ಹೆಸರಿಗೆ ಇದು ಕಿರುತೆರೆ. ಆದರೆ, ಇಲ್ಲಿ ಪಾತ್ರ ಮಾಡುವವರು ಯಾರಿಗೂ ಕಮ್ಮಿ ಇಲ್ಲದಂತೆ ದೊಡ್ಡ ತಾರೆಗಳಾಗಿ ಮಿಂಚುತ್ತಿದ್ದಾರೆ. ಮನೆ ಮನೆಗೆ ತಲುಪುತ್ತಿರುವ ಈ ಬಿಗ್ ಸ್ಟಾರ್‌ಗಳಿಗೆ ಈ ಪುಟ್ಟಪರದೆಯೇ ಭರವಸೆಯ ಬೆಳಕು. ಹೀಗೆ ಪ್ರೇಕ್ಷಕರ ಮನೆ ಮನದಲ್ಲೂ ಮಿಂಚುತ್ತಿರುವ ಕಿರುತೆರೆಯ ತಾರೆಗಳ ಪುಟ್ಟಪರಿಚಯವನ್ನು ಅವರ ಮಾತುಗಳಲ್ಲೇ ಕೇಳಿ.
ಬಣ್ಣದ ಜಗತ್ತಿಗೆ ಬರಬೇಕು ಎನ್ನುವ ಯಾವುದೇ ರೀತಿಯ ಕನಸುಗಳು ಇರಲಿಲ್ಲ. ‘ಜೊತೆ ಜೊತೆಯಲಿ’ ಧಾರಾವಾಹಿಗೆ ಅವಕಾಶ ಬಂದಾಗ ನಾನು ಕಾಲೇಜು ಓದುತ್ತಿದೆ. ಪರೀಕ್ಷೆ ಬೇರೆ ಇತ್ತು. ಹೀಗಾಗಿ ನಾನು ನಟಿಸಲ್ಲ ಎಂದಿದ್ದೆ. ಪರೀಕ್ಷೆ ಮುಗಿಸಿ ಬನ್ನಿ ಕಾಯುತ್ತೇವೆ ಎಂದರು. ಹಾಗೆ ಕಾದರು. ಮುಂದೆ ಜೀ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರೇ ಫೋನ್ ಮಾಡಿ ಮಾತನಾಡಿದ ಮೇಲೆ ನಾನು ಕತೆ ಕೇಳಿದೆ. ತುಂಬಾ ಚೆನ್ನಾಗಿದೆ ಅನಿಸಿತು. ನಮ್ಮ ಮನೆಯಲ್ಲೂ ಒಪ್ಪಿಗೆ ಕೊಟ್ಟರು. ಹಾಗೆ ನಾನು ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡೆ.
'ಜೊತೆ ಜೊತೆಯಲಿ' ಅನು ಹೆಸರಿನಲ್ಲಿ ಫೇಕ್ ಅಕೌಂಟ್; ಹಾಗಾದ್ರೆ ಅಸಲಿ?
ಹಾಗೆ ನೋಡಿದರೆ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸುವ ಮುಂಚೆ ನನಗೆ ಬೇರೆ ಯಾವುದೇ ಧಾರಾವಾಹಿ ಅಥವಾ ಸಿನಿಮಾಗಳಲ್ಲಿ ನಟಿಸಿದ ಅನುಭವ ಇರಲಿಲ್ಲ. ಯಾವ ಅನುಭವ ಇಲ್ಲದೆ ‘ಜೊತೆ ಜೊತೆಯಲಿ’ ಧಾರಾವಾಹಿಯ ಅನು ಪಾತ್ರಕ್ಕೆ ಬಣ್ಣ ಹಚ್ಚಿದೆ. ನಿಜ ಹೇಳಬೇಕು ಅಂದರೆ ನನಗೆ ಯಶಸ್ಸಿನ ಕುರಿತು ಮೊದಲೇ ಅಂದಾಜು ಅಥವಾ ನಿರೀಕ್ಷೆ ಇರಲಿಲ. ಆದರೂ ಒಂದೇ ಒಂದು ಧಾರಾವಾಹಿಯ ಮೂಲಕ ರಾತ್ರೋ ರಾತ್ರಿ ಸ್ಟಾರ್ ನಟಿ ಆದೆ. ಇದಕ್ಕೆ ಕಾರಣ ಇಡೀ ಧಾರಾವಾಹಿಯ ತಂಡ ಹಾಗೂ ನೋಡಿ ಮೆಚ್ಚಿಕೊಂಡು ನನ್ನ ಬೆಂಬಲಿಸಿದ ಪ್ರೇಕ್ಷಕರು. ಮೊದಲ ಹೆಜ್ಜೆಯಲ್ಲೇ ಇಷ್ಟುದೊಡ್ಡ ಗೆಲುವು ಬೇರೆ ಯಾರಿಗೆ ಸಿಕ್ಕಿದೆಯೋ ನನಗೆ ಗೊತ್ತಿಲ್ಲ. ನನಗೆ ಸಿಕ್ಕಿದೆ. ಆ ಕಾರಣಕ್ಕೆ ನಾನು ಅದೃಷ್ಟವಂತೆ. ಕಿರುತೆರೆ ನನ್ನ ಬದುಕಿಗೆ ಹೊಸ ತಿರುವು ನೀಡಿದೆ ಎನ್ನಬಹುದು. ಬಹುತೇಕರಿಗೆ ನನ್ನ ಹೆಸರು ಮೇಘಾ ಶೆಟ್ಟಿಎನ್ನುವುದಕ್ಕಿಂತಲೂ ಅನು ಅಂತಲೇ ಗೊತ್ತು. ಅದೇ ಹೆಸರಿನಿಂದಲೇ ಗುರುತಿಸುತ್ತಾರೆ. ಒಂದು ಪಾತ್ರದ ಮೂಲಕ ನಮ್ಮನ್ನು ಗುರುತಿಸುತ್ತಿದ್ದಾರೆ ಎಂದರೆ ಅದಕ್ಕಿಂತ ದೊಡ್ಡ ಗೆಲುವು ಮತ್ತೊಂದು ಇರಲಾರದು. ಇಲ್ಲಿವರೆಗೂ 140 ಕಂತುಗಳು ಪ್ರಸಾರ ಆಗಿದೆ. ಎಲ್ಲೇ ಹೋದರು ಜನ ನನ್ನ ಮುತ್ತುಕೊಳ್ಳುತ್ತಾರೆ, ಫೋಟೋ ತೆಗೆಸಿಕೊಳ್ಳುತ್ತಾರೆ, ಮನೆ ಮಗಳು ಎನ್ನುವಂತೆ ನೋಡಿ ಮಾತನಾಡಿಸುತ್ತಾರೆ, ನೋಡಕ್ಕೆ ಎಷ್ಟುಮುದ್ದಾಗಿದ್ದೀರಿ, ನೀವು ಹೊಸ ನಟಿ ಅಂತ ಅನಿಸೋದೆ ಇಲ್ಲ, 50-60 ಸಿನಿಮಾಗಳಲ್ಲಿ ನಟಿಸಿದ ಅನುಭವಿ ಕಲಾವಿದೆಯಂತೆ ಕಾಣುತ್ತೀರಿ... ಎಲ್ಲೇ ಹೋದರು ಇಂಥ ಮೆಚ್ಚುಗೆ ಮಾತುಗಳಿಂದಲೇ ನನಗೆ ಪ್ರೇಕ್ಷಕರು ಎದುರಾಗುತ್ತಾರೆ. ಒಂದೇ ಒಂದು ಧಾರಾವಾಹಿಯಿಂದ ಈ ಮಟ್ಟಿಗೆ ಪ್ರಸಿದ್ದಿ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ.
ಇನ್ನೂ ಅನಿರುದ್ಧ್ ಅವರ ಬಗ್ಗೆ ಹೇಳಬೇಕು ಅಂದರೆ ಅವರು ಅತ್ಯುತ್ತಮ ಕೋಸ್ಟಾರ್. ನಾನು ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನ ನೇರ ನೋಡಿ ಮಾತನಾಡಿಸಿಲ್ಲ. ಅವರ ಜತೆ ನಟನೆ ಕೂಡ ಮಾಡಿಲ್ಲ. ಆದರೆ, ಅವರ ಕುಟುಂಬದ ಸದಸ್ಯರಾಗಿರುವ ಅನಿರುದ್ಧ್ ಅವರ ಜತೆ ನಟಿಸುವ ಅವಕಾಶ ಸಿಕ್ಕಿತು. ಸಹಜ ಅಭಿನಯ ತೋರುವ ಹೀರೋ. ತೆರೆ ಮೇಲೆ ನಮ್ಮದು ಸೂಪರ್ ಜೋಡಿ. ಮುಂದೆ ನಾನು ಸಿನಿಮಾಗಳಲ್ಲೂ ನಟಿಸುವ ಗುರಿ ಇದೆ. ಆ ನಿಟ್ಟಿನಲ್ಲಿ ಕತೆಗಳನ್ನು ಕೇಳುತ್ತಿದ್ದೇನೆ. ನನಗೇ ಸೂಕ್ತ ಅನಿಸುವ ಕತೆ, ಪಾತ್ರ ಸಿಕ್ಕರೆ ಖಂಡಿತ ಹಿರಿತೆರೆಗೆ ಬರುವ ಕನಸು ಇದೆ. ಇಂಥವರೇ ಹೀರೋ ಆಗಬೇಕು ಅಂತೇನೂ ಇಲ್ಲ. ಕತೆ ಮತ್ತು ಪಾತ್ರಕ್ಕೆ ಮಹತ್ವ ಕೊಟ್ಟು ನೋಡುತ್ತೇನೆ ಅಷ್ಟೆ. ಇವತ್ತಿನ ಈ ಸ್ಟಾರ್ ಪಟ್ಟಕ್ಕೆ ಕಾರಣ ನನ್ನ ಅಕ್ಕ ಹಾರ್ದಿಕಾ ಶೆಟ್ಟಿ. ಅವರೂ ಕೂಡ ಸಿನಿಮಾ ನಟಿಯೇ. ನನಗೆ ವೃತ್ತಿ ಪಯಣದಲ್ಲೇ ಅವರೇ ಬೆಸ್ಟ್ ಗೈಡ್ ಹಾಗೂ ಫ್ರೆಂಡ್. ನನ್ನ ಅಕ್ಕನ ಮಾರ್ಗದರ್ಶನದಲ್ಲೇ ನಾನು ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದೇನೆ.