ಮೀನುಗಾರರ ಆರಾಧ್ಯ ದೈವವಾದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಜರುಗಿದ್ದು ಕೊರೊನಾ ಆತಂಕದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವಿಜೃಂಭಣೆಯಿಂದ ಜರುಗುತ್ತಿದ್ದ ಜಾತ್ರೆ ಸರಳವಾಗಿ ನಡೆಯಿತು.
ಉತ್ತರ ಕನ್ನಡ (ಜ. 19): ಇದು ಕಾರವಾರದ (Karwar) ಬೈತಖೋಲ ಬಂದರಿನಲ್ಲಿ ನಡೆಯುವ ವಿಶೇಷ ಜಾತ್ರೆ (Festival) ಈ ಜಾತ್ರೆಗೆ ದೋಣಿಗಳಲ್ಲಿ ತೆರಳುವುದೇ ಒಂದು ವಿನೂತನ ಅನುಭವವಾದ್ದರಿಂದ ಪ್ರತೀ ವರ್ಷ ಸಾವಿರಾರು ಸಂಖ್ಯೆಯಲ್ಲಿ ಜನರು ಜಾತ್ರೆಗೆ ಆಗಮಿಸುತ್ತಿದ್ದರು. ಆದ್ರೆ, ಈ ಬಾರಿ ಕೊರೊನಾ ಕಾರಣದಿಂದಾಗಿ ಜಾತ್ರೆಯನ್ನು ಕಟ್ಟುನಿಟ್ಟಾಗಿ ಮಾಡಲಾಗಿದ್ದು, ಅನುಮತಿ ಪಡೆದ ಸ್ಥಳೀಯರಿಗೆ ಮಾತ್ರ ಜಾತ್ರೆಗೆ ತೆರಳಲು ಅವಕಾಶ ನೀಡಿದ್ದರಿಂದಾಗಿ ಜಾತ್ರೆ ಅಂದ ಕಳೆದುಕೊಳ್ಳುವಂತಾಗಿದೆ.
ಮೀನುಗಾರರ ಆರಾಧ್ಯ ದೈವವಾದ ಕೂರ್ಮಗಡ (Koormagadha) ದ್ವೀಪದ ನರಸಿಂಹ ದೇವರ ಜಾತ್ರೆ ಜರುಗಿದ್ದು ಕೊರೊನಾ ಆತಂಕದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವಿಜೃಂಭಣೆಯಿಂದ ಜರುಗುತ್ತಿದ್ದ ಜಾತ್ರೆ ಸರಳವಾಗಿ ನಡೆಯಿತು. ಕಾರವಾರದಿಂದ ಸುಮಾರು 16 ಕಿಲೋ ಮೀಟರ್ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಜಾತ್ರೆ ಜರುಗುತ್ತದೆ. ವರ್ಷಕ್ಕೊಮ್ಮೆ ಜರುಗುವ ಜಾತ್ರೆಗೆ ಕೇವಲ ಮೀನುಗಾರರಷ್ಟೇ ಅಲ್ಲದೇ ವಿವಿಧೆಡೆಗಳಿಂದಲೂ ಜನರು ಆಗಮಿಸುತ್ತಿದ್ದರು. ಬೋಟಿನಲ್ಲಿ ಜಾತ್ರೆಗೆ ತೆರಳುವುದೇ ಒಂದು ವಿಶಿಷ್ಟ ಅನುಭವವಾಗಿದ್ದು, ದ್ವೀಪದಲ್ಲಿನ ಸುಂದರ ಪರಿಸರ ಜಾತ್ರೆಗೆ ಬಂದವರಿಗೆ ಪ್ರವಾಸದ ಅನುಭವ ನೀಡುತ್ತಿತ್ತು. ಆದ್ರೆ, ಈ ಬಾರಿ ಕೊರೊನಾ ಅಬ್ಬರ ಹೆಚ್ಚಾಗಿರುವ ಹಿನ್ನೆಲೆ ಜಾತ್ರೆಗಳನ್ನು ನಡೆಸದಂತೆ ಸರ್ಕಾರದ ಆದೇಶದಿಂದಾಗಿ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಅಂದಹಾಗೆ, ಪ್ರತೀವರ್ಷ ಜನವರಿ ತಿಂಗಳ ಹುಣ್ಣಿಮೆ ದಿನದಂದು ಕೂರ್ಮಗಢದ ನರಸಿಂಹ ದೇವರ ಜಾತ್ರೆ ನಡೆಯುತ್ತದೆ. ನರಸಿಂಹ ದೇವರಿಗೆ ಬಾಳೆಗೊನೆ ಸೇವೆ ನೀಡುವುದು ವಿಶೇಷವಾಗಿದ್ದು, ದೇವರಲ್ಲಿ ಹರಕೆ ಹೊತ್ತುಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಮೀನುಗಾರರು ಪ್ರತೀವರ್ಷ ಜಾತ್ರೆಗೆ ಆಗಮಿಸಿ ದೇವರಿಗೆ ಬಾಳೆಗೊನೆಯನ್ನು ಅರ್ಪಿಸಿ ಮೀನುಗಾರಿಕೆ ಉತ್ತಮವಾಗಿ ನಡೆಯಲಿ ಎಂದು ಬೇಡಿಕೊಳ್ಳುತ್ತಾರೆ. ಇನ್ನು ಕೊರೊನಾ ಆತಂಕ ಹಿನ್ನೆಲೆ ಈ ಬಾರಿ ಗೋವಾ, ಮಹಾರಾಷ್ಟ್ರ ಭಾಗದ ಭಕ್ತರು ಆಗಮಿಸಿಲ್ಲ. ಇದರಿಂದಾಗಿ ಭಕ್ತರ ಸಂಖ್ಯೆ 200ರಿಂದ 300ಕ್ಕೆ ಸೀಮಿತವಾಗಿತ್ತು.