ಕನ್ನಡತಿಯಲ್ಲಿ ಭುವಿ ಅಪ್ಪನ ಅಂತ್ಯ ಸಂಸ್ಕಾರ ಮಾಡಿದ್ದಾಳೆ. ಆದರೆ ಈ ಅನುಭವ ರಂಜಿನಿಯ ಹೃದಯ ತಟ್ಟೋದಕ್ಕೆ ಕೆಲವು ರಹಸ್ಯ ಕಾರಣಗಳಿವೆ. ಅವೇನು?
'ಮಗಳಿಂದ ಅಪ್ಪನ ಅಂತ್ಯ ಸಂಸ್ಕಾರ.. ವೈಯುಕ್ತಿಕವಾಗಿ ಇದು ನನ್ನ ಮನಸ್ಸು ಮುಟ್ಟಿದ ದೃಶ್ಯ. ಇಂಥ ಕ್ರಾಂತಿಕಾರಿ ಹೆಜ್ಜೆ ಇಟ್ಟಿರುವ ಕನ್ನಡತಿ ಸೀರಿಯಲ್ ಬಗ್ಗೆ ಹೆಮ್ಮೆ ಅನಿಸುತ್ತೆ. ಈ ಧಾರಾವಹಿಗೆ ಸ್ಕ್ರಿಪ್ಟ್ ಬರೆದ ವಿಕಾಸ್ ನೇಗಿಲೋಣಿ ಅವರಿಗೆ ಹೃತ್ಪೂರ್ವಕ ಧನ್ಯವಾದ' - ಕನ್ನಡತಿಯ ಭುವಿ ಅರ್ಥಾತ್ ರಂಜಿನಿ ರಾಘವನ್ ಅವರ ಇನ್‌ಸ್ಟಾಗ್ರಾಂ ಸ್ಟೇಟಸ್ ಇದು.
ಗಂಡುಮಕ್ಕಳೇ ಅಪ್ಪನ ಚಿತೆಗೆ ಬೆಂಕಿ ಇಡಬೇಕು ಅನ್ನುವ ಕಾಲಘಟ್ಟದಿಂದ ಹೆಣ್ಣುಮಕ್ಕಳೂ ಹೆತ್ತವರ ಚಿತೆಗೆ ಬೆಂಕಿ ಇಟ್ಟರೆ ತಪ್ಪಲ್ಲ ಅನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ ಅನ್ನೋದನ್ನು ಸೂಚ್ಯವಾಗಿ 'ಕನ್ನಡತಿ' ಧಾರಾವಾಹಿ ಹೇಳಿದೆ. ಬಹುಶಃ ಧಾರಾವಾಹಿಯೊಂದು ಈ ಥರದ ಕ್ರಾಂತಿಕಾರಿ ಹೆಜ್ಜೆ ಇಡುತ್ತಿರುವುದು ಇದೇ ಮೊದಲು.
ಭುವಿ ಅಪ್ಪನ ಚಿತೆಗೆ ಬೆಂಕಿ ಕೊಡಬೇಕೋ, ಬೇಡ್ವೋ?
ಮೊದಲಿಂದಲೂ ಕನ್ನಡತಿ ಧಾರಾವಾಹಿಯನ್ನು ಬಹಳ ಜನ ಇಷ್ಟಪಡುತ್ತಿದ್ದಾರೆ. ಅದಕ್ಕೆ ಕಾರಣ ಇಲ್ಲಿರುವ ನವಿರಾದ ಪ್ರೇಮಕಥೆ. ಹರ್ಷ ಮತ್ತು ಭುವಿ ಹೇಳಿಕೊಳ್ಳದೇ ಪರಸ್ಪರರನ್ನು ಪ್ರೀತಿಸೋದು. ಒಂಚೂರೇ ಚೂರು ಅಶ್ಲೀಲತೆಯೂ ಬೆರೆಯದ ಪರಿಶುದ್ಧ ಪ್ರೇಮವಿದು. ಇವರಿಬ್ಬರ ಈ ಸ್ವಚ್ಛ ಪ್ರೀತಿಗೆ ಜನ ಯಾವ ರೀತಿ ಫಿದಾ ಆಗಿದ್ದಾರೆ ಅಂದ್ರೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಅವರೆಲ್ಲ ಈ ಜನರೇಶನ್ ನ ಹುಡುಗ ಹುಡುಗೀರು ಅನ್ನೋದು ಮತ್ತೊಂದು ವಿಶೇಷ. ಈ ಸೀರಿಯಲ್ ಪ್ರೇಮಕಥೆ ನಿಧಾನಕ್ಕೆ ಇವರಿಬ್ಬರ ಸಂಸಾರದ ಕತೆಯೂ ಆಗಿ ಈಗ ಭುವಿಯ ವೈಯುಕ್ತಿಕ ಬದುಕಿಗೆ ತಿರುಗಿದೆ. ಭುವಿಯ ಹೆತ್ತವರಿಗೆ ಮೂವರು ಹೆಣ್ಣುಮಕ್ಕಳು. ಹಿರಿಯವಳೇ ಭುವಿ. ಇಡೀ ಮನೆಯ ಜವಾಬ್ದಾರಿ, ತಂಗಿಯರ ಓದು, ಮದುವೆಯ ಹೊಣೆಗಾರಿಕೆಯನ್ನೆಲ್ಲ ಯಶಸ್ವಿಯಾಗಿ ನಿರ್ವಹಿಸುತ್ತಿರುವ ಹುಡುಗಿ ಅವಳು. ಅವಳ ಮನಸ್ಸೂ ಬಹಳ ಸ್ವಚ್ಛ. ಅಲ್ಲಿ ಅಪ್ರಾಮಾಣಿಕತೆಗೆ, ಕೆಟ್ಟತನಕ್ಕೆ ಅವಕಾಶ ಇಲ್ಲ. ಸಣ್ಣ ಪೂರ್ವಾಗ್ರಹವೂ ಇಲ್ಲದ ಈ ಹುಡುಗಿಗೆ ಸದ್ಯ ಎದುರಾಗಿರುವ ಸಮಸ್ಯೆ ಅಪ್ಪನ ದಿಢೀರ್ ಸಾವು.
ಸೀರಿಯಲ್ ಸತ್ಯಾಳ ರಿಯಲ್ ಗಂಡ ಯಾರು ಗೊತ್ತಾ! ...
ಅಪ್ಪನನ್ನು ಬಹಳ ಇಷ್ಟ ಪಡುವ, ಅಪ್ಪನ ಜೀವದಂತಿರುವಳು ಭುವಿ. ಈಗ ಅವಳ ಅಪ್ಪನ ಸಾವಿನ ಆಘಾತದಲ್ಲಿದ್ದಾಳೆ. ಇಂಥಾ ಸಮಯದಲ್ಲೂ ಕುಸಿಯದೇ ಸಮರ್ಥವಾಗಿ ಜವಾಬ್ದಾರಿಯನ್ನು ಹೊರುವವಳಾಕೆ. ಈಗ ಅಪ್ಪನ ಅಂತ್ಯಕ್ರಿಯೆಯ ಸನ್ನಿವೇಶ ಬಂದಿದೆ. ಅಪ್ಪನ ಚಿತೆಗೆ ಯಾರೋ ದೂರದ ಸಂಬಂಧಿಯಿಂದ ಬೆಂಕಿ ಇಡಲು ಅಜ್ಜಿ ಪ್ಲಾನ್ ಮಾಡುತ್ತಿದ್ದಾಳೆ. ಭುವಿಯ ಹಾದಿಗೆ ಸದ್ಯದ ಕಂಟಕ ಅವಳೇ. ಭುವಿ ತಾನೇ ಅಪ್ಪನ ಅಂತ್ಯ ಸಂಸ್ಕಾರ ಮಾಡುತ್ತೀನಿ ಅಂದಾಗ ಅದಕ್ಕೆ ತೀವ್ರ ವಿರೋಧ ಮಾಡಿದವಳು ಅಜ್ಜಿ. ಕೊನೆಗೆ ಪುರೋಹಿತರೇ ಭುವಿ ಅಂತ್ಯಸಂಸ್ಕಾರ ಮಾಡಲಿ, ಹೆಣ್ಣುಮಕ್ಕಳು ಅಂತ್ಯಸಂಸ್ಕಾರ ಮಾಡಬಾರದು ಎಂದು ಯಾವ ವೇದದಲ್ಲೂ ಹೇಳಿಲ್ಲ ಅಂದಾಗ ಅಜ್ಜಿ ತೆಪ್ಪಗಾಗಬೇಕಾಯ್ತು. ಆಮೇಲೆ ಬಂದದ್ದೇ ಕೇಶಮುಂಡನದ ಸವಾಲು. ಅಪ್ಪನ ಅಂತ್ಯಕ್ರಿಯೆ ಮಾಡುವವರು ಕೇಶಮುಂಡನ ಮಾಡಬೇಕು, ಅಜ್ಜಿ ಭುವಿಯ ಕೇಶ ಮುಂಡನಕ್ಕೆ ಪಟ್ಟು ಹಿಡಿದು ಕೂಗಾಡುತ್ತಾಳೆ. ಆದರೆ ಇಲ್ಲೂ ಪುರೋಹಿತರೇ ಆಕೆಗೆ ಕಡಿವಾಣ ಹಾಕುತ್ತಾರೆ. ಈಗ ಭುವಿ ಅಪ್ಪನ ಚಿತೆಗೆ ಬೆಂಕಿ ಇಡಲು ಮುಂದಾಗಿದ್ದಾಳೆ.
ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರ ಇನ್ನು ಇರೋಲ್ವಾ? ...
ಸೀರಿಯಲ್ ನ ಈ ಭಾಗಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭರಪೂರ ಪ್ರತಿಕ್ರಿಯೆ ಬಂದಿದೆ. ಆರಂಭದಲ್ಲಿ ಇಂಥಾ ದೃಶ್ಯ ಮಾಡಬೇಕು ಅಂದಾಗ ಭುವಿಗೇ ದಿಗಿಲಾಗಿತ್ತಂತೆ. ಎಲ್ಲಿ ಗಲಾಟೆ ಆಗುವುದೋ ಅಂತ. ಆದರೆ ಇಡೀ ಸಮಾಜ ಭುವಿಯ ಹಿಂದೆ ನಿಂತಿರುವುದು ಆಕೆಗೆ ಭೀಮಬಲ ಬಂದ ಹಾಗಾಗಿದೆ. ಜೊತೆಗೆ ಆಕೆಯ ಪ್ರೇಮಿ ಹರ್ಷನೂ ಭುವಿಯ ಬೆಂಬಲಕ್ಕಿರುವುದು ಆಕೆಯನ್ನು ಇನ್ನಷ್ಟು ಪವರ್‌ಫುಲ್ ಆಗಿಸಿದೆ.
ಅಷ್ಟಕ್ಕೂ ಈ ದೃಶ್ಯಕ್ಕೂ ಭುವಿ ಪಾತ್ರ ಮಾಡಿದ ರಂಜಿನಿಯವರ ವೈಯುಕ್ತಿಕ ಬದುಕಿಗೂ ಬಹಳ ಹತ್ತಿರದ ನಂಟಿದೆ. ಅದನ್ನು ಅವರೇ ಹೇಳಕೊಂಡಿದ್ದಾರೆ. ಆ ಕಾರಣಕ್ಕೆ ಇಂಥಾ ದೃಶ್ಯದಲ್ಲಿ ಮನ ಕಲಕುವಂತೆ ನಟಿಸುವುದು ಈಕೆಗೆ ಸಾಧ್ಯವಾಗಿದೆ. ಆ ವೈಯುಕ್ತಿಕ ಕಾರಣ ಬಹಳ ಇಂಟೆರೆಸ್ಟಿಂಗ್. ಈ ಸೀರಿಯಲ್ ಈಗ ಮಾಡುತ್ತಿರುವ ಕೆಲಸವನ್ನು ರಂಜಿನಿಯವರ ಅಮ್ಮ ಯಾವತ್ತೂ ಮಾಡಿದ್ದಾರೆ. ಆ ಗಟ್ಟಿಗಿತ್ತಿ ಅಮ್ಮನ ಪ್ರತಿನಿಧಿಯಂತೆ ರಂಜಿನಿ ಈ ಸೀರಿಯಲ್‌ನಲ್ಲಿ ಅಭಿನಯಿಸಿದ್ದಾರೆ.
ಕನ್ನಡತಿ ಭುವಿ ಅಂದರೆ ರಂಜಿನಿಯ ಅಮ್ಮನಿಗೆ ಅಣ್ಣ ತಮ್ಮಂದಿರಿಲ್ಲ. ಇವರ ಅಮ್ಮನಿಗೆ ಮೂವರು ಸಹೋದರಿಯರು. ರಂಜಿನಿ ಅಜ್ಜಿ ಅಂದರೆ ಇವರ ಅಮ್ಮನ ಅಮ್ಮ ತೀರಿಕೊಂಡಾಗ ಅವರ ಶವಯಾತ್ರೆಯ ಜೊತೆಗೆ ಎಲ್ಲ ಅಂತಿಮ ವಿಧಿಗಳನ್ನು ನೆರವೇರಿಸಿದ್ದು ಇವರ ಅಮ್ಮನೇ. ಈ ದೃಶ್ಯದಲ್ಲಿ ಅಭಿನಯಿಸುವಾಗ ಭುವಿಗೆ ಅದೇ ನೆನಪಾಗುತ್ತಿತ್ತಂತೆ. ಈ ದೃಶ್ಯ ಅಷ್ಟು ಗಾಢವಾಗಿ ಬರಲು, ರಂಜಿನಿ ಅಷ್ಟು ತನ್ಮಯಳಾಗಿ ಅಭಿನಯಿಸಲು ಇದೇ ಕಾರಣ ಅಂತ ರಂಜಿನಿ ಅವರೇ ಹೇಳಿಕೊಂಡಿದ್ದಾರೆ.
ಬಿಗ್‌ಬಾಸ್ ಆರಂಭಕ್ಕೆ ದಿನಾಂಕ್ ಫಿಕ್ಸ್; ಇದರಲ್ಲೊಂದಿದೆ ವಿಶೇಷ! ...
ಸದ್ಯ ಈ ಹೆಣ್ಣುಮಗಳೇ ಅಪ್ಪನ ಚಿತೆಗೆ ಬೆಂಕಿ ಇಡುವ ಸನ್ನಿವೇಶ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಎಲ್ಲರೂ ಸೀರಿಯಲ್ ನ ಈ ನಡೆಯನ್ನು ಮೆಚ್ಚಿಕೊಂಡಿದ್ದಾರೆ. ತಮ್ಮ ಮನೆಯಲ್ಲೂ ಭುವಿಯಂಥಾ ಗಟ್ಟಿಗಿತ್ತಿ ಹೆಣ್ಮಗಳಲಿರಲಿ ಅಂತಲೂ ಜನ ಆಶಿಸಲು ಶುರು ಮಾಡಿದ್ದಾರೆ. ಇದಕ್ಕಿಂತ ರಂಜಿನಿಗೆ ಇನ್ನೇನು ಬೇಕು ಅಲ್ವಾ...