Dec 21, 2024, 6:29 PM IST
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರು ತುಮಕೂರು ಎನ್ ಎಚ್ 48ರ ತಿಪ್ಪಗೊಂಡನಹಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಅಲ್ಲಿನ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೋಲ್ವೋ ಕಾರಿನ ಮೇಲೆ ಕಂಟೈನರ್ ಲಾರಿ ಮಗುಚಿ ಬಿದ್ದು ಕಾರಿನಲ್ಲಿದ್ದ ಒಟ್ಟು ಆರು ಜನ ದಾರುಣವಾಗಿ ಸಾವನ್ನಪ್ಪಿದ್ದರು. ಈ ಭಯಾನಕ ಘಟನೆಯ ವೀಡಿಯೋ ಈಗ ವೈರಲ್ ಆಗುತ್ತಿದೆ. ಈ ದುರಂತದಲ್ಲಿ ಉದ್ಯಮಿ ಚಂದ್ರಮ್ ಯೇಗಪ್ಪಗೋಳ ಅವರ ಹೆಂಡತಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಜನ ಜೀವ ಕಳೆದುಕೊಂಡಿದ್ದಾರೆ.
ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಈಚರ್ ಕ್ಯಾಂಟರ್ ಹೋಗುತ್ತಿತ್ತು. ಇದೇ ಕ್ಯಾಂಟರ್‌ನ ಹಿಂದೆ ಚಂದ್ರಮ್ ಅವರ ವೋಲ್ವೋ ಕಾರು ಹೋಗುತ್ತಿತ್ತು. ಇನ್ನು ಪಕ್ಕದ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಕಂಟೈನರ್ ಲಾರಿಯೊಂದು ವೇಗವಾಗಿ ಹೋಗುತ್ತಿತ್ತು. ನಿಯಂತ್ರಣ ತಪ್ಪಿದ ಕಂಟೇನರ್ ಚಾಲಕ ರಸ್ತೆಯ ಮಧ್ಯದ ಡಿವೈಡರ್ ಮೇಲೆ ಗಾಡಿ ಹತ್ತಿಸಿದ್ದಾರೆ. ಪಕ್ಕದ ರಸ್ತೆಗೆ ಇಳಿದ ಕಂಟೇನರ್ ತುಮಕೂರು ಕಡೆ ಹೋಗ್ತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ಕ್ಯಾಂಟರ್‌ಗೆ ಢಿಕ್ಕಿಯಾದ ಕಂಟೇನರ್, ಅದರ ಹಿಂದೆಯೇ ಬರುತ್ತಿದ್ದ ವೋಲ್ವೋ ಕಾರ್‌ನ ಮೇಲೆ ಏಕಾಏಕಿ ಬಿದ್ದಿದೆ. ಕಂಟೇನರ್ ಬಿದ್ದ ಪರಿಣಾಮಕ್ಕೆ ಇಡೀ ವೋಲ್ವೋ ಕಾರ್ ಅಪ್ಪಚ್ಚಿಯಾಗಿದೆ. ಆಗ ಕಾರಿನಲ್ಲಿದ್ದ 6 ಜನ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಲಾರಿ ಹಾಗೂ ಕ್ಯಾಂಟರ್ ಚಾಲಕ ಇಬ್ಬರಿಗೂ ಸಣ್ಣಪುಟ್ಟ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.