
48 ವರ್ಷದ ಹಿಂದೆ ಪಾಠ ಕಲಿಸಿದ ವನಜಾಕ್ಷಮ್ಮ ಟೀಚರ್ ಭೇಟಿಯಾದ ಖುಷಿ ಹಂಚಿಕೊಂಡ ವ್ಯಕ್ತಿ
ಸುಮಾರು 48 ವರ್ಷಗಳ ಹಿಂದೆ ಪಾಠ ಕಲಿಸಿದ ಶಿಕ್ಷಕಿ ಭೇಟಿಯಾದ ಸಂತಸವನ್ನು ವ್ಯಕ್ತಿಯೊಬ್ಬರು ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹಳೆ ವಿದ್ಯಾರ್ಥಿ ಭೇಟಿಯಾದರೂ ಟೀಚರ್ ಅವರನ್ನು ಮರೆತಿಲ್ಲ ಅನ್ನೋದು ಇಲ್ಲಿಯ ವಿಶೇಷವಾಗಿದೆ. ತರೀಕೆರೆಯ ವ್ಯಕ್ತಿಯೊಬ್ಬರು ಇಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಶ್ರೀಮತಿ ವನಜಾಕ್ಷಮ್ಮ ಅವರನ್ನು ಭೇಟಿಯಾಗಿ ಸಿಹಿ ಕೊಡಿಸಿದ್ದಾರೆ. ಸುಮಾರು 75ರ ಆಸುಪಾಸಿನಲ್ಲಿ ಟೀಚರ್ ವನಜಾಕ್ಷಮ್ಮ ಅವರು ಗಟ್ಟಿಮುಟ್ಟಾಗಿದ್ದು, ಜಡಿಮಳೆಯಲ್ಲಿಯೂ ಲವಲವಿಕೆಯಿಂದ ಓಡಾಡಿಕೊಂಡಿರೋದನ್ನು ನೋಡಿದ ಅವರ ವಿದ್ಯಾರ್ಥಿಗಳು ಖುಷಿಯಾಗಿದ್ದಾರೆ.
ವೈರಲ್ ಆಗಿರುವ ವಿಡಿಯೋಗೆ 9 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದ್ದು, ನೂರಾರು ಕಮೆಂಟ್‌ಗಳು ಬಂದಿದೆ. ನಮಗೂ ಇವರೇ 1 ರಿಂದ 7ನೇ ಕ್ಲಾಸ್‌ವರೆಗೆ ಓದಿಸಿದ್ದಾರೆ. ಕಾರಣಾಂತರಗಳಿಂದ ತರೀಕರೆಯಲ್ಲಿಲ್ಲ. ಇಂದು ಟೀಚರ್ ಅವರನ್ನು ನೋಡಿ ಖುಷಿಯಾಯ್ತು. ವಿಡಿಯೋ ಮಾಡಿದ ನವಲೆ ಅವರಿಗೆ ಧನ್ಯವಾದಗಳು ಎಂದು ಕಮೆಂಟ್ ಮಾಡಿದ್ದಾರೆ. Navale Brother's Original Kalyan Kumar Navale ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
ಸುಮಾರು 48 ವರ್ಷಗಳ ಹಿಂದೆ ನನಗೆ ಒಂದರಿಂದ ಏಳನೇ ತರಗತಿವರೆಗೆ(1977-1982) ಸರ್ಕಾರಿ ಪ್ರೈಮರಿ ಶಾಲೆಯಲ್ಲಿ ಪಾಠ ಮಾಡಿದ ಶ್ರೀಮತಿ ವನಜಾಕ್ಷಮ್ಮ ಟೀಚರ್ ರವರು ಈ ದಿನ ಭೇಟಿಯಾಗಿದ್ದರು, ಇವರ ಪುತ್ರರಾದ ಶಂಕರನಾರಾಯಣ ಸರ್ ರವರು ನನಗೆ ಸರ್ಕಾರಿ ಜೂನಿಯರ್ ಕಾಲೇಜ್ ಹೈಸ್ಕೂಲ್ ನಲ್ಲಿ ಹತ್ತನೇ ತರಗತಿಯಲ್ಲಿ(1985-1986) ನನಗೆ ಮೇಷ್ಟ್ರು ಆಗಿ ಪಾಠ ಮಾಡಿದ್ದರು ಎಂದು ಕಲ್ಯಾನ್ ಕುಮಾರ್ ಅವರು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಟೀಚರ್ ವನಜಾಕ್ಷಮ್ಮ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ಎದುರಿಗೆ ಬಂದ ನವಲೆ, ಟೀಚರ್‌ಗೆ ನಮಸ್ಕರಿಸಿ ಪರಿಚಯ ಮಾಡಿಕೊಳ್ಳುತ್ತಾರೆ. ಟೀಚರ್ ಸಹ ಕಡಿಮೆ ಸಮಯದಲ್ಲಿಯೇ ನವಲೆ ಅವರನ್ನು ಗುರುತಿಸುತ್ತಾರೆ. 