ಬೆಂಗಳೂರು: ಬೀದಿ ನಾಯಿಯಿಂದ ತಪ್ಪಿಸಿಕೊಳ್ಳಲು ಮನೆ ಗೇಟ್‌ ಹಾರಿ ಕಳ್ಳನಾದ ಟೆಕ್ಕಿ!

Published : Aug 12, 2025, 12:23 PM ISTUpdated : Aug 12, 2025, 12:43 PM IST
stray dog

ಸಾರಾಂಶ

ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರು ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಮನೆಯೊಂದರ ಕಾಂಪೌಂಡ್ ಹಾರಿದಾಗ, ಮನೆಯವರು ಅವರನ್ನು ಕಳ್ಳ ಎಂದು ಭಾವಿಸಿ ಫೋನ್ ಕಸಿದುಕೊಂಡ ಘಟನೆ ನಡೆದಿದೆ. ನೆರೆಹೊರೆಯವರ ಸಿಸಿಟಿವಿ ದೃಶ್ಯಾವಳಿಗಳಿಂದ ಸತ್ಯ ಬಯಲಾದ ನಂತರ ಟೆಕ್ಕಿಯನ್ನು ಬಿಡುಗಡೆ ಮಾಡಲಾಯಿತು.

ಬೆಂಗಳೂರು: ಬೆಂಗಳೂರು ನಗರದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಹೆಚ್ಎಸ್ಆರ್ ಲೇಔಟ್‌ನಲ್ಲಿ ತಡರಾತ್ರಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ರಾತ್ರಿ ಸುಮಾರು 11 ಗಂಟೆಯ ಸಮಯ. ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಒಬ್ಬ ಯುವ ಟೆಕ್ಕಿ (ಐಟಿ ಉದ್ಯೋಗಿ) ಮೇಲೆ ದಾರಿಯಲ್ಲಿ ಇದ್ದ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಲು ಯತ್ನಿಸಿದವು. ಜೀವ ಭಯಕ್ಕೆ ಹೆದರಿದ ಟೆಕ್ಕಿ ತಕ್ಷಣವೇ ಓಡತೊಡಗಿದರು. ನಾಯಿಗಳಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ, ಅವರು ಸಮೀಪದಲ್ಲಿದ್ದ ಮನೆಯೊಂದರ ಕಾಂಪೌಂಡ್ ಗೋಡೆಯ ಮೇಲೆ ಹಾರಿದರು. ಆದರೆ ಒಳಗೆ ಹಾರಿದ ಕೂಡಲೇ ಮನೆಯವರು ಕಳ್ಳನಾಗಿ ಭಾವಿಸಿ ಹಿಡಿದುಕೊಂಡರು.

ಕೋಪಗೊಂಡ ಮನೆಯವರು ಅವರ ಮೊಬೈಲ್‌ನ್ನು ಕಿತ್ತುಕೊಂಡು ಪರಿಶೀಲನೆ ನಡೆಸಿದರು. ನಂತರ ನೆರೆಹೊರೆಯವರ ಸಹಾಯದಿಂದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ನಿಜ ಅಂಶ ಬೆಳಕಿಗೆ ಬಂತು. ಕಳ್ಳ ಬಂದಿದ್ದಲ್ಲ ಟೆಕ್ಕಿ ಎಂಬುದು ಅರ್ಥವಾಯ್ತು. ಅವರು ನಾಯಿಗಳಿಂದ ತಪ್ಪಿಸಿಕೊಳ್ಳಲು ಮಾತ್ರ ಕಾಂಪೌಂಡ್ ಹಾರಿದ್ದರು ಎಂಬುದನ್ನು ದೃಢಪಡಿಸಿಕೊಂಡರು. ನಂತರ ತಪ್ಪು ತಿಳಿದುಕೊಂಡ ಮನೆಯವರು ಕ್ಷಮೆ ಕೇಳಿ, ಅವರನ್ನು ಬಿಟ್ಟು ಕಳಿಸಿದರು. ಈ ಸಂಪೂರ್ಣ ಘಟನೆ ಬಗ್ಗೆ ಟೆಕ್ಕಿಯೇ ತನ್ನ ರೆಡಿಟ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದು ಹಂಚಿಕೊಂಡಿದ್ದು, ಇದೀಗ ಅದು ಸಖತ್ ವೈರಲ್ ಆಗಿದೆ.

