
ಯಾದಗಿರಿಯ ಸುರಪುರ ತಾಲೂಕಿನಲ್ಲಿ 'ಸಂಧ್ಯಾ ಸುರಕ್ಷಾ ಯೋಜನೆ' ಅಡಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 15,000 ಅನರ್ಹ ಫಲಾನುಭವಿಗಳಿಗೆ ಪಿಂಚಣಿ ಹಂಚಿಕೆ ಮಾಡಲಾಗಿದೆ. 65 ವರ್ಷ ಮೇಲ್ಪಟ್ಟವರಿಗೆ ಮೀಸಲಾದ ಈ ಯೋಜನೆಯಲ್ಲಿ 45-50 ವರ್ಷದವರೂ ಲಾಭ ಪಡೆಯುತ್ತಿದ್ದಾರೆ.
ಯಾದಗಿರಿ (ಅ.22): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಸಂಧ್ಯಾ ಸುರಕ್ಷಾ ಯೋಜನೆ' ಅಡಿಯಲ್ಲಿ ವಯೋವೃದ್ಧರಿಗೆ ನೀಡಲಾಗುವ ಮಾಸಿಕ ಪಿಂಚಣಿಯಲ್ಲಿ ಭಾರೀ ಅಕ್ರಮ ಮತ್ತು ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಸುರಪುರ ತಾಲೂಕಿನಲ್ಲಿ ಸುಮಾರು 15 ಸಾವಿರ ಅನರ್ಹ ಫಲಾನುಭವಿಗಳಿಗೆ ಪಿಂಚಣಿ ಹಂಚಿಕೆಯಾಗಿದೆ ಎಂದು ತಿಳಿದುಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಕೋಟ್ಯಾಂತರ ರೂಪಾಯಿ ಸರ್ಕಾರದ ಬೊಕ್ಕಸದಿಂದ ಲೂಟಿ ಹೊಡೆಯಲಾಗಿದೆ.
ವಯಸ್ಸಿನ ಮಾನದಂಡ ಉಲ್ಲಂಘನೆ:
ಸಂಧ್ಯಾ ಸುರಕ್ಷಾ ಯೋಜನೆಯ ನಿಯಮಗಳ ಪ್ರಕಾರ, 65 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮಾತ್ರ ಮಾಸಿಕ ಪಿಂಚಣಿ ಮಂಜೂರಾಗಬೇಕು. ಆದರೆ, ಸುರಪುರ ತಾಲೂಕಿನಲ್ಲಿ 45 ರಿಂದ 50 ವರ್ಷ ವಯಸ್ಸಿನೊಳಗಿನ ನೂರಾರು ಅನರ್ಹ ಫಲಾನುಭವಿಗಳು ಮಾಸಿಕ ರೂ. 1200/- ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ, ಸುರಪುರ ಮೂಲದ ಭೀಮಾಶಂಕರ್ ಎಂಬ ವ್ಯಕ್ತಿಯ ಪ್ರಕರಣವನ್ನು ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರಾ ಅವರು ಬಯಲಿಗೆಳೆದಿದ್ದಾರೆ.
ಭೀಮಾಶಂಕರ್ ಅವರಿಗೆ ಕೇವಲ 47 ವರ್ಷ ವಯಸ್ಸಾಗಿದ್ದರೂ, ಅವರ ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕವನ್ನು ಜನವರಿ 1, 1978 ಎಂದು ನಮೂದಿಸಿ, 1,200 ರೂಪಾಯಿಗಳನ್ನು ಪ್ರತಿ ತಿಂಗಳು ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ. ಸಾವಿರಾರು ನಕಲಿ ಫಲಾನುಭವಿಗಳಿಗೆ ಹಣ ಪಾವತಿಯಾಗುತ್ತಿರುವುದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ದಲ್ಲಾಳಿಗಳ ಪಾತ್ರ ಮತ್ತು ಅಧಿಕಾರಿಗಳ ಅಕ್ರಮದ ಜಾಲ:
ಈ ಅಕ್ರಮದ ಹಿಂದೆ ದಲ್ಲಾಳಿಗಳ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಅನರ್ಹ ಫಲಾನುಭವಿಗಳಿಂದ ಕೆಲವೇ ದಲ್ಲಾಳಿಗಳು ಪ್ರತಿಯೊಬ್ಬರಿಂದಲೂ ರೂ. 5,000 ರಿಂದ 8,000 ರವರೆಗೆ ಲಂಚ ಪಡೆದು ಈ ನಕಲಿ ದಾಖಲೆಗಳ ಸೃಷ್ಟಿಗೆ ನೆರವಾಗಿದ್ದಾರೆ ಎನ್ನಲಾಗಿದೆ.
ವೃದ್ದಾಪ್ಯ ವೇತನ ಅಕ್ರಮ ಹೇಗೆ ನಡೆಯಿತು?
ವೃದ್ದಾಪ್ಯ ವೇತನ ಅಕ್ರಮ ನಡೆಯುವ ಹಿಂದಿನ ವಿಧಾನವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ:
ತಹಸೀಲ್ದಾರ್‌ಗೆ ದೂರು, ಕ್ರಮಕ್ಕೆ ಆಗ್ರಹ:
ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರಾ ಅವರು ಎಲ್ಲಾ ಸಾಕ್ಷಿ ಸಮೇತ ಸುರಪುರ ತಹಸೀಲ್ದಾರ್‌ಗೆ ದೂರು ಸಲ್ಲಿಸಿದ್ದಾರೆ. ಆದರೆ, ದಾಖಲೆಗಳಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಕಲಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ.