
ದುಬೈ ಎಂದರೆ ಅನೇಕರಿಗೆ ತೆರಿಗೆ ರಹಿತ ಸಂಬಳ, ಐಷಾರಾಮಿ ಜೀವನ ಮತ್ತು ಉತ್ತಮ ಉದ್ಯೋಗಾವಕಾಶಗಳ ಕನಸು. ಆದರೆ ಆ ಕನಸಿನ ಹಿಂದೆ ಅಡಗಿರುವ ಭಾವನಾತ್ಮಕ ಬೆಲೆ ಬಗ್ಗೆ ಯಾರೂ ಹೆಚ್ಚು ಮಾತನಾಡುವುದಿಲ್ಲ. ಇದೀಗ ದುಬೈನಲ್ಲಿ ಒಂಟಿಯಾಗಿ ವಾಸಿಸುತ್ತಿರುವ 23 ವರ್ಷದ ಭಾರತೀಯ ಯುವತಿ ಅನುಷ್ಕಾ ಶರ್ಮಾ ತಮ್ಮ ಅನುಭವವನ್ನು ಇನ್‌ಸ್ಟಾಗ್ರಾಂ ವಿಡಿಯೋ ಮೂಲಕ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
"ಜನರು ದುಬೈನಲ್ಲಿ ಸಿಗುವ ಟ್ಯಾಕ್ಸ್ ಫ್ರೀ ಸಂಬಳವನ್ನಷ್ಟೇ ನೋಡುತ್ತಾರೆ. ಆದರೆ ಇಲ್ಲಿ ಬದುಕಲು ನಾವು ತೆರಬೇಕಾದ ನಿಜವಾದ ಬೆಲೆ ಯಾರಿಗೂ ಗೊತ್ತಿಲ್ಲ" ಎಂದು ಅನುಷ್ಕಾ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ಅವರ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ದುಬೈ ಜೀವನ ಎಂದರೆ ವಾರಾಂತ್ಯದ ಟ್ರಿಪ್‌ಗಳು, ಐಷಾರಾಮಿ ಕಟ್ಟಡಗಳು, ಉತ್ತಮ ಉದ್ಯೋಗ ಮತ್ತು ಯಶಸ್ಸಿನ ಕಥೆಗಳಷ್ಟೇ ಕಾಣಿಸುತ್ತವೆ. ಆದರೆ ಕುಟುಂಬದಿಂದ ದೂರವಿರುವ ನೋವು, ಮನೆ ಹಂಬಲ, ಒಂಟಿತನ ಮತ್ತು ಪ್ರತಿಯೊಂದು ಕೆಲಸವನ್ನೂ ಸ್ವತಃ ಮಾಡಿಕೊಳ್ಳಬೇಕಾದ ಪರಿಸ್ಥಿತಿಯ ಬಗ್ಗೆ ಯಾರೂ ಮಾತನಾಡುವುದಿಲ್ಲ.
ಅನುಷ್ಕಾ ಹೇಳುವಂತೆ, ಕುಟುಂಬದ ಪ್ರಮುಖ ಕ್ಷಣಗಳನ್ನು ಕಳೆದುಕೊಳ್ಳುವುದು, ಕಾರ್ಪೊರೇಟ್ ಕೆಲಸದ ನಂತರ ಮನೆಗೆ ಬಂದು ಅಡುಗೆ, ಮನೆಕೆಲಸ ಸೇರಿದಂತೆ ಎಲ್ಲ ಜವಾಬ್ದಾರಿಗಳನ್ನು ಒಬ್ಬರೇ ನಿಭಾಯಿಸುವುದು ಹಾಗೂ ಹಠಾತ್ ಮನೆ ನೆನಪಾಗಿ ಮನಸ್ಸು ಕುಗ್ಗುವುದು ವಿದೇಶದಲ್ಲಿ ಒಂಟಿಯಾಗಿ ಬದುಕುವವರಿಗೆ ದೊಡ್ಡ ಸವಾಲಾಗಿದೆ.
ಆದರೆ ಈ ಎಲ್ಲ ಕಷ್ಟಗಳ ನಡುವೆಯೂ ಅವರು ಆಶಾವಾದಿಯಾಗಿದ್ದಾರೆ. "ನೀವು ಏಕೆ ಈ ಪ್ರಯಾಣ ಆರಂಭಿಸಿದ್ದೀರಿ ಎಂಬುದನ್ನು ಎಂದಿಗೂ ಮರೆಯಬೇಡಿ. ಇಂದು ಆರಾಮದಾಯಕ ಜೀವನವನ್ನು ಬಿಟ್ಟು ಮಾಡುವ ತ್ಯಾಗವೇ ನಾಳೆ ಆರ್ಥಿಕ ಸ್ವಾತಂತ್ರ್ಯ ಮತ್ತು ನಿಮ್ಮ ಕುಟುಂಬಕ್ಕೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡುತ್ತದೆ. ನಿಮ್ಮ ಪ್ರತಿಯೊಂದು ತ್ಯಾಗವೂ ನಿಮ್ಮ ಕನಸಿನ ಸಾಮ್ರಾಜ್ಯವನ್ನು ನಿರ್ಮಿಸುತ್ತಿದೆ" ಎಂಬ ಸಂದೇಶವನ್ನು ಅವರು ಹಂಚಿಕೊಂಡಿದ್ದಾರೆ.
ಅವರ ಈ ವಿಡಿಯೋಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವ ಅನೇಕ ಭಾರತೀಯರು ತಮ್ಮ ಅನುಭವವೂ ಇದೇ ರೀತಿ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಲವರು ಅನುಷ್ಕಾ ಅವರ ಪ್ರಾಮಾಣಿಕ ಮಾತುಗಳನ್ನು ಮೆಚ್ಚಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಐಷಾರಾಮಿ ಜೀವನದ ಹಿಂದೆ ಇರುವ ನಿಜ ಜೀವನವನ್ನು ಅವರು ಧೈರ್ಯವಾಗಿ ಹಂಚಿಕೊಂಡಿದ್ದಾರೆ ಎಂದು ಪ್ರಶಂಸಿಸಿದ್ದಾರೆ.