ಅವರು ಬರೆದುಕೊಂಡ ಘಟನೆಯ ಸಾರಾಂಶ ಇಂತಿದೆ

ನನ್ನೂರು ಉತ್ತರ ಪ್ರದೇಶ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಿನ್ನೆ ರಾತ್ರಿ ಸುಮಾರು 11:02 ಕ್ಕೆ, ನನ್ನ ಊರಿನಿಂದ 2000 ಕಿ.ಮೀ ದೂರದಲ್ಲಿರುವ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನನಗೆ ಜೀವಕ್ಕೆ ಅಪಾಯವೆನಿಸಿದ ಘಟನೆ ನಡೆದಿದೆ. ನಾನು ಬರುತ್ತಿದ್ದಾಗ, ಇದ್ದಕ್ಕಿದ್ದಂತೆ ಬೀದಿ ನಾಯಿಗಳ ಗುಂಪೊಂದು ನನ್ನನ್ನು ಬೆನ್ನಟ್ಟಲು ಆರಂಭಿಸಿತು. ಭಯದಿಂದ ನಾನು ಓಡಿಹೋಗಿ ಒಂದು ಕಾರಿನ ಹಿಂದೆ ನಿಂತುಕೊಂಡೆ. ಅಲ್ಲಿ ನನಗೆ ಎರಡು ಆಯ್ಕೆಗಳಷ್ಟೇ ಇದ್ದವು. ಒಂದು ಕಾರನ್ನು ದಾಟುವುದು ಅಥವಾ ಹತ್ತಿರದ ಕಟ್ಟಡದ ಗೇಟ್ ಹಾರುವುದು. ನನ್ನನ್ನು ರಕ್ಷಿಸಿಕೊಳ್ಳಲು ನಾನು ಗೇಟ್ ಹಾರಲು ತೀರ್ಮಾನಿಸಿದೆ.

ಕೆಲವೇ ಕ್ಷಣಗಳಲ್ಲಿ, ಆ ಕಟ್ಟಡದ ನಿವಾಸಿಗಳು ಒಬ್ಬ ವಯೋವೃದ್ಧ (ಸುಮಾರು 55-65 ವರ್ಷ), ಅವರ ಪತ್ನಿ ಮತ್ತು ಮಗಳು (ಸುಮಾರು 30-35 ವರ್ಷ) ಹೊರಬಂದರು. ನಾನು ತಕ್ಷಣ ಕ್ಷಮೆಯಾಚಿಸಿ, ನಾಯಿಗಳು ನನ್ನನ್ನು ಬೆನ್ನಟ್ಟುತ್ತಿದ್ದವು, ಬೇರೆ ದಾರಿ ಇರಲಿಲ್ಲ ಎಂದು ವಿವರಿಸಿದೆ. ನನ್ನ ಧ್ವನಿಯಲ್ಲಿ ಭಯ ಮತ್ತು ಕ್ಷಮೆಯಾಚನೆ ಸ್ಪಷ್ಟವಾಗಿತ್ತು. ಆದರೆ ಅವರು ನನ್ನ ಮಾತನ್ನು ನಂಬಲಿಲ್ಲ. "ನಾಯಿಗಳು ಬೆನ್ನಟ್ಟುತ್ತಿದ್ದರೂ, ನಮ್ಮ ಆವರಣದಲ್ಲಿ ಏಕೆ ಪ್ರವೇಶಿಸಿದ್ದೀರಿ? ನಿಮ್ಮ ಪರಿಸ್ಥಿತಿಯ ಬಗ್ಗೆ ನಮಗೆ ಕಾಳಜಿ ಇಲ್ಲ ಎಂದರು. ನಾನು ಅವರಿಗೆ ನನ್ನ ಪ್ಯಾನ್ ಮತ್ತು ಆಧಾರ್ ಸಂಖ್ಯೆ, ವಿಳಾಸ ನೀಡಿದ್ದು ಮಾತ್ರವಲ್ಲ, ನಾನು ಇಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಎಂಬುದನ್ನು ತೋರಿಸಲು ನನ್ನ ಡಾರ್ವಿನ್‌ಬಾಕ್ಸ್ ಪ್ರೊಫೈಲ್ ಸಹ ತೋರಿಸಿದೆ.

