
ಸಾಕು ನಾಯಿಗಳು ಮನುಷ್ಯನ ಬೆಸ್ಟ್ ಫ್ರೆಂಡ್‌ಗಳು ಇತ್ತೀಚೆಗಂತೂ ನಾಯಿಗಳು ಮನೆ ಮಕ್ಕಳಂತೆ ಎಲ್ಲಾ ಐಷಾರಾಮಿ ಜೀವನವನ್ನು ಎಂಜಾಯ್ ಮಾಡುತ್ತಿರುತ್ತವೆ. ಅನೇಕರು ತಮ್ಮ ನಾಯಿಗಳನ್ನು ತಾವು ಹೋಗುವಲೆಲ್ಲಾ ಕರೆದುಕೊಂಡು ಹೋಗುತ್ತಾರೆ. ಅದರ ಹುಟ್ಟುಹಬ್ಬವನ್ನು ಮನೆ ಮಕ್ಕಳ ಹುಟ್ಟುಹಬ್ಬದಂತೆ ಅದ್ದೂರಿಯಾಗಿ ಆಚರಿಸುತ್ತಾರೆ. ತಮ್ಮ ಮಕ್ಕಳಗಿಂತ ಹೆಚ್ಚು ಕೆಲವರು ತಮ್ಮ ಶ್ವಾನವನ್ನು ಮನಸ್ಸಿಗೆ ಹಚ್ಚಿಕೊಂಡು ಬಿಟ್ಟಿರುತ್ತಾರೆ. ಅವುಗಳಿಗೆ ಏನಾದರೂ ಸ್ವಲ್ಪ ಹೆಚ್ಚು ಕಡಿಮೆ ಆದರೂ ಮಾಲೀಕರು ಆತಂಕದಿಂದ ಒದ್ದಾಡುತ್ತಾರೆ. ಶ್ವಾನ ಸಾಕುವವರು ಶ್ವಾನ ಪ್ರಿಯರು ನೀವಾಗಿದ್ದರೆ ಇದರ ಅನುಭವ ನಿಮಗಾಗಿದ್ದಿರಬಹುದು. ಶ್ವಾನಗಳು ತೀರಿಕೊಂಡ ನಂತರ ಕೆಲವರು ಖಿನ್ನತೆಗೂ ಜಾರುತ್ತಾರೆ. ಕೆಲ ತಿಂಗಳ ಹಿಂದೆ ವ್ಯಕ್ತಿಯೊಬ್ಬ ತನ್ನ ಶ್ವಾನದ ಸಾವಿನ ನಂತರ ಆ ದುಃಖದಿಂದ ಹೊರ ಬರಲಾಗದೇ ಸಾವಿಗೆ ಶರಣಾಗಿದ್ದನು ಇಲ್ಲಿ ನೆನಪಿಸಿಕೊಳ್ಳಬಹುದು. ಹೀಗಿರುವಾಗ ಇಲ್ಲೊಬ್ಬರು ನಟಿ ತಮ್ಮ ಪ್ರೀತಿಯ ಶ್ವಾನಕ್ಕಾಗಿ ನದಿ ನೀರಿಗೆ ಹಾರಿ ಪಾರಾಗಿ ಬಂದ ಘಟನೆ ನಡೆದಿದ್ದು, ಅವರ ವೀಡಿಯೋ ಈಗ ಭಾರೀ ವೈರಲ್ ಆಗಿದೆ.
ಹೌದು ಹಿಂದಿ ಕಿರುತೆರೆ ನಟಿ ಹಾಗೂ ಬಾಲಿವುಡ್‌ನ ಕೆಲ ಸಿನಿಮಾಗಳಲ್ಲಿಯೂ ನಟಿಸಿರುವ ಕವಿತಾ ಕೌಶಿಕ್ ಅವರು ಇತ್ತೀಚೆಗೆ ತಮ್ಮ ಪತಿ ರೋನಿತ್ ಬಿಸ್ವಾಸ್ ಅವರ ಹುಟಟುಹಬ್ಬವನ್ನು ಆಚರಿಸುವುದಕ್ಕಾಗಿ ಜಲಪಾತವೊಂದರ ಬಳಿ ಪ್ರವಾಸ ಹೋಗಿದ್ದರು. ತಮ್ಮ ಖುಷಿಯ ಕ್ಷಣವನ್ನು ಸಂಭ್ರಮಿಸುವುದಕ್ಕಾಗಿ ಈ ಜೋಡಿ ತಮ್ಮ ಜೊತೆ ತಮ್ಮ ಪ್ರೀತಿಯ ಶ್ವಾನವನ್ನು ಅಲ್ಲಿಗೆ ಕರೆದೊಯ್ದಿತ್ತು. ಆದರೆ ಅಲ್ಲಿ ಇವರ ಸಾಕು ನಾಯಿ ರಾಕಾ ಬೇರೊಂದು ನಾಯಿಯನ್ನು ನೋಡಿದ್ದು, ಆ ನಾಯಿಯನ್ನು ಓಡಿಸುತ್ತಾ ಸಾಗಿದೆ. ಜಲಪಾತದ ಧುಮ್ಮಿಕ್ಕಿ ಹರಿಯುವ ನೀರನ್ನು ಲೆಕ್ಕಿಸದೇ ನಾಯಿ ರಾಕಾ ಮತ್ತೊಂದು ನಾಯಿಯನ್ನು ಓಡಿಸಿಕೊಂಡು ಹೋಗಿದ್ದು, ಕವಿತಾ ಅವರಿಗೆ ಜೀವ ಬಾಯಿಗೆ ಬಂದಂತಾಗಿದೆ.
