Tumakuru: ಹಾಡಹಗಲೇ ನಡೆಯುತ್ತೆ ಮಣ್ಣು ಮಾಫಿಯಾ: ಪ್ರಶ್ನಿಸಿದವರಿಗೆ ಜೀವಬೆದರಿಕೆ

Feb 24, 2022, 12:12 PM IST

ತುಮಕೂರು(ಫೆ.24):  ಕಲ್ಪತರು ನಾಡು ಎಂದು ಪ್ರಸಿದ್ದಿ ಪಡೆದ ತುಮಕೂರು ಜಿಲ್ಲೆಯಲ್ಲಿ ಮಣ್ಣಿನ ಹಗಲು ದರೋಡೆ ನಡೆಯುತ್ತಿದೆ. ಸ್ಥಳೀಯರು  ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಹಾಕಿದಾಗ ಹೈಕೋರ್ಟ್ ಸೂಚನೆಯ ನಡುವೆಯೂ ಮಣ್ಣು ಮಾಫಿಯಾಕ್ಕೆ ಬ್ರೇಕ್ ಬಿದ್ದಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಜೊತೆಗೆ ಎಗ್ಗಿಲ್ಲದೆ ಮಣ್ಣು ಮಾಫಿಯಾ ನಡೆಸುತ್ತಿರುವವರನ್ನು  ಪ್ರಶ್ನಿಸಿದವರಿಗೆ ಜೀವಬೆದರಿಕೆಯೊಡ್ಡುತ್ತಿರುವ ಗಂಭೀರ ಆರೋಪವೂ ಕೇಳಿಬಂದಿದೆ.

ತಾಲೂಕಿನ ದೇವರಾಯನ ದುರ್ಗ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ನರಿಕಲ್ ಬೆಟ್ಟ ಹಾಗೂ ರಾಮದೇವರ ಬೆಟ್ಟದ ತಪ್ಪಲಿನಲ್ಲಿ ಮಣ್ಣು ದಂಧೆ ಅವ್ಯಾಹತವಾಗಿ  ನಡೆಯುತ್ತಿದೆ. ತುಮಕೂರು ಸಮೀಪದ ಊರ್ಡಿಗೆರೆ  ಹೋಬಳಿಯ ಕದರನಹಳ್ಳಿ, ಮೈದಾಳ, ಜನಪನಹಳ್ಳಿ ತಾಂಡ್ಯಗಳ ಸುತ್ತಮುತ್ತ ಅರಣ್ಯ ಭೂಮಿಯ ಸಮೀಪಿದಲ್ಲಿರುವ ರೈತರ ಹೊಲದಲ್ಲಿಯೂ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಇನ್ನು ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಸುಮಾರು 3375  ಟನ್ ಮಣ್ಣು ತೆಗೆಯಲಾಗಿದೆಯಂತೆ. 

Harsha Murder Case: ಕಾಣೆಯಾಗಿರುವ ಹರ್ಷನ ಮೊಬೈಲ್‌ ಗೆ ಪೊಲೀಸರ ಹುಡುಕಾಟ

ಊರ್ಡಿಗೆರೆ ಹೋಬಳಿ ಕದರನಹಳ್ಳಿ ತಾಂಡ್ಯದ ಸರ್ವೆ ನಂ.77ರಲ್ಲಿ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು 2021 ಆ.23ರಂದು ಜಂಟಿ ಸಮೀಕ್ಷೆ ನಡೆಸಿ, ಅಕ್ರಮ ಮಣ್ಣು ಸಾಗಾಟ ನಡೆದಿರುವುದು ಸಮೀಕ್ಷೆಯಲ್ಲಿ ಖಾತ್ರಿಯಾಗಿದೆಯಂತೆ. ಈವರೆಗೆ ಒಟ್ಟು 3375 ಮೆಟ್ರಿಕ್ ಟನ್ ಮಣ್ಣು ತೆಗೆದು ಸಾಗಾಟ ಮಾಡಲಾಗಿರುವುದು ಬೆಳಕಿಗೆ ಬಂದಿದೆ. 