ಆದರೂ, ಅವರು ನನ್ನನ್ನು ಕಳ್ಳನೆಂದು ಅನುಮಾನಿಸಲು ಪ್ರಾರಂಭಿಸಿದರು. "ಪುರಾವೆ" ಬೇಕು ಎಂದು ಹೇಳಿ, ನನ್ನ ಫೋನ್ ಅನ್ನು ತಮ್ಮ ಬಳಿ ತೆಗೆದುಕೊಂಡರು. ಪರಿಶೀಲಿಸಿದ ನಂತರ ಹಿಂತಿರುಗಿಸುವುದಾಗಿ ಹೇಳಿದರು. ಆದರೆ ಅವರು, "ನಾಳೆ ಬೆಳಿಗ್ಗೆ ಪರಿಶೀಲಿಸಿದ ನಂತರ ಮಾತ್ರ ಫೋನ್ ಹಿಂತಿರುಗಿಸುತ್ತೇವೆ" ಎಂದರು. ನಾನು ಪದೇಪದೇ, "ಸಿಸಿಟಿವಿ ತಕ್ಷಣ ಪರಿಶೀಲಿಸಿ" ಅಥವಾ "ಪೊಲೀಸರನ್ನು ಕರೆ ಮಾಡಿ" ಎಂದು ಕೇಳಿದೆ. ಅವರು ಎರಡನ್ನೂ ನಿರಾಕರಿಸಿದರು. ಸುಮಾರು 30 ನಿಮಿಷಗಳ ಕಾಲ ನಾನು ಸಂಪೂರ್ಣ ಅಸಹಾಯಕಳಾಗಿ ನಿಂತಿದ್ದೆ, ನನ್ನ ಫೋನ್ ಅವರ ಕೈಯಲ್ಲೇ ಇತ್ತು.

