ಬಯಲು ಸೀಮೆ ಸುಬ್ರಮಣ್ಯ ಸನ್ನಿಧಿಯಲ್ಲಿ ವಿಭಿನ್ನ ಆಚರಣೆ: ಬಾಲಕನಿಗೆ ತಲೆ ಬೋಳಿಸಿ ಕತ್ತೆ ಮೇಲೆ ಮೆರವಣಿಗೆ!

Nov 13, 2023, 11:42 AM IST

ಕತ್ತೆ ಮೇಲೆ ಬಾಲಕನ್ನು ಕೂರಿಸಿ ಮೆರವಣಿಗೆ ಮಾಡುತ್ತಿರುವ ಅರ್ಚಕರು, ಸಗಣಿ ಉಂಡೆಗಳಿಂದ ಹೊಡೆದಾಟ. ಇನ್ನೊಂದೆಡೆ ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಜನ. ಈ ದೃಶ್ಯ ನೋಡಿದ್ರೆ ಏನೋ ವಿಚಿತ್ರ ಅನಿಸಬಹುದು. ಆದ್ರೆ ಇದು ದೀಪಾವಳಿ(Deepavali) ಹಬ್ಬದ ಆಚರಣೆಯ ಒಂದು ಭಾಗ. ಈ ದೇಗುಲ ಬಯಲು ಸೀಮೆ ಕುಕ್ಕೆ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ಮಂಡ್ಯ(Mandya) ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಸಾಸಲು ಕ್ಷೇತ್ರದ ಸೋಮೇಶ್ವರ ಸ್ವಾಮಿದೇವಾಲಯದಲ್ಲಿ, ಬಲಿಪಾಡ್ಯಮಿ(Bali padya) ದಿನ ಈ ರೀತಿ ವಿಚಿತ್ರ ಆಚರಣೆ ಮಾಡಲಾಗುತ್ತದೆ. ಈ ರೀತಿ ಕತ್ತೆ ಮೇಲೆ ಬಾಲಕನನ್ನು ಕೂರಿಸಿ ಮೆರವಣಿಗೆ ಮಾಡುವದರ ಹಿಂದೆ ಒಂದು ಪುರಾಣ ಕಥೆ ಇದೆಯಂತೆ. ದೇವಸ್ಥಾನದಲ್ಲಿ ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡೋ ಆಚರಣೆ ಸಾಮಾನ್ಯವಾಗಿ ಎಲ್ಲೂ ಇಲ್ಲ. ಈ ಸೋಮೇಶ್ವರ ಸ್ವಾಮಿ(Someshwara Swami) ನೆಲೆಸಿರುವ ಸಾಸಲು ಗ್ರಾಮದಲ್ಲಿ ಭೈರವರಾಜ ಎಂಬ ಪವಾಡ ಪುರುಷ ವಾಸ ಇದ್ರಂತೆ. ಸೋಮೇಶ್ವರ ಸ್ವಾಮಿ ಪರಮ ಭಕ್ತರಾಗಿದ್ದ ಭೈರವರಾಜರು ಪವಾಡಳಿಂದ ಪ್ರಸಿದ್ಧಿಗಳಿಸಿದ್ರು. ಈ ವೇಳೆ ಭೈರವರಾಜನ ಭಕ್ತಿ ಪರೀಕ್ಷಿಸಲು ಮುಂದಾದ ಸೋಮೇಶ್ವರ ಸ್ವಾಮಿ, ಜಂಗಮನ ರೂಪದಲ್ಲಿ ಭೈರವರಾಜನ ಬಳಿ ಬಂದು ಯುದ್ಧಕ್ಕೆ ಆಹ್ವಾನ ನೀಡ್ತಾನಂತೆ. ಅಂತಿಮವಾಗಿ ಸೋಮೇಶ್ವರ ಸ್ವಾಮಿಗೆ ಸೋಲಾದಾಗ, ಮೊದಲೇ ಒಪ್ಪಂದ ಮಾಡಿಕೊಂಡಂತೆ ಕತ್ತೆ ಮೇಲೆ ಮೆರವಣಿಗೆ ಮಾಡಿಸಲಾಗಿತ್ತಂತೆ. ಈಗಲೂ ಈ ಭಾಗದ ಜನರಲ್ಲಿ ಈ ನಂಬಿಕೆ ಜೀವಂತವಾಗಿದೆ.ಸೋಮೇಶ್ವರರು ಕತ್ತೆ ಮೇಲೆ ಮೆರವಣಿಗೆ ಮಾಡಿಸಿಕೊಳ್ಳುತ್ತಿರುವುದು ಭೈರವರಾಜನಿಗೆ ಬೇಸರ ತರಿಸುತ್ತದೆ. ಬಳಿಕ ಕತ್ತೆಗೆ ಮಾನಿಗಶೆಟ್ಟಿ ಎಂದು ನಾಮಕರಣ ಮಾಡುತ್ತಾರಂತೆ. ಯಾರಾದರೂ ಶಿವನನ್ನು ಮೆರವಣಿಗೆ ಮಾಡುವ ಕತ್ತೆಯನ್ನು ಕತ್ತೆ ಎಂದರೆ ಅವರ ಬಾಯಿಗೆ ಹುಳು ಬೀಳುತ್ತದೆ ಎಂದು ಶಾಪ ಹಾಕಿದ್ರಂತೆ. ಇಂದಿಗೂ ಅಲ್ಲಿನ ಭಕ್ತರು ಯಾರೂ ಕತ್ತೆ ಎಂದು ಕರೆಯುವುದಿಲ್ಲ. ಮಾನಿಗಶೆಟ್ಟಿ ಎಂದೇ ಕರೆಯುತ್ತಾರೆ. ಅಲ್ಲದೆ  ಪ್ರತೀ ವರ್ಷ ಬಲಿಪಾಡ್ಯಮಿಯಂದು 12 ವರ್ಷದ ಒಳಗಿನ ಬಾಲಕನಿಗೆ ತಲೆ ಬೋಳಿಸಿ, ತೆಂಗಿನ ಗರಿಯಿಂದ ಮಾಡಿದ ಪೇಟ ಹಾಕಿ ಮೆರವಣಿಗೆ ಮಾಡಲಾಗುತ್ತದೆ. ಈ ವೇಳೆ ಆ ಬಾಲಕನ ಮೇಲೆ ಸೋಮೇಶ್ವರ ಬರುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ.

ಇದನ್ನೂ ವೀಕ್ಷಿಸಿ:  ಬಣ್ಣ ಬಣ್ಣದ ಹಣತೆ..ಒಂದಕ್ಕಿಂತ ಒಂದು ಸುಂದರ: ವಿಶೇಷ ಚೇತನ ಮಕ್ಕಳ ಪ್ರತಿಭೆಗೆ ಭಾರೀ ಪ್ರೋತ್ಸಾಹ