Jun 2, 2022, 10:39 AM IST
ಉತ್ತರ ಕನ್ನಡ (ಜೂ. 02): ಕಳೆದ 7-8 ವರ್ಷಗಳಿಂದ ಹೊನ್ನಾವರ ಖಾಸಗಿ ಕಟ್ಟಡದ ಪ್ರಥಮ ಅಂತಸ್ತಿನ ಮೂಲೆಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಂತೂ ಅಕ್ಷರಶಃ ಹಾಳು ಕೊಂಪೆಯಂತಾಗಿದೆ. ಈ ಕಚೇರಿಯಲ್ಲಿ ದಾಖಲೆ ಪತ್ರಗಳನ್ನು ಇರಿಸಲು ಯಾವುದೇ ಬೇರೆ ಜಾಗವಿಲ್ಲದ್ದರಿಂದ ಕಚೇರಿಯಲ್ಲಿ ಎಲ್ಲೆಲ್ಲಿ ಜಾಗವಿದೆಯೋ ಅಲ್ಲೆಲ್ಲಾ ದಾಖಲೆ ಪತ್ರಗಳನ್ನು ರಾಶಿ ಹಾಕಲಾಗಿದೆ.
ಕಾರವಾರ: ಸಿಆರ್‌ಝಡ್ ನಿಯಮ ಉಲ್ಲಂಘಿಸಿ ಪಾರ್ಕ್ ನಿರ್ಮಾಣ, ಮೀನುಗಾರರಿಗೆ ಸಂಕಷ್ಟ
ತುಂಡಾದ ಫೈಬರ್ ಹಾಗೂ ಮರದ ಖುರ್ಚಿಗಳನ್ನು ಕೂಡಾ ಇಲ್ಲೇ ರಾಶಿ ಹಾಕಲಾಗಿದೆ. ಇದರಿಂದಾಗಿ ಇದು ಕಚೇರಿಯ ಬದಲು ಗುಜರಿ ಅಂಗಡಿಯಂತೆ ಕಾಣುತ್ತಿದೆ. ಇನ್ನು ಈ ಕಚೇರಿ ಪ್ರಥಮ ಅಂತಸ್ತಿನಲ್ಲಿರೋ ಕಾರಣ ವಯೋವೃದ್ಧರು ಬಹಳಷ್ಟು ಕಷ್ಟಪಟ್ಟು ಮೆಟ್ಟಿಲುಗಳನ್ನು ಹತ್ತಿಕೊಂಡು ಈ ಕಚೇರಿಗೆ ಭೇಟಿ ನೀಡಬೇಕಿದೆ. ಈ ಕಾರಣದಿಂದ ಇಲ್ಲಿಗೆ ವಯೋವೃದ್ಧರನ್ನು ಕರೆತಂದು ಮತ್ತೆ ಕರೆದೊಯ್ಯೋದೇ ದೊಡ್ಡ ಸವಾಲಾಗಿದೆ.
ಒಂದು ವೇಳೆ ಇಲ್ಲಿನ ಕಚೇರಿಗೆ ಹೆಚ್ಚಿನ ಜನರು ಭೇಟಿ ನೀಡಿದಲ್ಲಿ ಇಲ್ಲಿ ಕೊನೇ ಪಕ್ಷ ಕುಳಿತುಕೊಳ್ಳಲು ಕೂಡಾ ವ್ಯವಸ್ಥೆ ಇರದ ಕಾರಣ ಎಲ್ಲರೂ ನಿಂತುಕೊಂಡೇ ಸಮಯ ಕಳೆದುಬೇಕಿದೆ. ಈ ಕಚೇರಿಯಲ್ಲಿ ಖುದ್ದಾಗಿ ಅಧಿಕಾರಿಗಳಿಗೆ ಬಳಸಲು ಕೂಡಾ ಒಂದು ಶೌಚಾಲಯವಿರದ್ದರಿಂದ ಕಚೇರಿಗೆ ಭೇಟಿ ನೀಡುವ ಸಕ್ಕರೆ ಕಾಯಿಲೆ ಹಾಗೂ ಇತರ ಆರೋಗ್ಯ ಸಮಸ್ಯೆ ಹೊಂದಿರುವ ಜನರು ತುರ್ತು ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಂತಿಲ್ಲ. ಇದರಿಂದಾಗಿ ಈ ಕಚೇರಿಗೆ ಬಂದಿರುವ ಅನಾರೋಗ್ಯ ಪೀಡಿತರು ಕುಳಿತಲ್ಲಿಯೇ ಶೌಚ ಮಾಡಿದಂತಹ ಉದಾಹರಣೆಗಳು ಕೂಡಾ ಇವೆ.
ಖಾಸಗಿ ಆಸ್ಪತ್ರೆ ಮೀರಿಸುವ ಭಟ್ಕಳ ತಾಲೂಕಿನ ಸರ್ಕಾರಿ ಆಸ್ಪತ್ರೆ...!
ಇನ್ನೂ ಒಂದು ಪ್ರಮುಖ ವಿಚಾರವಂದ್ರೆ ಈ ಕಚೇರಿಯಿಂದ ನೂರು ಮೀಟರ್ ದೂರದಲ್ಲೇ ನೂತನವಾಗಿ ಹೊನ್ನಾವರ ತಾಲೂಕು ಆಡಳಿತ ಸೌಧವಿದೆ. ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳು ಈ ಆಡಳಿತ ಸೌಧಕ್ಕೇ ವರ್ಗಾವಣೆಯಾಗಿದೆ. ಆದರೆ, ಸಬ್ ರಿಜಿಸ್ಟ್ರಾರ್ ಕಚೇರಿಯಂತೂ ಇಂದಿಗೂ ಖಾಸಗಿ ಕಟ್ಟಡದಲ್ಲಿ 16,000ರೂ. ಬಾಡಿಗೆ ನೀಡಿ ಕಾರ್ಯ ನಿರ್ವಹಿಸುತ್ತಿದೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಲೇ ಸಬ್ ರಿಜಿಸ್ಟ್ರಾರ್ ಕಚೇರಿ ಇಂದಿಗೂ ಧೂಳು ತುಂಬಿರುವ ಖಾಸಗಿ ಕಟ್ಟಡದಲ್ಲಿದ್ದು, ಜನರು ಸಾಕಷ್ಟು ಬೇಡಿಕೆ ಸಲ್ಲಿಸಿದರೂ ಈವರೆಗೂ ಕಚೇರಿ ಮಾತ್ರ ವರ್ಗಾವಣೆಯಾಗಿಲ್ಲ. ಜನರ ತೆರಿಗೆ ಹಣವನ್ನು ಈ ರೀತಿಯಲ್ಲಿ ಪೋಲು ಮಾಡೋ ಬದಲು ಹಣ ಉಳಿಸಿ ಯಾವುದೇ ಇತರ ಅಭಿವೃದ್ಧಿ ಕಾರ್ಯ ನಡೆಸಲಿ ಎಂಬುದು ಸ್ಥಳೀಯರ ಒತ್ತಾಯ.