ಉತ್ತರ ಕನ್ನಡ; ಸಿದ್ದಾಪುರದ ಹಾಲಬ್ಬವೇ ಒಂದು ವಿಶೇಷ!

Jan 18, 2021, 10:49 PM IST

ಕಾರವಾರ(ಜ.  18)  ರೈತರು ಬೆಳೆದ ಹೊಸ ಬೆಳೆಗಳನ್ನು ತಾವು ಬಳಸುವ ಮೊದಲು ದೇವರಿಗೆ ನೈವೇದ್ಯ ಮಾಡುವ ನಿಟ್ಟಿನಲ್ಲಿ ಆಚರಿಸುವ ವಿಶಿಷ್ಟ ರೀತಿಯ ಹಾಲಬ್ಬವೊಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕಟ್ಟೆಕೈ ಗ್ರಾಮದಲ್ಲಿ ನಡೆಯಿತು. ಹೊಸಕ್ಕಿ ಹಬ್ಬ ಇಲ್ಲವೇ ಹಾಲಬ್ಬ ಎಂದೇ ಕರೆಸಿಕೊಳ್ಳುವ ಈ ಹಬ್ಬವು ಸಿದ್ಧಾಪುರದ ಕಟ್ಟೆಕೈ ಗ್ರಾಮದಲ್ಲಿ ಆಚರಿಸುವ ವಿಶಿಷ್ಟ ಹಬ್ಬ. ರೈತಾಪಿ ವರ್ಗದವರೇ ಹೆಚ್ಚಾಗಿ ಇರುವ ಗ್ರಾಮದಲ್ಲಿ ತಾವು ಬೆಳೆದ ಬೆಳೆಗಳನ್ನು ಮೊದಲು ದೇವರಿಗೆ ನೈವೇದ್ಯ ಮಾಡುವ ನಿಟ್ಟಿನಲ್ಲಿ ತಲೆ ತಲಾಂತರಗಳಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಉಡುಪಿಯಲ್ಲಿ ಮಕರ ಸಂಕ್ರಾಂತಿ ವೈಭವ

ಅದರಂತೆ ಈ ಭಾರಿಯೂ ಮೂರು ದಿನಗಳ ಕಾಲ ಹಬ್ಬ ಅದ್ದೂರಿಯಾಗಿ ನಡೆಯಿತು. ಮೊದಲ ದಿನ ಮಹಾಸತಿ ದೇವಾಲಯದಿಂದ ದೇವರನ್ನು ಹುಲಿದೇವರ ಮನೆಗೆ ತಂದು ಪೂಜೆ ಸಲ್ಲಿಸಿದ ಗ್ರಾಮಸ್ಥರು, ತಾವು ಬೆಳೆದ ಹೊಸ ಬೆಳೆಗಳನ್ನು ದೇವರಿಗೆ ನೈವೇದ್ಯ ಮಾಡಿದ್ರು. ಎರಡನೇ ದಿನ ಬ್ರಹ್ಮ‌ದೇವರ ಕಾನಿನಲ್ಲಿ ಕೆಂಡದ ಸೇವೆಗೆ ಸಿದ್ಧತೆ ಮಾಡಿಕೊಂಡ ಗ್ರಾಮಸ್ಥರು ಸಂಜೆ ಹೊತ್ತಿಗೆ ದೇವರನ್ನು ಕಾನಿಗೆ ಒಯ್ದು ಜಾಗರಣ ನಡೆಸಿದ್ರು. ಮೂರನೇ ದಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು ಬಳಿಕ ದೇವರ ಪಾಲಿಕೆಯನ್ನು ಹೊತ್ತು ಸಿದ್ದಗೊಂಡಿದ್ದ ಕೆಂಡದ ರಾಶಿಯ ಸುತ್ತ ಸುತ್ತುವರಿದು ಕೆಂಡ ಹಾಯುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು. ಇನ್ನು ಕೆಂಡಹಾಯುವುದನ್ನು ಮತ್ತು ವಿಶಿಷ್ಟ ಹಾಲಬ್ಬ ನೋಡುವುದಕ್ಕಾಗಿಯೇ ಗ್ರಾಮಸ್ಥರಲ್ಲದೇ ಅಕ್ಕಪಕ್ಕದ  ಊರಿನಿಂದ ನೂರಾರು ಮಂದಿ ಆಗಮಿಸಿದ್ದರು. ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಹಬ್ಬ ರೈತ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.