10 ಗಂಟೆಗೆ ಸಂಬಳ, 10.05ಕ್ಕೆ ರಾಜೀನಾಮೆ- ಏನಿದು! ಎಚ್‌ಆರ್‌ ಅಧಿಕಾರಿ ಪೋಸ್ಟ್‌ ವೈರಲ್‌

Published : Aug 13, 2025, 09:15 PM IST
resignation

ಸಾರಾಂಶ

ಮೊದಲ ಸಂಬಳ ಬಂದ ಐದು ನಿಮಿಷದಲ್ಲೇ ರಾಜೀನಾಮೆ ನೀಡಿದ ಉದ್ಯೋಗಿಯ ಬಗ್ಗೆ ಒಬ್ಬ ಎಚ್‌ಆರ್ ಅಧಿಕಾರಿಯ ಲಿಂಕ್ಡ್‌ಇನ್ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ಹೊಸ ತಲೆಮಾರಿನ ಉದ್ಯೋಗಿಗಳ ಕೆಲಸದ ಬಗೆಗಿನ ಬದ್ಧತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ನೀವು ಉದ್ಯೋಗಿಗಳಾಗಿದ್ದಾರೆ ಇದು ನಿಮಗೆ ಗೊತ್ತೇ ಇರುತ್ತದೆ- ಹೊಸ ತಲೆಮಾರಿನವರಲ್ಲಿ ಕೆಲವರಾದರೂ ದಿಡೀರ್‌ ಎಂದು ಕೆಲಸಕ್ಕೆ ರಿಸೈನ್‌ ಮಾಡುತ್ತಾರೆ. ಅದೂ ಹೇಗೆ? ಇಂದು ಬೆಳಗ್ಗೆ ಕಳೆದ ತಿಂಗಳ ಸಂಬಳ ಬಂದಿರುತ್ತದೆ. ಮಧ್ಯಾಹ್ನದ ಹೊತ್ತಿಗೆ ರಾಜೀನಾಮೆ ಕೊಟ್ಟು ಹೊರನಡೆದಿರುತ್ತಾರೆ. ಅಂದರೆ ರಿಸೈನ್‌ ಮಾಡೋಕೆ, ಸಂಬಳ ಬರುವ ಕ್ಷಣಕ್ಕಾಗಿಯೇ ಕಾದಿರುತ್ತಾರೆ. ಹೆಚ್ಚಾಗಿ ಜೆನ್‌ ಝೀ ಉದ್ಯೋಗಿಗಳಲ್ಲಿ ಈ ಪ್ರವೃತ್ತಿಯನ್ನು ನೋಡಬಹುದು. ಇವರು ಉದ್ಯೋಗವನ್ನು ಸೀರಿಯಸ್ಸಾಗಿ ಪರಿಗಣಿಸಿರುವುದಿಲ್ಲ. ಅಥವಾ ಬೇರೊಂದು ಕೆಲಸವನ್ನು ಈಗಾಗಲೇ ನೋಡಿಕೊಂಡಿರುತ್ತಾರೆ. ಇಲ್ಲಿ ತೊರೆದ ಕೂಡಲೇ ಅಲ್ಲಿ ಜಾಯಿನ್‌ ಆಗುತ್ತಾರೆ. ಅಥವಾ ಕೆಲಸ ಬಿಟ್ಟು ತಮ್ಮ ಹವ್ಯಾಸಗಳ ಕಡೆಗೆ ಹೋಗುತ್ತಾರೆ. ಆದರೆ ಇದರಿಂದ ತಾವು ಕೆಲಸ ಬಿಡುವ ಕಂಪನಿಗಳಿಗೆ ಆಗುವ ತೊಂದರೆಯ ಬಗ್ಗೆ ಅವರ ಗಮನ ಕನಿಷ್ಠ.

ಇಂಥದೊಂದು ಪ್ರವೃತ್ತಿಯ ಬಗ್ಗೆ ಭಾರತದ ಕಂಪನಿಯೊಂದರ ಮಾನವ ಸಂಪನ್ಮೂಲ (ಎಚ್‌ಆರ್‌) ಅಧಿಕಾರಿಯೊಬ್ಬರು ಲಿಂಕ್ಡ್‌ಇನ್ ನಲ್ಲಿ ಮಾಡಿ ಪೋಸ್ಟ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಪೋಸ್ಟ್, ತಮ್ಮ ಮೊದಲ ಸಂಬಳ ಪಡೆದ ಕೇವಲ ಐದು ನಿಮಿಷಗಳಲ್ಲಿ ರಾಜೀನಾಮೆ ನೀಡಿದ ಉದ್ಯೋಗಿಯ ಬಗ್ಗೆ ಇದೆ. ಹೌದು! ಈತ ಮೊದಲ ಸಂಬಳ ಬಂದ ಕೂಡಲೇ ಕೆಲಸಕ್ಕೆ ರೈಡ್‌ ಹೇಳಿದ್ದ.

“ಬೆಳಿಗ್ಗೆ 10:00 ಗಂಟೆಗೆ ಸಂಬಳ ಜಮಾ ಮಾಡಲಾಗಿದೆ, ಬೆಳಿಗ್ಗೆ 10:05 ಕ್ಕೆ ಆತನ ರಾಜೀನಾಮೆ ಇಮೇಲ್ ಮಾಡಲಾಗಿದೆ” ಎಂದು ಮಾನವ ಸಂಪನ್ಮೂಲ ವೃತ್ತಿಪರರು ಬರೆದಿದ್ದಾರೆ. ಹೊಸ ನೇಮಕಾತಿಗಾಗಿ ಆನ್‌ಬೋರ್ಡಿಂಗ್ ಇಂಟರ್‌ವ್ಯೂಗಳು ಮತ್ತು ಕೆಲಸಗಾರನಿಗೆ ಮಾರ್ಗದರ್ಶನಕ್ಕಾಗಿ ವ್ಯಯಿಸಿದ ಸಮಯ, ಉಪಯೋಗಿಸಿದ ಮಾನವ ಸಂಪನ್ಮೂಲ ಇದ್ಯಾವುದಕ್ಕೂ ಬೆಲೆಯೇ ಇಲ್ಲವ ಎಂದು ಕೇಳಿದ್ದಾರೆ. ಎಂಪ್ಲಾಯಿಗಳ ತರಬೇತಿ ತಂಡಗಳಿಗೆ ಆಗುವ ನಿರಾಶೆಯನ್ನು ಎತ್ತಿ ತೋರಿಸಿದ್ದಾರೆ.

ಪೋಸ್ಟ್‌ನಲ್ಲಿ, ಮಾನವ ಸಂಪನ್ಮೂಲ ವೃತ್ತಿಪರರು ಇಂತಹ ಹಠಾತ್ ನಿರ್ಗಮನದ ಹಿಂದಿನ ನೈತಿಕತೆಯನ್ನು ಪ್ರಶ್ನಿಸಿದ್ದಾರೆ. “ಇದರ ಪ್ರೊಫೆಷನಲ್‌ ನೈತಿಕತೆ ಏನು? ಕಂಪನಿಯು ನಿಮ್ಮನ್ನು ಸ್ವಾಗತಿಸಿತು, ನಿಮ್ಮನ್ನು ನಂಬಿತು ಮತ್ತು ಬೆಳೆಯಲು ನಿಮಗೆ ವೇದಿಕೆಯನ್ನು ನೀಡಿತು. ತದನಂತರ- ನಿಮ್ಮ ಮೊದಲ ಸಂಬಳವು ನಿಮ್ಮ ಖಾತೆಗೆ ಜಮಾ ಆದ ಐದು ನಿಮಿಷಗಳ ನಂತರ- ನೀವು ಹೊರನಡೆದಿದ್ದೀರಿ. ಇದು ನ್ಯಾಯಯುತವೇ? ಇದು ನೈತಿಕವೇ?” ಎಂದು ಅವರು ಬರೆದಿದ್ದಾರೆ.

