ಸಾಮಾನ್ಯವಾಗಿ 60 ವರ್ಷ ವಯಸ್ಸು ದಾಟುತ್ತಿದ್ದಂತೆ ಪ್ರತಿಯೊಬ್ಬ ಹಿರಿಯ ನಾಗರಿಕರೂ ನೆಮ್ಮದಿಯ ವಿಶ್ರಾಂತಿ ಜೀವನವನ್ನು ಬಯಸುತ್ತಾರೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಎಲ್ಲರ ಆರ್ಥಿಕ ಪರಿಸ್ಥಿತಿ ಹಾಗೂ ಹಣೆಬರಹ ಒಂದೇ ತರ ಇರುವುದಿಲ್ಲ. ಕೆಲವರು ವಯಸ್ಸಾದ ಮೇಲೆ ಮನೆಯಲ್ಲಿ ಮಕ್ಕಳೊಂದಿಗೆ ಆರಾಮವಾಗಿ ಕಾಲ ಕಳೆದರೆ, ಇನ್ನು ಕೆಲವು ಹಿರಿಯರು ತಮ್ಮ ಇಳಿ ವಯಸ್ಸಿನಲ್ಲೂ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಇದಕ್ಕೆ ಅತ್ಯುತ್ತಮ ಮತ್ತು ಅತ್ಯಂತ ಹೃದಯಸ್ಪರ್ಶಿ ಉದಾಹರಣೆ ಮುಂಬೈನ ಪ್ರಸಿದ್ಧ 82 ವರ್ಷದ ಮನ್ಸುಖ್ ಕಾಕಾ. ಇವರು ಇಂದು ತಮ್ಮ ಪ್ರಾಮಾಣಿಕತೆ ಹಾಗೂ ಕಠಿಣ ಶ್ರಮದಿಂದ ಇಡೀ ದೇಶದ ಜನರಿಗೆ ಮತ್ತು ಯುವ ಪೀಳಿಗೆಗೆ ದೊಡ್ಡ ಮಾದರಿಯಾಗಿದ್ದಾರೆ.
ಮನ್ಸುಖ್ ಕಾಕಾ ಅವರು ಪ್ರತಿದಿನ ಮುಂಬೈನ ಜನನಿಬಿಡ ರಸ್ತೆಯೊಂದರ ಫುಟ್‌ಪಾತ್‌ನಲ್ಲಿ ಸಣ್ಣದೊಂದು ಸ್ಟಾಲ್ ಇಟ್ಟುಕೊಂಡು, ಮನೆಯಲ್ಲೇ ತಯಾರಿಸಿದ 'ಫರ್ಸಾನ್' (ಖಾರ ಹಾಗೂ ಉಪ್ಪಿನ ಕುರುಕಲು ತಿಂಡಿಗಳು) ಮಾರಾಟ ಮಾಡುತ್ತಾರೆ. ವಯಸ್ಸಿನ ದಣಿವನ್ನು ಮತ್ತು ದೇಹದ ನಡುಕವನ್ನು ಲೆಕ್ಕಿಸದೆ ಅವರು ದಿನಕ್ಕೆ ಬರೋಬ್ಬರಿ 12 ಗಂಟೆಗಳ ಕಾಲ ರಸ್ತೆಯ ಬದಿಯಲ್ಲಿ ನಿಂತು ದುಡಿಯುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟರೂ ಅವರು ಒಂದು ಒಳ್ಳೆಯ ದಿನದಲ್ಲಿ ಗಳಿಸುವುದು ಕೇವಲ 300 ರೂಪಾಯಿ ಮಾತ್ರ! ಮುಂಬೈ ಮೂಲದ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಆರಾಧನಾ ಚಟರ್ಜಿ ಎಂಬುವವರು ಇವರ ದಿನನಿತ್ಯದ ಹೋರಾಟದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ ಈ ತಾತನ ಬದುಕಿನ ಕಥೆ ಇಡೀ ಜಗತ್ತಿಗೆ ಬೆಳಕಿಗೆ ಬಂತು.
ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಇವರ ಬದುಕು ಸಂಪೂರ್ಣ ತಲೆಕೆಳಗಾಯಿತು. ತೀವ್ರ ಅನಾರೋಗ್ಯಕ್ಕೆ ಒಳಗಾದ ಕಾರಣ ಅವರು ತಕ್ಷಣವೇ ತಾವಿದ್ದ ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ಆ ಕಷ್ಟದ ದಿನಗಳಲ್ಲಿ ವಯಸ್ಸಾದ ತಂದೆಯನ್ನು ಪ್ರೀತಿಯಿಂದ ಆರೈಕೆ ಮಾಡಲು ಇವರ ಮಗನೂ ಸಹ ತಾನು ಮಾಡುತ್ತಿದ್ದ ಕೆಲಸವನ್ನು ಬಿಡಬೇಕಾಗಿ ಬಂತು. ಇಂತಹ ದೊಡ್ಡ ಆರ್ಥಿಕ ಹೊಡೆತ ಬಿದ್ದರೂ ಮನ್ಸುಖ್ ಕಾಕಾ ಧೃತಿಗೆಡಲಿಲ್ಲ.
ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ, ಅವರು ಬೇರೆಯವರ ಮುಂದೆ ಕೈಚಾಚುವ ಬದಲಿಗೆ ಸ್ವತಃ ತಾವೇ ಸ್ವಾವಲಂಬಿಯಾಗಿ ಬದುಕಲು ನಿರ್ಧರಿಸಿದರು. ಕಾಕಾ ಅವರ ಸಹೋದರಿ ಪ್ರತಿದಿನ ಮನೆಯಲ್ಲಿಯೇ ಅತ್ಯಂತ ತಾಜಾ ಮತ್ತು ರುಚಿಕರವಾದ ತಿಂಡಿಗಳನ್ನು ತಯಾರಿಸುತ್ತಾರೆ. ಅದನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ತಂದು ಕಾಕಾ ಫುಟ್‌ಪಾತ್‌ನಲ್ಲಿ ಮಾರುತ್ತಾರೆ. ವೈರಲ್ ವಿಡಿಯೋದಲ್ಲಿ ತಾತ ಅತ್ಯಂತ ನೀಟಾಗಿ ಇನ್ ಶರ್ಟ್ ಮಾಡಿಕೊಂಡು, ಪ್ರೊಫೆಷನಲ್ ಆಗಿ ವ್ಯಾಪಾರ ಮಾಡುವುದನ್ನು ಕಾಣಬಹುದು.
ಅಷ್ಟೇ ಅಲ್ಲ, ದಿನದ ಪ್ರತಿಯೊಂದು ಮಾರಾಟ ಮತ್ತು ಖರ್ಚನ್ನು ಒಂದು ಪುಟ್ಟ ಡೈರಿಯಲ್ಲಿ ಅತ್ಯಂತ ಶಿಸ್ತಿನಿಂದ ಬರೆದಿಡುವ ಅವರ ಬದ್ಧತೆ ನೆಟ್ಟಿಗರ ಮನ ಗೆದ್ದಿದೆ. ಇಂಟರ್ನೆಟ್‌ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ತಾತನ ಬೆಂಬಲಕ್ಕೆ ನಿಂತಿದ್ದಾರೆ. ಇವರ ಅಂಗಡಿಗೆ ಭೇಟಿ ನೀಡಿದ ಸಾರ್ವಜನಿಕರು ಕಾಕಾ ಅವರನ್ನು ಅತ್ಯಂತ ಕರುಣಾಮಯಿ, ವಿನಮ್ರ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಅನೇಕರು ಮುಂಬೈ ಜನತೆಗೆ ಇವರ ಅಂಗಡಿಯಿಂದಲೇ ತಿಂಡಿ ಖರೀದಿಸಲು ಮನವಿ ಮಾಡುತ್ತಿದ್ದಾರೆ. ನೆಟ್ಟಿಗರು ಇವರ ವೃತ್ತಿಪರತೆಗೆ ಮತ್ತು ಜವಾಬ್ದಾರಿಗೆ ಹ್ಯಾಟ್ಸಾಫ್ ಹೇಳುತ್ತಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ, ಬದುಕುವ ಛಲವಿದ್ದರೆ ಸ್ವಾಭಿಮಾನದಿಂದ ಹೇಗೆ ಬದುಕಬಹುದು ಎಂಬುದಕ್ಕೆ ಮನ್ಸುಖ್ ಕಾಕಾ ಅವರೇ ನಿಜವಾದ ಸಾಕ್ಷಿ.
ವಿಡಿಯೋ ಇಲ್ಲಿದೆ ನೋಡಿ