ಮನೆಯಲ್ಲಿ ವಾಸ್ತು ಸರಿಯಿದ್ದರೆ ನೆಮ್ಮದಿ ಶಾಂತಿ ನೆಲೆಸಿರುತ್ತದೆ. ಅದಕ್ಕೆ ದಿಕ್ಕುಗಳಿಗೆ ಸಂಬಂಧಿಸಿದ ವಾಸ್ತು ಪಕ್ಕಾ ಇರಬೇಕಾಗುತ್ತದೆ. ಆಯಾ ದಿಕ್ಕುಗಳಲ್ಲಿ ಯಾವ ಕೊಠಡಿಯನ್ನು ನಿರ್ಮಿಸಬೇಕು ಎಂಬುದನ್ನು ತಿಳಿದಿರಬೇಕು. ಅದಕ್ಕೆ ತಕ್ಕಂತೆ ಮನೆಯ ವಾಸ್ತುವಿಗೆ ಮತ್ತು ನವಗ್ರಹಗಳಿಗೆ ಪರಸ್ಪರ ಸಂಬಂಧವಿದೆ. ಹಾಗಾಗಿ ಆಯಾ ದಿಕ್ಕಿನ ಅಧಿಪತಿ ಗ್ರಹಗಳಿಗೆ ಸರಿಹೊಂದುತ್ತದೋ ಇಲ್ಲವೋ ಎಂಬುದನ್ನು ಸಹ ಗಮನಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ ಮನೆಯ ವಾಸ್ತು ಮತ್ತು ನವಗ್ರಹಗಳ ಬಗ್ಗೆ ತಿಳಿಯೋಣ...
ಸನಾತನ ಸಂಸ್ಕೃತಿಯಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷವಾದ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ವಾಸ್ತು ನಿಯಮಗಳನ್ನು ಪಾಲಿಸಿದಲ್ಲಿ ಜೀವನವು ನೆಮ್ಮದಿಯಿಂದ ಕೂಡಿರುತ್ತದೆ. ಮನೆಯ ವಾಸ್ತುಗೆ ನವಗ್ರಹಗಳ ಅನುಗ್ರಹವು ಅತ್ಯಂತ ಮುಖ್ಯವಾಗಿರುತ್ತದೆ.
ಅಷ್ಟೇ ಅಲ್ಲದೆ ಆಯಾ ದಿಕ್ಕುಗಳ ಅಧಿಪತಿ ದೇವತೆಗಳು ಬೇರೆ ಬೇರೆಯಾಗಿರುತ್ತವೆ. ಹಾಗಾಗಿ ಮನೆಯಲ್ಲಿ ಈ ಎಲ್ಲವೂ ಸಮತೋಲನ ಕಾಯ್ದುಕೊಂಡಾಗ ಸುಖ-ಸಮೃದ್ಧಿ ನೆಲೆಸಿರುತ್ತದೆ. ಇದಕ್ಕೆ ವಿರುದ್ಧವಾಗಿ ಮನೆಯ ನಿರ್ಮಾಣವಾದರೆ ವಾಸ್ತು ದೋಷ ಉಂಟಾಗುತ್ತದೆ. ಇದರಿಂದ ಅನೇಕ ವಿಧದ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಮನೆಯ ವಾಸ್ತು ಮತ್ತು ನವಗ್ರಹಗಳ ನಡುವೆ ಇರುವ ನಂಟಿನ ಬಗ್ಗೆ ತಿಳಿಯೋಣ...
ಮನಸ್ಸಿನ ಶಾಂತಿಗೆ ಚಂದ್ರ
ವಾಯವ್ಯ ದಿಕ್ಕಿನ ಅಧಿಪತಿ ಸ್ವಾಮಿ ಚಂದ್ರ. ಮನಸ್ಸಿನ ಶಾಂತತೆ ಮತ್ತು ಭಾಗ್ಯಕ್ಕೆ ಒಡೆಯ ಚಂದ್ರಗ್ರಹವಾಗಿದ್ದಾನೆ. ಮನೆಯ ವಾಸ್ತುವಿನಲ್ಲಿ ಮನಸ್ಸು, ಮನಸ್ಥಿತಿ, ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ, ಸಂಪತ್ತು ಹಾಗೂ ತಾಯಿಯ ಕಾರಕ ಗ್ರಹ ಚಂದ್ರನಾಗಿದ್ದಾನೆ. ವಾಯವ್ಯ ದಿಕ್ಕು ವಾಯುದೇವನ ಸ್ಥಾನವಾಗಿದೆ. ವಾಯುದೇವ ನಮಗೆ ಶಕ್ತಿ, ಪ್ರಾಣ ಮತ್ತು ಸ್ವಾಸ್ಥವನ್ನು ನೀಡುವವನಾಗಿದ್ದಾನೆ. ಈ ದಿಕ್ಕಿನಲ್ಲಿ ಭೋಜನಗೃಹ, ಅಥಿತಿಗಳ ಕೋಣೆ, ಸ್ನಾನ ಗೃಹಗಳಿದ್ದರೆ ಶುಭವೆಂದು ಹೇಳಲಾಗುತ್ತದೆ. ಸಾಮಾಜಿಕ ಜೀವನ ಮತ್ತು ವ್ಯಾಪಾರದ ಮೇಲೆ ಇದರ ವಿಶೇಷ ಪ್ರಭಾವ ಬೀರಲಿದೆ.
ಇದನ್ನು ಓದಿ: ಸೂರ್ಯನಿಗೆ ಅರ್ಘ್ಯ ಅರ್ಪಿಸಿ, ಪಾಸಿಟಿವ್ ಎನರ್ಜಿ ಪಡೆಯಿರಿ..!
ಪೂರ್ವಕ್ಕೆ ಸೂರ್ಯ – ಸೂರ್ಯನಿಂದ ಗೌರವ ಮತ್ತು ಪ್ರತಿಷ್ಠೆ
ಪೂರ್ವ ದಿಕ್ಕಿನ ಅಧಿಪತಿ ದೇವರ ಇಂದ್ರದೇವನಾಗಿದ್ದಾನೆ. ಸೂರ್ಯ ನಾರಾಯಣನು ಪೂರ್ವ ದಿಕ್ಕಿನ ಸ್ವಾಮಿ ಗ್ರಹವಾಗಿದ್ದಾನೆ. ಪೂರ್ವ ದಿಕ್ಕನ್ನು ಪಿತೃ ಸ್ಥಾನವೆಂದು ಸಹ ಹೇಳಲಾಗುತ್ತದೆ. ಐಶ್ವರ್ಯ ಮತ್ತು ತೇಜಸ್ಸನ್ನು ನೀಡುವ ದಿಕ್ಕು ಇದಾಗಿದೆ. ಮನೆಯ ಪೂರ್ವ ದಿಕ್ಕು ದೋಷದಿಂದ ಮುಕ್ತವಾಗಿದ್ದಲ್ಲಿ ಸದಸ್ಯರು ಮಹತ್ವಾಕಾಂಕ್ಷಿಗಳು, ಸದ್ಗುಣವಂತರು ಮತ್ತು ತೇಜಸ್ವಿಗಳಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಈ ದಿಕ್ಕು ಆದಷ್ಟು ವಿಶಾಲವಾಗಿದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಗ್ರಹಗಳ ರಾಜನಾದ ಸೂರ್ಯದೇವನ ಕಿರಣಗಳು ಮನೆಯನ್ನು ಪ್ರವೇಶಿಸಿದಾಗ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ.
ದಕ್ಷಿಣಕ್ಕೆ ಮಂಗಳಕರ ಮಂಗಳಗ್ರಹ
ದಕ್ಷಿಣ ದಿಕ್ಕಿನ ಅಧಿಪತಿ ಯಮರಾಜ ಮತ್ತು ಇದರ ಸ್ವಾಮಿ ಗ್ರಹವು ಮಂಗಳ ಗ್ರಹವಾಗಿದೆ. ಧನ ಲಾಭ, ಎಲ್ಲ ರೀತಿ ಧೈರ್ಯ ಮತ್ತು ಸಾಹಸ ಮನೋಭಾವವನ್ನು ನೀಡುವುದು ದಕ್ಷಿಣ ದಿಕ್ಕು. ಇದಲ್ಲದೆ, ಯುದ್ಧ, ಕಲಹ, ಕ್ರೋಧಗಳು ಮಂಗಳ ಗ್ರಹದ ಗುಣಗಳಾಗಿವೆ. ದಕ್ಷಿಣ ದಿಕ್ಕು ಮುಖ್ಯ ದ್ವಾರ ನಿರ್ಮಾಣಕ್ಕೆ ಉತ್ತಮವಲ್ಲವೆಂದು ಹೇಳಲಾಗುತ್ತದೆ.