ಕೊನೆಯ ನಿಮಿಷದ ರಾಜೀನಾಮೆಗಳು ಹೆಚ್ಚಾಗಿ “ಉದ್ದೇಶ, ಪ್ರಬುದ್ಧತೆ ಮತ್ತು ಹೊಣೆಗಾರಿಕೆಯ ಕೊರತೆಯನ್ನು” ಪ್ರದರ್ಶಿಸುತ್ತವೆ ಮತ್ತು ಮುಕ್ತ ಸಂವಹನದ ಮಹತ್ವವನ್ನು ಒತ್ತಿಹೇಳುತ್ತವೆ ಎಂದು ಅವರು ಹೇಳಿದರು. "ನಿಮಗೆ ಕೆಲಸದ ಬಗ್ಗೆ ಏನಾದರೂ ಸರಿ ಅನಿಸದಿದ್ದರೆ ನೀವು ನಮ್ಮ ಜೊತೆ ಮಾತನಾಡಬಹುದಿತ್ತು. ನೀವು ಸ್ಪಷ್ಟತೆ ಅಥವಾ ಸಹಾಯವನ್ನು ಕೇಳಬಹುದಿತ್ತು. ನೀವು ಪ್ರಜ್ಞಾಪೂರ್ವಕ ನಿರ್ಗಮನ ತೆಗೆದುಕೊಳ್ಳಬಹುದಿತ್ತು" ಎಂದು ಅವರು ಹೇಳಿದ್ದಾರೆ.

ಯಾವುದೇ ಕೆಲಸವು ಸವಾಲುಗಳಿಲ್ಲದೆ ಇರುವುದಿಲ್ಲ. ನಿಜವಾದ ವೃತ್ತಿಪರ ಬೆಳವಣಿಗೆ ಸಂಬಳವನ್ನು ಪಡೆಯುವುದಕ್ಕಿಂತ ಹೆಚ್ಚಿನದನ್ನು ಬಯಸುತ್ತದೆ. ಯಾವುದೇ ಕೆಲಸವು ಸುಲಭವಲ್ಲ. ಪ್ರತಿಯೊಂದು ಪಾತ್ರಕ್ಕೂ ಬದ್ಧತೆ, ತಾಳ್ಮೆ ಮತ್ತು ಪ್ರಯತ್ನ ಬೇಕಾಗುತ್ತದೆ. ಬೆಳವಣಿಗೆ ನಿಮ್ಮ ಮೊದಲ ಸಂಬಳದೊಂದಿಗೆ ಬರುವುದಿಲ್ಲ- ಅದು ಪರಿಶ್ರಮದಿಂದ ಬರುತ್ತದೆ ಎಂದು ಅವರು ಬರೆದಿದ್ದಾರೆ.

ವೃತ್ತಿಪರರು ತಮ್ಮ ವೃತ್ತಿ ನಿರ್ಧಾರಗಳಿಗೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಕಂಪನಿಯ ವರ್ಕ್‌ ಕಲ್ಚರ್‌ ಬಗ್ಗೆ ಅಥವಾ ಬೇರೇನೋ ವಿಷಯದತ್ತ ಬೆರಳು ತೋರಿಸುವ ಮೊದಲು ಸ್ಪಷ್ಟವಾಗಿ ಯೋಚಿಸಿ. ಸಂವಹನ ನಡೆಸಿ. ಏಕೆಂದರೆ ಕೊನೆಯಲ್ಲಿ ನಿಮ್ಮ ವೃತ್ತಿಪರತೆಯನ್ನು ನಿಮ್ಮ ಹುದ್ದೆಯಿಂದಲ್ಲ ಬದಲು ನಿಮ್ಮ ಕ್ರಿಯೆಗಳಿಂದ ವ್ಯಾಖ್ಯಾನಿಸಲಾಗುತ್ತದೆ ಎಂದು ಬರೆದಿದ್ದಾರೆ.

