ಕಾವೇರಿಗೆ ಕೈಮುಗಿದು ಪೂಜೆ ಮಾಡಿ ಸ್ವಾಗತಿಸಿದ ರೈತರು: ವೀಡಿಯೋ ವೈರಲ್

Published : Jun 22, 2025, 03:01 PM IST
Cauvery Water

ಸಾರಾಂಶ

ತಮಿಳುನಾಡಿನಲ್ಲಿ ಕಾವೇರಿ ನೀರು ಬಿಡುಗಡೆಯಾದ ಸಂದರ್ಭದಲ್ಲಿ ಜನ ಭಕ್ತಿಯಿಂದ ಕೈ ಮುಗಿದು ನದಿಯನ್ನು ಸ್ವಾಗತಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಕಾವೇರಿ ನದಿ(Cauvery Water) ನಮ್ಮ ಹಾಗೂ ತಮಿಳುನಾಡು (Tamil Nadu)ರಾಜ್ಯದ ಅನೇಕ ರೈತರ ಬದುಕಿನ ಜೀವನಾಡಿಯಾಗಿದೆ. ಈ ಬಾರಿ ಮುಂಗಾರು ಮಳೆ ನಿಗದಿಗೂ ಮೊದಲೇ ಧಾರಾಕಾರವಾಗಿ ಸುರಿದಿರುವುದರಿಂದ ರಾಜ್ಯದ ಕೆರೆಕಟ್ಟೆಗಳು, ನದಿ ಆಣೆಕಟ್ಟುಗಳು, ಜಲಾಶಯಗಳು ತುಂಬಿ ಹರಿಯುತ್ತಿದೆ. ದಕ್ಷಿಣ ಕರ್ನಾಟಕ ಭಾಗದ ಜನರ ರೈತರ ಜೀವನಾಡಿಯಾಗಿರುವ ಕಾವೇರಿಯೂ ಮೈದುಂಬಿ ಹರಿಯುತ್ತಿದ್ದು, ತಮಿಳುನಾಡಿಗೂ ಎಂದಿನಂತೆ ನೀರು ಹರಿಬಿಡಲಾಗಿದೆ. ಹೀಗೆ ಹರಿದು ಬಂದ ತಮ್ಮ ಬದುಕಿನ ಜೀವನಾಡಿಯಾದ ಕಾವೇರಿಯನ್ನು ಅಲ್ಲಿನ ಜನ ಪೂಜೆ ಮಾಡಿ ಭಾವುಕವಾಗಿ ಸ್ವಾಗತಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ವೈರಲ್ ಆಗುತ್ತಿದೆ.

ತಮಿಳುನಾಡಿನ ಕಲ್ಲನೈ ಅಣೆಕಟ್ಟಿನಿಂದ ನೀರು ಬಿಡುಗಡೆ

ಭಾರತದಲ್ಲಿ ನದಿಗಳಿಗೆ ಪೂಜನೀಯ ಸ್ಥಾನವಿದೆ. ಪೃಕೃತಿಯ ಪೂಜೆ ನಮ್ಮಲ್ಲಿ ಸಾಮಾನ್ಯ. ಹಾಗೆಯೇ ಜೀವನಾಡಿಯಾದ ಕಾವೇರಿಯನ್ನು ಜನ ದೇವರಂತೆ ಪೂಜಿಸುತ್ತಿದ್ದಾರೆ. ಹಾಗೆಯೇ ಇಲ್ಲಿ ತಮಿಳುನಾಡಿನ ಕಲ್ಲನೈ ಅಣೆಕಟ್ಟಿನಿಂದ(Kallanai dam) ಕಾವೇರಿ ನೀರು ಬಿಡುಗಡೆಯಾದ ನಂತರ ತಮಿಳುನಾಡಿನ ಸ್ಥಳೀಯರು ಕಾವೇರಿ ನೀರಿನ ಆಗಮನವನ್ನು ಸ್ವಾಗತಿಸಲು ಪ್ರಾರ್ಥನೆ ಸಲ್ಲಿಸಿದ ಹೃದಯಸ್ಪರ್ಶಿ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ವಾರ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (M K Stalin) ಅವರು ಕಾವೇರಿ ನದಿ ಮುಖಜ ಭೂಮಿ ಪ್ರದೇಶಕ್ಕೆ ನೀರು ಬಿಡುಗಡೆ ಮಾಡಲು ಸೂಚನೆ ನೀಡಿದ್ದರು.

