
ಮುಂಬೈ: ಮಹಾನಗರದ ಜನಜಂಗುಳಿಯಂತಹ ರಸ್ತೆಗಳಲ್ಲಿ ಬೈಕ್ ಓಡಿಸುತ್ತಾ, ಸಮಯಕ್ಕೆ ಸರಿಯಾಗಿ ಫುಡ್ ಆರ್ಡರ್‌ಗಳನ್ನು ಮನೆಮನೆಗೆ ತಲುಪಿಸುವಾಗಲೂ ಖುಷ್ಬು ಮನಸ್ಸಲ್ಲಿ ಒಂದೇ ಕನಸು. ಅದು, ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಸಮವಸ್ತ್ರ ಧರಿಸಿ ತನ್ನ ಊರಿಗೆ ಮರಳಬೇಕು, ಅಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಅಂತ. ಹೌದು, ಖುಷ್ಬು ಮುಂಬೈನಲ್ಲಿರುವ ನೂರಾರು ಸ್ವಿಗ್ಗಿ ಡೆಲಿವರಿ ಏಜೆಂಟ್‌ಗಳಲ್ಲೊಬ್ಬರು. ಉತ್ತರ ಪ್ರದೇಶದ ಗಾಜಿಪುರ್ ಮೂಲದ ಈ 23 ವರ್ಷದ ಯುವತಿಯ ಸ್ಪೂರ್ತಿದಾಯಕ ಲೈಫ್ ಸ್ಟೋರಿ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಕೆಲವರು ತಮ್ಮ ಗುರಿ ಸಾಧಿಸಲು ದೊಡ್ಡದು ಸಣ್ಣದೆನ್ನದೆ ಯಾವುದೇ ಕೆಲಸ ಮಾಡಲು ತಯಾರಾಗಿರ್ತಾರೆ. ಇವತ್ತಿನ ಎಷ್ಟೋ ಪೊಲೀಸ್ ಆಫೀಸರ್‌ಗಳು ಹಿಂದೆ ಒಂದೊತ್ತಿನ ಊಟಕ್ಕೂ ಪರದಾಡಿದವರೇ. ಈ ಯುವತಿಯದು ಒಂದೇ ಗುರಿ, ಪೊಲೀಸ್ ಸಮವಸ್ತ್ರ ತೊಡಲೇಬೇಕು ಅನ್ನೋದು. ಸ್ವಿಗ್ಗಿಯ ಫುಡ್ ಮಾರ್ಕೆಟ್‌ಪ್ಲೇಸ್ ಸಿಇಒ ರೋಹಿತ್ ಕಪೂರ್ ಹೇಳುವಂತೆ, 'ದೇಶದಾದ್ಯಂತ ಇರುವ ಡೆಲಿವರಿ ಪಾರ್ಟ್ನರ್‌ಗಳ ಜೀವನ ಮತ್ತು ಅವರ ಕನಸುಗಳನ್ನು ಪರಿಚಯಿಸುವ 'ಚಾಯ್ ಬಿಸ್ಕೂಟ್'(Chai Biscuit Episodes
) ಸರಣಿ ನಡೆಸುತ್ತಿದ್ದಾರೆ. ಈ ಸರಣಿಯ ಭಾಗವಾಗಿ ಅವರು ಖುಷ್ಬು ಜೊತೆ ಮಾತನಾಡಿದ ವಿಡಿಯೋವನ್ನು ತಮ್ಮ ಲಿಂಕ್ಡ್‌ಇನ್(Linkedin) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಮೂಲಕವೇ ಖುಷ್ಬು ಅವರ ಕಥೆ ಬೆಳಕಿಗೆ ಬಂದಿದೆ.
ರೋಹಿತ್ ಕಪೂರ್ ತಮ್ಮ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ: 'ಹಳ್ಳಿಗಳಿಂದ ಜನರು ನಗರಗಳಿಗೆ ವಲಸೆ ಹೋಗುವುದನ್ನು ನಾವು ದಶಕಗಳಿಂದ ನೋಡುತ್ತಿದ್ದೇವೆ. ಖುಷ್ಬು ಕೂಡ ಹಾಗೆಯೇ ನಗರಕ್ಕೆ ಬಂದರು. 23ನೇ ವಯಸ್ಸಿನಲ್ಲಿ ಗಾಜಿಪುರ್‌ನಿಂದ ಮುಂಬೈಗೆ ಬಂದು ಫುಡ್ ಡೆಲಿವರಿ ಮಾಡುತ್ತಿದ್ದಾರೆ. ರಾತ್ರಿ ಹೊತ್ತು ಯುಪಿ ಪೊಲೀಸ್ ಪರೀಕ್ಷೆಗೆ ಓದಿಕೊಳ್ಳುತ್ತಾರೆ. ಆದರೆ ನನ್ನ ಮನಸ್ಸಲ್ಲಿ ಉಳಿದಿದ್ದು ಬೇರೆಯೇ ವಿಷಯ. ಹೆಚ್ಚಿನವರು ಮುಂಬೈಗೆ ಬರುವುದು ಮತ್ತೆಂದೂ ಊರಿಗೆ ಹಿಂತಿರುಗದಂತೆ ಬದುಕು ಕಟ್ಟಿಕೊಳ್ಳಲು. ಆದರೆ ಖುಷ್ಬು ಇಲ್ಲಿಗೆ ಬಂದಿರುವುದು, ತನ್ನ ಊರಿಗೆ ಪೊಲೀಸ್ ಸಮವಸ್ತ್ರದಲ್ಲಿ ಮರಳಲು. ಊರು ಬಿಟ್ಟು ಬರುವ ಧೈರ್ಯ ಅನೇಕರಲ್ಲಿ ಇರಬಹುದು, ಆದರೆ ಯಾಕೆ ಹೋಗಬೇಕು ಎಂಬ ಸ್ಪಷ್ಟತೆ ಇರುವುದು ಬಹಳ ಅಪರೂಪ' ಎಂದು ಕಪೂರ್ ಬರೆದಿದ್ದಾರೆ. ಇದು 'ಚಾಯ್ ಬಿಸ್ಕೂಟ್' ಸರಣಿಯ ಮೂರನೇ ವಿಡಿಯೋ ಆಗಿದೆ.
ವಿಡಿಯೋದಲ್ಲಿ ಮಾತನಾಡುವ ಖುಷ್ಬು, ತಾನು ಮನೆಯವರಿಗೆ ಹೇಳದೆಯೇ ಗಾಜಿಪುರ್‌ದಿಂದ ಮುಂಬೈಗೆ ಬಂದಿದ್ದಾಗಿ ತಿಳಿಸಿದ್ದಾರೆ. ಐವರು ಸಹೋದರರಿರುವ ಕುಟುಂಬ ಅವರದ್ದು. ದೊಡ್ಡ ಗುರಿ ಸಾಧಿಸುವುದರ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕೆಂದು ಅವರು ನಿರ್ಧರಿಸಿದರು. ಫುಡ್ ಡೆಲಿವರಿ ಕೆಲಸದಿಂದಾಗಿ ಅವರು ತಮ್ಮ ಖರ್ಚುಗಳನ್ನು ತಾವೇ ನಿಭಾಯಿಸುತ್ತಿದ್ದಾರೆ. ಜೊತೆಗೆ, ಪರೀಕ್ಷೆಯ ತಯಾರಿಗೂ ಹಣ ಹೊಂದಿಸಲು ಇದು ಸಹಾಯ ಮಾಡಿದೆ.
ತನ್ನ ಗುರಿಯ ಬಗ್ಗೆ ಮಾತನಾಡುವ ಖುಷ್ಬು, ಪ್ರತಿದಿನದ ಕೆಲಸವೂ ತನ್ನ ಕನಸಿನ ಒಂದು ಭಾಗ ಎನ್ನುತ್ತಾರೆ. ಹಗಲಲ್ಲಿ ಫುಡ್ ಆರ್ಡರ್‌ಗಳನ್ನು ಡೆಲಿವರಿ ಮಾಡುವುದು ಮತ್ತು ರಾತ್ರಿ ವೇಳೆ ಯುಪಿ ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುವುದು ಅವರ ದಿನಚರಿ. ಒಂದಲ್ಲ ಒಂದು ದಿನ ಪೊಲೀಸ್ ಸಮವಸ್ತ್ರ ಧರಿಸಿ ತನ್ನ ಹಳ್ಳಿಗೆ ಹಿಂತಿರುಗಿ, ಕುಟುಂಬಕ್ಕೆ ಮತ್ತು ಸಮಾಜಕ್ಕೆ ಹೆಮ್ಮೆ ತರಬೇಕೆಂಬುದು ಅವರ ಕನಸು.
ಖುಷ್ಬು ಅವರ ಈ ಸರಳತೆ ಮತ್ತು ಗುರಿಯ ಸ್ಪಷ್ಟತೆ ಆನ್‌ಲೈನ್‌ನಲ್ಲಿ ಸಾವಿರಾರು ಜನರ ಮನಗೆದ್ದಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಅವರಿಗೆ ಬೆಂಬಲ ಮತ್ತು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಅವರ ಧೈರ್ಯ, ಕಠಿಣ ಪರಿಶ್ರಮ ಮತ್ತು ಕನಸಿಗಾಗಿ ತನ್ನ ಸೌಕರ್ಯಗಳನ್ನು ತ್ಯಾಗ ಮಾಡುವ ಮನೋಭಾವವನ್ನು ಅನೇಕರು ಶ್ಲಾಘಿಸಿದ್ದಾರೆ. 'ಖುಷ್ಬು ಅವರ ಪ್ರಯಾಣವೇ ವಿಭಿನ್ನ. ಮನೆ ಬಿಡುವುದು ಕಷ್ಟ, ಆದರೆ ಸೇವೆ ಮಾಡಲು ಹಿಂತಿರುಗುತ್ತೇನೆ ಎಂಬ ಸ್ಪಷ್ಟತೆಯೊಂದಿಗೆ ಹೋಗುವುದು ನಿಜಕ್ಕೂ ಅಪರೂಪ. ಇಂತಹ ಗುರಿಗೆ ನಮ್ಮದೊಂದು ಸಲಾಂ' ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.