ಆಲಮಟ್ಟಿ ರಾಕ್ ಗಾರ್ಡನ್.. ಅಮಾವಾಸ್ಯೆ ದಿನ ತನ್ನಿಂದ ತಾನೇ ತೂಗಿದ ಜೋಕಾಲಿ!

Aug 31, 2019, 6:53 PM IST

ಎಲ್ಲಿಂದ ಎಲ್ಲಿಗೆ ಸಂಬಂಧವೋ ಗೊತ್ತಿಲ್ಲ. ಆದರೆ ಈ ಘಟನೆ ಜನರಲ್ಲಿ ಒಂದು ಹಂತದ ಭಯ ಮೂಡಿಸಿರುವುದೆಂತೂ ಸುಳ್ಳಲ್ಲ. ಶುಕ್ರವಾರ ಅಮಾವಾಸ್ಯೆಯ ದಿನ ಸಂಜೆ ಜೋಕಾಲಿಗಳೆರಡು ತನ್ನಿಂದ ತಾನೆ ತೂಗಿಕೊಂಡು ಆಡುತ್ತಿರುವುದು ಭಯ ಮೂಡಿಸಿದೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿನ ರಾಕ್ ಗಾರ್ಡನ್ ನಲ್ಲಿ ಘಟನೆ ನಡೆದಿದೆ.

ನಿನ್ನೆ ಸಾಯಂಕಾಲ 6.30 ಗಂಟೆ ವೇಳೆಗೆ ರಾಕ್ ಗಾರ್ಡನ್ ನಲ್ಲಿನ ಎಂಟು ಜೋಕಾಲಿಗಳಲ್ಲಿ ಕೇವಲ ಎರಡು ಜೋಕಾಲಿಗಳು ಮಾತ್ರ ತನ್ನಿಂದ ತಾನೇ ತೂಗಾಡಿವೆ. ಜೋಕಾಲಿಯಲ್ಲಿ ಒಬ್ಬರು ಕುಳಿತು ಮತ್ತೊಬ್ಬರು ತೂಗಿದಾಗ ಹೇಗೆ ಅಲುಗಾಡುತ್ತವೋ ಹಾಗೆ ಆಗಿದೆ. ಸುಮಾರು ಎರಡ್ಮೂರು ನಿಮಿಷಗಳ ವರೆಗೆ ಹೀಗೆ ಜೋಕಾಲಿಗಳು ತೂಗಿವೆ.

ಎಂಟರಲ್ಲಿ ಕೇವಲ ಎರಡು ಜೋಕಾಲಿಗಳು ಮಾತ್ರ ತೂಗಿದ್ದು, ಇನ್ನುಳಿದವುಗಳು ಅಲುಗಾಡಿಲ್ಲ. ಗಾಳಿಗೆ ಜೋಕಾಲಿಗಳು ತೂಗಿದ್ರೆ ಎಲ್ಲವೂ ಅಲುಗಾಡಬೇಕಿತ್ತು ಎಂಬುದು ಯೋಚಿಸಬೇಕಾದ ಅಂಶ. ಇನ್ನು ಗಾರ್ಡನ್ ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಮಂಜುನಾಥ ಎಂಬುವವರು ನಿನ್ನೆ ಸಂಜೆ ಅಂಗಡಿ ಬಂದ್ ಮಾಡಿಕೊಂಡು ಬರುತ್ತಿದ್ದ ವೇಳೆ ಯಾರೂ ಇಲ್ಲದೆ ಜೋಕಾಲಿಗಳು ತೂಗುತ್ತಿರುವುದನ್ನು ಕಂಡು ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

ನಂತರ ಭಯಬಿದ್ದು ಅವರು ಸಹ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕಬ್ಬಿಣ ಸರಳಿನಿಂದ ತಯಾರಾದ ಮಣಭಾರದ ಜೋಕಾಲಿಗಳು ಹೀಗೆ ಮನುಷ್ಯರು ಇಲ್ಲದೆ ತೂಗುತ್ತಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದನ್ನು ನೋಡಿದ ಕೆಲವರು ನಿನ್ನೆ ಅಮಾವಾಸ್ಯೆ ಆಗಿದ್ದು ಇದು ನಿಗೂಢ ಶಕ್ತಿಗಳ ಆಟ ಇರಬಹುದು ಎಂದರೆ,,,ಇನ್ನು ಕೆಲವರು ಯಾರೂ ಹೀಗೆ ಜೋಕಾಲಿಗಳನ್ನು ತೂಗಿ ಬಳಿಕ ವಿಡಿಯೋ ಮಾಡಿರಬಹುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಜೋಕಾಲಿಗಳ ತೂಗೂಯ್ಯಾಲೆ ಅಸಲಿ ಸತ್ಯದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.