ಇನ್ನು ಈ ಬಗ್ಗೆ ತುಮಕೂರು ತಾಲ್ಲೂಕಿನ ದೇವರಾಯದುರ್ಗಕ್ಕೆ ಹೊಂದಿಕೊಂಡಿರುವ ಕದರನಹಳ್ಳಿ ತಾಂಡ್ಯದ ಸುತ್ತಮುತ್ತ ನಡೆಯುತ್ತಿರುವ ಮಣ್ಣು ಮಾಫಿಯಾ ತಡೆಗೆ ಸ್ಥಳೀಯ ನಿವಾಸಿ,  ವಕೀಲ ರಮೇಶ್ ನಾಯಕ್ ಎಲ್. ಹೈಕೋರ್ಟ್ ಮೆಟ್ಟಿಲೇರಿದ್ದರು. ಅವ್ಯಾಹತವಾಗಿ ಮಣ್ಣು ತೆಗೆಯುವುದರಿಂದ ಈ ಭಾಗದ ಪರಿಸರ, ಜೀವ ವೈವಿಧ್ಯಕ್ಕೆ ಹಾನಿಯಾಗುತ್ತಿದೆ. ಈ ಸಂಬಂಧ ಸಂಪೂರ್ಣ ವರದಿ  ನೀಡುವಂತೆ  ತುಮಕೂರು ಜಿಲ್ಲಾಡಳಿತಕ್ಕೆ  ಹೈಕೋರ್ಟ್ ಆದೇಶಿಸಿದೆ.  ಇನ್ನು ಈ ಅಕ್ರಮ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಂತೆ ಮಣ್ಣು ಮಾಫಿಯಾ ಕೆಲ ದಿನಗಳ ಮಟ್ಟಿಗೆ ಸ್ಥಗಿತಗೊಂಡಿದ್ದು, ಇದೀಗ ರಾತ್ರಿ ವೇಳೆ ಕದ್ದು ಮುಚ್ಚಿ ಮಣ್ಣು ಸಾಗಿಸುವ ಕೆಲಸ ನಡೆದಿದೆ.  ಅಲ್ಲದೆ ಈ ಅಕ್ರಮದ ಬಗ್ಗೆ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ವಕೀಲ ರಮೇಶ್ ನಾಯಕ್ ಎಲ್ ಹಾಗೂ ದುರ್ಗದಹಳ್ಳಿಯ ಆರ್‌ಟಿಐ ಕಾರ್ಯಕರ್ತ ತಿಮ್ಮರಾಜು ಎಂಬುವರಿಗೂ  ದಂಧೆಕೋರರು ಜೀವಬೆದರಿಕೆ ಹಾಕಿದ್ದಾರೆ.

ಒಟ್ಟಾರೆ ಈ ಅಕ್ರಮ ಮಣ್ಣು ಮಾಫಿಯಾದಿಂದ ಸರಕಾರಕ್ಕೂ ನಷ್ಟ, ರೈತರಿಗೂ ಅನ್ಯಾಯ ಎಂಬ ಮಾತುಗಳು ಕೇಳಿ ಬರುತ್ತಿದ್ದು. ಮಣ್ಣು ಮಾಫಿಯಾ ಅಕ್ರಮ ಸಾಗಾಟ ಅಪರಾಧ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲದೆ ಇರುವುದು ವಿಪರ್ಯಾಸ. ಆದರೆ ರೈತರ ಜಮೀನಿನಿಂದಲೂ ಮಣ್ಣು  ಸಾಗಾಟ ಮಾಡಬೇಕೆಂದರೆ ಸಂಬಂಧಿಸಿದ ಇಲಾಖೆಗಳ ಅನುಮತಿ ಬೇಕು, ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗೂ ಮಣ್ಣನ್ನು ಮನಸೋ ಇಚ್ಚೆ ಸಾಗಿಸುವಂತಿಲ್ಲ, ಆದರೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮೌನ ಹಲವು ಅನುಮಾನ ಮೂಡಿಸಿವೆ.