
ಬೆಂಗಳೂರು (ಜೂ.10): ಖ್ಯಾತ ನಟ ನಸೀರುದ್ದೀನ್ ಶಾ (Naseeruddin Shah) ಮತ್ತು ಜಿಮ್ ಸರ್ಭ್ (Jim Sarbh) ಅಭಿನಯದ 'ಮೇಡ್ ಇನ್ ಇಂಡಿಯಾ: ಎ ಟೈಟನ್ ಸ್ಟೋರಿ' (Made In India: A Titan Story) ವೆಬ್ ಸಿರೀಸ್ ಈಗ ಒಟಿಟಿಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಭಾರತದ ಅತ್ಯಂತ ಯಶಸ್ವಿ ಕನ್ಸ್ಯೂಮರ್ ಬ್ರ್ಯಾಂಡ್‌ಗಳಲ್ಲಿ ಒಂದಾದ 'ಟೈಟನ್' ಸಂಸ್ಥೆಯ ಅದ್ಭುತ ಪ್ರಯಾಣ ಮತ್ತು ಭಾರತೀಯರ ಕೈಗಡಿಯಾರದ ಶೈಲಿಯನ್ನೇ ಬದಲಿಸಿದ ಆ ಒಬ್ಬ ಅಪ್ರತಿಮ ನಾಯಕನ ಜೀವನಗಾಥೆಯನ್ನು ಈ ಸಿರೀಸ್ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಅಮೆಜಾನ್ ಎಂಎಕ್ಸ್ ಪ್ಲೇಯರ್‌ನಲ್ಲಿ (Amazon MX Player) ಸ್ಟ್ರೀಮ್ ಆಗುತ್ತಿರುವ ಈ 6 ಕಂತುಗಳ ವೆಬ್ ಸಿರೀಸ್, ಟೈಟನ್ ಸಂಸ್ಥಾಪಕ ಕ್ಸೆರ್ಕ್ಸ್ ದೇಸಾಯಿ (Xerxes Desai) ಅವರ ದೂರದೃಷ್ಟಿಯ ಜೀವನವನ್ನು ವೀಕ್ಷಕರಿಗೆ ತಿಳಿಸಿದೆ. ಜೆಆರ್‌ಡಿ ಟಾಟಾ ಅವರ ಮಾರ್ಗದರ್ಶನದಲ್ಲಿ ಭಾರತದ ವಾಚ್ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಸಾಹಸಗಾಥೆ ಇದರಲ್ಲಿದೆ. ಈ ಸಿರೀಸ್‌ನಲ್ಲಿ ಜಿಮ್ ಸರ್ಭ್ ಅವರು ಕ್ಸೆರ್ಕ್ಸ್ ದೇಸಾಯಿ ಪಾತ್ರವನ್ನು ನಿರ್ವಹಿಸಿದ್ದರೆ, ನಸೀರುದ್ದೀನ್ ಶಾ ಅವರು ಜೆಆರ್‌ಡಿ ಟಾಟಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಟೈಟನ್ ಸಂಸ್ಥೆಯ ಬೆಳವಣಿಗೆಯ ಹಿಂದಿದ್ದ ಸವಾಲುಗಳು, ಅಪಾಯಗಳು ಮತ್ತು ಐತಿಹಾಸಿಕ ಮೈಲಿಗಲ್ಲುಗಳನ್ನು ಈ ಸಿರೀಸ್ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದೆ.
1937ರಲ್ಲಿ ಪಾರ್ಸಿ ಕುಟುಂಬವೊಂದರಲ್ಲಿ ಜನಿಸಿದ ಕ್ಸೆರ್ಕ್ಸ್ ದೇಸಾಯಿ, ಮುಂಬೈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದರು. ಬಳಿಕ ಆಕ್ಸ್‌ಫರ್ಡ್ ವಿವಿಯಲ್ಲಿ ಅವರು ಉನ್ನತ ಶಿಕ್ಷಣೆ ಮಾಡಿದ್ದರು. ಓದಿನ ಬಳಿಕ 1961ರಲ್ಲಿ ಟಾಟಾ ಸಮೂಹವನ್ನು (Tata Group) ಸೇರಿದ ಅವರು, ಸಂಸ್ಥೆಯ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಉದ್ಯಮ ನಾಯಕರಾಗಿ ಬೆಳೆದರು. ಇವರ ಪತ್ನಿ ರಜನಿ ದೇಸಾಯಿ.