ಬರಡು ನೆಲವ ಹಸನು ಮಾಡುತ್ತಾ ಸಾಗಿದ ಕಾವೇರಿ: ಪೂಜೆ ಮಾಡಿದ ಜನ

ಈಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಕಲ್ಲನೈ ಜಲಾಶಯದಿಂದ ನೀರು ಇಳಿದು ಒಣಗಿದ ನೆಲವನ್ನು ತಂಪು ಮಾಡುತ್ತಾ ಸಾಗುತ್ತಿದೆ. ನೀರು ಹರಿದು ಬರುತ್ತಿದ್ದಂತೆ ಜನ ಭಾವುಕರಾಗಿದ್ದು, ವೀಳ್ಯದ ಎಲೆಯಲ್ಲಿ ಆರತಿ ಬೆಳಗಿ ನೀರಿನಲ್ಲಿ ತೇಲಿ ಬಿಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ನೀರು ನಿಧಾನವಾಗಿ ಹರಿಯಲು ಪ್ರಾರಂಭಿಸಿದಾಗ ನದಿಗೆ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಕಾಣಿಕೆಗಳನ್ನು ಅರ್ಪಿಸುತ್ತಿದ್ದಾರೆ. ಅನೇಕರು ಹೊಳೆಯ ಪಕ್ಕಕ್ಕೆ ಓಡಿ ಹೋಗಿ ಭಕ್ತಿಯಿಂದ ಕೈಗಳನ್ನು ಮುಗಿದು ಸಾಷ್ಟಾಂಗ ನಮಸ್ಕಾರ ಹಾಕುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ವೀಡಿಯೋ ನೋಡಿದ ನೆಟ್ಟಿಗರು ಭಾವುಕ

ಈ ವೀಡಿಯೋ ನೋಡಿದ ನೆಟ್ಟಿಗರು ಕೂಡ ಭಾವುಕರಾಗಿದ್ದು, ಕಾವೇರಿ ಬರುತ್ತಿದ್ದಂತೆ, ಎಲ್ಲರ ಹೃದಯವೂ ಮೊದಲ ಮಾನ್ಸೂನ್‌ನೊಂದಿಗೆ ಬರುವ ಸಂತೋಷದಂತೆ ಉಲ್ಲಾಸಗೊಳ್ಳುತ್ತದೆ. ಸರಳ ಪೂಜೆಯೊಂದಿಗೆ ಮತ್ತು ದೊಡ್ಡ ನಗುವಿನೊಂದಿಗೆ, ಅವರು ಅವಳನ್ನು ತಮ್ಮದೇ ಆದ ಒಬ್ಬಳಂತೆ ಸ್ವಾಗತಿಸುತ್ತಾರೆ. ಅದಕ್ಕಾಗಿಯೇ ನಾನು ಪ್ರವಾಹವನ್ನು ಗಮನಿಸಲು ಉತ್ಸುಕನಾಗಿದ್ದೇನೆ. ಇದು ಕೇವಲ ನೀರಲ್ಲ, ಇದು ಭಾವನೆ, ಸಂಪ್ರದಾಯ ಮತ್ತು ಒಗ್ಗಟ್ಟು, ಎಂದು ಟೆಕ್ಕಿ ನವೀನ್ ರೆಡ್ಡಿ ಎಂಬುವವರು ಬರೆದುಕೊಂಡು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಲಕ್ಷಕ್ಕೂ ಅಧಿಕ ಜನ ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ.

ತಂಜಾವೂರು, ತಿರುಚಿ ಗಡಿಯಲ್ಲಿರುವ ಕಲ್ಲನೈ ಆಣೆಕಟ್ಟು

ತಂಜಾವೂರು ಮತ್ತು ತಿರುಚಿ ಜಿಲ್ಲೆಗಳ ಗಡಿಯಲ್ಲಿರುವ ಐತಿಹಾಸಿಕ ಕಲ್ಲನೈ ಆಣೆಕಟ್ಟಿನಲ್ಲಿ ನೀರು ಬಿಡುಗಡೆ ವೇಳೆ ಗೌರವಾರ್ಥವಾಗಿ ತಮಿಳುನಾಡು ಸಿಎಂ ಸ್ಟಾಲಿನ್ ಹೂವಿನ ದಳಗಳನ್ನು ಅರ್ಪಿಸಿ, ಹರಿಯುವ ನದಿಗೆ ಭತ್ತದ ಬೀಜಗಳನ್ನು ಚೆಲ್ಲುವ ಮೂಲಕ ಸಾಂಕೇತಿಕವಾಗಿ ಗೌರವ ಆರ್ಪಿಸಿದರು. ಈ ಕಲ್ಲನೈ ಜಲಾಶಯದಿಂದ ನೀರು ಬಿಡುಗಡೆ ಮಾಡುವುದರಿಂದ ಸುಮಾರು 13 ಲಕ್ಷ ಎಕರೆ ಕೃಷಿ ಭೂಮಿಗೆ ಪ್ರಯೋಜನವಾಗುತ್ತದೆ.

ಬಾಲ್ಯವನ್ನು ನೆನೆದ ನೆಟ್ಟಿಗರು

ಈ ಭಾವನಾತ್ಮಕ ದೃಶ್ಯಗಳು ಆನ್‌ಲೈನ್‌ನಲ್ಲಿ ಅನೇಕರನ್ನು ಆಕರ್ಷಿಸಿದ್ದು,ಬಾಲ್ಯದ ದಿನಗಳಲ್ಲಿ, ಇದು ರೋಮಾಂಚಕಾರಿ ವಿಷಯವಾಗಿತ್ತು, ಮತ್ತು ಬರುವ ನೀರಿನ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಕಾವೇರಿ ನದಿ ತೀರಕ್ಕೆ ಸ್ವಾಗತಿಸಲು ಕೆಲವೇ ಜನರು ಬರುತ್ತಾರೆ, ಮತ್ತು ಇದು ಒಂದು ಭಾವನಾತ್ಮಕ (Emotional moment) ಘಟನೆ ಎಂದು ಒಬ್ಬ ಬಳಕೆದಾರರು ನದಿಯೊಂದಿಗೆ ಕಳೆದ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.

ನದಿಗಳನ್ನು ಈಗಲೂ ಪೂಜನೀಯಭಾವದಿಂದ ಪೂಜಿಸುತ್ತಿರುವುದನ್ನು ನೋಡುವುದಕ್ಕೆ ಖುಷಿಯಾಗುತ್ತಿದೆ. ನದಿಯನ್ನು ದೇವತೆಯಂತೆ ಪೂಜಿಸಲಾಗುತ್ತಿದ್ದು, ಆಧ್ಯಾತ್ಮಿಕ ನಂಬಿಕೆಗಳು ಮತ್ತು ಆಚರಣೆಗಳೊಂದಿಗೆ ಆಳವಾಗಿ ಬೇರೂರಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ತಾಯಿ ಕಾವೇರಿ ತಾಯಿ ಬರುತ್ತಾಳೆ ಮತ್ತು ನಿರ್ಭೀತ ಗ್ರಾಮಸ್ಥರು ತಾಯಿಯನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ನದಿಯ ದಡದಲ್ಲಿರುವ ದೇವಾಲಯದ ಬಳಿ ಕಾವೇರಿ ನೀರಿನ ಮೊದಲ ಹರಿವನ್ನು ಸ್ಪರ್ಶಿಸುವ ಸಂತೋಷದ ಕಣ್ಣೀರಿನೊಂದಿಗೆ ಒಬ್ಬ ಮಹಿಳೆಯನ್ನು ನಾನು ನೋಡಿದೆ ಮತ್ತೊಬ್ಬರು ಈ ವೀಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.

ಕಾವೇರಿ ಕೇವಲ ನದಿಯಲ್ಲ. ಅವಳು ಜೀವನ, ಸಂಸ್ಕೃತಿ ಮತ್ತು ತಲೆಮಾರುಗಳ ಮೂಲಕ ಹರಿಯುವ ಸಂಪರ್ಕ. ಜನರು ಅವಳನ್ನು ತೆರೆದ ತೋಳುಗಳಿಂದ ಸ್ವಾಗತಿಸುವ ರೀತಿ ಪ್ರಕೃತಿ ನಮ್ಮ ಹೃದಯಗಳಲ್ಲಿ ಎಷ್ಟು ಆಳವಾಗಿ ಹೆಣೆದುಕೊಂಡಿದೆ ಎಂಬುದನ್ನು ತೋರಿಸುತ್ತದೆ. ಪ್ರವಾಹಗಳು ಎಚ್ಚರಿಕೆಯನ್ನು ತರಬಹುದು, ಆದರೆ ಅವು ಶತಮಾನಗಳ ನಂಬಿಕೆ ಮತ್ತು ಭಾವನೆಯನ್ನು ಸಹ ಹೊಂದಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಭಾವುಕ ವೀಡಿಯೋ ಎಲ್ಲರ ಹೃದಯವನ್ನು ಭಾವುಕಗೊಳಿಸಿದೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

 

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್