ನೈಋತ್ಯಕ್ಕೆ ರಾಹು - ರಾಹುವಿನಿಂದ ಶುಭಫಲ
ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ನಡುವಿನಲ್ಲಿ ಬರುವ ದಿಕ್ಕನ್ನು ನೈಋತ್ಯ ಮೂಲೆ ಎಂದು ಕರೆಯಲಾಗುತ್ತದೆ. ಈ ದಿಕ್ಕಿನ ಸ್ವಾಮಿ ಗ್ರಹವು ರಾಹು ಗ್ರಹವಾಗಿದೆ. ಈ ದಿಕ್ಕಿನಲ್ಲಿ ಭಾರವಸ್ತುಗಳಿಂದ ತುಂಬಿ ಇಡಬೇಕು. ಈ ದಿಕ್ಕಿನಲ್ಲಿ ಬೆಡ್ ರೂಮ್, ಸ್ನಾನ ಗೃಹ, ಕಚೇರಿ ಮತ್ತು ಸ್ಟೋರ್ ರೂಮ್ ನಿರ್ಮಾಣ ಮಾಡುವುದು ಉತ್ತಮ. ತಾಮಸ ಶಕ್ತಿ ಈ ದಿಕ್ಕಿನಲ್ಲಿ ಹೆಚ್ಚಿರುವುದರಿಂದ ಈ ಜಾಗವನ್ನು ಖಾಲಿ ಬಿಟ್ಟಿರಬಾರದೆಂದು ಹೇಳಲಾಗುತ್ತದೆ.
ಇದನ್ನು ಓದಿ: ನಿಮ್ಮದು ದೇವ ಸ್ನಾನವೋ, ರಾಕ್ಷಸ ಸ್ನಾನವೋ ನೋಡಿಕೊಳ್ಳಿ..!
ಉತ್ತರಕ್ಕೆ ಬುಧ- ಬುಧನಿಂದ ಮನೆಗೆ ಸಂಪನ್ನತೆ
ಉತ್ತರ ದಿಕ್ಕಿನ ಅಧಿಪತಿ ದೇವರು ಸಂಪತ್ತಿನ ಒಡೆಯ ಕುಬೇರ ದೇವ. ಬುಧ ಗ್ರಹವು ಈ ದಿಕ್ಕಿನ ಸ್ವಾಮಿ ಗ್ರಹವಾಗಿದೆ. ಧನ ಸಂಪತ್ತನ್ನು ನೀಡುವ ದಿಕ್ಕು ಇದಾಗಿದೆ. ಮನೆಯಲ್ಲಿ ಉತ್ತರ ದಿಕ್ಕು ಶುಭವಾಗಿದ್ದರೆ ಮನೆಯ ಸದಸ್ಯರು ಬುದ್ಧಿವಂತರು, ವಿದ್ವಾಂಸರು, ಲೇಖಕರು ಹೀಗೆ ಹೆಚ್ಚಿನ ಪ್ರತಿಭೆಯನ್ನು ಹೊಂದಿರುತ್ತಾರೆ. ಹಾಗಾಗಿ ಈ ದಿಕ್ಕಿನಲ್ಲಿ ಅಧ್ಯಯನ ಕೊಠಡಿ, ಭಂಡಾರ ಮತ್ತು ಪುಸ್ತಕಗಳನ್ನು ಇಡಬೇಕು.