ಅವರ ವೃತ್ತಿಜೀವನದಲ್ಲಿ ಒಂದು ದೊಡ್ಡ ತಿರುವು ದಾಖಲಾಗಿದ್ದು 1970ರ ದಶಕದಲ್ಲಿ. ಅಂದು ಟಾಟಾ ಪ್ರೆಸ್ (Tata Press) ಎದುರಿಸುತ್ತಿದ್ದ ಆರ್ಥಿಕ ನಷ್ಟಕ್ಕೆ ಸೂಕ್ತ ಪರಿಹಾರ ಮತ್ತು ಹೊಸ ಉದ್ಯಮದ ಮಾರ್ಗಗಳನ್ನು ಹುಡುಕುವ ಜವಾಬ್ದಾರಿಯನ್ನು ಜೆಆರ್‌ಡಿ ಟಾಟಾ ಅವರು ಕ್ಸೆರ್ಕ್ಸ್ ದೇಸಾಯಿ ಹೆಗಲಿಗೆ ಹಾಕಿದರು. ಹೊಸ ಉದ್ಯಮದ ಅವಕಾಶಗಳನ್ನು ಹುಡುಕುತ್ತಿದ್ದಾಗ ದೇಸಾಯಿ ಅವರ ಕಣ್ಣಿಗೆ ಬಿದ್ದಿದ್ದು ಐಷಾರಾಮಿ ವಾಚ್ ಮೇಕಿಂಗ್ (ಕೈಗಡಿಯಾರ ತಯಾರಿಕೆ) ಕ್ಷೇತ್ರ. ಆರಂಭದಲ್ಲಿ ಟಾಟಾ ಗ್ರೂಪ್ ವಾಚ್ ಉದ್ಯಮಕ್ಕೆ ಕಾಲಿಡುವುದರ ಬಗ್ಗೆ ಜೆಆರ್‌ಡಿ ಟಾಟಾ ಅವರಿಗೆ ಅಷ್ಟಾಗಿ ಒಲವಿರಲಿಲ್ಲ. ಆದರೆ, ತಮ್ಮ ಬಲವಾದ ವಾದ ಮತ್ತು ದೂರದೃಷ್ಟಿಯ ಮೂಲಕ ಕ್ಸೆರ್ಕ್ಸ್ ದೇಸಾಯಿ ಅವರು ಜೆಆರ್‌ಡಿ ಟಾಟಾ ಮತ್ತು ಸಂಸ್ಥೆಯ ಆಡಳಿತ ಮಂಡಳಿಯನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು.
ಮುಂದೆ 1986ರಲ್ಲಿ, ಕ್ಸೆರ್ಕ್ಸ್ ದೇಸಾಯಿ ಅವರು ಟಾಟಾ ಗ್ರೂಪ್ ಮತ್ತು ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮದ (TIDCO) ಜಂಟಿ ಸಹಭಾಗಿತ್ವದೊಂದಿಗೆ 'ಟೈಟನ್' ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೊದಲ ಉತ್ಪಾದನಾ ಘಟಕವನ್ನು ತಮಿಳುನಾಡಿನ ಹೊಸೂರಿನಲ್ಲಿ ಸ್ಥಾಪಿಸಲಾಯಿತು.
