
ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ಯಾವ ಸಮಸ್ಯೆಯೂ ಸಮಸ್ಯೆ ಎನ್ನಿಸುವುದೇ ಇಲ್ಲ. ಎಲ್ಲವೂ ಇದ್ದು, ಏನೂ ಇಲ್ಲ ಎಂದು ಗೋಳೋ ಎನ್ನುವವರ ಮಧ್ಯೆ, ಏನೂ ಇಲ್ಲದಿದ್ದರೂ ಇದ್ದುದ್ದರಲ್ಲಿಯೇ ಎಲ್ಲವನ್ನೂ ಸಾಧಿಸುವವರೂ ಇದ್ದಾರೆ. ಎರಡನೆಯ ಗುಂಪಿಗೆ ಸೇರಿರುವವರು ಶಶಾಂಕ್ ಅಗರವಾಲ್. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ, ಅಪ್ಪ ತಿಂಗಳಿಗೆ ಗಳಿಸುತ್ತಿದ್ದ 3 ಸಾವಿರ ರೂಪಾಯಿಗಳಿಂದಲೇ, ಕಷ್ಟವನ್ನು ನೋಡಿ ಬೆಳೆದ ಮಗನಿಂದು 24ನೇ ವಯಸ್ಸಿನಲ್ಲಿಯೇ ವರ್ಷಕ್ಕೆ ಒಂದೂವರೆ ಕೋಟಿ ರೂಪಾಯಿ ಸಂಬಳ ಗಳಿಸುತ್ತಿದ್ದಾರೆ. ಇದು ಐಐಟಿ ಬಾಂಬೆ ಪದವೀಧರ ಶಶಾಂಕ್ ಅಗರವಾಲ್ ಅವರ ಸಾಧನೆ.
ಜೆಇಇಯಲ್ಲಿ 20ನೇ ರ್ಯಾಂಕ್ ಪಡೆದು ಐಐಟಿ ಬಾಂಬೆಯಲ್ಲಿ ಓದಿರುವ ಶಶಾಂಕ್, ಸದ್ಯ ಜಾನ್ಸ್ಕರ್ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳೂ ಮನೆಗೆ ಒಂದು ಲಕ್ಷ ರೂಪಾಯಿ ನೀಡುವ ಮೂಲಕ, ಎಲ್ಲರಿಗೂ ಮಾದರಿಯಾಗಿದ್ದಾರೆ.
ಅಂದಹಾಗೆ, ಶಶಾಂಕ್ ಅವರದ್ದು ಇದಾಗಲೇ ತಿಳಿದಿರುವಂತೆ ತೀರಾ ಬಡತನದ ಕುಟುಂಬ. ಅಪ್ಪ, ಹೋಲ್‌ಸೇಲ್ ಶಾಪ್ ನಡೆಸುತ್ತಿದ್ದು, ಅಬ್ಬಬ್ಬಾ ಎಂದರೆ ಅವರಿಗೆ ಸಿಗುತ್ತಿದ್ದುದು ತಿಂಗಳಿಗೆ 3 ರಿಂದ 4 ಸಾವಿರ ರೂ. ಮಾತ್ರ. ಸಂಸಾರ ನಿಭಾಯಿಸುವುದು ಕಷ್ಟ ಎನ್ನುವ ಸ್ಥಿತಿ. ತುತ್ತು ಊಟಕ್ಕೂ ಕಷ್ಟಪಡುವ ಸ್ಥಿತಿ ಇತ್ತು. ಇದರ ಹೊರತಾಗಿಯೂ ಮಗನಿಗೆ ಅವನ ಅಭ್ಯಾಸವನ್ನು ಮುಂದುವರೆಸಲು ಮನೆಯಲ್ಲಿ ಅವಕಾಶ ಕಲ್ಪಿಸಲಾಯಿತು. ಎಷ್ಟೇ ಕಷ್ಟ ಬಂದರೂ ಮಗನ ಓದಿಗೆ ಕೊರತೆಯಾಗದಂತೆ ಸಾಲ ಮಾಡಿ ಶಿಕ್ಷಣ ಕೊಡಿಸಿದರು. ತಂದೆ-ತಾಯಿಯ ತ್ಯಾಗವನ್ನು ವ್ಯರ್ಥ ಮಾಡದ ಶಶಾಂಕ್, ಹಗಲಿರುಳು ಶ್ರಮಿಸಿ ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ ಜೆಇಇ ಅಡ್ವಾನ್ಸ್‌ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 20ನೇ ರ್ಯಾಂಕ್ ಪಡೆದು ಐಐಟಿ ಬಾಂಬೆಗೆ ಪ್ರವೇಶ ಪಡೆದರು.
ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ಪೂರ್ಣಗೊಳಿಸಿದರು ಅವರು. ಮನೆಯಲ್ಲಿನ ಬಡತನ ನೋಡಿ ಬೆಳೆದಿದ್ದ ಶಶಾಂಕ್ ಅವರಿಗೆ ಏನಾದರೂ ಸಾಧನೆ ಮಾಡಬೇಕು ಎನ್ನುವ ಛಲವಿತ್ತು. ಅದಕ್ಕೆ ತಕ್ಕಂತೆ ಅವರ ಪ್ರತಿಭೆಗೆ ಪ್ರತಿಷ್ಠಿತ ಕಂಪನಿಗಳಿಂದ ಅವಕಾಶಗಳು ಅರಸಿ ಬಂದವು. ಪ್ರಸ್ತುತ ಅವರು ‘ಜಾನ್ಸ್ಕರ್ ಕಾರ್ಪೊರೇಷನ್’ ಕಂಪನಿಯಲ್ಲಿ ಅನಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಸುಮಾರು 1.5 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಅವರ ಈ ಒಟ್ಟು ವೇತನದಲ್ಲಿ ಸುಮಾರು 55 ಲಕ್ಷ ರೂ. ಮೂಲ ವೇತನ ಹಾಗೂ 50 ಲಕ್ಷ ರೂ. ವೇರಿಯಬಲ್ ಪೇ ಮತ್ತು ಬೋನಸ್ ಸೇರಿದೆ.
ಶಶಾಂಕ್ ಅವರ ಮಾಸಿಕ ಒಟ್ಟು ಆದಾಯ ಸುಮಾರು 8.75 ಲಕ್ಷ. ಇದರಲ್ಲಿ ಸುಮಾರು 2.83 ಲಕ್ಷ ರೂ. ತೆರಿಗೆ ಹಾಗೂ ಇತರ ಕಡಿತಗಳ ನಂತರ, ಪ್ರತಿ ತಿಂಗಳು ಅವರ ಕೈಗೆ ಸರಿಸುಮಾರು 5.88 ಲಕ್ಷ ರೂ. ನಿವ್ವಳ ವೇತನ ಸಿಗುತ್ತದೆ. ವಿಶೇಷವೆಂದರೆ, ಇಂದು ಅನೇಕ ಉದ್ಯೋಗಿಗಳ ಒಟ್ಟು ಸಂಬಳಕ್ಕಿಂತ ಹೆಚ್ಚಾಗಿ ಶಶಾಂಕ್ ಅವರು ತಿಂಗಳಿಗೆ ಕೇವಲ ತೆರಿಗೆಯನ್ನೇ ಕಟ್ಟುತ್ತಿದ್ದಾರೆ!
ಕೋಟಿ ಕೋಟಿ ಸಂಪಾದಿಸುತ್ತಿದ್ದರೂ ಶಶಾಂಕ್ ತಮ್ಮ ಹಳೆಯ ದಿನಗಳನ್ನು ಮತ್ತು ತಂದೆ-ತಾಯಿ ಪಟ್ಟ ಕಷ್ಟವನ್ನು ಮರೆತಿಲ್ಲ. ತಮ್ಮ ಗಳಿಕೆಯಲ್ಲಿ ಪ್ರತಿ ತಿಂಗಳು ₹1 ಲಕ್ಷ ರೂಪಾಯಿಯನ್ನು ತಂದೆ-ತಾಯಿಗೆ ಕಳುಹಿಸಿಕೊಡುತ್ತಾರೆ. ಹಣಕ್ಕಿಂತ ಹೆಚ್ಚಾಗಿ ತನ್ನ ಯಶಸ್ಸಿಗೆ ಕಾರಣರಾದ ಪೋಷಕರಿಗೆ ಅವರು ನೀಡುತ್ತಿರುವ ಗೌರವ ಮತ್ತು ಪ್ರೀತಿ ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.