ಕ್ಷಣವೂ ಯೋಚನೆ ಮಾಡದೇ ಅವರು ನೀರಿಗೆ ಧುಮುಕಿ ತನ್ನ ಪ್ರೀತಿಯ ನಾಯಿಯ ಹಿಂದೆ ಓಡಿದ್ದು, ಕಡೆಗೂ ಆತನನ್ನು ರಕ್ಷಿಸಿ ಕರೆತಂದಿದ್ದಾರೆ. ಈ ದೃಶ್ಯ ಅವರ ಕ್ಯಾಮರಾಗಳಲ್ಲಿ ಸೆರೆ ಆಗಿದ್ದು, ಅದನ್ನು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನನ್ನು ಹೀರೋ ಮಾಡುಬಹುದಾಗಿದ್ದ ವೀಡಿಯೋವನ್ನು ಸೆರೆ ಹಿಡಿಯಲಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. 'ನಮ್ಮ ಬಹಳ ಖುಷಿಯಾದ ಯಾವುದೇ ತೊಂದರೆ ಇಲ್ಲದ ಹುಟ್ಟುಹಬ್ಬದಂದು ನಮ್ಮ ಶ್ವಾನ ಸಾವು ಅಥವಾ ಬದುಕಿನ ನಡುವೆ ಆಯ್ಕೆ ಮಾಡುವಂತಹ ಪರಿಸ್ಥಿತಿ ತಂದಿಟ್ಟಿತ್ತು.' ಎಂದು ಅವರು ವೀಡಿಯೋದ ಮೇಲೆ ಬರೆದಿದ್ದಾರೆ.
ನಾವು ನದಿಯ ಸುರಕ್ಷಿತವಾದ ಒಂದು ಬದಿಯಲ್ಲಿ ಸ್ನಾನ ಮಾಡುತ್ತಿದ್ದೆವು. ಇದೇ ವೇಳೆ ರಾಕಾನಿಗೆ ತನ್ನ ವಿರೋಧಿ ಶ್ವಾನವೊಂದು ಕಂಡಿದ್ದು, ಆತನನ್ನು ಬೆನ್ನಟ್ಟುತ್ತಾ ಉಕ್ಕಿ ಹರಿಯುವ ನೀರಿನ ಸೆಳೆತ ತೀವ್ರವಾಗಿರುವ ಪ್ರದೇಶಕ್ಕೆ ಹೋಗಿದೆ. ಈ ವೇಳೆ ಎರಡು ನಾಯಿಗಳು ಅಲ್ಲಿ ಕೆಳಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿವೆ ಬಳಿಕ ನಟಿ ಕವಿತಾ ನಾಯಿಯನ್ನು ಹುಡುಕುತ್ತಾ ನದಿಯ ಕೆಳ ಬದಿಗೆ ಹೋಗಿ ಅಲ್ಲಿ ಹಸಿರು ಪೊದೆಗಳ ನಡುವೆ ಸಿಲುಕಿದ್ದ ತನ್ನ ಶ್ವಾನವನ್ನು ಕರೆದುಕೊಂಡು ಬಂದಿದ್ದಾರೆ.
ಈ ವೀಡಿಯೋ ನೋಡಿದ ಅಭಿಮಾನಿಗಳು ನಟಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಮತ್ತೊಂದು ಶ್ವಾನ ಎಲ್ಲಿ ಎಂದು ಕೇಳಿದ್ದಾರೆ. ಬಹುತೇಕರು ನಟಿಯ ಬಳಿ ಮತ್ತೊಂದು ಶ್ವಾನದ ಬಗ್ಗೆ ಕೇಳಿದ್ದು, ಮತ್ತೊಂದು ಶ್ವಾನವನ್ನು ರಕ್ಷಿಸಲಾಗಲಿಲಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಕಹಾನಿ ಘರ್ ಘರ್ ಕಿ, ಕುಂಕುಮ್ - ಏಕ್ ಪ್ಯಾರಾ ಸಾ ಬಂಧನ್ ಮತ್ತು ಸಿಐಡಿ ನಂತಹ ಟಿವಿ ಧಾರವಾಹಿಗಳಲ್ಲಿ ನಟಿಸುವ ಮೂಲಕ ಕವಿತಾ ಭಾರೀ ಜನಪ್ರಿಯತೆ ಪಡೆದಿದ್ದಾರೆ. 2004 ರಲ್ಲಿ ಅವರು ಏಕ್ ಹಸಿನಾ ಥಿ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇತ್ತೀಚೆಗೆ ಜುನೈದ್ ಖಾನ್ ಮತ್ತು ಖುಷಿ ಕಪೂರ್ ಅಭಿನಯದ ಲವ್ಯಾಪ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.