ಈಶಾನ್ಯಕ್ಕೆ ಗುರು - ನೆಮ್ಮದಿ ಮತ್ತು ಆಧ್ಯಾತ್ಮಿಕತೆಗೆ ಗುರು
ಉತ್ತರ ಮತ್ತು ಪೂರ್ವ ದಿಕ್ಕಿನ ಮಧ್ಯದಲ್ಲಿ ಬರುವ ದಿಕ್ಕನ್ನು ಈಶಾನ್ಯ ಮೂಲೆ ಅಥವಾ ದಿಕ್ಕು ಎಂದು ಕರೆಯಲಾಗುತ್ತದೆ. ಈಶಾನ್ಯ ದಿಕ್ಕಿಗೆ ಗುರುಗ್ರಹವು ಸ್ವಾಮಿಗ್ರಹವಾಗಿದೆ. ಗುರು ಗ್ರಹವು ಆಧ್ಯಾತ್ಮಿಕತೆಯನ್ನು ಪ್ರದಾನ ಮಾಡುವ ಗ್ರಹವಾಗಿದೆ. ಈ ಸ್ಥಳದಲ್ಲಿ ಪೂಜಾ ಗೃಹ ಮತ್ತು ಯೋಗ ಕೊಠಡಿಯನ್ನು ನಿರ್ಮಿಸಬಹುದಾಗಿದೆ.
ಆಗ್ನೇಯಕ್ಕೆ ಶುಕ್ರ - ಶುಕ್ರನಿಂದ ಐಶ್ವರ್ಯ
ದಕ್ಷಿಣ ಮತ್ತು ಪೂರ್ವ ದಿಕ್ಕಿನ ನಡುವಿನಲ್ಲಿ ಬರುವ ದಿಕ್ಕು ಆಗ್ನೇಯ ಅಥವಾ ಇದನ್ನು ಆಗ್ನೇಯ ಮೂಲೆ ಎಂದು ಕರೆಯುತ್ತಾರೆ. ಆಗ್ನೇಯ ದಿಕ್ಕಿನ ಸ್ವಾಮಿ ಗ್ರಹವಾಗಿದೆ. ಐಶ್ವರ್ಯವನ್ನು ನೀಡುವ ಶುಕ್ರ ಗ್ರಹದ ಆಗ್ನೇಯ ದಿಕ್ಕು ಶುಭ ಗುಣಗಳಿಂದ ತುಂಬಿದ್ದು, ದೋಷ ರಹಿತವಾಗಿದ್ದರೆ ಆ ಮನೆಯ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಅಡುಗೆ ಮನೆ ಇರುವುದು ಶುಭವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಅಗ್ನಿಗೆ ಸಂಬಂಧಿಸಿದ ವಿದ್ಯುತ್ ಉಪಕರಣಗಳ ಕೆಲಸವನ್ನು ಈ ದಿಕ್ಕಿನಲ್ಲಿ ಮಾಡುವುದು ಒಳ್ಳೆಯದು.
ಇದನ್ನು ಓದಿ: ಜಗತ್ತು ಗುರುತಿಸುವಂಥ ವ್ಯಕ್ತಿತ್ವ ಈ ರಾಶಿ- ನಕ್ಷತ್ರದವರದ್ದು...!!
ಪಶ್ಚಿಮಕ್ಕೆ ಶನಿ - ಶನಿಯಿಂದ ಭಾಗ್ಯ
ಪಶ್ಚಿಮ ದಿಕ್ಕು ಲಾಭ ಮತ್ತು ಪ್ರಸನ್ನತೆಯನ್ನು ನೀಡುವ ದಿಕ್ಕಾಗಿದೆ. ಈ ದಿಕ್ಕಿನ ಅಧಿಪತಿ ದೇವರು ವರುಣ ದೇವ ಮತ್ತು ಈ ದಿಕ್ಕಿನ ಸ್ವಾಮಿ ಗ್ರಹವು ಶನಿ ಗ್ರಹವಾಗಿದೆ. ಈ ದಿಕ್ಕಿನಲ್ಲಿ ಡ್ರಾಯಿಂಗ್ ರೂಮ್, ಬೆಡ್ ರೂಮ್ ಮತ್ತು ಪುಸ್ತಕಗಳನ್ನು ಇಡಬಹುದಾಗಿದೆ. ಇದರಿಂದ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ.