾಗಿ ವ್ಯಕ್ತಿಯೊಬ್ಬ ಕಾಡಾನೆ ಮುಂದೆ ಬಾಲಿವುಡ್ ಸಾಂಗ್ ಹಾಕಿ ಡ್ಯಾನ್ಸ್ ಮಾಡಿದ್ದಾನೆ. ಅತ್ತ ಕಾಡಾನೆ ದಾಳಿಗೆ ಪ್ರಯತ್ನಿಸುವ ಬದಲು ಆತನ ಜೊತೆ ಸ್ಟೆಪ್ಸ್ ಹಾಕಿದ ವಿಡಿಯೋ ಭಾರಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮನುಷ್ಯ ಮತ್ತು ಆನೆಗಳ ಮಧ್ಯೆ ಸಂಘರ್ಷದ ಸುದ್ದಿಗಳೇ ಹೆಚ್ಚು. ಆದ್ರೆ, ಒಡಿಶಾದಲ್ಲಿ ಒಂದು ಮನಸ್ಸು ಮುಟ್ಟುವಂಥ ಘಟನೆ ನಡೆದಿದೆ. ಇಲ್ಲಿ ಕಾಡಾನೆಯೊಂದು ಮನುಷ್ಯನ ಜೊತೆ ಖುಷಿಯಿಂದ ಡ್ಯಾನ್ಸ್ ಮಾಡಿರೋ ಹಾಗೆ ಕಾಣಿಸಿದೆ. ಬೆಂಕಿ ಹಚ್ಚಿ, ಪಟಾಕಿ ಸಿಡಿಸಿ ಆನೆಗಳನ್ನು ಓಡಿಸೋ ದೃಶ್ಯಗಳ ಮಧ್ಯೆ ಈ ವೈರಲ್ ವಿಡಿಯೋ ಒಂದು ಹೊಸ ಭರವಸೆ ಮೂಡಿಸಿದೆ. ಆನೆ ಮುಂದೆ ವ್ಯಕ್ತಿ ಸ್ಟೆಪ್ಸ್ ಹಾಕಿದ್ದಾನೆ. ಇತ್ತ ಕಾಡಾನೆ ಕೂಡ ಆತನ ಜೊತೆ ಹೆಜ್ಜೆ ಹಾಕಿದೆ.
ವಿಡಿಯೋದಲ್ಲಿ, ಕಾಡಾನೆಯೊಂದನ್ನು ನೋಡಲು ಜನ ಸೇರಿದ್ದಾರೆ. ಆಗ ಗುಂಪಿನಲ್ಲಿದ್ದ ಯುವಕನೊಬ್ಬ ಆ ಆನೆಗೆ ಪ್ರೀತಿಯಿಂದ 'ರಾಜು' ಅಂತ ಕರೆದು, ಅದರ ಮುಂದೆ ಡ್ಯಾನ್ಸ್ ಮಾಡಲು ಶುರುಮಾಡುತ್ತಾನೆ. ಇದನ್ನು ನೋಡಿದ ಜನರಿಗೆ ಅಚ್ಚರಿಯಾಗಿದ್ದು, ಆನೆಯೂ ಕೂಡ ಆತನ ಹೆಜ್ಜೆಗಳಿಗೆ ತಕ್ಕಂತೆ ತಲೆ ಆಡಿಸುತ್ತಾ ಲಯಬದ್ಧವಾಗಿ ಚಲಿಸಲು ಶುರುಮಾಡಿದೆ.
ಇಲ್ಲಿ ಜನ ಆನೆಗೆ ಯಾವುದೇ ತೊಂದರೆ ಕೊಡಲಿಲ್ಲ. ಬದಲಾಗಿ, ಅದನ್ನು ನಿಧಾನವಾಗಿ ಕಾಡಿನ ಕಡೆಗೆ ವಾಪಸ್ ಕಳುಹಿಸಿದ್ದಾರೆ. ಈ ಆಟದಂಥ ಸನ್ನಿವೇಶ ಅಲ್ಲಿದ್ದ ಜನರಿಗೆ ಖುಷಿ ಮತ್ತು ಅಚ್ಚರಿ ಎರಡನ್ನೂ ತಂದಿದೆ. ಆನೆಗಳು ಹಳ್ಳಿಗಳಿಗೆ ನುಗ್ಗಿ ದಾಂಧಲೆ ಮಾಡುವುದು ಅಥವಾ ನೀರಿನಲ್ಲಿ ಆಟವಾಡುವುದು ಸಾಮಾನ್ಯ. ಆದರೆ, ಈ ರೀತಿ ಖುಷಿಯಿಂದ, ಆರಾಮಾಗಿ ಇರುವುದನ್ನು ನೋಡುವುದೇ ಅಪರೂಪ. ಇದೇ ಕಾರಣಕ್ಕೆ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಅನ್ನೋದರ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ಆದರೆ, ವಿಡಿಯೋದಲ್ಲಿ ಕೇಳಿಬರುವ ಮಾತುಗಳು ಮತ್ತು ಸುತ್ತಮುತ್ತಲಿನ ಪರಿಸರ ನೋಡಿದರೆ, ಇದು ಒಡಿಶಾದ ಕಿಯೋಂಜಾರ್ ಜಿಲ್ಲೆಯ ಚಂಪುವಾ ಪ್ರದೇಶದಲ್ಲಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.