ಉತ್ತರ ಕರ್ನಾಟಕದ ಬಾಗಲಕೋಟೆ (Bagalkot) ಜಿಲ್ಲೆ ಕೃಷ್ಣಾ,ಮಲಪ್ರಭಾ, ಘಟಪ್ರಭಾ ಮೂರು ನದಿಗಳನ್ನು ಹೊಂದಿರುವ ಜಿಲ್ಲೆ. ಇಲ್ಲಿ ಮಳೆಗಾಲ ಬಂತೆಂದರೆ ನದಿ ತೀರದ ಗ್ರಾಮಸ್ಥರಿಗೆ ಪ್ರವಾಹ ಭೀತಿ (Flood Threat) ಶುರುವಾಗುತ್ತೆ.
ಬಾಗಲಕೋಟೆ (ಮೇ. 03): ಉತ್ತರ ಕರ್ನಾಟಕದ ಬಾಗಲಕೋಟೆ (Bagalkot) ಜಿಲ್ಲೆ ಕೃಷ್ಣಾ,ಮಲಪ್ರಭಾ, ಘಟಪ್ರಭಾ ಮೂರು ನದಿಗಳನ್ನು ಹೊಂದಿರುವ ಜಿಲ್ಲೆ. ಇಲ್ಲಿ ಮಳೆಗಾಲ ಬಂತೆಂದರೆ ನದಿ ತೀರದ ಗ್ರಾಮಸ್ಥರಿಗೆ ಪ್ರವಾಹ ಭೀತಿ (Flood Threat) ಶುರುವಾಗುತ್ತೆ.
ಇತ್ತ ಬೇಸಿಗೆ ಕಾಲ ಬಂತೆಂದರೆ ಸಾಕು ಜನಜಾನುವಾರುಗಳಿಗೆ ಕಿಲ್ಲರ್ ಮೊಸಳೆಗಳ (Crocodile) ದಾಳಿ ಭಯ ಎದುರಾಗುತ್ತದೆ. ಬಿರು ಬೇಸಿಗೆಯ ಮಧ್ಯೆ ಜಿಲ್ಲೆಯಲ್ಲಿ ಕೃಷ್ಣಾ ,ಮಲಪ್ರಭಾ, ಘಟಪ್ರಭಾ ನದಿ ನೀರು ಖಾಲಿಯಾಗುತ್ತಾ ಬಂದಂತೆ ನದಿ ತೀರದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗುತ್ತದೆ. ಇದರಿಂದ ನದಿ ತೀರದ ಗ್ರಾಮಸ್ಥರಿಗೆ ಇನ್ನಿಲ್ಲದ ಭಯ ಸೃಷ್ಟಿಯಾಗುತ್ತಿದೆ. ಇದಕ್ಕೆ ಕಾರಣ ಅಂದರೆ ನೀರು ಖಾಲಿಯಾಗುತ್ತಿದ್ದಂತೆ ಮೊಸಳೆಗಳು ಜನಜಾನುವಾರುಗಳ ಭೇಟಿಗೆ ಹೊಂಚು ಹಾಕಿ ನಿಲ್ಲುತ್ತಿವೆ.
ಈ ಮಧ್ಯೆ ಅಲ್ಲಲ್ಲಿ ನದಿ ತೀರದ ಗ್ರಾಮಗಳಲ್ಲಿ ಈಗಾಗಲೇ ಮೊಸಳೆಗಳು ಕಂಡು ಬರುತ್ತಿವೆ. ಕಳೆದ ಎರಡು ದಿನದ ಹಿಂದೆಯಷ್ಟೇ ಹುನಗುಂದ ತಾಲೂಕಿನ ರಾಮಥಾಳ ಗ್ರಾಮದಲ್ಲಿ 6 ಅಡಿ ಉದ್ದದ ಬೃಹತ್ ಮೊಸಳೆಯೊಂದು ರಾತ್ರೋರಾತ್ರಿ ನದಿ ಬಿಟ್ಟು ಹೊಲಕ್ಕೆ ನುಗ್ಗಿದ್ದು, ರೈತರು ಅದನ್ನು ಕಂಡು ಆತಂಕಕ್ಕೆ ಒಳಗಾದ್ರು. ತಕ್ಷಣ ರೈತರೆಲ್ಲಾ ಸೇರಿ ಮೊಸಳೆ ಕಟ್ಟಿ ಹಾಕಿ ಸುರಕ್ಷಿತ ತಾಣಕ್ಕೆ ಬಿಡಲು ಮುಂದಾದ್ರು. ಹೀಗೆ ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಆತಂಕ ಶುರುವಾಗಿದ್ದು, ಇಂತಹ ಮೊಸಳೆಗಳ ನಿಯಂತ್ರಣಕ್ಕೆ ಸಧ್ಯ ಬಾಗಲಕೋಟೆ ಜಿಲ್ಲೆಯಲ್ಲಿ ಮೊಸಳೆ ಪಾರ್ಕ ನಿರ್ಮಾಣವಾಗಬೇಕು ಅಂತಾರೆ ಜಿಲ್ಲೆಯ ನಾಗರಿಕರು.
ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ಬಾರಿ ಬೇಸಿಗೆ ಬಂದಾಗ ಮೂರು ನದಿ ತೀರದಲ್ಲಿ ಮೊಸಳೆ ಹಾವಳಿ ನಿರಂತರವಾಗಿರುತ್ತೆ. ಆಹಾರ ಅರಸಿ ನದಿ ದಡಕ್ಕೆ ಬರುವ ಮೊಸಳೆಗಳು ಹೊಲಕ್ಕೂ ದಾಂಗುಡಿಯಿಡುತ್ತವೆ. ಇದರಿಂದ ನದಿ ತೀರದ ಜನರಿಗೆ ನೆಮ್ಮದಿಯೇ ಮಾಯವಾದಂತಾಗಿದೆ. ಜನಜಾನುವಾರುಗಳ ಮೇಲೆ ಮೊಸಳೆಗಳು ಯಾವಾಗ ದಾಳಿ ಮಾಡುತ್ತವೆಯೋ ಎಂದು ಭಯದಲ್ಲಿ ಬದುಕಬೇಕಾಗಿದೆ.
ಇನ್ನು ಈಗಾಗಲೇ ಒಂದು ಅಧ್ಯಯನದ ಪ್ರಕಾರ ಜಿಲ್ಲೆಯಲ್ಲಿ ಮೂರು ನದಿ ತೀರದಲ್ಲಿ ಒಟ್ಟು ಐದುನೂರಕ್ಕೂ ಹೆಚ್ಚು ಮೊಸಳೆ ಇರೋದು ಬೆಳಕಿಗೆ ಬಂದಿದೆ. ಇನ್ನು ಕಳೆದ ಒಂದು ದಶಕದಲ್ಲಿ ಮೊಸಳೆಗಳ ದಾಳಿಗೆ ಮೂರರಿಂದ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಅನೇಕ ಜಾನುವಾರುಗಳು ಮೊಸಳೆಗಳಿಗೆ ಆಹಾರವಾಗಿವೆ. ಇನ್ನು ಕೆಲ ಕಡೆ ಗ್ರಾಮಕ್ಕೆ ನುಗ್ಗಿದಾಗ ಜನರ ಕೈಯಲ್ಲಿ ಸಿಕ್ಕು ಮೊಸಳೆಗಳು ಕೂಡ ಸಾವನ್ನಪ್ಪಿವೆ. ಇದರಿಂದ ಜಿಲ್ಲೆಯಲ್ಲಿ ಮೊಸಳೆ ಪಾರ್ಕ್ ನಿರ್ಮಿಸಿ ಜನ ಜಾನುವಾರುಗಳನ್ನು ರಕ್ಷಣೆ ಮಾಡೋದರ ಜೊತೆಗೆ ಮೊಸಳೆಗಳನ್ನು ರಕ್ಷಣೆ ಮಾಡುವ ಕಾರ್ಯವಾಗಬೇಕಾಗಿದೆ. ಇಲ್ಲದಿದ್ದರೆ ಮತ್ತಷ್ಟು ಅನಾಹುತ ಆಗೋದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮೊಸಳೆ ಪಾರ್ಕ ಸ್ಥಾಪನೆ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ ಅಂತಾರೆ ಜಿಲ್ಲೆಯ ಜನರು.