ಅಂದಿನ ಭಾರತೀಯ ಮಾರುಕಟ್ಟೆಗೆ ದೇಸಾಯಿ ಅವರು ಅತ್ಯಾಧುನಿಕ 'ಕ್ವಾರ್ಟ್ಜ್ ವಾಚ್'ಗಳನ್ನು (Quartz Watches) ಪರಿಚಯಿಸಿದರು. ಇದು ಎಷ್ಟು ಜನಪ್ರಿಯವಾಯಿತೆಂದರೆ, ಟೈಟನ್ ಅತಿ ಕಡಿಮೆ ಅವಧಿಯಲ್ಲಿ ಭಾರತದ ಪ್ರತಿ ಮನೆಯ ಅಚ್ಚುಮೆಚ್ಚಿನ ಬ್ರ್ಯಾಂಡ್ ಆಗಿ ರೂಪಾಂತರಗೊಂಡಿತು. ಆದರೆ, ದೇಸಾಯಿ ಅವರ ಮಹತ್ವಾಕಾಂಕ್ಷೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಭಾರತೀಯ ಕಂಪನಿಯೊಂದು ವಿಶ್ವದ ಅತ್ಯುತ್ತಮ ವಾಚ್ ತಯಾರಕರಿಗೆ ಪೈಪೋಟಿ ನೀಡಬಲ್ಲದು ಎಂಬುದನ್ನು ಸಾಬೀತುಪಡಿಸಲು ಅವರು ಪಣತೊಟ್ಟರು. ಜಗತ್ತಿನ ಪ್ರಸಿದ್ಧ ಸ್ವಿಸ್ ಮತ್ತು ಯುರೋಪಿಯನ್ ಬ್ರ್ಯಾಂಡ್‌ಗಳಿಗೆ ಸವಾಲು ಹಾಕುವಂತಹ ವಿಶ್ವದ ಅತ್ಯಂತ ತೆಳುವಾದ (Ultra-thin) ವಾಚ್ ಅನ್ನು ವಿನ್ಯಾಸಗೊಳಿಸುವಂತೆ ಅವರು ಟೈಟನ್ ಎಂಜಿನಿಯರ್‌ಗಳಿಗೆ ಸವಾಲು ಹಾಕಿದರು.
ಆ ಸವಾಲಿನ ಪ್ರತಿಫಲವಾಗಿ 2002ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೇ 'ಟೈಟನ್ ಎಡ್ಜ್' (Titan Edge). ಇದರ ಇಂಟರ್ನಲ್ ಮೂವ್‌ಮೆಂಟ್ (ಯಾಂತ್ರಿಕ ಚಲನೆ) ಕೇವಲ 1.15 ಮಿಮೀ ಮತ್ತು ಇಡೀ ವಾಚ್‌ನ ಕೇಸ್ ಗಾತ್ರ ಕೇವಲ 3.5 ಮಿಮೀ ದಪ್ಪ ಇತ್ತು! ಈ ಭಾರತೀಯ ಆವಿಷ್ಕಾರದ ನಿಖರತೆಯನ್ನು ಸ್ವಿಟ್ಜರ್‌ಲ್ಯಾಂಡ್ ಮೂಲದ ಹೆಸರಾಂತ ಹಾರಾಲಾಜಿಕಲ್ ಟೆಸ್ಟಿಂಗ್ ಏಜೆನ್ಸಿ 'Chronofiable SA' ಪರೀಕ್ಷಿಸಿ ಪ್ರಮಾಣೀಕರಿಸಿತು. ಇದರೊಂದಿಗೆ ಭಾರತದ ಈ ಉತ್ಪನ್ನಕ್ಕೆ ಜಾಗತಿಕ ಮನ್ನಣೆ ಸಿಕ್ಕಿತು.
ಇದರ ಬೆನ್ನಲ್ಲೇ ಟೈಟನ್ ಸಂಸ್ಥೆಯು 'ಎಡ್ಜ್' ಸರಣಿಯನ್ನು ಆಯ್ದ ಯುರೋಪಿಯನ್ ಮಾರುಕಟ್ಟೆಗಳಿಗೆ ಕೊಂಡೊಯ್ದು, ವಿಶ್ವದಾದ್ಯಂತ ಅತ್ಯಂತ ಗುರುತಿಸಲ್ಪಟ್ಟ ಭಾರತೀಯ ಬ್ರ್ಯಾಂಡ್ ಆಗಿ ಮಾಡಿತು. ಟೈಟನ್ ಅನ್ನು ಜಾಗತಿಕ ಮಟ್ಟದ ವಾಚ್ ಬ್ರ್ಯಾಂಡ್ ಆಗಿ ಮುನ್ನಡೆಸಿದ ನಂತರ, ದೇಸಾಯಿ ಅವರು ಚಿನ್ನಾಭರಣ ಕ್ಷೇತ್ರಕ್ಕೂ ಕಾಲಿಟ್ಟು, ಇಂದು ದೇಶದ ನಂಬಿಕಸ್ಥ ಜ್ಯುವೆಲ್ಲರಿ ಬ್ರ್ಯಾಂಡ್ ಆಗಿರುವ 'ತನಿಷ್ಕ್' (Tanishq) ಅನ್ನು ಯಶಸ್ವಿಯಾಗಿ ಲಾಂಚ್ ಮಾಡಿದರು.
ಟಾಟಾ ಸಮೂಹದಲ್ಲಿ ಬರೋಬ್ಬರಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದಕ್ಷ ಸೇವೆ ಸಲ್ಲಿಸಿದ ಕ್ಸೆರ್ಕ್ಸ್ ದೇಸಾಯಿ ಅವರು 2002ರಲ್ಲಿ ನಿವೃತ್ತರಾದರು. ಅವರ ನಂತರ ಭಾಸ್ಕರ್ ಭಟ್ ಅವರು ಟೈಟನ್ ಜವಾಬ್ದಾರಿಯನ್ನು ವಹಿಸಿಕೊಂಡರು. ಇಂದು ಟೈಟನ್ ಸಂಸ್ಥೆಯು ವಾಚ್, ಜ್ಯುವೆಲ್ಲರಿ, ಫ್ಯಾಷನ್ ಆಕ್ಸೆಸರೀಸ್ ಸೇರಿದಂತೆ ಹತ್ತಾರು ವಿಭಾಗಗಳಲ್ಲಿ ಭಾರತದ ಅತ್ಯಂತ ಯಶಸ್ವಿ ಗ್ರಾಹಕ ಬ್ರ್ಯಾಂಡ್ ಆಗಿ ಹೆಮ್ಮರವಾಗಿ ಬೆಳೆದಿದೆ. ಕ್ಸೆರ್ಕ್ಸ್ ದೇಸಾಯಿ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಬೆಂಗಳೂರನ್ನು ತಮ್ಮ ಮನೆಯನ್ನಾಗಿಸಿಕೊಂಡಿದ್ದರೂ, ಅವರ ವೃತ್ತಿಜೀವನದ ಬಹುದೊಡ್ಡ ಸಾಮ್ರಾಜ್ಯ ನಿರ್ಮಾಣವಾಗಿದ್ದು ನೆರೆಯ ಹೊಸೂರಿನಲ್ಲಿ. ಸಣ್ಣ ಪಟ್ಟಣವಾಗಿದ್ದ ಹೊಸೂರನ್ನು ದೇಶದ ಪ್ರಮುಖ ಕೈಗಾರಿಕಾ ಹಬ್ ಆಗಿ ಪರಿವರ್ತಿಸಿದ ಕೀರ್ತಿ ದೇಸಾಯಿ ಅವರಿಗೆ ಸಲ್ಲುತ್ತದೆ.
ತಮ್ಮ 79ನೇ ವಯಸ್ಸಿನಲ್ಲಿ, 2016 ಜೂನ್ 27 ರಂದು ಕ್ಸೆರ್ಕ್ಸ್ ದೇಸಾಯಿ ಅವರು ಇಹಲೋಕ ತ್ಯಜಿಸಿದರು. ಅವರು ಕಟ್ಟಿದ ಹೊಸೂರು ಪಟ್ಟಣದಲ್ಲೇ ಅವರ ಅಂತ್ಯಕ್ರಿಯೆಯನ್ನು ನೆರವೇರಿಸುವ ಮೂಲಕ ಆ ಮಹಾನಾಯಕನಿಗೆ ಗೌರವ ಸಲ್ಲಿಸಲಾಯಿತು. ಅಂದು ಸಾವಿರಾರು ಟೈಟನ್ ಉದ್ಯೋಗಿಗಳು, ಸ್ಥಳೀಯ ನಿರಾಶ್ರಿತರು ಮತ್ತು ಅಭಿಮಾನಿಗಳು ಕಣ್ಣೀರಿನ ವಿದಾಯ ಹೇಳಿದ್ದು, ಅವರು ಸಂಸ್ಥೆ ಮತ್ತು ಸಮಾಜದ ಮೇಲೆ ಬೀರಿದ ಅಳಿಸದ ಪ್ರಭಾವಕ್ಕೆ ಸಾಕ್ಷಿಯಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.