
ಚಿತ್ರದುರ್ಗದ ಬಳಿ ನಡೆದ 'ಸೀ ಬರ್ಡ್' ಸ್ಲೀಪರ್ ಬಸ್‌ನ ಭೀಕರ ಅಗ್ನಿ ಅವಘಡದಲ್ಲಿ ಹಲವರು ಸಜೀವ ದಹನವಾಗಿದ್ದಾರೆ. ಈ ದುರಂತವು ಸ್ಲೀಪರ್ ಬಸ್‌ಗಳ ವಿನ್ಯಾಸದಲ್ಲಿನ ಸುರಕ್ಷತಾ ಲೋಪಗಳನ್ನು ಮತ್ತು ಅವು ಏಕೆ ಹೆಚ್ಚು ಅಪಾಯಕಾರಿ ಎಂಬುದನ್ನು ಬಯಲಿಗೆಳೆದಿದೆ.
ಚಿತ್ರದುರ್ಗ/ಬೆಂಗಳೂರು (ಡಿ.26): ಸಿಲಿಕಾನ್ ಸಿಟಿಯಲ್ಲಿ ಕ್ರಿಸ್‌ಮಸ್ ಸಂಭ್ರಮ ಮುಗಿಸಿ, ಸಾವಿರಾರು ಕನಸುಗಳನ್ನು ಹೊತ್ತು ಬಸ್ ಏರಿದ್ದ ಆ ಪ್ರಯಾಣಿಕರಿಗೆ ವಿಧಿ ಅಕ್ಷರಶಃ 'ಭಸ್ಮಾಸುರ'ನಾಗಿ ಬಂದೆರಗಿದೆ. ಚಿತ್ರದುರ್ಗದ ಬಳಿ ನಡೆದ 'ಸೀ ಬರ್ಡ್' ಸ್ಲೀಪರ್ ಬಸ್‌ನ ಭೀಕರ ಅಗ್ನಿ ಅವಘಡ ಇಡೀ ರಾಜ್ಯವನ್ನೇ ನಡುಗಿಸಿದೆ. ಗಾಢ ನಿದ್ದೆಯಲ್ಲಿದ್ದವರು ಎಚ್ಚರವಾಗುವಷ್ಟರಲ್ಲೇ ಬೆಂಕಿಯ ಜ್ವಾಲೆಗೆ ಸಜೀವ ದಹನವಾಗಿದ್ದಾರೆ.
ಬೆಂಗಳೂರಿನಿಂದ ಹೊರಟಿದ್ದ ಬಸ್‌ಗೆ ಡಿವೈಡರ್ ಹಾರಿ ಬಂದ ಲಾರಿಯೊಂದು ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಡೀಸೆಲ್ ಟ್ಯಾಂಕ್ ಒಡೆದು ಕ್ಷಣಾರ್ಧದಲ್ಲಿ ಬೆಂಕಿ ಇಡೀ ಬಸ್ಸನ್ನು ಆವರಿಸಿದೆ. ಚಾಣಾಕ್ಷ ಚಾಲಕನ ಸಮಯಪ್ರಜ್ಞೆಯಿಂದ ಕೆಲವು ಜೀವಗಳು ಉಳಿದವೆಯಾದರೂ, ಗಾಢ ನಿದ್ದೆಯಲ್ಲಿದ್ದ ಹಲವರು ಬೆಂಕಿಯ ಉಂಡೆಯೊಳಗೆ ಕರಗಿ ಹೋಗಿದ್ದಾರೆ. ಈ ಕರುಣಾಜನಕ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಸಂತ್ರಸ್ತರಿಗೆ ಪರಿಹಾರ ಘೋಷಿಸಿದ್ದಾರೆ.
ಸ್ಲೀಪರ್ ಬಸ್‌ಗಳೇ ಏಕೆ ಟಾರ್ಗೆಟ್?: ಇತ್ತೀಚಿನ ದಿನಗಳಲ್ಲಿ ಕರ್ನೂಲ್, ಜೈಸಲ್ಮೇರ್ ಹಾಗೂ ಈಗ ಚಿತ್ರದುರ್ಗದ ಘಟನೆಗಳನ್ನು ಗಮನಿಸಿದರೆ ಸ್ಲೀಪರ್ ಬಸ್‌ಗಳೇ ಹೆಚ್ಚಾಗಿ ಅಗ್ನಿ ಅವಘಡಕ್ಕೆ ತುತ್ತಾಗುತ್ತಿವೆ. ಇದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ:
ಕಿರಿದಾದ ದಾರಿ: ಸ್ಲೀಪರ್ ಬಸ್‌ಗಳ ಒಳಾಂಗಣ ವಿನ್ಯಾಸ ಅತ್ಯಂತ ಕಿರಿದಾಗಿರುತ್ತದೆ. ತುರ್ತು ಸಂದರ್ಭದಲ್ಲಿ ಹೊರಬರಲು ದಾರಿ ಸಿಗದೆ ಪ್ರಯಾಣಿಕರು ಒದ್ದಾಡುತ್ತಾರೆ.
ಪರದ್ರೆ ಮತ್ತು ಬೆಡ್‌ಶೀಟ್‌ಗಳು: ಬಸ್‌ನಲ್ಲಿರುವ ಪಾಲಿಯೆಸ್ಟರ್ ಪರದೆಗಳು ಮತ್ತು ಬೆಡ್‌ಶೀಟ್‌ಗಳು ಬೆಂಕಿಯನ್ನು ಬೇಗನೆ ಹೀರಿಕೊಳ್ಳುತ್ತವೆ, ಇದರಿಂದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸುತ್ತದೆ.
ಗ್ಲಾಸ್ ವಿಂಡೋಗಳು: ಸ್ಲೀಪರ್ ಬಸ್‌ಗಳು ಹೆಚ್ಚಾಗಿ ಎಸಿ (AC) ಆಗಿರುವುದರಿಂದ ಗಾಜುಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿರುತ್ತದೆ. ಬೆಂಕಿ ಹೊತ್ತಿಕೊಂಡಾಗ ಗಾಜು ಒಡೆಯಲು ಹ್ಯಾಮರ್ ಸಿಗದೆ ಪ್ರಯಾಣಿಕರು ಉಸಿರುಗಟ್ಟಿ ಸಾವನ್ನಪ್ಪುತ್ತಾರೆ.
ಅಭಿವೃದ್ಧಿ ಹೊಂದಿದ ಬಹುತೇಕ ವಿದೇಶಗಳಲ್ಲಿ ಸ್ಲೀಪರ್ ಬಸ್‌ಗಳನ್ನು ರಸ್ತೆಗೆ ಇಳಿಸಲು ಅವಕಾಶವಿಲ್ಲ. ಅಲ್ಲಿ ಕೇವಲ ಕುಳಿತು ಪ್ರಯಾಣಿಸುವ (Seater) ಬಸ್‌ಗಳಿಗೆ ಮಾತ್ರ ಪ್ರಾಶಸ್ತ್ಯ. ಸ್ಲೀಪರ್ ಬಸ್‌ಗಳಲ್ಲಿ ಪ್ರಯಾಣಿಕರು ಬೆಲ್ಟ್ ಧರಿಸಲು ಸಾಧ್ಯವಿಲ್ಲ ಮತ್ತು ಬೆಂಕಿ ಅವಘಡ ಸಂಭವಿಸಿದರೆ ಸುರಕ್ಷಿತವಾಗಿ ಹೊರಬರಲು ತಾಂತ್ರಿಕವಾಗಿ ಅಸಾಧ್ಯ ಎಂಬ ಕಾರಣಕ್ಕೆ ಅಲ್ಲಿ ಇವುಗಳನ್ನು ನಿಷೇಧಿಸಲಾಗಿದೆ. ಭಾರತದಲ್ಲೂ ಇಂತಹ 'ಚಲಿಸುವ ಚಿತಾಗಾರ'ಗಳ ಬಗ್ಗೆ ಸರ್ಕಾರ ಕಠಿಣ ನಿಯಮಗಳನ್ನು ರೂಪಿಸಬೇಕಿದೆ. ಇಲ್ಲದಿದ್ದರೆ ಪ್ರತಿ ಹಬ್ಬದ ರಜೆಯೂ ಇಂತಹ ರಕ್ತಸಿಕ್ತ ಕಥೆಗಳನ್ನೇ ಬರೆಯುತ್ತಾ ಹೋಗುತ್ತದೆ.