
ತನ್ನ ಹೊಸತನದಿಂದ ಯಾವಾಗಲೂ ವೀಕ್ಷಕರಿಗೆ ಹೊಸತನವನ್ನು ಕೊಟ್ಟು ಮನರಂಜಿಸುವ ಜೀ ಕನ್ನಡ ವಾಹಿನಿ ಈಗ 'ಆಡಿಷನ್ ಹೆಸರಲ್ಲಿ ಮೋಸ ಹೋಗದಿರಿ' ಎಂದು ಸಾವರ್ಜನಿಕರಿಗೆ ಸೂಚನೆಯನ್ನು ಕೊಟ್ಟಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ 'ಮೋಸ ಹೋಗದಿರಿ, ಎಚ್ಚರದಿಂದಿರಿ.. ಜೀ ಕನ್ನಡದ ಯಾವುದೇ ಕಾರ್ಯಕ್ರಮದ ಆಡಿಷನ್, ಕಾಸ್ಟಿಂಗ್‌ಗೆ ಸಂಬಂಧಿಸಿದಂತೆ ಯಾರ ಬಳಿಯೂ ಶುಲ್ಕ ಪಡೆಯುವುದಿಲ್ಲ. ಮಧ್ಯವರ್ತಿಗಳ ಬಳಿ ಇದಕ್ಕೆ ಸಂಬಂಧಿಸಿದಂತೆ ಹಣ ಕೊಟ್ಟು ಮೋಸ ಹೋಗದಿರಿ. ಯಾರಾದರೂ ಜೀ ಕನ್ನಡದ ಹೆಸರಿನಲ್ಲಿ ಹಣ ಕೇಳಿದರೆ ನಿರಾಕರಿಸಿ ಎಂಬ ಪೋಸ್ಟ್ ಜೊತೆ ವಿಡಿಯೋವೊಂದನ್ನು ಹಂಚಿಕೊಂಡಿದೆ.
'ಸಾರ್ವಜನಿಕರಿಗೆ ಸೂಚನೆ.. ಆಡಿಷನ್ ಹೆಸರಲ್ಲಿ ಮೋಸ ಹೋಗದಿರಿ': ಸಾರ್ವಜನಿಕ ಹಿತದೃಷ್ಟಿಯಿಂದ ನಾವು ಅಂದರೆ ಜೀ ಎಂಟರ್ಟೈನೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ಜೀ ಕನ್ನಡ) ಸಂಸ್ಥೆ ಸ್ಪಷ್ಟಪಡಿಸಲು ಬಯಸುವುದೇನೆಂದರೆ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಯಾವುದೇ ಬಗೆಯ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಆಡಿಷನ್, ಕಾಸ್ಟಿಂಗ್ ಅಥವಾ ನಟನಾ ಅವಕಾಶಗಳಿಗೆ ಯಾವುದೇ ರೀತಿಯಲ್ಲೂ ಶುಲ್ಕ ವಿಧಿಸುವುದಿಲ್ಲ. ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಹಣ ಸಂಗ್ರಹಿಸಲು ಜೀ ಕನ್ನಡ ವಾಹಿನಿಯು ಯಾವ ಕಾರಣಕ್ಕೂ ಮೂರನೇ ಸಂಸ್ಥೆ ಅಥವಾ ವ್ಯಕ್ತಿಗೆ ಅಧಿಕಾರ ನೀಡಿಲ್ಲ.
ಅವಕಾಶದ ಹೆಸರಲ್ಲಿ ಯಾರಾದರು ಹಣಕ್ಕೆ ಬೇಡಿಕೆ ಇಡುತ್ತಿದ್ದರೆ ಅದು ಸಂಪೂರ್ಣವಾಗಿ ಅನಧಿಕೃತ ಮತ್ತು ವಂಚನೆಯ ಮಾರ್ಗವಾಗಿರುತ್ತದೆ. 'ಜೀ ಕನ್ನಡ' ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ವಾಹಿನಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಕ್ಕೆ ಯಾವುದೇ ತೆರನಾದ ಅವಕಾಶದ ನೆಪದಲ್ಲಿ ಯಾರಾದರು ಮೌಖಿಕವಾಗಿ, ಲಿಖಿತವಾಗಿ ಅಥವಾ ಯಾವುದೇ ಬಗೆಯಲ್ಲಿ ಹಣ, ವೈಯಕ್ತಿಕ ಮಾಹಿತಿ ಅಥವಾ ಬೇರೆ ಬಗೆಯ ಅನುಕೂಲಗಳನ್ನು ಕೇಳಿದರೆ ದಯವಿಟ್ಟು ಎಚ್ಚರದಿಂದಿರಿ ಮತ್ತು ಸ್ಪಷ್ಟವಾಗಿ ಅವರ ಬೇಡಿಕೆಗಳನ್ನ ನಿರಾಕರಿಸಿ.
ಜೀ ಎಂಟರ್ಟೈನೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ಜೀ ಕನ್ನಡ) ಸಂಸ್ಥೆಯ ಹೆಸರಿನಲ್ಲಿ ಆಡಿಷನ್ ಅಥವಾ ಇನ್ಯಾವುದೇ ಅವಕಾಶಗಳಿಗೆ ಸಂಬಂಧಿಸಿದಂತೆ ಕರೆ ಅಥವಾ ಸಂದೇಶ ಬಂದರೆ ದಯವಿಟ್ಟು ನಮ್ಮ ವಾಹಿನಿಯ ಅಧಿಕೃತ ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿ ಇಲ್ಲವೇ ವಾಹಿನಿಯ ಅಧಿಕೃತ ಖಾತೆಗಳ ಮೂಲಕ ನೇರವಾಗಿ ಸಂಪರ್ಕಿಸಿ ಸ್ಪಷ್ಟ ಮಾಹಿತಿ ಪಡೆದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ. ಸರಿಯಾದ ಪರಿಶೀಲನೆ ಇಲ್ಲದೆ ಯಾರೊಂದಿಗೂ ವೈಯಕ್ತಿಕ ದಾಖಲೆ, ಹಣ ಅಥವಾ ಇನ್ಯಾವುದೇ ಬಗೆಯ ಮಾಹಿತಿ ಹಂಚಿಕೊಳ್ಳಬೇಡಿ.
ಒಂದು ವೇಳೆ, ಅಂತಹ ಮೋಸದ ಚಟುವಟಿಕೆಗಳಿಂದ ಯಾವುದೇ ತೆರನಾದ ನಷ್ಟ, ಹಾನಿ ಅಥವಾ ಅನಾನುಕೂಲತೆ ಸಂಭವಿಸಿದರೆ ಅದಕ್ಕೆ ಜೀ ಕನ್ನಡ ವಾಹಿನಿಯು ಹೊಣೆಗಾರರಾಗಿರುವುದಿಲ್ಲ. ಆಡಿಷನ್, ನಟನಾ ಸಂಬಂಧಿತ ಅವಕಾಶ ಅಥವಾ 'ಜೀ ಕನ್ನಡ'ಕ್ಕೆ ಸಂಬಂಧಿಸಿದ ಯಾವುದೇ ಬಗೆಯ ನಿಖರವಾದ ಮಾಹಿತಿಗಾಗಿ ಕೇವಲ ವಾಹಿನಿಯ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ನೋಡಿ. ಸದಾ ನಿಮ್ಮೊಂದಿಗೆ, ನಿಮ್ಮ ಜೀ ಕನ್ನಡ ಎಂದು ವಾಹಿನಿಯು ವಿಡಿಯೋದಲ್ಲಿ ಸಾವರ್ಜನಿಕರಿಗೆ ಮಹತ್ತರವಾದ ಸೂಚನೆಯನ್ನು ಕೊಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.