ನಿರೂಪಕಿಯಾಗಿ ಶ್ವೇತಾ ಜಂಗಪ್ಪ ಎಂಟ್ರಿ. ಜೋಡಿಗಳ ಲಿಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್...
ಜೀ ಕನ್ನಡ ವಾಹಿನಿ ಸತತ 16 ವರ್ಷಗಳಿಂದ ನಿರಂತರವಾಗಿ ರಂಜಿಸುತ್ತಿರುವ ಮನರಂಜನಾ ಮಾರುಕಟ್ಟೆಯ ಮಹಾರಾಜ. ವಿಶೇಷ , ವಿಭಿನ್ನ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ವಾಹಿನಿ ವೀಕ್ಷಕರ ಅಭಿರುಚಿಗೆ ತಕ್ಕಂತೆ ಸದಾ ಹೊಸತನಕ್ಕೆ ಹೊಂದಿಕೊಳ್ಳುತ್ತಿದೆ.
ಇದೀಗ 'ಜೋಡಿ ನಂ 1' ಎಂಬ ಕಲರ್‌ಫುಲ್ ಕಾರ್ಯಕ್ರಮದ ಮೂಲಕ ರಿಯಲ್ ತಾರಾ ಜೋಡಿಗಳ ದಾಂಪತ್ಯವನ್ನು ಹಬ್ಬವಾಗಿ ಆಚರಿಸಲು ಸಜ್ಜಾಗಿದೆ. ಇದೇ ಜೂನ್ 11ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6.30 ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ವೀಕ್ಷಕರ ವಾರಾಂತ್ಯಗಳನ್ನು ಡ್ರಾಮಾ ಜೂನಿಯರ್ಸ್ ಸೀಸನ್ 4 ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ಕಾರ್ಯಕ್ರಮಗಳು ಸಂಪೂರ್ಣಗೊಳಿಸುತ್ತಿದ್ದು 'ಜೋಡಿ ನಂ 1' ಕಾರ್ಯಕ್ರಮ ಸೇರ್ಪಡೆಗೊಂಡು ದುಪ್ಪಟ್ಟು ಮನರಂಜನೆಯನ್ನು ನೀಡುವ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ಬಿಡುಗಡೆಯಾಗಿರುವ ಈ ಕಾರ್ಯಕ್ರಮದ ಪ್ರೋಮೋ ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ .
ತನ್ನೆಲ್ಲಾ ಕಾರ್ಯಕ್ರಮಗಳಲ್ಲೂ ತಾನೆಷ್ಟು ಭಿನ್ನ ಎನ್ನುವುದನ್ನು ನಿರೂಪಿಸುತ್ತಲೇ ಇರುವ ವಾಹಿನಿ ಈ ಬಾರಿಯೂ ಅದನ್ನು ಮುಂದುವರೆಸಿದ್ದು ಜೋಡಿಗಳನ್ನು ಆಯ್ಕೆ ಮಾಡುವುದರಲ್ಲಿ ಯಶಸ್ವಿಯಾಗಿದೆ. ಹಿರಿ- ಕಿರಿ ಜೋಡಿಗಳನ್ನು ಒಂದುಗೂಡಿಸುವಲ್ಲಿ ತಂಡ ಸಫಲವಾಗಿದೆ. ನಿರೂಪಣೆಯಲ್ಲೂ ಶ್ರೀಮಂತಿಕೆಯನ್ನು ಕಾಯ್ದಿರಿಸಿಕೊಂಡಿದೆ. ಇನ್ನು ಈ ಕಾರ್ಯಕ್ರಮಕ್ಕೆ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಚೆಂಗಪ್ಪ ಅವರು ನಿರೂಪಣೆಯ ಜವಾಬ್ಧಾರಿ ಹೊತ್ತಿದ್ದರೆ, ನೆನಪಿರಲಿ ಖ್ಯಾತಿಯ ಸ್ಯಾಂಡಲ್‌ವುಡ್‌ನ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಭಾರತೀಯ ಚಿತ್ರರಂಗದ ಹೆಮ್ಮೆಯ ಸಿನಿಮಾ ಕೆಜಿಎಫ್‌ನ ನಟಿ ನಟಿ ಮಾಳವಿಕಾ ಅವಿನಾಶ್ ಅವರು ಪ್ರಮುಖ ತೀರ್ಪುಗಾರರಾಗಿ ಸಾರಥ್ಯ ವಹಿಸಿದ್ದಾರೆ.
ಜೋಡಿ ನಂ 1 ಆಗಲು ಬರ್ತಿದ್ದಾರೆ ಸೆನ್ಸೇಷನ್ ಕ್ರಿಯೇಟರ್‌ಗಳು, ಯಾರೆಲ್ಲಾ ಇದ್ದಾರೆ ನೋಡಿ!