1977 ರಿಂದ 1982ರವರೆಗೆ ನೀವು ನಮಗೆ ಪಾಠ ಮಾಡಿದ್ದೀರಿ. ನನ್ನ ಮಗಳು ಸ್ಟೇಟ್ ಗೆ ಸೆಕೆಂಡ್ Rank ಬಂದಿದ್ದಾಳೆ ಎಂದು ತಿಳಿಸುತ್ತಾರೆ. ನಂತರ ಕಲ್ಯಾಣ್ ಕುಮಾರ್, ಟೀಚರ್ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಮಗಳು Rank ಬಂದಿರೋದಕ್ಕೆ ಸ್ವೀಟ್ ಕೊಡಿಸಲ್ಲವಾ ಎಂದು ಟೀಚರ್ ಕೇಳುತ್ತಾರೆ. ಇದಕ್ಕೆ ನಿಮ್ಮ ಮನೆಗೆ ತಂದು ಕೊಡುವೆ ಎಂದು ಹೇಳುತ್ತಾರೆ. ಹಾಗೆ ಮಾತನಾಡುತ್ತಾ ಬರುತ್ತಿದ್ದಂತೆ ನವಲೆ ಅವರಿಗೆ ಸ್ವೀಟ್ ಮಾರ್ಟ್ ಕಾಣಿಸುತ್ತದೆ. ಕೂಡಲೇ ಓಡಿ ಹೋಗಿ ಸ್ವೀಟ್ ತೆಗೆದುಕೊಂಡು ಬಂದು ಟೀಚರ್‌ಗೆ ನೀಡುತ್ತಾರೆ. ಟೀಚರ್ ಸಹ ಸ್ವೀಟ್ ತೆಗೆದುಕೊಂಡು ಹಾರೈಸಿ ಅಲ್ಲಿಂದು ಹೊರಡುತ್ತಾರೆ.
ನನಗೆ ಈಗ 55 ವರ್ಷ, ನಮ್ಮ ಟೀಚರ್‌ಗೆ 80 ವಯಸ್ಸು ಇರಬಹುದು. ಇಂದಿಗೂ ಹೇಗೆ ಗಟ್ಟಿಮುಟ್ಟಾಗಿದ್ದಾರೆ ನೋಡಿ. ಸುಮಾರು ವರ್ಷಗಳ ನಂತರ ನಮ್ಮ ಟೀಚರ್ ಅವರನ್ನು ನೋಡಿ ಖುಷಿಯಾಗಿದೆ. ನಾನೇ ಅವರ ಮನೆಗೆ ಹೋಗಿ ಸ್ವೀಟ್ ಕೊಡಬೇಕಿತ್ತು. ಈಗ ಅವರೇ ಕೇಳಿದಾಗ ನಾನು ಕೊಡದಿದ್ದರೆ ತಪ್ಪಾಗುತ್ತದೆ ಎಂದು ಕಲ್ಯಾಣ್ ಕುಮಾರ್ ಹೇಳಿದ್ದಾರೆ.
ಜುಲೈ 6ರಂದು ಅಪ್ಲೋಡ್ ಆಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಸರ್ ನಮಸ್ಕಾರ... ಇವರು ನಿಮಗೆ .. ಶಾಲೆಯಲ್ಲಿ ಪಾಠ ಮಾಡಿದ ಗುರುಮಾತೆಯರು ಅಂತ ಹೇಳುತ್ತೀರಾ. ಗುರುಪೂರ್ಣಿಮಾ ಬಂದಿದೆ. ಗುರುಮಾತೆಯರಿಗೆ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ಸನ್ಮಾನ ಮಾಡಿ ಖುಷಿ ಖುಷಿಯಿಂದ ಕಳಿಸಿಕೊಡಿ. ಆ ಒಂದು ಗುರುಮಾತೆ ಆಶೀರ್ವಾದ ನಿಮಗೆ ಯಾವತ್ತೂ ಇದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.