May 10, 2023, 4:16 PM IST
ದಶದಿಕ್ಕುಗಳಲ್ಲಿ ಪ್ರಕೃತಿ ವಿಕೋಪಕ್ಕೆ ಎಲ್ಲವೂ ಸರ್ವನಾಶವಾಗುತ್ತಿದೆ. ಪ್ರಕೃತಿ ಮುನಿಸಿಕೊಂಡರೆ ಅದು ನಿಜಕ್ಕೂ ಮನುಕುಲದ ನಾಶಕ್ಕೆ ದಾರಿ ಎಂಬ ಮಾತು ಜನಜನಿತ. ಮನುಷ್ಯನ ಅತಿ ಆಸೆಯಿಂದಾಗಿ ಅಥವಾ ಆತನ ಸೌಕರ್ಯಕ್ಕಾಗಿ ಇನ್ನಿಲ್ಲದಂತೆ ಅರಣ್ಯವನ್ನು ದೋಚುತ್ತಿರುವುದು ಪ್ರಕೃತಿ ವಿಕೋಪಕ್ಕೆ ಜ್ವಲಂತ ಸಾಕ್ಷಿ. ಇದರ ಪರಿಣಾಮ ಇಂದು ನಾವು ಹಲವು ಪ್ರಕೃತಿ ವಿಕೋಪಕ್ಕೆ ಬಲಿಯಾಗುತ್ತಿದ್ದೇವೆ. ಮೇ ತಿಂಗಳು ಬರುತ್ತಿದ್ದಂತೆ ದಿಢೀರ್ ವಾತಾವರಣ ಬದಲಾಗಿ ಬಿಟ್ಟಿದೆ. ಬಂಗಾಳ ಕೊಲ್ಲಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮೋಚಾ ಅನ್ನೋ ಸೈತಾನ್ ಹುಟ್ಟಿಕೊಂಡಿದೆ. ಗಂಟೆಗೆ 130 ಕಿ.ಮೀ ವೇಗದಲ್ಲಿ ಮೋಚಾ ಚಂಡಮಾರುತ ಬಂಗಾಳ ಕೊಲ್ಲಿ ಸಮುದ್ರಕ್ಕೆ ಬಂದಪ್ಪಳಿಸಿದೆ.ವಾಯುಭಾರ ಕುಸಿತದ ಹಿನ್ನೆಲೆ ಚಂಡಮಾರುತ ಉಂಟಾಗಲಿದ್ದು, ಬಳಿಕ ಇದು ತೀವ್ರಗೊಂಡು ಮಧ್ಯ ಬಂಗಾಳಕೊಲ್ಲಿಯ ಕಡೆಗೆ ಉತ್ತರಕ್ಕೆ ಚಲಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದೀಗ ಸಂಭವನೀಯ ಮೋಚಾ ಚಂಡಮಾರುತದ ಹಿನ್ನೆಲೆ ಐಎಂಡಿಯಿಂದ ರಾಜ್ಯಗಳಿಗೆ ಹೈ ಅಲರ್ಟ್ ನೀಡಲಾಗಿದೆ.ಮುಂದಿನ 3 ದಿನಗಳ ವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿಲ್ಲಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ. ಚಂಡಮಾರುತದ ರಚನೆಯ ಪರಿಣಾಮವಾಗಿ, 3 ದಿನ ಭಾರೀ ಗಾಳಿ, ಮಿಂಚು ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ.