
ಪ್ರಾಣಿಗಳು ಕೂಡ ಮನುಷ್ಯರಂತೆ ಸಂವೇದನಶೀಲರು, ಅವುಗಳಿಗೆ ಕಷ್ಟ ಸುಖ ನೋವು ನಲಿವುಗಳ ಅರಿವಾಗುತ್ತದೆ ಎಂಬುದು ಹಲವು ಬಾರಿ ಸಾಬೀತಾಗಿದೆ. ಅನೇಕ ಪ್ರಕರಣಗಳಲ್ಲಿ ಸಾಕುನಾಯಿಗಳು, ಆನೆಗಳು, ಹಸುಗಳು ತಮ್ಮ ಮಾಲೀಕರನ್ನು ಅವಘಡದಿಂದ ರಕ್ಷಿಸಿದಂತಹ ಹಲವು ಘಟನೆಗಳು ನಡೆದಿವೆ. ಅದೇ ರೀತಿ ಇಲ್ಲೊಂದು ಕಡೆ ಆನೆಯೊಂದು ಜಿಂಕೆಯೊಂದನ್ನು ರಕ್ಷಿಸಿದಂತಹ ಅಚ್ಚರಿಯ ಘಟನೆ ನಡೆದಿದ್ದು, ಸಹಬಾಳ್ವೆ ಎಷ್ಟು ಚೆಂದ ಎಂಬುದನ್ನು ತೋರಿಸಿದೆ.
ಆನೆಗಳು ಬುದ್ಧಿವಂತ ಪ್ರಾಣಿಗಳು, ತಮ್ಮ ಹಿಂಡಿನಲ್ಲಿರುವ ಪುಟ್ಟ ಮರಿಗಳನ್ನು ಅವುಗಳು ಬಹಳ ಜೋಪಾನದಿಂದ ಕಾಯುತ್ತವೆ. ಗುಂಪಿನಲ್ಲಿ ಒಂದೋ ಎರಡೋ ಆನೆ ಮರಿಗಳಿದ್ದರೆ, ಆನೆಗಳಷ್ಟು ಜಾಗರೂಕವಾಗಿರುವ ಪ್ರಾಣಿಗಳು ಮತ್ತೊಂದಿಲ್ಲ, ಮರಿಗಳನ್ನು ಮಧ್ಯದಲ್ಲಿ ಬಿಟ್ಟುಕೊಂಡು, ಹಿಂದೆ ಮುಂದೆ, ಅಕ್ಕ ಪಕ್ಕದಲ್ಲಿ ಇತರ ಆನೆಗಳು ಸಾಗುತ್ತಿರುತ್ತವೆ. ತಮ್ಮ ಗುಂಪಿನ ಮರಿಗಳನ್ನು ಕಾಪಾಡುವುದರಲ್ಲಿ ಅಷ್ಟು ಕಾಳಜಿ ವಹಿಸುತ್ತವೆ ಈ ಆನೆಗಳು, ಆದರೆ ಬೇರೆ ಪ್ರಾಣಿಗಳ ರಕ್ಷಣೆಗೆ ಹೋಗಿದ್ದು, ಬಹಳ ಅಪರೂಪವೋ ಅಥವಾ ಅವುಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿಲ್ಲವೋ ತಿಳಿಯದು. ಆದರೆ ಇಲ್ಲೊಂದು ಆನೆ ಮಾತ್ರ ನೀರಿಗೆ ಬಿದ್ದು ಮೇಲೆಳಲಾಗದೇ ಒದ್ದಾಡುತ್ತಿದ್ದ ಜಿಂಕೆಯೊಂದನ್ನು ರಕ್ಷಿಸಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Momos usa 🇺🇸 ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೋ ಪೋಸ್ಟ್ ಮಾಡಿದ ಅವರು ಮೃಗಾಲಯವೊಂದಕ್ಕೆ ಭೇಟಿ ನೀಡಿದ ಶಾಲೆಯ ಪೋಷಕರು ಮತ್ತು ಮಕ್ಕಳಿಗೆ, ಆನೆಯೊಂದು ಕೊಳಕ್ಕೆ ಬಿದ್ದ ಗಸೆಲ್‌ಗೆ ಸಹಾಯ ಮಾಡಿದ ಕ್ಷಣಕ್ಕೆ ಸಾಕ್ಷಿಯಾದರು. ಮಕ್ಕಳು ಆನೆಯ ಕೆಲಸ ನೋಡಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಇದು ದಕ್ಷಿಣ ಅಮೆರಿಕಾದ ಗ್ವಾಟೆಮಾಲಾದಲ್ಲಿ ಸಂಭವಿಸಿತು ಎಂದು ಬರೆದು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ಜಿಂಕೆಗಳ ದೊಡ್ಡ ಹಿಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಿದ್ದು, ಅದರಲ್ಲೊಂದು ಜಿಂಕೆ ಅಲ್ಲಿದ ಕೊಳವೊಂದಕ್ಕೆ ಕಾಲುಜಾರಿ ಬಿದ್ದಿದೆ. ಈ ವೇಳೆ ಅಲ್ಲೇ ಇದ್ದ ಆನೆಯೊಂದು ಕೊಳದ ಬಳಿ ಧಾವಿಸಿ ಜಿಂಕೆಯ ನೆರವಿಗೆ ಧಾವಿಸಿದೆ. ತನ್ನ ಸೊಂಡಿಲಿನ ಮೂಲಕ ಜಿಂಕೆಯ ಕೊಂಬಿನಲ್ಲಿ ಹಿಡಿದು ನೀರಿನಿಂದ ಮೇಲೆತ್ತಿ ಹಾಕಿದೆ. ಬರೀ ಇಷ್ಟೇ ಅಲ್ಲ, ಮೇಲೆದ್ದ ಜಿಂಕೆ ಕ್ಷೇಮವಾಗಿದೆಯೇ ಎಂಬುದನ್ನು ಬಳಿಗೆ ಹೋಗಿ ಸೂಕ್ಷ್ಮವಾಗಿ ಗಮನಿಸಿದೆ.
ಈ ವೀಡಿಯೋ ನೋಡಿದ ಅನೇಕರು ಆನೆಯ ಬುದ್ಧಿವಂತಿಕೆ ಹಾಗೂ ಕರುಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಮೇಲೆತ್ತಿದ್ದಲ್ಲದೇ ಅದು ಮತ್ತೆ ಹೋಗಿ ಆ ಜಿಂಕೆ ಕ್ಷೇಮವಾಗಿದೆಯೇ ಎಂಬುದನ್ನು ಗಮನಿಸಿದ್ದು, ನಿಜವಾಗಿಯೂ ಖುಷಿ ನೀಡಿತು ಎಂದು ಕಾಮೆಂಟ್ ಮಾಡಿದ್ದಾರೆ. ಆನೆಗಳು ಆನೆಗಳಲ್ಲ, ದೇವತೆಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆನೆಯ ಬುದ್ಧಿವಂತಿಕೆ ನಿಜಕ್ಕೂ ಖುಷಿ ನೀಡಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಪ್ರಾಣಿಗಳು ಕೆಲವು ಮನುಷ್ಯರಿಗಿಂತ ಇತರರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತವೆ ಎಂದು ಈ ವೀಡಿಯೋದಿಂದ ತೋರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.