ಈ ಪೋಸ್ಟ್‌ ಸ್ವಾರಸ್ಯಕರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಹಲವಾರು ಲಿಂಕ್ಡ್‌ಇನ್ ಬಳಕೆದಾರರು ಈ ವಿಷಯದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. "ಆ ವ್ಯಕ್ತಿ ತಪ್ಪು ಮಾಡಿದ್ದಾನೆ. ಆದರೆ ನೀವು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ವಿಷಯಗಳನ್ನು ಪೋಸ್ಟ್ ಮಾಡಬಾರದು. ಇದು ನಿಮ್ಮ ಅಪ್ರಬುದ್ಧತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

"ಇದರ ನೀತಿಯೇ? ಸ್ಪಷ್ಟವಾಗಿ ಹೇಳಬೇಕೆಂದಿದ್ದರೆ, ಅವರು ಮಾಡಿದ ಕೆಲಸಕ್ಕೆ ಸಂಬಳ ಪಡೆದಿದ್ದಾರೆ. ನೀವು ಕೊಟ್ಟದ್ದು ದಾನ ಅಲ್ಲ, ಅಡ್ವಾನ್ಸ್‌ ಅಲ್ಲ. ಯಾರಾದರೂ ಸಂಬಳ ಪಡೆದ ನಂತರ ರಾಜೀನಾಮೆ ನೀಡಿದರೆ, ಅವರು ಆ ತಿಂಗಳಿಗೆ ತಮ್ಮ ಬಾಧ್ಯತೆಯನ್ನು ಪೂರೈಸಿದ್ದಾರೆ ಎಂದರ್ಥʼ ಎಂದು ಮತ್ತೊಬ್ಬರು ಆ ಎಂಪ್ಲಾಯಿ ಪರ ಬರೆದಿದ್ದಾರೆ. ʼನಾವು ಇಲ್ಲಿ ಮರೆಯಬಾರದ ಸಂಗತಿ ಅಂದರೆ ಸಾಮಾನ್ಯವಾಗಿ ನೋಟಿಸ್ ಅವಧಿಯನ್ನು ಇನ್ನೂ ಪೂರೈಸಬೇಕಾಗಿದೆ. ಇಲ್ಲಿ ಕಂಪನಿಯ ನೋಟೀಸ್‌ ಅವಧಿಯ ಕೆಲಸ ಬಯಸುವುದು ಸಹಜ. ಆದರೆ ಕಂಪನಿಗಳು ಉದ್ಯೋಗಿಗಳಿಂದ ಜೀವಮಾನದ ನಿಷ್ಠೆಯನ್ನು ಬಯಸಿದರೆ, ಬಹುಶಃ ಅವರು ಮದುವೆ ಪ್ರಮಾಣಪತ್ರಗಳನ್ನು ನೀಡಬೇಕು, ಉದ್ಯೋಗಪತ್ರಗಳನ್ನು ನೀಡಬಾರದು" ಎಂದಿದ್ದಾರೆ ಒಬ್ಬರು.

"ಇದು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ. ಉದ್ಯೋಗಿಯೊಬ್ಬರು ಕಂಪನಿಗೆ ಹೀಗೆ ಮಾಡಿದಾಗ, ಕಂಪನಿಯೇನು ಸಾಮಾನ್ಯವಾಗಿ ಕುಸಿಯುವುದಿಲ್ಲ. ಆದರೆ ಒಂದು ಕಂಪನಿಯು ಉದ್ಯೋಗಿಗೆ ಹೀಗೆ ಮಾಡಿದಾಗ, ಅನೇಕ ಬಾರಿ ಇಡೀ ಕುಟುಂಬವೇ ಬೀದಿಗೆ ಬರುತ್ತದೆ. ಆದ್ದರಿಂದ, ದಯವಿಟ್ಟು ಇದನ್ನು ಕೂಡ ನಿಮ್ಮ ಗಮನಕ್ಕೆ ತೆಗೆದುಕೊಳ್ಳಿ" ಎಂದು ಮತ್ತೊಬ್ಬ ಬಳಕೆದಾರರು ಆ ಎಚ್‌ಆರ್‌ ಅನ್ನು ಟೀಕಿಸಿದ್ದಾರೆ.

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್