9/11ರ WTC ಮೇಲಿನ ದಾಳಿ ವೇಳೆ ದಿವ್ಯಾಂಗನಿಗೆ ದಾರಿತೋರಿ ರಕ್ಷಿಸಿದ ಶ್ವಾನದ ಕತೆ ಈಗ ವೈರಲ್

Published : Jul 08, 2025, 06:29 PM IST
Michael Hingson and his savier guide dog Roselle

ಸಾರಾಂಶ

ಸೆಪ್ಟೆಂಬರ್ 11, 2001ರಂದು ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕಣ್ಣು ಕಾಣದ ಮಿಚೆಲ್ ಹಿಂಗ್ಸನ್ ಅವರನ್ನು ಅವರ ಸರ್ವೀಸ್ ಡಾಗ್ ರೊಸೆಲ್ಲೆ ರಕ್ಷಿಸಿದ ಅದ್ಭುತ ಕಥೆ ಇದು

ಸೆಪ್ಟೆಂಬರ್ 11 2001ರಂದು ಅಮೆರಿಕಾ ಹಿಂದೆಂದು ಕಂಡು ಕೇಳರಿಯದ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿತ್ತು. ಅಂದು ಅಲ್‌ ಖೈದಾ ಉಗ್ರ ಸಂಘಟನೆಗೆ ಸೇರಿದ 19 ಉಗ್ರರು ಅಮೆರಿಕಾದ ನಾಲ್ಕು ಕಮರ್ಷಿಯಲ್ ವಿಮಾನವನ್ನೇ ಹೈಜಾಕ್ ಮಾಡಿ ನ್ಯೂಯಾರ್ಕ್‌ ನಗರದಲ್ಲಿದ್ದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಡಿಕ್ಕಿ ಹೊಡೆಸಿದವು. ಅಮೆರಿಕಾದ ಮಣ್ಣಿನಲ್ಲಿ ಈ ಹಿಂದೆಂದು ನಡೆದಿರದಂತಹ ಈ ಭಯೋತ್ಪಾದಕ ದಾಳಿಯಲ್ಲಿ ಸುಮಾರು 3000 ಜನ ಸಾವನ್ನಪ್ಪಿದ್ದರು. ಆದರೆ ಈ ದಾಳಿಯ ವೇಳೆ ಆ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಣ್ಣು ಕಾಣದ ವ್ಯಕ್ತಿಯೊಬ್ಬನನ್ನು ಆತನ ಸರ್ವೀಸ್ ಡಾಗ್ ರಕ್ಷಣೆ ಮಾಡಿತ್ತು. ಆ ಮುದ್ದು ಶ್ವಾನದ ಅದ್ಬುತ ಕತೆ ಇಲ್ಲಿದೆ.

ಅದು 2001ರ ಸೆಪ್ಟೆಂಬರ್‌ 11ರ ಮುಂಜಾನೆ ಕಣ್ಣು ಕಾಣದ ಮಿಚೆಲ್ ಹಿಂಗ್ಸನ್ ಅವರು ಈ ಭಯೋತ್ಪಾದಕ ದಾಳಿಗೊಳಗಾದ ಅವಳಿ ಕಟ್ಟಡದ ಉತ್ತರದಲ್ಲಿದ್ದ ಟವರ್‌ನ 78ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಅಲ್ಲಿ ಏನಾಗುತ್ತಿದೆ ಎಂಬುದರ ಅರಿವಿರಲಿಲ್ಲ, ಬೆಂಕಿಯ ಕೆನ್ನಾಲಿಗೆ ಕಟ್ಟಡವನ್ನು ಸುಡುತ್ತಿರುವುದು ಅವರಿಗೆ ಕಾಣುತ್ತಿರಲಿಲ್ಲ, ಹಾಗೂ ತಮ್ಮ ಕಿಟಿಕಿಯ ಹೊರಗೆ ಕಟ್ಟಡದ ಅವಶೇಷಗಳು ಬೀಳುತ್ತಿರುವುದ ಅವರಿಗೆ ಕಾಣುತ್ತಿರಲಿಲ್ಲ. ಏಕೆಂದರೆ ಹುಟ್ಟಿದಾಗಿನಿಂದಲೂ ಅವರಿಗೆ ಕಣ್ಣು ದೃಷ್ಟಿ ಇರಲಿಲ್ಲ.

