Kannadathi Serial Update: ಕನ್ನಡತಿ ಸೀರಿಯಲ್‌ನಲ್ಲಿ ಚೀತ್ಕಲಾ ಬಿರಾದಾರ್ ರತ್ನಮಾಲಾ ಎಂಬ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಒಂದು ಕಡೆ ಸೀರಿಯಲ್‌ನಲ್ಲಿ ಅವರ ಪಾತ್ರ ಮುಗೀತಿದೆ ಎಂಬ ಸೂಚನೆ ಸಿಗುತ್ತಿದೆ. ಇನ್ನೊಂದೆಡೆ ಅವರು ಹರ್ಷ ಭುವಿ ಮದುವೆ ಶಾಸ್ತ್ರ ಮುಗಿದ ಮೇಲೆ ಮಂಟಪದಿಂದಿಳಿದು ಕಣ್ಣೀರು ಹಾಕುವ ದೃಶ್ಯ ವೈರಲ್ ಆಗ್ತಿದೆ.
ಕನ್ನಡತಿ ಸೀರಿಯಲ್‌ನಲ್ಲಿ ಅಮ್ಮಮ್ಮನ ಪಾತ್ರಕ್ಕೆ ಜೀವದುಂಬಿದವರು ಚೀತ್ಕಲಾ ಬಿರಾದಾರ್. ಒಂದು ಕಡೆ ಎಮೋಶನ್, ಇನ್ನೊಂದು ಕಡೆ ಮಾಲಾ ಕೆಫೆಯ ಒಡತಿಯಾಗಿ ಗಟ್ಟಿ ನಿಲುವುಗಳು, ಮತ್ತೊಂದೆಡೆ ಹರ್ಷನ ತಾಯಿಯಾಗಿ ಗೊಂದಲ, ಮಗದೊಂದು ಕಡೆ ಸದಾ ಕಾಡುವ ಅನಾರೋಗ್ಯ.. ಹೀಗೆ ನೋವು, ಖುಷಿ, ಆಗಾಗ ಮಳೆಗಾಲದ ಬಿಸಿಲಿನಂತೆ ತುಂಟತನ, ಪ್ರೀತಿ, ಸಿಟ್ಟು ಎಲ್ಲವನ್ನೂ ಅಮ್ಮಮ್ಮನ ಪಾತ್ರದ ಮೂಲಕ ಮೊಗೆ ಮೊಗೆದು ಕೊಟ್ಟವರು ಚೀತ್ಕಲಾ ಬಿರಾದಾರ್. ಅವರ ಪಾತ್ರಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ.
ತನ್ನ ಮಗ ಹರ್ಷನ ಮದುವೆಯನ್ನು ತನ್ನೂರು ಹಸಿರು ಪೇಟೆಯ ಹುಡುಗಿ ಭುವಿ ಜೊತೆಗೆ ಮಾಡಬೇಕೆಂಬುದು ಅವರ ಕನಸು. ಈ ಮದುವೆ ನಡೆದೇ ನಡೆಯುತ್ತೆ ಅನ್ನೋ ಭರವಸೆಯಲ್ಲಿ ತನ್ನ ಸಮಸ್ತ ಆಸ್ತಿಯನ್ನೂ ಭುವಿಯ ಹೆಸರಿಗೆ ಬರೆದವರು ಅವರು. ಇದೀಗ ಅವರ ಕನಸು ನನಸಾಗಿದೆ. ಹರ್ಷ ಭುವಿಯ ಮದುವೆ ಕೊನೆಗೂ ನಡೆದಿದೆ. ಇದರ ಜೊತೆಗೆ ಅಮ್ಮಮ್ಮನ ಅನಾರೋಗ್ಯವೂ ಉಲ್ಬಣಿಸಿ ಅವರು ಆಸ್ಪತ್ರೆ ಸೇರಿದ್ದಾರೆ. ಅಮ್ಮಮ್ಮ ಮತ್ತೆ ವಾಪಾಸ್ ಬರ್ತಾರ ಅನ್ನೋ ಪ್ರಶ್ನೆ ಈ ಸೀರಿಯಲ್ ನೋಡುವ ಲಕ್ಷಾಂತರ ಪ್ರೇಕ್ಷಕರಲ್ಲಿದೆ.
'ಕನ್ನಡತಿ' ಧಾರಾವಾಹಿಯ ಆರಂಭದಿಂದಲೂ ಸ್ವಷ್ಟ ಕನ್ನಡ, ಸಹಜ ಅಭಿನಯದ ಮೂಲಕ ಪಾತ್ರವೇ ಆಗಿಹೋಗುತ್ತಿದ್ದ ಚೀತ್ಕಲಾ ಅವರಿಗೆ ಅವರದೇ ಆದ ಅಭಿಮಾನಿ ಬಳಗವಿದೆ. ಅವರ ಪಾತ್ರಕ್ಕಾಗಿ ಎದುರು ನೋಡುವವರು, ಅವರು ಪಾತ್ರ ಮೂಲಕ ಹೇಳುವ ಒಳ್ಳೆಯ ಮಾತುಗಳನ್ನು ನಿಜ ಜೀವನದಲ್ಲಿ ಪಾಲಿಸುವವರು ಬಹಳ ಮಂದಿ ಇದ್ದಾರೆ. ಇದೀಗ ರತ್ನಮ್ಮನ ಅನಾರೋಗ್ಯ ಅವರ ಅಭಿಮಾನಿಗಳಲ್ಲಿ ಕಣ್ಣೀರು ತರಿಸಿದೆ. ಎಲ್ಲಿ ಈ ಉತ್ತಮ ಪಾತ್ರ ನಿಂತು ಹೋಗುತ್ತೋ ಎಂಬ ಬೇಸರ ಶುರುವಾಗಿದೆ.
ಇದನ್ನೂ ಓದಿ: Kannadathi serial: ಹವಿ ಮದುವೆಯಲ್ಲಿ ರಾಮಾಚಾರಿಯ ಪೌರೋಹಿತ್ಯಕ್ಕೆ ಫುಲ್ ಮಾರ್ಕ್ಸ್ ನೀಡಿದ ಫ್ಯಾನ್ಸ್
ಇದಕ್ಕೆ ಪೂರಕವಾಗಿ ಅಮ್ಮಮ್ಮ ಪಾತ್ರ ಮಾಡುವ ಚೀತ್ಕಲಾ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. 'ಕನ್ನಡತಿಯ ಮದುವೆ ಮಂಟಪದಿಂದ ಇಳಿದು ಹೊರಬರುವ ಸೀನ್ ಮುಗಿಸಿದವಳೇ ಬಂದು ಒಂದು ಮೂಲೆಗೆ ಕೂತೆ. ದುಃಖ ಉಮ್ಮಳಿಸುತ್ತಲೇ ಇತ್ತು. ಯಾಕೋ ಗೊತ್ತಿಲ್ಲ. ಅದನ್ನು ಕಂಟ್ರೋಲ್ ಮಾಡಲಾಗಲಿಲ್ಲ. ಇದನ್ನು ಗಮನಿಸಿದ ಉಳಿದವರೆಲ್ಲ ಓಡೋಡಿ ಬಂದರು. ನನಗೆ ಗೊತ್ತಿಲ್ಲದೆ ನಮ್ಮ ಸತೀಶ್ (ಸುದರ್ಶನ್ ಪಾತ್ರಧಾರಿ) ತೆಗೆದ ವೀಡಿಯೋ ಇದು. ಈ ಕ್ಷಣದ ಬಗ್ಗೆ ಇಷ್ಟೇ ಸಾಕು, ಥ್ಯಾಂಕ್ಯೂ' ಎಂದು ಹಾಕಿರುವ ಪೋಸ್ಟ್ ಗೆ ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ಲಕ್ಷಾಂತರ ಜನ ಈ ಪೋಸ್ಟನ್ನು ಲೈಕ್ ಮಾಡಿದ್ದಾರೆ. ರತ್ನಮಾಲಾ ಮಾತ್ರದಲ್ಲಿ ಚೀತ್ಕಲಾ ಅವರ ನಟನೆಯನ್ನು ಹೊಗಳುವ ಜೊತೆಗೆ ಯಾವ ಕಾರಣಕ್ಕೂ ನೀವು ಈ ಸೀರಿಯಲ್ ಬಿಟ್ಟು ಹೋಗುವಂತಿಲ್ಲ ಅಂತ ಅಭಿಮಾನಗಳು ತಾಕೀತು ಮಾಡಿದ್ದಾರೆ.
'ಆಹ್, ನೀವೆಂಥ ಸ್ವೀಟ್ ಹಾರ್ಟ್' ಎಂದು ಈ ಸೀರಿಯಲ್ ನಾಯಕಿ ರಂಜನಿ ರಾಘವನ್ ಈ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. ಹಲವು ಮಂದಿ ರಂಜನಿ ಅವರ ಈ ಕಮೆಂಟನ್ನು ಲೈಕ್ ಮಾಡಿದ್ದಾರೆ. 'ನೀವು ಮತ್ತೊಮ್ಮೆ ನಮ್ಮನ್ನು ಅಳುವಂತೆ ಮಾಡಿದ್ದೀರಿ ಚೀತ್ಕಲಾ ಮೇಡಂ, ನೀವೊಬ್ಬರು ಅದ್ಭುತ ನಟಿ' ಅಂತ ಒಬ್ಬ ಅಭಿಮಾನಿ ಕಮೆಂಟ್ ಮಾಡಿದರೆ, 'ಈ ಕಥೆಯಲ್ಲಿ ನೀವಿಲ್ದೇ ಇರೋದನ್ನು ನಾವು ಎಂದಿಗೂ ಒಪ್ಪೋದಿಲ್ಲ. ರತ್ನಮಾಲಾ ಪಾತ್ರ ಕನ್ನಡತಿಯ ಜೀವಾಳ. ಆದಷ್ಟು ಬೇಗ ನೀವು ಕಥೆಯಲ್ಲಿ ಬರುತ್ತೀರಿ ಎಂದು ನಾವು ಕಾಯುತ್ತಿದ್ದೇವೆ. ನೀವಿಲ್ಲದೇ ಕನ್ನಡತಿಗೆ ಅರ್ಥವೇ ಇಲ್ಲ' ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. 'ಭಾಳ್ ಛಂದ್ ಮಾಡಿರೀ. ಕಲುಬುರ್ಗಿ ಕನ್ನಡತಿ ಅಂತ ಪ್ರೀತಿಯಿಂದ ಹೇಳ್ಕೋತೀವಿ. ಧನ್ಯೋಸ್ಮಿ ಅಕ್ಕ' ಅನ್ನುವಂಥ ಕಮೆಂಟ್‌ಗಳೂ ಬಂದಿವೆ.
ಇದನ್ನೂ ಓದಿ: Kannadathi : ರಾಮಾಚಾರಿ ಪೌರೋಹಿತ್ಯ, ಆಸ್ಪತ್ರೆಯಲ್ಲೇ ಹವಿ ಮದ್ವೆ!
ಈ ಎಲ್ಲದರ ನಡುವೆ ಚೀತ್ಕಲಾ ಅಮೇರಿಕಾಗೆ ಹಾರಿದ್ದಾರೆ. ಅಲ್ಲಿ ತನ್ನ ಮಗನ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಅವರು ಈ ಸೀರಿಯಲ್‌ಗೆ ವಾಪಾಸ್ ಬರುತ್ತಾರ ಅಥವಾ ಅಲ್ಲೇ ಉಳಿಯುತ್ತಾರ ಅನ್ನುವ ಆತಂಕವೂ ಅವರ ಅಭಿಮಾನಿಗಳಿಗಿದೆ. ಅಮ್ಮಮ್ಮ ಮತ್ತೆ ಬರಲಿ ಅನ್ನೂ ಪ್ರೀತಿಯ ಒತ್ತಾಯ ಈ ಸೀರಿಯಲ್ ಕತೆ ಬರೆಯುವವರನ್ನೂ, ಚೀತ್ಕಲಾ ಅವರನ್ನೂ ಮುಟ್ಟಲಿ. ಅವರು ವಾಪಾಸ್ ಬರಲಿ ಅನ್ನೋದು ವೀಕ್ಷಕರ ಆಗ್ರಹ.