Chikkamagaluru: 21 ತಲೆಮಾರುಗಳಿಂದ ನಡೆದುಕೊಂಡು ಬರ್ತಿರೋ ವಿಶಿಷ್ಟ ಗದ್ದೆ ನಾಟಿ ಸಂಪ್ರದಾಯ

Aug 4, 2022, 3:47 PM IST

ಚಿಕ್ಕಮಗಳೂರು (ಆ. 04): ಇಲ್ಲಿನ ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ ಕಳೆದ 21 ತಲೆಮಾರುಗಳಿಂದ ಅಂದ್ರೆ ಸುಮಾರು 500 ವರ್ಷಗಳಿಂದ ನಡೆದುಕೊಂಡು ಬಂದ ಗ್ರಾಮೀಣ ಭಾಗದ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ಪ್ರತಿ ವರ್ಷ ಗದ್ದೆ ನಾಟಿ ಮಾಡುವ ಸಮಯದಲ್ಲಿ ಹೊರನಾಡು ಗ್ರಾಮದ ದೊಡ್ಡಮನೆ ರಾಜೇಂದ್ರ ಹೆಗ್ಗಡೆ ಎಂಬುವರ ಮನೆಯ ಗದ್ದೆ ನಾಟಿ ಮಾಡಿದ ಬಳಿಕವೇ ಊರಿನ ಉಳಿದ ಗದ್ದೆಗಳನ್ನ ನಾಟಿ ಮಾಡೋದು. ದೊಡ್ಡಮನೆ ಗದ್ದೆಯ ನಾಟಿ ಮಾಡುವ ದಿನ ಗ್ರಾಮದ ಪ್ರತಿಯೊಂದು ಮನೆಯಿಂದಲೂ ಒಬ್ಬೊಬ್ಬರು ಹೋಗಿ ನಾಟಿ ಮಾಡುವ ಸಂಪ್ರದಾಯಕ್ಕೆ ಐದು ಶತಮಾನಗಳ ಇತಿಹಾಸವಿದೆ. ಅಂದು ಗಂಡಸರು-ಹೆಂಗಸರು ಎಲ್ಲಾರೂ ಗದ್ದೆಯನ್ನ ನಾಟಿ ಮಾಡುತ್ತಾರೆ. ಮರು ದಿನದಿಂದ ಗ್ರಾಮದ ಬೇರೆ ಗದ್ದೆಗಳನ್ನ ನಾಟಿ ಮಾಡುತ್ತಾರೆ. 

ಇನ್ನು ಈ ದೊಡ್ಡ ಮನೆ ಹೆಗ್ಗಡೆಯವರನ್ನ ಅನಾದಿ ಕಾಲದಿಂದ ಗ್ರಾಮದ ಜನ ಗೌರವಿಸಿಕೊಂಡು ಬಂದಿದ್ದಾರೆ. ಇವರನ್ನ ಪಾಳೇಗಾರರು, ಗೌಡರು, ಪಟೇಲರು ಎಂಬ ಮುಂತಾದ ಹೆಸರಿನಿಂದಲೂ ಕರೆಯುತ್ತಾರೆ. ಇಂದು ನಡೆದ ಈ ನಾಟಿ ಕಾರ್ಯಕ್ರಮದಲ್ಲಿ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದರು. ನಾನು ಕಳೆದ ವರ್ಷ ಬರಲು ಸಾಧ್ಯವಾಗಿರಲಿಲ್ಲ. ಈ ವರ್ಷ ಬಂದಿದ್ದೇನೆ. ಈ ದಿನ ಗ್ರಾಮದ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ಏರ್ಪಟ್ಟಿರುತ್ತೆ. ಭೂಮಿಯ ಅಂತರ್ಜಲ ಹೆಚ್ಚಲು ಹೆಚ್ಚು ಗದ್ದೆಗಳನ್ನ ನಾಟಿ ಮಾಡಬೇಕು. ಇಂತಹಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲು ಈ ದಿನ ನಾನು ಗದ್ದೆಗಿಳಿದು ನಾಟಿ ಮಾಡಿದ್ದೇನೆ ಎಂದು 21 ತಲೆಮಾರಿನ ಈ ಕಾರ್ಯಕ್ರಮವನ್ನ ಶ್ಲಾಘಿಸಿದ್ದಾರೆ. 

 ಜಗತ್ತು ಆಧುನಿಕತೆಗೆ ಕಾಲಿಟ್ಟಂತೆಲ್ಲಾ ಭವ್ಯ ಭಾರತದ ಪುರಾತನ ಸಂಸ್ಕೃತಿ, ರೂಢಿ-ಸಂಪ್ರದಾಯ ಕಣ್ಮರೆಯಾಗುತ್ತಿದೆ. ಅಲ್ಲೊಂದು  ಇಲ್ಲೊಂದು ಹಳ್ಳಿಯಲ್ಲಿ ನಮ್ಮ ಪರಂಪರೆಯ ಹೆಜ್ಜೆ ಗುರುತುಗಳು ಉಳಿದಿವೆ. ಆದ್ರೆ, ಈ ರೀತಿ 500 ವರ್ಷಗಳಿಂದ ಹಳ್ಳಿಯೊಂದರಲ್ಲಿ ಒಂದು ಸಂಪ್ರದಾಯ ಆಧುನಿಕತೆಯ ಭರಾಟೆಯ ಮಧ್ಯೆ ಇಂದಿಗೂ ನಿರಂತರವಾಗಿದೆ.