ಕೊನೆಗೆ, ಅವರು ತಮ್ಮ ನೆರೆಹೊರೆಯವರಿಗೆ ಕರೆ ಮಾಡಿ ಸಿಸಿಟಿವಿ ಪರಿಶೀಲಿಸಿದರು. ನೆರೆಹೊರೆಯವರು ನನ್ನ ಮಾತು ಸತ್ಯವೆಂದು ದೃಢಪಡಿಸಿದ ನಂತರವೇ ಆ ವಯೋವೃದ್ಧ ನನ್ನ ಫೋನ್ ಹಿಂತಿರುಗಿಸಿದರು. ನಾನು ನೆರೆಹೊರೆಯವರಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟೆ. ನನಗೆ ತಿಳಿದಿರುವ ಕಾನೂನಿನ ಪ್ರಕಾರ, ಭಾರತದಲ್ಲಿ ತಕ್ಷಣದ ಅಪಾಯದಿಂದ ತಪ್ಪಿಸಿಕೊಳ್ಳಲು ಖಾಸಗಿ ಆಸ್ತಿಗೆ ಅನುಮತಿಯಿಲ್ಲದೆ ಪ್ರವೇಶಿಸಲು ಅವಕಾಶವಿದೆ (ಭಾರತೀಯ ದಂಡ ಸಂಹಿತೆ ಸೆಕ್ಷನ್ 81 ಮತ್ತು ಸೆಕ್ಷನ್ 97 – ಹಾನಿ ತಪ್ಪಿಸಲು ಮಾಡಿದ ಕೃತ್ಯಗಳು). ಅಲ್ಲದೆ, ಪೊಲೀಸರ ಒಳಗೊಳ್ಳುವಿಕೆ ಇಲ್ಲದೆ ನನ್ನ ಫೋನ್ ಅನ್ನು ತಮ್ಮ ಬಳಿ ಇಟ್ಟುಕೊಳ್ಳುವುದು "ಅಪ್ರಾಮಾಣಿಕ ದುರುಪಯೋಗ" (ಸೆಕ್ಷನ್ 403 ಐಪಿಸಿ) ಅಡಿಯಲ್ಲಿ ಬರುತ್ತದೆ. ನಾನು ಕದಿಯಲು ಒಳನುಗ್ಗಿರಲಿಲ್ಲ, ಜೀವಕ್ಕೆ ನೇರ ಅಪಾಯದಿಂದ ತಪ್ಪಿಸಿಕೊಳ್ಳುತ್ತಿದ್ದೆ. ಈ ಘಟನೆ ನನ್ನನ್ನು ಬೆಚ್ಚಿಬೀಳಿಸಿತು. ನಾಯಿಗಳ ದಾಳಿಯಿಂದ ನನ್ನ ಜೀವ ಅಪಾಯದಲ್ಲಿದ್ದರೂ, ಸಹಾನುಭೂತಿಯ ಬದಲು ನನ್ನನ್ನು ಅಪರಾಧಿಯಂತೆ ನಡೆಸಿಕೊಂಡರು.

ನನ್ನ ಪ್ರಶ್ನೆಗಳು:

  • ಆ ಕ್ಷಣದಲ್ಲಿ ನಾನು ಇನ್ನೇನು ಮಾಡಬಹುದಿತ್ತು?
  • ಪರಿಸ್ಥಿತಿ ಇನ್ನಷ್ಟು ಕೆಟ್ಟದ್ದಾಗಿ ಮಾರ್ಪಟ್ಟಿದ್ದರೆ, ನಾನು ಕಾನೂನುಬದ್ಧವಾಗಿ ಏನು ಮಾಡಬಹುದಿತ್ತು?
  • ಇಂತಹ ಸಂದರ್ಭಗಳಲ್ಲಿ ನಾಯಿಗಳ ದಾಳಿ ಮತ್ತು ಜನರ ಅನುಮಾನ ಹೇಗೆ ಎದುರಿಸಬೇಕು?

ರಾತ್ರಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಾಯಿಗಳು ಬೆನ್ನಟ್ಟಿದ ಕಾರಣ ಕಟ್ಟಡದ ಗೇಟ್ ಹಾರಿ ಒಳನುಗ್ಗಿದೆ. ನಿವಾಸಿಗಳು ಕಳ್ಳನೆಂದು ಅನುಮಾನಿಸಿ, 30 ನಿಮಿಷಗಳ ಕಾಲ ಫೋನ್ ಕಸಿದುಕೊಂಡು, ಸಿಸಿಟಿವಿ ಅಥವಾ ಪೊಲೀಸರಿಗೆ ಕರೆ ಮಾಡಲು ನಿರಾಕರಿಸಿದರು. ನೆರೆಹೊರೆಯವರು ದೃಢಪಡಿಸಿದ ನಂತರವೇ ಫೋನ್ ಹಿಂತಿರುಗಿಸಿದರು. ಕಾನೂನು ಪ್ರಕಾರ ನಾನು ಮಾಡಿದದ್ದು ಸರಿಯಾದದ್ದೇ, ಆದರೆ ಅವರು ನನ್ನನ್ನು ಅಪರಾಧಿಯಂತೆ ನಡೆಸಿಕೊಂಡರು.

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್