
ಶಾಂಘೈ: ಚೀನಾದ ಶಾಂಘೈನ 19 ವರ್ಷದ ವಿದ್ಯಾರ್ಥಿಯೊಬ್ಬ ತನ್ನ 20 ಮಿಲಿಯನ್ ಯುವಾನ್ (ಸುಮಾರು ₹25 ಕೋಟಿ) ಮೌಲ್ಯದ ಆಸ್ತಿಯನ್ನು ಹೆತ್ತ ಕುಟುಂಬಕ್ಕೆ ನೀಡುವ ಬದಲು, ತನ್ನ ಬಾಲ್ಯದ ಗೆಳೆಯನಿಗೆ ವಿಲ್ (ಮರಣಶಾಸನ) ಮೂಲಕ ಬರೆದುಕೊಟ್ಟಿರುವುದು ಅಂತರ್ಜಾಲದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಲಿ ಎಂಬ ಉಪನಾಮದ ಈ ಯುವಕ, ತನಗೆ ಏನಾದರೂ ಸಂಭವಿಸಿದರೆ ತನ್ನ ಆಸ್ತಿ ಯಾರಿಗೆ ಸೇರಬೇಕು ಎಂಬ ಕಾಳಜಿಯಿಂದ ಈ ಕಠಿಣ ನಿರ್ಧಾರ ತಡೆದುಕೊಂಡಿದ್ದಾನೆ. ಲಿ ಅವರ ಆಸ್ತಿಯು ಲಕ್ಷಾಂತರ ಯುವಾನ್ ಮೌಲ್ಯದ ಫ್ಲಾಟ್ ಮತ್ತು ಬ್ಯಾಂಕ್ ಉಳಿತಾಯವನ್ನು ಒಳಗೊಂಡಿದೆ.
ನಿರ್ಧಾರಕ್ಕೆ ಕಾರಣವೇನು?
ಲಿ ಅವರ ಪೋಷಕರು ವಿಚ್ಛೇದನ ಪಡೆದು, ಬೇರೆ ಮದುವೆಯಾಗಿದ್ದಾರೆ. ಆಸ್ತಿಯನ್ನು ಲಿ ಹೆಸರಿಗೆ ವರ್ಗಾಯಿಸಿದ್ದರೂ, ಪೋಷಕರು ಆತನ ಪಾಲನೆಯಲ್ಲಿ ಭಾಗಿಯಾಗಿರಲಿಲ್ಲ ಮತ್ತು ಭಾವನಾತ್ಮಕವಾಗಿ ದೂರವಾಗಿದ್ದರು. ತಾನು ಸಾಹಸ ಕ್ರೀಡೆಗಳ (Extreme Sports) ಹವ್ಯಾಸಿ ಆಗಿರುವುದರಿಂದ ಜೀವಕ್ಕೆ ನಿರಂತರ ಅಪಾಯವಿದೆ ಎಂದು ಲಿ ಭಾವಿಸಿದ್ದಾನೆ. ಪೋಷಕರ ಪ್ರಸ್ತುತ ಸಂಗಾತಿಗಳು ತನಗೆ ಅಪರಿಚಿತರಾಗಿದ್ದು, ತನ್ನ ಆಸ್ತಿ ಅವರಿಗೆ ಸೇರುವುದು ಆತನಿಗೆ ಇಷ್ಟವಿರಲಿಲ್ಲ. ಹಾಗಾಗಿ, ತಾನು ನಂಬುವ ಬಾಲ್ಯದ ಸ್ನೇಹಿತನನ್ನು ಏಕೈಕ ಫಲಾನುಭವಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾನೆ.
ಚೀನಾ ಕಾನೂನು ಏನು ಹೇಳುತ್ತದೆ?
ಚೀನಾದ ಉತ್ತರಾಧಿಕಾರಿ ಕಾನೂನಿನ ಪ್ರಕಾರ, ಪೋಷಕರು ಆಸ್ತಿ ಪಡೆದರೆ ಅವರ ಸಂಗಾತಿಗಳಿಗೂ ಅದರಲ್ಲಿ ಹಕ್ಕು ಸಿಗುತ್ತದೆ. ಆದರೆ, ಕಾನೂನುಬದ್ಧ ಉತ್ತರಾಧಿಕಾರಿಗಳ ಹೊರತಾಗಿಯೂ ಬೇರೆಯವರಿಗೆ ಆಸ್ತಿ ನೀಡಲು ಚೀನಾ ಕಾನೂನಿನಲ್ಲಿ ಅವಕಾಶವಿದೆ. ಲಿ 'ಚೀನಾ ವಿಲ್ ನೋಂದಣಿ ಕೇಂದ್ರ'ಕ್ಕೆ ಭೇಟಿ ನೀಡಿ ನೋಟರೈಸ್ಡ್ ವಿಲ್ ಪ್ರಕ್ರಿಯೆ ಮುಗಿಸಿದ್ದಾನೆ. ನಿಯಮದ ಪ್ರಕಾರ, ಲಿ ಮರಣ ಹೊಂದಿದ 60 ದಿನಗಳ ಒಳಗಾಗಿ ಆತನ ಸ್ನೇಹಿತ ಕಾನೂನುಬದ್ಧವಾಗಿ ಆಸ್ತಿಯನ್ನು ಸ್ವೀಕರಿಸಬೇಕು, ಇಲ್ಲದಿದ್ದರೆ ಹಕ್ಕು ರದ್ದಾಗುತ್ತದೆ.
ಯುವ ಪೀಳಿಗೆಯಲ್ಲಿ ಹೆಚ್ಚುತ್ತಿರುವ ಪ್ರವೃತ್ತಿ:
ಚೀನಾದಲ್ಲಿ ವಿಲ್ ಬರೆಯುವವರ ಸರಾಸರಿ ವಯಸ್ಸು 77 ರಿಂದ 67 ಕ್ಕೆ ಇಳಿದಿದೆ ಎಂದು ಚೀನಾ ವಿಲ್ ನೋಂದಣಿ ಕೇಂದ್ರ ತಿಳಿಸಿದೆ. 1980, 90 ಮತ್ತು 2000ರ ದಶಕದಲ್ಲಿ ಜನಿಸಿದ ಯುವಕರು ಹೆಚ್ಚಾಗಿ ವಿಲ್ ಮಾಡುತ್ತಿದ್ದಾರೆ. ಮದುವೆಗೆ ಮುನ್ನ ಆಸ್ತಿ ರಕ್ಷಿಸಿಕೊಳ್ಳಲು ಅಥವಾ ಮಕ್ಕಳಿಲ್ಲದ ಒಂಟಿ ಯುವಕರು ತಮ್ಮ ಆಸ್ತಿ ಯಾರಿಗೆ ಸೇರಬೇಕೆಂದು ನಿರ್ಧರಿಸಲು ಈಗ ವಿಲ್ ಬರೆಯುತ್ತಿದ್ದಾರೆ. ಲಿ ಅವರ ಈ ಆಸ್ತಿ ಹಂಚಿಕೆಯ ನಿರ್ಧಾರವು ಕೌಟುಂಬಿಕ ಸಂಬಂಧಗಳು ಮತ್ತು ಯುವಕರ ಬದಲಾಗುತ್ತಿರುವ ಆರ್ಥಿಕ ಚಿಂತನೆಗಳ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.