Impact: ಗೃಹ ಸಚಿವ ತವರಲ್ಲಿ ಲಂಚದ ಹಾವಳಿ, ಆಗುಂಬೆ ಪೋಲಿಸ್ ಠಾಣೆಯ ಎಎಸ್ಐ ಸಸ್ಪೆಂಡ್

Dec 25, 2021, 3:35 PM IST

ಶಿವಮೊಗ್ಗ (ಡಿ. 25): ಇದು ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್! ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತವರಲ್ಲೇ ಪೋಲಿಸರ ಲಂಚಾವತಾರಕ್ಕೆ (Bribe) ಬ್ರೇಕ್ ಬಿದ್ದಿದೆ. ಗೃಹ ಸಚಿವರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ (Thirthahalli) ಹೆಚ್ಚಾದ  ಲಂಚದ ಹಾವಳಿ ಕುರಿತು ಸುವರ್ಣ ನ್ಯೂಸ್ ಸುದ್ದಿ ಬಿತ್ತರಿಸಿತ್ತು. ಸುದ್ದಿ ಪ್ರಸಾರದ ಬೆನ್ನಲ್ಲೇ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಪೋಲಿಸ್ ಠಾಣೆಯ ಎಎಸ್ಐ ದೇವಿದಾಸ್ ಡಿ ನಾಯಕ್ ಸಸ್ಪೆಂಡ್ (Suspend) ಮಾಡಿ ಶಿವಮೊಗ್ಗ ಎಸ್ಪಿ ಲಕ್ಷ್ಮೀ ಪ್ರಸಾದ್ ಆದೇಶ ಹೊರಡಿಸಿದ್ದಾರೆ. 

ಪೋಲಿಸರ ಬಗ್ಗೆ ಗೃಹಸಚಿವರು ನೀಡಿದ ಹೇಳಿಕೆಗೆ ಪುಷ್ಟಿ ನೀಡಿದ್ದ ಪ್ರಕರಣ ಇದಾಗಿತ್ತು. ಗೃಹ ಸಚಿವರು ಬಹಿರಂಗವಾಗಿ ಕೆಲ ಪೊಲೀಸ್ ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಎಂಜಲು ಕಾಸಿಗೆ ಅಂದರೆ ಲಂಚದ ಹಣಕ್ಕೆ ಬಾಯ್ಬಿಡುತ್ತಾರೆ ಎಂದು ನೀಡಿದ್ದ ಹೇಳಿಕೆಗೆ ಇಂಬು ನೀಡಿತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್  ಪೋಲಿಸರ ಲಂಚವತಾರದ ಬಗ್ಗೆ ಸಾಕ್ಷಿ ಸಮೇತ ಪ್ರಸಾರ ಮಾಡಿತ್ತು. ಪೊಲೀಸ್ ಅಧಿಕಾರಿ ಮೊಬೈಲ್ ಕರೆ ಮಾಡಿ ಲಂಚದ ಬೇಡಿಕೆ ಇಟ್ಟಿದ್ದು, ಲಂಚದ ಹಣ ನೀಡಲು ತಡ ಮಾಡಿದ್ದಕ್ಕೆ ಪೋಲಿಸಪ್ಪ ನಿಂದಿಸೋದು ಎಲ್ಲಾ ಬಟಾಬಯಲಾಗಿತ್ತು.

Fight Agaianst Corruption: ಹೋಂ ಮಿನಿಸ್ಟರ್ ಆರಗ ತವರಲ್ಲೇ ಲಂಚಾವತಾರ..!

ಆಗುಂಬೆ ಠಾಣೆಯ ASI ದೇವದಾಸ್ ಡಿ ನಾಯಕ್ ಎಂಬಾತನ ಲಂಚಗುಳಿತನ ಬಗ್ಗೆ ಪ್ರಸಾರ ಮಾಡಿತ್ತು. ಸಬ್ ಇನ್ಸ್ ಪೆಕ್ಟರ್ ಕೊರೊನಾ  ರಜೆಯಲ್ಲಿದ್ದಾಗ ಇನ್ಚಾರ್ಚ್ ಎಎಸ್ಐ ನಡೆಸಿದ್ದ ಲಂಚಾವತಾರದ ದರ್ಬಾರ್ ಬಟಾಬಯಲಾಗಿತ್ತು. ಆಗುಂಬೆ ಗ್ರಾಪಂ ಕಳೆದ 3 ವರ್ಷಗಳಿಂದ ನೀರುಗಂಟಿಯಾಗಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂಜನ್ ಎಂಬಾತನಿಗೆ ಲಂಚದ ಹಣ ನೀಡಲು ತಡವಾಗಿದ್ದಕ್ಕೆ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಕ್ರೌರ್ಯವನ್ನು ಮೆರೆದಿದ್ದ. ಈ ಹಿಂದೆ ನೀರಗಂಟಿ ಮತ್ತು ಗ್ರಾಪಂ ಉಪಾಧ್ಯಕ್ಷ ರಾಘವೇಂದ್ರ ಎಂಬುವವರ ಜೊತೆಗೆ ಜಗಳವಾಡಿದ್ದ ಪ್ರಕರಣ ಇದಾಗಿತ್ತು.

ಪ್ರಕರಣಕ್ಕೆ ಸಂಬಂಧಪಟ್ಟಂತೆ 5 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟು ಪೋಲಿಸಪ್ಪ ಹಾಕಿದ್ದ ಒತ್ತಡ ಹಾಕಿದ್ದ. ಈ ಬಗ್ಗೆ ಸುವರ್ಣನ್ಯೂಸ್ ವರದಿ ಭಿತ್ತರವಾಗುತ್ತಿದ್ದಂತೆ , ಎಸ್ಪಿ ಸೂಚನೆಯ ಮೇರೆಗೆ ತನಿಖೆ ನಡೆಸಿದ್ದ ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ ಈ ಪ್ರಕರಣ ದಲ್ಲಿ ಸತ್ಯಾಂಶ ಇದೆ ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್‌ಗೆ ವರದಿ ನೀಡಿದ್ದರು.  ಡಿವೈಎಸ್ಪಿ ವರದಿ ನೀಡುತ್ತಿದ್ದಂತೆ ಎಎಸ್ಐ ಸಸ್ಪೆಂಡ್ ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ.