- ರಾಮತೀರ್ಥ ಗುಡ್ಡದ ಮೇಲಿರುವ ತ್ಯಾಜ್ಯ ವಿಲೇವಾರಿ ಘಟಕ
- ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ತ್ಯಾಜ್ಯ ವಿಲೇವಾರಿ ಘಟಕ
- ಘಟಕದ ಮಲಿನ ನೀರು ಗುಡ್ಡದ ಕೆಳಭಾಗದಲ್ಲಿರುವ ಕೆರೆಗಳಿಗೆ ಸೇರ್ಪಡೆ
ಉತ್ತರಕನ್ನಡ (ಡಿ.08): ಹೊನ್ನಾವರ (Honnavara) ತಾಲ್ಲೂಕಿನ ರಾಮತೀರ್ಥ ಗುಡ್ಡದ ಮೇಲೆ ಹೊನ್ನಾವರ ಪಟ್ಟಣ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯವನ್ನು (Garbage) ಅನೇಕ ವರ್ಷಗಳಿಂದ ತಂದು ಸುರಿಯಲಾಗುತ್ತಿದೆ. ಇದರೊಂದಿಗೆ ಕಳೆದ ಆರೇಳು ವರ್ಷಗಳಿಂದ ಕುಮಟಾ ಪುರಸಭೆ ಕೂಡಾ ಅಲ್ಲಿನ ತ್ಯಾಜ್ಯವನ್ನು ಇಲ್ಲಿಗೆ ಕಳುಹಿಸಿಕೊಡುತ್ತಿದೆ.
ಇದರಿಂದಾಗಿ ರಾಮತೀರ್ಥ ಗುಡ್ಡ ಪೂರ್ತಿ ಕಸದ ರಾಶಿಯಿಂದಲೇ ತುಂಬಿ ಹೋಗಿದೆ. ಆದರೆ, ಇಲ್ಲಿನ ಸಮೀಪದಲ್ಲೇ ರಾಮತೀರ್ಥ ಹಾಗೂ ಅರೆಸಾಮಿ ಕೆರೆಯಿದ್ದು, ತ್ಯಾಜ್ಯ ವಿಲೇವಾರಿ ಘಟಕದಿಂದಾಗಿ ಇವುಗಳು ಮಲಿನಗೊಳ್ಳುತ್ತಿವೆ. ತಾಲೂಕಿನ ಉತ್ತರ ಭಾಗ, ಕರ್ಕಿ, ವಂದೂರು, ತೊಪ್ಪಲಕೇರಿ, ದುಗ್ಗೂರು, ರಾಮತೀರ್ಥ ಮತ್ತು ಸುತ್ತಮುತ್ತಲಿನ ಜನರಿಗೆ ಅರೆಸಾಮಿ ಕೆರೆ ಕುಡಿಯುವ ನೀರಿನ ಮೂಲವಾಗಿದ್ದು, ಇದು ತ್ಯಾಜ್ಯ ವಿಲೇವಾರಿ ಘಟಕದ ಕೆಳಭಾಗದಲ್ಲೇ ಇದೆ. ನೀರಿನ ಮೂಲವಾದ ಕೆರೆ ಕೆಳಭಾಗದಲ್ಲಿ ಇರೋದು ತಿಳಿದಿದ್ದರೂ ಮೇಲ್ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಯಾವತ್ತೂ ಕಸದ ರಾಶಿಯಿಂದ ತುಂಬಿಕೊಂಡಿರುವ ಈ ಪ್ರದೇಶದಿಂದ ಮಲಿನ ನೀರು ಕೆಳಭಾಗದ ಅರೆಸಾಮಿ ಕೆರೆಯನ್ನು ಸೇರಿ ಕಲುಷಿತಗೊಳಿಸುತ್ತಿದೆ.
2018 ರ ಜೂನ್ ತಿಂಗಳಲ್ಲಿ ಹೊನ್ನಾವರ ಮತ್ತು ಬೆಂಗಳೂರು ಮಟ್ಟದ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ತ್ಯಾಜ್ಯ ವಿಲೇವಾರಿ ಘಟಕ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಬಗ್ಗೆ ಮನವರಿಕೆ ಮಾಡಲಾಗಿದೆ. ಸುತ್ತಲಿನ ಆರೇಳು ಹಳ್ಳಿಗಳಿಗೆ ಈ ಕೆರೆ ಜಲಮೂಲವಾಗಿದ್ದು, ಮುಂದಕ್ಕೆ ಕೆರೆ ಸಂಪೂರ್ಣ ಕಲುಷಿತಗೊಳ್ಳುವುದಕ್ಕೂ ಮುನ್ನ ಈಗಲೇ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ವಹಿಸಬೇಕಿದೆ ಎಂದು ಆಗ್ರಹಿಸುತ್ತಿದ್ದಾರೆ ಸ್ಥಳೀಯರು.