ಅಷ್ಟೇ ಅಲ್ಲದೆ 'ಜೋಡಿ ನಂ 1' ಪ್ರಾರಂಭೋತ್ಸವದ ಅದ್ಧೂರಿ ಸಂಚಿಕೆಗೆ ಜೀ ಕುಟುಂಬದ ಹೆಮ್ಮೆಯಾಗಿರುವ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹಾಗು ಜನಮೆಚ್ಚಿದ ನಿರೂಪಕಿ ಅನುಶ್ರೀ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದ ಕಳೆ ಹೆಚ್ಚಿಸಿದ್ದಾರೆ. ಈ ದಾಂಪತ್ಯದ ಉತ್ಸವದಲ್ಲಿ ಕನ್ನಡ ಕಿರುತೆರೆಯ ಸ್ಟಾರ್ ಕಲಾವಿದರು ಭಾಗವಹಿಸಿದ್ದು ತಾವೇಕೆ ನಂಬರ್ ಒನ್ ಎನ್ನುವುದನ್ನು ನಿರೂಪಿಸಲು ತಯಾರಿ ನಡೆಸಿದ್ದಾರೆ.
ನಾಗಿಣಿ 2 ಖ್ಯಾತಿಯ ನಿನಾದ್-ರಮ್ಯಾ , ಕನ್ನಡದ ಹೆಮ್ಮೆಯ ಕೆಜಿಎಫ್ ಚಿತ್ರದ ಹಾಸ್ಯ ಕಲಾವಿದರುಗಳಾದ ಗೋವಿಂದೇಗೌಡ- ದಿವ್ಯಶ್ರೀ , ಸಂತೋಷ್- ಮಾನಸ , ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟಿ ನೇಹಾ ಪಾಟೀಲ್- ಪ್ರಣವ್ , ನಿರೂಪಕ ಕಿರಿಕ್ ಕೀರ್ತಿ- ಅರ್ಪಿತಾ ಕೀರ್ತಿ , ಸರಿಗಮಪ ಕಾರ್ಯಕ್ರಮದ ಗಾಯಕ ಕಂಬದ ರಂಗಯ್ಯ- ಲೀಲಾವತಿ , ಹಾಸ್ಯ ನಟ ಮಿತ್ರ- ಗೀತಾ , ಕನ್ನಡವನ್ನೇ ಉಸಿರಾಗಿಸಿಕೊಂಡಿರುವಂಥ ಹೆಸರಾಂತ ಹಾಸ್ಯ ಭಾಷಣಗಾರ ಪ್ರೊಫೆಸರ್ ಕೃಷ್ಣೇಗೌಡರು- ಕಲ್ಪನಾ , ಚಂದನವನದ ಹಿರಿಯ ನಟ ಫ್ಯಾಮಿಲಿ ಹೀರೋ ಅಭಿಜಿತ್- ರೋಹಿಣಿ , ಕಿರುತೆರೆ ನಟ ಭವಾನಿಸಿಂಗ್ - ಪಂಕಜಾ ಅವರು ಜೋಡಿ ಸ್ಪರ್ಧಿಗಳಾಗಿ ಆಯ್ಕೆ ಆಗಿದ್ದು ನಿಮ್ಮನ್ನು ಪ್ರತಿ ವಾರಾಂತ್ಯದಲ್ಲಿ ರಂಜಿಸಲು ಉತ್ಸುಕರಾಗಿದ್ದಾರೆ.
ಮತ್ತೊಂದು ವಿಶೇಷವೆಂದರೆ ವಾಹಿನಿ ಸಾಮಾನ್ಯರಿಗೂ ಕಾರ್ಯಕ್ರಮದ ಭಾಗವಾಗುವ ಅಪರೂಪದ ಅವಕಾಶವನ್ನು ಕಲ್ಪಿಸಿದೆ. ನಿಮ್ಮ ಸುಧೀರ್ಘ ದಾಂಪತ್ಯ ಜೀವನದ ಅನುಭವ , ಸಂಸಾರದ ತಿಳುವಳಿಕೆಯನ್ನು ಈ ಶೋ ನಲ್ಲಿ ಹಂಚಿಕೊಳ್ಳಬಹುದಾಗಿದೆ. ಈ ಬಗ್ಗೆ ಜೀ ಕನ್ನಡದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಪೇಜ್‌ಗಳಲ್ಲಿ ಪ್ರಕಟಿಸಿದ್ದು ಆಸಕ್ತರು ಅದನ್ನು ಗಮನಿಸಿ ಇದರಲ್ಲಿ ಪಾಲ್ಗೊಳ್ಳಬಹುದು. ವೀಕ್ಷಕರು ನಮ್ಮೆಲ್ಲ ಕಾರ್ಯಕ್ರಮಗಳಿಗೆ ನೀಡುವ ಪ್ರೀತಿ , ಪ್ರೋತ್ಸಾಹವನ್ನು ಈ ಕಾರ್ಯಕ್ರಮಕ್ಕೂ ನೀಡುತ್ತಾರೆ ಎಂದು ವಾಹಿನಿ ಧೃಢವಾದ ನಂಬಿಕೆಯೊಂದಿಗೆ ಅಭಿಪ್ರಾಯಪಟ್ಟಿದೆ.