ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ ಹಲ್ಲೆ

Dec 9, 2024, 1:56 PM IST

ಬೆಳಗಾವಿ (ಡಿ.09): ಕ್ಷುಲ್ಲಕ ಕಾರಣಕ್ಕೆ 10 ಕ್ಕೂ ಅಧಿಕ ಯುವಕರ ಗುಂಪಿನಿಂದ ಇಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ನಗರದ ಆರ್ ಪಿಡಿ ಸರ್ಕಲ್ ಬಳಿ ನಡೆದಿದೆ. ನಗರದ ಖಾಸಬಾಗ ಪಾಟೀಲ ಗಲ್ಲಿಯ ನೂರ್‌ಬಸೀರ್ ಅಹ್ಮದ್ ಹೊಸಪೇಟ್(35), ಮಂಜೂರ್ ಹೊಸಪೇಟ್ ಮೇಲೆ ದಾಳಿ ಮಾಡಲಾಗಿದ್ದು, ಅವರನ್ನು ಫೋನ್ ಮಾಡಿ ಕರೆಯಿಸಿ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇವರಿಒಬ್ಬರಿಗೂ ತಲೆ, ಬೆನ್ನು, ಮುಖಕ್ಕೆ ಹೊಡೆದು ಹಲ್ಲೆ ಮಾಡಲಾಗಿದ್ದು, ಹಲ್ಲೆಗೊಳಗಾದ ಯುವಕರು ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಗಲಾಟೆ ನಡೆದ ಸ್ಥಳದಲ್ಲೇ ಬಿದ್ದಿರೋ ಚಪ್ಪಲಿ, ಗಾಗಲ್ ಗಲಾಟೆಯ ತೀವ್ರತೆಗೆ ಸಾಕ್ಷಿ ನೀಡುತ್ತಿವೆ.

ಬೆಳಗಾವಿಯಲ್ಲಿ ನಡೆದ ಗಲಾಟೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿ ನೀಡಿದ ಡಿಸಿಪಿ ರೋಹನ್ ಜಗದೀಶ್ ಅವರು ವೈಯಕ್ತಿಕ ದ್ವೇಷ ಹಿನ್ನೆಲೆ ನಡೆದಿರೋ ಗಲಾಟೆ ಎಂದು ತಿಳಿಸಿದ್ದಾರೆ. ಹಲ್ಲೆ ಪ್ರಕರಣ ಸಂಬಂಧ ಈಗಾಗಲೇ ನಾಲ್ವರು ಯುವಕರನ್ನ ವಶಕ್ಕೆ ಪಡೆಯಲಾಗಿದೆ. ಹಲ್ಲೆಗೊಳಗಾದ ಇಬ್ಬರು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದರು.