ಬಾಗಲಕೋಟೆ: ಗಾಯಗೊಂಡ ಮರಿ ರಕ್ಷಣೆಗೆ ಇಡೀ ದಿನ ಹೆದ್ದಾರಿಯಲ್ಲಿ ನಿಂತ ‘ಮಹಾತಾಯಿ’

Jul 21, 2019, 9:41 PM IST

ತಾಯಿ ಪ್ರೀತಿಯೇ ಹಾಗೆ.. ಅದು ಮಾನವರಿರಲಿ.. ಪ್ರಾಣಿಗಳಿರಲಿ.. ಮಾತಿನಲ್ಲಿ ಹೇಳಲು ಅಸಾಧ್ಯ. ಇಲ್ಲೊಂದು ತಾಯಿ ಕುದುರೆ ತನ್ನ ಮರಿಗಾಗಿ  24 ಗಂಟೆಗಳ ಘೋರ ತಪಸ್ಸು ಮಾಡಿದೆ. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮರಿ ಕುದುರೆಯೊಂದು ತೀವ್ರವಾಗಿ ಗಾಯಗೊಂಡು ಕಳೆದ 24 ಗಂಟೆಗಳಿಂದ ನರಳಾಡುತ್ತಿದ್ದರೆ, ಇದರ ಪಕ್ಕದಲ್ಲೇ ಕುದುರೆಯ ತಾಯಿ ಜಾಗ ಬಿಟ್ಟು ಕದಲದೇ  ರೋದಿಸುತ್ತಿತ್ತು.

ರಾಜ್ಯ ಹೆದ್ದಾರಿ ಸೇತುವೆಯ ಮೇಲೆ ಕುದುರೆ ಮರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ.  ಇದರ ಪರಿಣಾಮ ಕುದುರೆ ಮರಿಯ ಕಾಲು ಮುರಿದಿದ್ದು ತೀವ್ರವಾಗಿ ಗಾಯಗೊಂಡಿತ್ತು, ಇದನ್ನು ಗಮನಿಸಿದ ವಾಹನ ಸವಾರರು ನೀರು ಹಾಕಿ ಹೋಗಿದ್ದಾರೆ. ಘಟನೆ ನಡೆದು 30 ಗಂಟೆಗಳಿಗೂ ಹೆಚ್ಚು ಸಮಯವಾದ್ರೂ  ಕುದುರೆ ಮರಿಯನ್ನ ತಾಯಿ ಕುದುರೆ ಬಿಟ್ಟು ಹೋಗಿಲ್ಲ. ಕದಲದೇ ತನ್ನ ಮರಿಯ ನರಳಾಟವನ್ನು ನೋಡುತ್ತಲೇ ನಿಂತಿದೆ.

ಅಪಾಯಕಾರಿ ಸೇತುವೆ ಮೇಲೆ ಸತತವಾಗಿ ವಾಹನಗಳು ಓಡಾಡುತ್ತಿದ್ದರೂ ಮರಿಯನ್ನ ಬಿಟ್ಟು ದೂರ ಹೋಗದೇ 24 ಗಂಟೆಗಳಿಂದ ನಿಂತಲ್ಲೇ ನಿಂತಿದೆ.  ಇನ್ನು ಕುದುರೆಯನ್ನ ಗಮನಿಸಿದ ಕೆಲವರು ಸತ್ತಿರಬಹುದು ಎಂದು ಹಾಗೆ ಬಿಟ್ಟು ಹೋಗಿದ್ದಾರೆ. ಆದ್ರೆ ಜನ್ಮ ಕೊಟ್ಟ ತಾಯಿ ತನ್ನ ಮಗುವಿನ ರೋದನೆಯನ್ನ ಕಂಡು ಮರುಗುತ್ತಲೇ ಇತ್ತು. ಇನ್ನು ಇಂದು ಸಂಜೆ ಇದೇ ರಸ್ತೆಯಲ್ಲಿ ತೆರಳುತ್ತಿದ್ದ ಬಾಗಲಕೋಟೆ ಜಿಲ್ಲೆಯ ನಿರ್ಮಿತಿ ಕೇಂದ್ರದ ಅಧಿಕಾರಿ ಶಂಕರಲಿಂಗ ಗೂಗಿ, ಕುದುರೆ ಸ್ಥಿತಿಯನ್ನ ಕಂಡು ಮಾನವಿಯತೆ ಮೆರೆದಿದ್ದಾರೆ. ಕುದುರೆಗೆ ನೀರು ಕುಡಿಸಿ ರಸ್ತೆಯಿಂದ ಪಕ್ಕಕೆ ಹಾಕಿ ಪಶುಸಂಗೋಪನೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದೀಗ ಕುದುರೆ ಮರಿಗೆ ಚಿಕಿತ್ಸೆ ನೀಡಲಾಗಿದೆ.