JDS Pancharatna Yatre: ಎಲ್ಲ ಜಿಲ್ಲೆಯಲ್ಲೂ ಎಚ್‌ಡಿಕೆಗೆ ಬೃಹತ್ ಹಾರಗಳ ಭರ್ಜರಿ ಸ್ವಾಗತ

Dec 30, 2022, 12:30 PM IST

ಬೆಂಗಳೂರು (ಡಿ.30): ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಗೆ (JDS Pancharatna Yatre)  ಎಲ್ಲಾ ಜಿಲ್ಲೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರು ಮತ್ತು ಪಕ್ಷದ ಕಾರ್ಯಕರ್ತರು ಅಭೂತ ಪೂರ್ವವಾಗಿ ತಮ್ಮ ನೆಚ್ಚಿನ ನಾಯಕನ್ನು‌  ಬರಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ತಮ್ಮ ಸ್ಥಳೀಯ ಸೊಗಡಿನ ಬೆಳೆಗಳನ್ನು ಹಾರ ಮಾಡಿ ಮಾಜಿ ಮುಖ್ಯಮಂತ್ರಿಯನ್ನು ಸ್ವಾಗತಿಸುತ್ತಿದ್ದಾರೆ. ಕುಮಾರಸ್ವಾಮಿ ಹೋದ ಕಡೆಗಳೆಲ್ಲಾ ಅಪಾರ ಸಂಖ್ಯೆಯಲ್ಲಿ  ಕಾರ್ಯಕರ್ತರು ಕೈಜೋಡಿಸುತ್ತಿದ್ದಾರೆ . ನವೆಂಬರ್‌ 18ರಂದು ದೇವೇಗೌಡರು (H D Devegowda) ಮುಳಬಾಗಿಲಿನಲ್ಲಿ ಅಧಿಕೃತವಾಗಿ ಯಾತ್ರೆಗೆ ಚಾಲನೆ ನೀಡಿದ್ದರು. 

ಜೆಡಿಎಸ್ ಪಂಚರತ್ನಯಾತ್ರೆ 32 ದಿನಗಳನ್ನು ಪೂರೈಸಿದ್ದು, ಹಳೆ ಮೈಸೂರು ಭಾಗದ 6 ಜಿಲ್ಲೆಗಳ 32 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 600ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚಾರ ಮಾಡಿದೆ. ಕೋಲಾರದಲ್ಲಿ ಕುಮಾರಸ್ವಾಮಿಗೆ 3 ಟನ್‌ ತೂಕದ ಟೊಮೆಟೋ ಹಾರ ಹಾಕುವ ಮೂಲಕ ಶುರುವಾದ ಅಭಿಮಾನ ಇಂದಿಗೂ ಮುಂದುವರೆದಿದೆ. ಜೊತೆಗೆ ಕುಮಾರಸ್ವಾಮಿ  ಹೋದ ಕಡೆಯೆಲ್ಲಾ ಹೆಲಿಕಾಪ್ಟರ್ ನಿಂದ ಹೂ ಮಳೆ ಸುರಿಸಲಾಗುತ್ತಿದೆ 

32 ದಿನ  500 ಕ್ರೇನ್ ನಲ್ಲಿ ಹಾರ: ಕೋಲಾರದ ಉಪ್ಪುಕುಂಟೆಯಲ್ಲಿ ಕನಕಾಂಬರ ಹಾರ, ಚಿಕ್ಕಬಳ್ಳಾಪುರದ ತಿಪ್ಪೇನಹಳ್ಳಿ, ಬಿಜ್ಜವಾರದಲ್ಲಿ ಬಜ್ಜಿ ಮೆಣಸಿನಕಾಯಿ ಹಾರ ಎಲ್ಲರ ಗಮನ ಸೆಳೆಯಿತು. ಇದರ  ಜೊತೆಗೆ  ದೇವನಹಳ್ಳಿ ಕ್ಷೇತ್ರ ವ್ಯಾಪ್ತಿಯ ಕಾರಹಳ್ಳಿಯಲ್ಲಿ ಚಕ್ಕೋತ ಹಾರ, ಹಾರೋಹಳ್ಳಿ, ವೆಂಕಟಗಿರಿಕೋಟೆಯಲ್ಲಿ  ಬೃಹತ್ ದ್ರಾಕ್ಷಿ ಹಾರ ವಿಶೇಷವಾಗಿತ್ತು.  

ಕೊರಟಗೆರೆಯ ಗೊಂದಿಹಳ್ಳಿಯಲ್ಲಿ ಕಡಲೆಕಾಯಿ ಹಾರ ಹಾಕಿ ಜನರು ಅಭಿಮಾನ ಮೆರೆದರು.ಕೊರಟಗೆರೆಯಲ್ಲಿ ಉದ್ದಿನವಡೆ ಹಾರ, ಪಾವಗಡದಲ್ಲಿ ಅನಾನಸ್‌ ಹಾರ, ಶಿರಾದ ಕೆಂಚಗಾನಹಳ್ಳಿಯಲ್ಲಿ ಕೊತ್ತಂಬರಿ ಸೊಪ್ಪಿನ ಹಾರ  ರಂಗು ನೀಡಿತ್ತು. ತುಮಕೂರಿನ ಬಾಣಸಂದ್ರದಲ್ಲಿ ಡ್ರ್ಯಾಗನ್‌ ಫ್ರೂಟ್ಸ್ ಹಾರ,  ಶಿರಾಗೇಟ್‌ ಬಳಿ ರಾಗಿ ಹಾರ, ತುರುವೇಕೆರೆಯಲ್ಲಿ ಎಳನೀರು, ಸಿಹಿ ಕುಂಬಳಕಾಯಿ, ಹೊಂಬಾಳೆ ಹಾರ ಭರ್ಜರಿಯಾಗಿತ್ತು.

ಇದನ್ನೂ ಓದಿ: ಪಂಚರತ್ನ ಯಾತ್ರೆ ಸುನಾಮಿ ತಡೆಯಲು ಅಮಿತ್‌ ಶಾ ಕರೆಸ್ತಿದ್ದಾರೆ: ಎಚ್‌.ಡಿ.ಕುಮಾರಸ್ವಾಮಿ

ಪಾವಗಡದಲ್ಲಿ ಅನಾನಸ್‌ ಹಾರ, ಶಿರಾದ ಕೆಂಚಗಾನಹಳ್ಳಿಯಲ್ಲಿ ಕೊತ್ತಂಬರಿ ಸೊಪ್ಪಿನ ಹಾರವೂ ಕಲರ್ಫುಲ್ ಎನ್ನಿಸಿತು. ಇನ್ನು ಕುಮಾರಸ್ವಾಮಿ ರಾಜಕೀಯ ತವರು ಕ್ಷೇತ್ರ ರಾಮನಗರದ ಹಜರತ್‌ ಫಿರೆನ್‌ ಷಾ ವಾಲಿ ದರ್ಗಾದಲ್ಲಿ ಬೃಹತ್‌ ಬಾದಾಮಿ ಹಾರ ಅದ್ದೂರಿಯಾಗಿತ್ತು. ಚನ್ನಪಟ್ಟಣದಲ್ಲಿ ಬೊಂಬೆಗಳ ಹಾರ ಕಣ್ಮನ ಸೆಳೆಯಿತು. ಕನಕಪುರದಲ್ಲಿ ರೇಷ್ಮೆಗೂಡಿನ ಹಾರ, ಬಾಳೆಗೊನೆ ಹಾರ ಹಾಕಿ ಸ್ವಾಗತ ಕೋರಲಾಯ್ತು.

ಮಳವಳ್ಳಿಯ ಹಲಗೂರು, ಕಿರುಗಾವಲಿನಲ್ಲಿ ಬೆಲ್ಲದ ಹಾರ ಹಾಕಲಾಯಿತು. ಭಾರತಿನಗರದಲ್ಲಿ ಮೆಕ್ಕೆಜೋಳದ ಹಾರ, ದೊಡ್ಡರಸಿನಕೆರೆಯಲ್ಲಿ ಎಳನೀರು, ನವಿಲುಕೋಸು, ನುಗ್ಗೆಸೊಪ್ಪಿನ ಹಾರ ಹಾಕಿ ಅಭಿಮಾನ ತೋರಲಾಯಿತು. ಮದ್ದೂರಿನ ತೂಬಿನಕೆರೆ ಗೇಟ್‌ನಲ್ಲಿ ಜೋಳದ ಹಾರ, ಮೇಲುಕೋಟೆ, ಶ್ರೀರಂಗಪಟ್ಟಣದಲ್ಲಿ ಕಬ್ಬಿನ ಜಲ್ಲೆ ಹಾರ, ದೊಡ್ಡರಸಿನಕೆರೆಯಲ್ಲಿ ನವಿಲುಕೋಸು, ನುಗ್ಗೆಸೊಪ್ಪಿನ ಹಾರ ಜೆಡಿಎಸ್ ಯಾತ್ರೆಗೆ ಮೆರಗು ನೀಡಿತ್ತು.

ಮೇಲುಕೋಟೆಯ ಸುಂಕಾ ತೊಣ್ಣೂರು ಹಾಗೂ ಕೆ.ಆರ್‌.ಪೇಟೆಯಲ್ಲಿ ಹಾಕಿದ ಚೆರಿ ಹಣ್ಣಿನ ಹಾರ ,  ಹುಲಿಕೆರೆಯಲ್ಲಿ  ರುದ್ರಾಕ್ಷಿ ಹಾರ, ಕೆ.ಆರ್‌.ಪೇಟೆಯ ಹೊಸಹೊಳಲು ಗ್ರಾಮದಲ್ಲಿ  ಸೇಬಿನ ಹಾರ ಎಲ್ಲರಿಗೂ ಖುಷಿ ನೀಡಿತು. ತುಮಕೂರಿನ ಕಂಚಿಗಾನಹಳ್ಳಿಯಲ್ಲಿ  ಬ್ಯಾಗ್ ಹಾರ  ಹಾಕಿ ಗ್ರಾಮಸ್ಥರು ಅದ್ಧೂರಿಯಾಗಿ  ಸ್ವಾಗತ ಕೋರಿದರು. ಹಾರದ ಮೇಲೆ ‘ಸರ್ಕಾರಿ ಶಾಲೆಗಳನ್ನು ಹೈಟೆಕ್‌ ಮಾಡಿಸಿ, ಬಡವರ ಮಕ್ಕಳಿಗೂ ಕಾನ್ವೆಂಟ್‌ ಶಿಕ್ಷಣ ಬೇಕ್ರಯ್ಯ’ ಎಂಬ ಒಕ್ಕಣೆ ಬರೆಯಲಾಗಿತ್ತು.

ತುಮಕೂರಿನ ಗ್ರಾಮಾಂತರ ಕ್ಷೇತ್ರದಲ್ಲಂತೂ ಗ್ರಾಮಸ್ಥರು  ಮಣ್ಣಿನ ಮಗ ಕುಮಾರಣ್ಣ ಎಂದು ಘೋಷಣೆ ಕೂಗಿ  ನಾಣ್ಯದಿಂದ ಮಾಡಿದ್ದ ಬೃಹತ್ ಹಾರವನ್ನು ಹಾಕಿದರು.  ಇನ್ನು ಅಭಿಮಾನಿಗಳ ಹಾರಗಳ ಕುರಿತು ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಈ ಹಾರಗಳು ಗಿನ್ನಿಸ್ ದಾಖಲೆಗೆ ಸೇರಲಿದೆ ಎಂದ್ರು.

ಇದನ್ನೂ ಓದಿ: Assembly Election 2023: ಮಂಡ್ಯ ಗೆಲುವಿಗೆ 'ಪಂಚರತ್ನ' ಮಂತ್ರ: 2023ರಲ್ಲಿ ಜೆಡಿಎಸ್ ಭದ್ರಕೋಟೆ ಏನಾಗಲಿದೆ?

ಕುಮಾರಸ್ವಾಮಿ ಹೋದ ಜಿಲ್ಲೆಯೆಲ್ಲೆಲ್ಲಾ ಆ ಭಾಗದ ಜನರು ನೆಟಿವಿಟಿಗೆ ತಕ್ಕಂತೆ  ಚೆಂಡು ಹೂವು, ಮಲ್ಲಿಗೆ, ಸೇವಂತಿಗೆ, ಕಡಲೆಕಾಯಿ, ಚಕ್ಕೋತ, ಅನಾನಸ್‌, ಕರ್ಬೂಜಾ, ಚೆರ್ರಿ,  ಮೂಸಂಬಿ, ದ್ರಾಕ್ಷಿ, ಸೇಬು, ಕೊಬ್ಬರಿ, ಗೋಡಂಬಿ, ಕಬ್ಬು, ಮೆಕ್ಕೆಜೋಳ, ಬೆಲ್ಲ, ನುಗ್ಗೆಸೊಪ್ಪು, ಗೆಡ್ಡೆಕೋಸು, ಸೀಮೆ ಬದನೆ, ರುದ್ರಾಕ್ಷಿ, ಭತ್ತ, ರಾಗಿ ತೆನೆ, ಮುತ್ತಿನ ಹಾರ ಸೇರಿದಂತೆ 42ಕ್ಕೂ ಹೆಚ್ಚು ವಿಭಿನ್ನ ವಸ್ತುಗಳ, 495ಕ್ಕೂ ಹೆಚ್ಚು ಹಾರಗಳನ್ನು ಕ್ರೇನ್‌ಗಳ ಮೂಲಕ ಹಾಕಿ ಜನರು ಅಭಿಮಾನ ಮೆರೆದಿದ್ದಾರೆ.

ರಾಗಿ, ಬೆಲ್ಲ ಸೇರಿದಂತೆ ವಿಭಿನ್ನ ಹಾರಗಳ ತಯಾರಿಕೆಗೆ ಕನಿಷ್ಠ 30 ಸಾವಿರದಿಂದ 1 ಲಕ್ಷ ರುಪಾಯಿವರೆಗೂ ಖರ್ಚಾಗುತ್ತಿದ್ದು, ಹಾರ ತಯಾರಿಸುವ ಕುಶಲ ಕರ್ಮಿಗಳಿಗೂ ಇದರಿಂದ ಕೆಲಸ ಸಿಕ್ಕಿದಂತಾಗಿದೆ. ಜೆಸಿಬಿ, ಕ್ರೇನ್‌ಗಳ ಮಾಲಿಕರಿಗೂ ಆದಾಯ ಬರುತ್ತಿದೆ ಎನ್ನುವುದು ಜೆಡಿಎಸ್‌ ನಾಯಕರ ಅಭಿಮತ.