ಆದರೆ ಅವರಿಗೆ ಕಟ್ಟಡ ಅಲುಗುತ್ತಿರುವುದರ ಅರಿವು ಅವರಿಗಾಗಿತ್ತು. ಜೊತೆಗೆ ಕಿರುಚಾಟ ಕೂಗಾಟಗಳು ಅವರಿಗೆ ಕೇಳಿಸುತ್ತಿತ್ತು. ಅವರ ಜೊತೆಗಿದ್ದ ಅವರ ಪ್ರೀತಿಯ ಸರ್ವೀಸ್ ಡಾಗ್‌ ರೋಸೆಲ್ಲೆ ಈ ಕಿರುಚಾಟ ಕೂಗಾಟವನ್ನು ಕೇಳಿ ಹಠಾತ್ ನಿದ್ದೆಯಿಂದ ಎದ್ದು ಕುಳಿತಿತ್ತು. ಆದರೆ ಈ ಮಾರ್ಗದರ್ಶಿ ಶ್ವಾನ ಹೆದರಲಿಲ್ಲ, ಹೀಗಾಗಿ ಮಿಚೆಲ್‌ ಹಿಂಗ್ಸನ್‌ಗೆ ತಾನು ಇಲ್ಲಿಂದ ಪಾರಾಗುವ ಅವಕಾಶವಿದೆ ಎಂಬುದರ ಅರಿವಾಗಿತ್ತು.

ಇತ್ತ ಪರಿಸ್ಥಿತಿ ಅರಿತ ಮಿಚೆಲ್ ಹಿಂಗ್ಸನ್ ಅವರ ಮಾರ್ಗದರ್ಶಿ ಶ್ವಾನ ರೊಸೆಲ್ಲೆ ಸ್ವಲ್ಪವೂ ತಡ ಮಾಡದೇ, ತನ್ನ ಮಾಲೀಕ ಮಿಚೆಲ್ ಹಿಂಗ್ಸನ್ ಅವರನ್ನು ಮೆಟ್ಟಿಲಿನ ಬಳಿ ಕರೆದೊಯ್ದಿತ್ತು. ಅವರು ಜೊತೆಯಾಗಿ 1,463 ಮಹಡಿಗಳನ್ನು ಇಳಿಯುವುದಕ್ಕೆ ಶುರು ಮಾಡಿದರು. ಕಟ್ಟಡವನ್ನು ಆವರಿಸಿದ ದಟ್ಟವಾದ ಹೊಗೆ, ಜೆಟ್ ಇಂಧನ, ಗಾಯಗೊಂಡ ಬದುಕುಳಿದವರು ಮತ್ತು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿರುವ ಭಯ ಆತಂಕದ ಮಧ್ಯೆ ತನ್ನ ಮಾಲೀಕನನ್ನು ಕರೆದುಕೊಂಡು ಶ್ವಾನ ರೊಸೆಲ್ಲೆ ಮೆಟ್ಟಿಲುಗಳ ಮೂಲಕ ಕೆಳಗಿಳಿಯಲು ಆರಂಭಿಸಿತ್ತು.

ಒಂದು ಹಂತದಲ್ಲಂತೂ ಮಿಚೆಲ್ ಹಿಂಗ್ಸನ್ ಅವರ ಸಹೋದ್ಯೋಗಿಗಳು ಅಳುವುದಕ್ಕೆ ಶುರು ಮಾಡಿದರು. ನಾವು ಅಲ್ಲಿಗೆ ತಲುಪುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳುವುದಕ್ಕೆ ಶುರು ಮಾಡುತ್ತಾರೆ. ಆದರೆ ಮಿಚೆಲ್ ಹಿಂಗ್ಸನ್ ಅವರು ನಾನು ಹಾಗೂ ರೊಸೆಲ್ಲೆ ಅವರು ಇದನ್ನು ದಾಟಿ ಹೋಗುವುದಕ್ಕೆ ಸಾಧ್ಯವಾಗುತ್ತದೆ ಎಂದಾದರೆ ನಿಮಗೂ ಇದು ಸಾಧ್ಯವಾಗುತ್ತದೆ ಎಂದು ಶಾಂತವಾಗಿ ಅವರಿಗೆ ಹೇಳುವ ಮೂಲಕ ಅವರನ್ನು ಹುರಿದುಂಬಿಸುತ್ತಾ ಮುಂದೆ ಸಾಗಿದರು.

ಇತ್ತ ಶ್ವಾನ ರೊಸೆಲ್ಲಾ ತನ್ನ ಮಾಲೀಕನಿಗೆ ದಾರಿ ತೋರುತ್ತಾ ಮೆಟ್ಟಿಲುಗಳನ್ನು ಕೆಳಗೆ ಕೆಳಗೆ ಇಳಿಯುತ್ತಲೇ ಇತ್ತು. ಅಗ್ನಿ ಶಾಮಕ ಸಿಬ್ಬಂದಿ ಅವರನ್ನು ಹಾದು ಮುಂದೆ ಹೋದರು, ಅವರಲ್ಲನೇಕರು ಮರಳಿ ಬರಲೇ ಇಲ್ಲ. ಆದರೆ ಅಚ್ಚರಿ ಎಂದರೆ ಈ ಗಗನಚುಂಬಿ ಕಟ್ಟಡ ಇನ್ನೇನು ಕುಸಿದು ಬೀಳುವುದಕ್ಕೆ ನಿಮಿಷಗಳ ಮೊದಲು ರೊಸೆಲ್ಲೆ ಹಾಗೂ ಮಿಚೆಲ್ ಕಟ್ಟಡದ ಮೊಗಸಾಲೆಯನ್ನು ತಲುಪಿದ್ದರು.

ಅಲ್ಲಿ ಹೊರಗೆ ಇಡೀ ಆಕಾಶವೇ ಹೊಗೆಯಿಂದಾಗಿ ಕಪ್ಪು ಬಣ್ಣಕ್ಕೆ ತಿರುಗಿತ್ತು. ಆದರೆ ಮಿಚೆಲ್‌ಗೆ ಅದನ್ನು ನೋಡುವುದಕ್ಕೆ ಸಾಧ್ಯವಿರಲಿಲ್ಲ. ಹಾಗೂ ಅಲ್ಲಿದ್ದ ಅನೇಕರಿಗೂ ಅದನ್ನೂ ನೋಡುವುದಕ್ಕೆ ಅವಕಾಶ ಸಿಗಲಿಲ್ಲ, ಇಂತಹ ಪರಿಸ್ಥಿತಿಯ ನಡುವೆಯೂ ಶ್ವಾನ ರೊಸೆಲ್ಲೆ ಅವನನ್ನು ಕುಸಿಯುತ್ತಿರುವ ಕಟ್ಡಡದ ನಡುವಿನ ಬೀದಿಗಳಲ್ಲಿ ಸುರಕ್ಷಿತವಾಗಿ ಮಾರ್ಗದರ್ಶನ ಮಾಡಿ, ನೆಲ ಮಹಡಿಯ ಶುದ್ಧ ಗಾಳಿ ಇರುವ ಮೆಟ್ಟಿಲುಗಳ ಅಂಚಿನಲ್ಲಿ ಕರೆತಂದು ನಿಲ್ಲಿಸಿದ್ದಳು ಶ್ವಾನ ರೊಸೆಲ್ಲಿ.

ಅಂದು ಆಕೆ ಅವನನ್ನು ಬಿಟ್ಟು ಎಲ್ಲಿಗೂ ಹೋಗಲಿಲ್ಲ, ಹಾಗೆಯೇ ಮಿಚೆಲ್ ಕೂಡ ಆಕೆಯ ಕತ್ತಿಗೆ ಸಿಕ್ಕಿಸಿದ ಹಗ್ಗದ ಕೈ ಬಿಡಲಿಲ್ಲ. ಹಾಗೆಯೇ ಶ್ವಾನ ರೊಸೆಲ್ಲಿ ಕೂಡ ಆತನನ್ನು ಎಲ್ಲೂ ಬೀಳುವುದಕ್ಕೆ ಬಿಡದೇ ರಕ್ಷಿಸಿದಳು. ಇದಾಗಿ 10 ವರ್ಷಗಳ ನಂತರ 2011ರಲ್ಲಿ ರೊಸೆಲ್ಲಿ ನಿಧನಳಾದಳು. ಆದರೆ ಆಕೆಯ ಸಾಹಸಗಾಥೆ ಅಮೆರಿಕಾದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ನಿಂತಿದೆ. ಏಕೆಂದರೆ ಧೈರ್ಯ ಯಾವಾಗಲೂ ಸದ್ದು ಮಾಡುವುದಿಲ್ಲ, ಕೆಲವೊಮ್ಮೆ ಅದು ನಿಮ್ಮ ಜೊತೆ ಜೊತೆಗೆ ಹೆಜ್ಜೆ ಇಡುತ್ತಿರುತ್ತದೆ.

ಅಂದಹಾಗೆ ಈ ಸಾಹಸಿ ಶ್ವಾನದ ಕತೆಯನ್ನು ಉದ್ಯಮಿ ರಾಜೀವ್ ಗೋವಿಂದನ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ. ಅನೇಕರು ಶ್ವಾನದ ಸಾಹಸಕ್ಕೆ ಸ್ವಾಮಿನಿಷ್ಠೆ ಧೈರ್ಯ ಸಾಹಸ ಕಂಡು ಭಾವುಕರಾಗಿದ್ದಾರೆ.

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್