Karwar: ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಗೆ ಮೀನುಗಾರರ ವಿರೋಧ

Feb 19, 2022, 12:34 PM IST

ಕಾರವಾರ(ಫೆ.19):  ರಾಜ್ಯದ ಸರ್ವಋತು ಬಂದರು ಅಂತಲೇ ಪ್ರಸಿದ್ಧಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಗೆ ಮೀನುಗಾರರಿಂದ ವಿರೋಧ ಮುಂದುವರಿದಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಸಾಗರಮಾಲಾ ಯೋಜನೆಯಡಿಯಲ್ಲಿ ಬಂದರು ವಿಸ್ತರಣೆಗೆ ಯೋಜನೆ ಸಿದ್ಧವಾಗಿದ್ದು, ಇದರ ಅಂಗವಾಗಿ ಕಾರವಾರ ನಗರದ ಟ್ಯಾಗೋರ್ ಕಡಲತೀರದಲ್ಲಿ ಅಲೆ ತಡೆಗೋಡೆ ನಿರ್ಮಾಣಕ್ಕೆ ಗುತ್ತಿಗೆ ಪಡೆದ ಕಂಪೆನಿ ಮುಂದಾಗಿತ್ತು. ಆದ್ರೆ ಈ ವೇಳೆ ಸ್ಥಳೀಯ ಮೀನುಗಾರರು ಯೋಜನೆಯಿಂದ ಕಡಲತೀರದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಆರೋಪಿಸಿ ಕಾಮಗಾರಿಗೆ ಅಡ್ಡಿಪಡಿಸಿದ್ದರು. 

2020ರಲ್ಲಿ ಸಾಗರಮಾಲಾ ಯೋಜನೆಯಡಿ ಕಾಮಗಾರಿ ಪ್ರಾರಂಭಕ್ಕೆ ಜಿಲ್ಲಾಡಳಿತ ಮುಂದಾಗಿದ್ದು ಈ ವೇಳೆ ಸ್ಥಳೀಯ ಮೀನುಗಾರರು ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ವಾರಗಳ ಕಾಲ ಧರಣಿ ನಡೆಸುವ ಮೂಲಕ ಕಡಲತೀರವನ್ನು, ಸಾಂಪ್ರದಾಯಿಕ ಮೀನುಗಾರಿಕೆಯನ್ನ ಉಳಿಸಿಕೊಡುವಂತೆ ಒತ್ತಾಯ ಮಾಡಿದ್ದರು. ಪರಿಣಾಮ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದಾಗಿ ಕಳೆದೊಂದು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದೆ. ಆದ್ರೆ ಈವರೆಗೂ  ಜಿಲ್ಲಾಡಳಿತವಾಗಲೀ, ಜನಪ್ರತಿನಿಧಿಗಳಾಗಲೀ ಮೀನುಗಾರರೊಂದಿಗೆ ಚರ್ಚೆಗೆ ಮುಂದಾಗಿರಲಿಲ್ಲ. 

Ankola: ಉರೂಸ್‌ನಲ್ಲಿ ಜಾತಿ, ಧರ್ಮ ಭೇದ ಮರೆತು ಸೇರಿದ ಸಾವಿರಾರು ಜನ

ಈ ನಿಟ್ಟಿನಲ್ಲಿ ಕಾರವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಚಿವ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ನಡೆಸಲಾದ ಕೆಡಿಪಿ ಸಭೆಗೂ ಮೀನುಗಾರರು ಹಾಜರಾಗದೇ ವಿರೋಧ ವ್ಯಕ್ತಪಡಿಸಿದ್ದರು. ಯೋಜನೆ ಆರಂಭದಿಂದಲೂ ಮೀನುಗಾರರೊಂದಿಗೆ ಯಾರೊಬ್ಬರೂ ಕೂಡಾ ಸೂಕ್ತವಾಗಿ ಚರ್ಚೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುವ ಮೀನುಗಾರರು, ಸಾಗರಮಾಲಾ ಜಾರಿಯಿಂದ ಮೀನುಗಾರಿಕೆಗೆ ಎದುರಾಗುವ ಸಮಸ್ಯೆ ಕುರಿತು ಮೊದಲು ಬಹಿರಂಗ ಸಭೆ ನಡೆಸಿ ಅಭಿಪ್ರಾಯ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.